
ಬೆಂಗಳೂರು (ಆ.12) ಕೊಪ್ಪಳದಲ್ಲಿ ಇತ್ತೀಚೆಗೆ ನಡೆದ ಹಿಂದೂ ಮುಖಂಡ ಗವಿಸಿದ್ದಪ್ಪ ನಾಯಕ ಬರ್ಬರ ಹತ್ಯೆ ಪ್ರಕರಣವನ್ನು ಎನ್ಐಎ ಅಥವಾ ಸಿಬಿಐ ತನಿಖೆಗೆ ವಹಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯದ ಮುಖಂಡ ಗವಿಸಿದ್ದಪ್ಪ ನಾಯಕ ಅವರನ್ನು ಕೊಪ್ಪಳದ ಮಸೀದಿ ಮುಂದೆಯೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾಜ್ಯ ಸರ್ಕಾರವು ಈ ಘಟನೆಯನ್ನು ಹಗುರವಾಗಿ ಪರಿಗಣಿಸಬಾರದು. ಈ ಹತ್ಯೆಯಿಂದ ಇಡೀ ಕೊಪ್ಪಳ ಜಿಲ್ಲೆಯಲ್ಲಿ ಆತಂಕ ಉಂಟಾಗಿದೆ ಎಂದರು.
ಈ ಹಿಂದೆ ಕರಾವಳಿ ಭಾಗದಲ್ಲಿ ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡುವ ಕೊಲೆಗಡುಕರು, ಸಮಾಜಘಾತುಕ ಶಕ್ತಿಗಳು, ದೇಶದ್ರೋಹಿಗಳ ಚಟುವಟಿಕೆಗಳು ಇದ್ದವು. ಈಗ ಹಿಂದೂ ಕಾರ್ಯಕರ್ತರ ಹತ್ಯೆಯು ಕೊಪ್ಪಳ ಜಿಲ್ಲೆಗೂ ವಿಸ್ತರಣೆಯಾಗಿರುವುದು ಖಂಡನೀಯ. ಗೃಹ ಸಚಿವರು ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಪ್ರಕರಣದ ತನಿಖೆಯನ್ನು ಎನ್‌ಐಎ ಅಥವಾ ಸಿಬಿಐಗೆ ಹಸ್ತಾಂತರಿಸಬೇಕು ಎಂದು ಒತ್ತಾಯಿಸಿದರು.
ಕೊಪ್ಪಳದ ಪೊಲೀಸ್ ವರಿಷ್ಠಾಧಿಕಾರಿ ದಿನಕ್ಕೆ ಒಂದೊಂದು ಹೇಳಿಕೆ ಕೊಡುತ್ತಿರುವುದು ದುರಂತ. ಈ ವಿಷಯದಲ್ಲಿ ಸಮರ್ಪಕ ತನಿಖೆ ಆಗುವ ಹಾಗೂ ಈ ಸಾವಿಗೆ ನ್ಯಾಯ ಸಿಗುವ ಭರವಸೆ ಉಳಿದಿಲ್ಲ ಎಂದರು. ಇವತ್ತು ಕೊಪ್ಪಳದಲ್ಲಿ ಅಖಂಡ ವಾಲ್ಮೀಕಿ ಮಹಾಸಭಾ ಮತ್ತು ಬಿಜೆಪಿ ವತಿಯಿಂದ ಹೋರಾಟ ನಡೆಯುತ್ತಿದೆ ಎಂದು ತಿಳಿಸಿದರು. ಇದೇ ವೇಳೆ ವಿಧಾನಸಭೆ ವಿಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಎಚ್.ಪಾಟೀಲ್, ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ಈ ಪ್ರಕರಣವನ್ನು ಎನ್ಐಎ ಅಥವಾ ಸಿಬಿಐಗೆ ಹಸ್ತಾಂತರಿಸುವಂತೆ ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ