ಇಲ್ಲೋರ್ವ ಯುವತಿ ತನಗೆ ಒಲಿದು ಬಂದ 9 ಸರ್ಕಾರಿ ಹುದ್ದೆಗಳನ್ನು ತ್ಯಜಿಸಿ 10ನೇ ಹುದ್ದೆಗಾಗಿ ಪ್ರಯತ್ನ ಆರಂಭಿಸಿದ್ದಾರೆ. ಉಪನ್ಯಾಸಕ ಹುದ್ದೆಯನ್ನೇ ಪಡೆಯಬೇಕೆಂದು ಪಣ ತೊಟ್ಟಿದ್ದಾರೆ.
ಕೊಪ್ಪಳ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ದೊರೆಯುವುದೇ ಕಷ್ಟ. ಅಂಥದ್ದರಲ್ಲಿ ಕೊಪ್ಪಳ ಜಿಲ್ಲೆಯ ಈ ಯುವತಿ 9 ಬಾರಿ ಸರ್ಕಾರಿ ಹುದ್ದೆಗೆ ಆಯ್ಕೆಯಾಗಿದ್ದಾಳೆ.
ಅಚ್ಚರಿಯೆಂದರೆ 9 ಬಾರಿಯೂ ನೇಮಕಾತಿಯನ್ನು ತಿರಸ್ಕರಿಸಿರುವ ಗ್ರಾಮೀಣ ಪ್ರತಿಭೆ ಇದೀಗ 10ನೇ ಪ್ರಯತ್ನಕ್ಕೆ ಮುಂದಾಗಿದ್ದಾಳೆ. ಉಪನ್ಯಾಸಕ ಹುದ್ದೆಯೇ ಬೇಕೆಂದು ಪಣತೊಟ್ಟು ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದಾಳೆ.
ತಾಲೂಕಿನ ವದಗನಾಳ ಗ್ರಾಮದ ದಾಕ್ಷಾಯಿಣಿ ಹುಚ್ಚನಗೌಡ ಮಾಲೀಪಾಟೀಲ್ (27) ಎಂಬವರೇ ಇಂತಹ ದೃಢಸಂಕಲ್ಪ ಮಾಡಿರುವ ಯುವತಿ.
ಸರ್ಕಾರಿ ವಿದ್ಯಾಸಂಸ್ಥೆಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಓದಿರುವ ಎಂಎ ಬಿಎಡ್ ಪದವೀಧರೆಗೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿ (2019 ಫೆ.1), ಹಾಸ್ಟೆಲ್ ಮೇಲ್ವಿಚಾರಕಿ (ಡಿ.15, 2018), ಮೊರಾರ್ಜಿ ವಸತಿ ಶಾಲೆಯಲ್ಲಿ ಕನ್ನಡ ಶಿಕ್ಷಕಿ (ನ.19 ,2018), ಸಮಾಜ ವಿಜ್ಞಾನ ಶಿಕ್ಷಕಿ (ನ.19, 2018), ಮೊರಾರ್ಜಿ ವಸತಿ ಶಾಲೆಯಲ್ಲಿ ಹಾಸ್ಟೆಲ್ ವಾರ್ಡನ್, ನವೋದಯ ಮಾದರಿ ಶಾಲೆಯಲ್ಲಿ ಶಿಕ್ಷಕಿ (ಅ.20, 2018), ರೆಸಿಡೆನ್ಶಿಯಲ್ ಶಾಲೆಯಲ್ಲಿ ಶಿಕ್ಷಕಿ (ನ.20, 2018), ಎಸ್ಸಿ, ಎಸ್ಟಿಹಾಸ್ಟೆಲ್ ವಾರ್ಡ್‌ನ (ಡಿ.16, 2018) ಹುದ್ದೆಗೆ ಸರ್ಕಾರ ಆಯ್ಕೆ ಮಾಡಿದೆ. ಆದರೆ ಇದ್ಯಾವುದಕ್ಕೂ ಬೇಡ ಎಂದಿದ್ದಾಳೆ ದಾಕ್ಷಾಯಿಣಿ.
ದಾಕ್ಷಾಯಿಣಿ ಅವರದ್ದು ಅವಿಭಕ್ತ ಕುಟುಂಬವಾಗಿದ್ದು ಒಂದೇ ಮನೆಯಲ್ಲಿ 18 ಮಂದಿ ವಾಸವಿದ್ದಾರೆ. ಅವರ ಅಪ್ಪ, ಅಮ್ಮ ವ್ಯವಸಾಯ ಮಾಡುತ್ತಿದ್ದು, ಮನೆಯಲ್ಲಿನ ಎಲ್ಲರೂ ದಾಕ್ಷಾಯಿಣಿ ಶೈಕ್ಷಣಿಕ ಸಾಧನೆಗೆ ಪ್ರೋತ್ಸಾಹ ನೀಡಿದ್ದರಿಂದ 3 ಹೈ-ಕ ಕೋಟಾದಡಿ, 5 ಜನರಲ್ ಮೆರಿಟ್‌ನಡಿ ಸರ್ಕಾರಿ ಹುದ್ದೆಗೆ ಯುವತಿ ಆಯ್ಕೆಯಾಗಿದ್ದಾಳೆ.
2016ರ ಡಿಸೆಂಬರ್‌ನಿಂದ ಆರಂಭ : ದಾಕ್ಷಾಯಿಣಿ 2016ರ ಡಿಸೆಂಬರ್‌ನಲ್ಲಿ ಸರ್ಕಾರಿ ನೌಕರಿಗಾಗಿ ಅರ್ಜಿ ಹಾಕುವುದಕ್ಕೆ ಪ್ರಾರಂಭಿಸಿದ್ದಾರೆ. ಅಂದಿನಿಂದ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಸರ್ಕಾರ ಕರೆದ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದಾರೆ. ಪ್ರಾರಂಭದಲ್ಲಿ ಕಂದಾಯ ಇಲಾಖೆಗೆ ಪರೀಕ್ಷೆ ಬರೆದಾಗ ಅನುತ್ತೀರ್ಣರಾದರು.
ಆನಂತರ ಬೆಸ್ಕಾಂ ಪರೀಕ್ಷೆ ಬರೆದರೂ ಅದರಲ್ಲಿ ಸಫಲವಾಗಲಿಲ್ಲ. ತದನಂತರ ಕೊಪ್ಪಳದ ಖಾಸಗಿ ಕೋಚಿಂಗ್ ಸೆಂಟರ್ ಒಂದರಲ್ಲಿ ಸ್ವಲ್ಪ ದಿನ ತರಬೇತಿ ಪಡೆದು, ಪರೀಕ್ಷೆ ಸಮಯದಲ್ಲಿ ದಿನನಿತ್ಯ ಕಠಿಣ ಪರಿಶ್ರಮ ಪಟ್ಟು ಓದಿದ ಪರಿಣಾಮ 2 ವರ್ಷದಲ್ಲಿ ಬರೊಬ್ಬರಿ 9 ಸರ್ಕಾರಿ ಹುದ್ದೆಗಳು ಅರಸಿ ಬಂದಿವೆ.
ಸರ್ಕಾರಿ ಶಾಲೆಯಲ್ಲಿ ಕಲಿತದ್ದಕ್ಕೇ ಇಷ್ಟೆಲ್ಲಾ ಸಾಧ್ಯವಾಯಿತು : ದಾಕ್ಷಾಯಿಣಿ
ನಾನು ಸರ್ಕಾರಿ ಶಾಲೆಯಲ್ಲಿ ಕಲಿತಿದ್ದಕ್ಕೆ ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಯಿತು. ಕೆಲವರಲ್ಲಿ ಸರ್ಕಾರಿ ಶಾಲೆಯಲ್ಲಿ ಕಲಿತರೆ ಕೆಲಸ ಸಿಗುವುದಿಲ್ಲ ಎಂಬ ಕೀಳರಿಮೆ ಇದೆ. ಅದನ್ನು ಮೊದಲು ತೊಲಗಿಸಬೇಕು. ಸರ್ಕಾರಿ ಶಾಲೆಯಲ್ಲಿಯೂ ಉತ್ತಮ ಶಿಕ್ಷಣ ದೊರೆಯುತ್ತದೆ. ಪ್ರಮುಖವಾಗಿ ಕುಟುಂಬದ ಸಹಕಾರ, ಸ್ನೇಹಿತ, ಸ್ನೇಹಿತೆಯರ, ಪ್ರಾಥಮಿಕ, ಪ್ರೌಢ, ಬಿಎಡ್, ಎಂಎದಲ್ಲಿ ಶಿವಕುಮಾರ, ನೀಲಪ್ಪ ಉಪನ್ಯಾಸಕರು ಬಹಳ ಪ್ರೋತ್ಸಾಹ ನೀಡಿದರು. ಕೋಚಿಂಗ್ ಸೆಂಟರ್‌ನಲ್ಲಿ ನನ್ನ ಸರ್ಕಾರಿ ಹುದ್ದೆಯ ಕನಸಿಗೆ ಮೂರ್ತರೂಪ ಕೊಟ್ಟರು. ಹೀಗಾಗಿಯೇ ಇದೆಲ್ಲ ಸಾಧ್ಯವಾಯಿತು ಎಂದು ದಾಕ್ಷಾಯಿಣಿ ಸಂತಸ ವ್ಯಕ್ತಪಡಿಸಿದರು.
ಮೊದಲಿಗೆ ನಾವು ಏನು ಓದಬೇಕು ಎಂಬ ಐಡಿಯಾ ಇರಬೇಕು, ವಿಷಯಕ್ಕೆ ಸಂಬಂಧಿಸಿದ ಪರ್ಫೆಕ್ಟ್ ಆಗಿರುವ ಅಂಶ ಮನದಟ್ಟು ಮಾಡಿಕೊಳ್ಳಬೇಕು. ಜೀವನದಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ ಎನ್ನುತ್ತಾರೆ ದಾಕ್ಷಾಯಿಣಿ.
ನಮ್ಮ ಕಾಲೇಜಿನಲ್ಲಿ ಕಳೆದ ವರ್ಷ ಎಂಎ ಪೂರ್ಣಗೊಳಿಸಿದ ವಿದ್ಯಾರ್ಥಿನಿ ದಾಕ್ಷಾಯಿಣಿ ಅಪ್ಪಟ ಗ್ರಾಮೀಣ ಪ್ರತಿಭೆ. ಅಲ್ಲದೇ ಅತ್ಯಂತ ಚಾಣಾಕ್ಷೆ ಕೂಡ. ಗ್ರಾಮೀಣ ಮಟ್ಟದಿಂದ ಬಂದು 8 ಸರ್ಕಾರಿ ಹುದ್ದೆ ಪಡೆಯುತ್ತಿರುವುದು ಸಾಮಾನ್ಯದ ಮಾತಲ್ಲ. ಅವರಂತೆ ಇನ್ನುಳಿದ ವಿದ್ಯಾರ್ಥಿನಿಯರು ಹೆಚ್ಚಿನ ಸಾಧನೆ ಮಾಡಲಿ.
-ಮನೋಜ ಡೊಳ್ಳಿ
ವಿಶೇಷಾಧಿಕಾರಿಗಳು, ಬಳ್ಳಾರಿ ವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಕೊಪ್ಪಳ
ನಮ್ಮೂರಿನ ಪ್ರತಿಭೆ ದಾಕ್ಷಾಯಿಣಿ ಕಷ್ಟಪಟ್ಟು 8 ಸರ್ಕಾರಿ ಹುದ್ದೆಗಳನ್ನು ಪಡೆದುಕೊಂಡಿರುವುದು ನಮ್ಮ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ. ಈ ಯುವತಿಯನ್ನು ನೋಡಿ ನಮ್ಮೂರಿನ ಇನ್ನುಳಿದ ಮಕ್ಕಳು ಶೈಕ್ಷಣಿಕ ರಂಗದಲ್ಲಿ ಹೆಚ್ಚಿನ ಸಾಧನೆ ಮಾಡಲಿ ಎನ್ನುವುದು ನಮ್ಮ ಆಶಯ.
-ಶಾಂತಪ್ಪ ಸಂಗಟಿ, ಈರಣ್ಣ ಶಾನಭೋಗ್ರು, ವದಗನಾಳ ಗ್ರಾಮಸ್ಥರು
ವರದಿ : ಶ್ರೀಕಾಂತ ಅಕ್ಕಿ