
ವಿಜಯಪುರ (ಮಾ.17): ನಟಿ ರನ್ಯಾ ರಾವ್ ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ರಾಜ್ಯದ ಇಬ್ಬರು ಸಚಿವರು ಭಾಗಿಯಾಗಿದ್ದಾರೆ. ಅವರು ಯಾರು ಎನ್ನುವುದು ನನಗೆ ಗೊತ್ತಿದೆ. ವಿಧಾನಸಭೆಯ ಅಧಿವೇಶನದಲ್ಲಿ ಆ ಸಚಿವರ ಹೆಸರನ್ನು ಪ್ರಸ್ತಾಪಿಸುವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ರನ್ಯಾ ಜೊತೆಗೆ ಸಂಬಂಧ ಹೊಂದಿದವರು, ಆಕೆಗೆ ಪ್ರೋಟೋಕಾಲ್ ಕೊಟ್ಟವರ ಮಾಹಿತಿ ಸಂಗ್ರಹ ಮಾಡಿದ್ದೇವೆ. ಚಿನ್ನವನ್ನು ತಂದಿದ್ದು ಎಲ್ಲಿಂದ? ಎಂಬುದೂ ನನಗೆ ಗೊತ್ತಿದೆ ಎಂದರು.
ರನ್ಯಾ ಪ್ರಕರಣದಲ್ಲಿ ಕೇಂದ್ರದವರ ತಪ್ಪೂ ಇದೆ ಎಂಬ ಸಚಿವ ಸಂತೋಷ್ ಲಾಡ್ ಆರೋಪ ಕುರಿತು ಪ್ರತಿಕ್ರಿಯಿಸಿ, ಯಾರು ತಪ್ಪು ಮಾಡಿದರೂ ಅದು ತಪ್ಪೇ. ನಾವು ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಕೇಂದ್ರದ ಅಧಿಕಾರಿಗಳ ತಪ್ಪಿದ್ದರೂ ತಪ್ಪೆ. ಆದರೆ, ನಮ್ಮ ಕೇಂದ್ರದ ಯಾವ ಸಚಿವರೂ ಇದರಲ್ಲಿ ಭಾಗಿಯಾಗಿಲ್ಲ ಎಂದರು. ರನ್ಯಾಳಿಗೆ ಕೆಐಎಡಿಬಿಯಿಂದ ಜಮೀನು ಕೊಟ್ಟ ವಿಚಾರ ಕುರಿತು ಪ್ರತಿಕ್ರಿಯಿಸಿ, ಜಮೀನು ಕೊಟ್ಟಿದ್ದನ್ನು ಸ್ವತಃ ನಿರಾಣಿ ಒಪ್ಪಿಕೊಂಡಿದ್ದಾರೆ.12 ಎಕರೆ ಜಮೀನು ಕೊಟ್ಟಿದ್ದರು, ಹಣ ಕಟ್ಟದೆ ಇರೋದಕ್ಕೆ ಅದು ರದ್ದಾಗಿದೆ. 12 ಎಕರೆಗೆ ಯಾರೋ ಒಬ್ಬರು ಹಣ ಕೊಡ್ತೀನಿ ಎಂದಿದ್ದರು, ಅವರು ಕೊಟ್ಟಿಲ್ಲ ಎಂದರು. ಹಣ ಕೊಡ್ತೀನಿ ಎಂದವರು ಸಚಿವರಾ? ಎನ್ನುವ ಸುದ್ದಿಗಾರರ ಪ್ರಶ್ನೆಗೆ ಅವರು ಮುಗುಳ್ನಕ್ಕರು.
ಸಿಬಿಐಗೆ ಒಪ್ಪಿಸಬೇಕು: ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ ನಡವಳಿಕೆ ಬಗ್ಗೆ ಹಲವಾರು ಪ್ರಶ್ನೆಗಳು ಎದ್ದಿರುವುದರಿಂದ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಚಿನ್ನ ಸ್ಮಗ್ಲಿಂಗ್ ಮಾಡುತ್ತಿದ್ದ ರನ್ಯಾಳಿಗೆ ರಾಜ್ಯ ಸರ್ಕಾರದ ಅಧಿಕಾರಿಗಳೇ ಎಸ್ಕಾರ್ಟ್ ಕೊಟ್ಟಿದ್ದಾರೆ. ಶಿಷ್ಟಾಚಾರದ ನೆಪದಲ್ಲಿ ಚೆಕ್ಕಿಂಗ್ ಕೂಡ ಮಾಡದೇ ಬಿಟ್ಟಿದ್ದಾರೆ. ಈಗ ಈ ಪ್ರಕರಣದಲ್ಲಿ ರಾಜ್ಯದ ಮಂತ್ರಿಗಳ ಹೆಸರೂ ಕೇಳಿ ಬರುತ್ತಿದೆ. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಚಕಾರ ಎತ್ತುತ್ತಿಲ್ಲ.
ರನ್ಯಾ ರಾವ್‌ದು ರಾಜ್ಯದ 2ನೇ ಅತಿದೊಡ್ಡ ಚಿನ್ನ ಸ್ಮಗ್ಲಿಂಗ್ ಕೇಸ್: 15 ಬಾರಿ ಕಪಾಳಕ್ಕೆ ಬಾರಿಸಿದರು ಎಂದ ನಟಿ!
ಒಮ್ಮೆ ಗೃಹ ಸಚಿವ ಪರಮೇಶ್ವರ್ ಅವರು ಪ್ರಕರಣವನ್ನು ಸಿಐಡಿಗೆ ಕೊಟ್ಟರು. ಈಗ ಆಕೆಯ ತಂದೆ ರಾಮಚಂದ್ರ ರಾವ್ ಡಿಐಜಿ ಆಗಿರುವುದರಿಂದ ಪ್ರಕರಣವನ್ನು ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಕೊಟ್ಟಿದ್ದೇವೆ ಎನ್ನುತ್ತಿದ್ದಾರೆ. ಕೇಂದ್ರ ಸರ್ಕಾರದ ಗುಪ್ತಚರ ಇಲಾಖೆ ಹೇಳುವರೆಗೆ ಈ ಪ್ರಕರಣದ ಬಗ್ಗೆ ರಾಜ್ಯದ ಗುಪ್ತಚರ ಇಲಾಖೆಗೆ ಗೊತ್ತೇ ಇರಲಿಲ್ಲ. ಹೀಗೆ ಸರ್ಕಾರದ ನಡವಳಿಕೆ ಬಗ್ಗೆ ಅನೇಕ ಪ್ರಶ್ನೆಗಳು ಎದ್ದಿವೆ. ಆದ್ದರಿಂದ ಪ್ರಕರಣದ ಸಂಪೂರ್ಣ ತನಿಕೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ