
ಕೊಪ್ಪಳ (ಜ.6): ದಕ್ಷಿಣದ ಕುಂಭಮೇಳ ಎಂದೇ ಪ್ರಸಿದ್ಧವಾಗಿರುವ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಭಕ್ತರ ಸಂಖ್ಯೆ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. ಇಂದು ಮಧ್ಯಾಹ್ನದಿಂದಲೇ ದಾಸೋಹ ಭವನದ ಮುಂಭಾಗದಲ್ಲಿ ಏಕಾಏಕಿ ಸಾವಿರಾರು ಭಕ್ತರು ಜಮಾಯಿಸಿದ್ದರಿಂದ ಜನದಟ್ಟಣೆ ಉಂಟಾಯಿತು. ಮಹಾಪ್ರಸಾದ ಸ್ವೀಕರಿಸಲು ಭಕ್ತರು ಮುಗಿಬಿದ್ದ ಹಿನ್ನೆಲೆಯಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.
ಭಕ್ತರ ಸಂಖ್ಯೆ ಹೆಚ್ಚಳ ಗಮನಿಸಿದ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ರಾಮ್ ಎಲ್. ಅರಸಿದ್ದಿ ಅವರು ತಕ್ಷಣವೇ ಕಾರ್ಯಪ್ರವೃತ್ತರಾದರು. ಕೇವಲ ಅಧಿಕಾರಿಗಳಿಗೆ ಸೂಚನೆ ನೀಡಿ ಸುಮ್ಮನಾಗದ ಅವರು, ಸ್ವತಃ ದಾಸೋಹ ಭವನದ ಮುಂಭಾಗದಲ್ಲಿ ಫೀಲ್ಡ್‌ಗೆ ಇಳಿದರು. ಭಕ್ತರ ಗುಂಪನ್ನು ನಿಯಂತ್ರಿಸಲು ಮತ್ತು ಎಲ್ಲರಿಗೂ ಕಾಣುವಂತಾಗಲು ಚೇರ್ (ಕುರ್ಚಿ) ಮೇಲೆ ನಿಂತುಕೊಂಡೇ ಸಾರ್ವಜನಿಕರಿಗೆ ಸೂಚನೆಗಳನ್ನು ನೀಡಿದರು.
ಅಚ್ಚರಿಯ ವಿಷಯವೆಂದರೆ, ಎಸ್ಪಿ ಡಾ ರಾಮ್ ಎಲ್. ಅರಸಿದ್ದಿ ಅವರು ಗಂಟೆಗಳ ಕಾಲ ಚೇರ್ ಮೇಲೆ ನಿಂತುಕೊಂಡೇ ಭಕ್ತರ ಸಾಲನ್ನು ಸುಗಮಗೊಳಿಸಿದರು. ಕೇವಲ ಬಂದೋಬಸ್ತ್ ಅಷ್ಟೇ ಅಲ್ಲದೆ, ತುರ್ತಾಗಿ ವಿಲೇವಾರಿಯಾಗಬೇಕಿದ್ದ ಕಚೇರಿಯ ಪ್ರಮುಖ ಕಡತಗಳಿಗೂ ಸಹ ಚೇರ್ ಮೇಲೆ ನಿಂತುಕೊಂಡೇ ಸಹಿ ಮಾಡುವ ಮೂಲಕ ಕರ್ತವ್ಯ ನಿಷ್ಠೆ ಮೆರೆದರು. ಎಸ್ಪಿಯವರ ಈ ಕಾರ್ಯವೈಖರಿಯನ್ನು ಕಂಡು ಭಕ್ತರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಬ್ಯಾರಿಕೇಡ್ ಅಳವಡಿಕೆ ಬಳಿಕ ಹತೋಟಿಗೆ
ದಾಸೋಹದ ಮುಂಭಾಗದಲ್ಲಿ ಉಂಟಾಗಿದ್ದ ನೂಕುನುಗ್ಗಲನ್ನು ತಡೆಯಲು ಪೊಲೀಸ್ ಇಲಾಖೆ ತಕ್ಷಣವೇ ಹೆಚ್ಚುವರಿ ಬ್ಯಾರಿಕೇಡ್‌ಗಳನ್ನು ಅಳವಡಿಸಿತು. ಎಸ್ಪಿಯವರ ನೇರ ಮೇಲ್ವಿಚಾರಣೆಯಲ್ಲಿ ಪೊಲೀಸರು ಭಕ್ತರನ್ನು ಸಾಲಾಗಿ ದಾಸೋಹಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದರು. ಇದರಿಂದಾಗಿ ಕೆಲವೇ ಗಂಟೆಗಳಲ್ಲಿ ಪರಿಸ್ಥಿತಿ ತಿಳಿಯಾಯಿತು ಮತ್ತು ಭಕ್ತರು ಶಾಂತಿಯುತವಾಗಿ ಪ್ರಸಾದ ಸ್ವೀಕರಿಸಲು ಅನುಕೂಲವಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ