ಕೊಪ್ಪಳ ಜಿಲ್ಲೆಯಲ್ಲಿ ಮಣ್ಣು ತಿಂದು ರೈತ ಸಿಡಿಮಿಡಿ: ನಿಲ್ಲದ ರೈತರ ಯೂರಿಯಾ ಆಕ್ರೋಶ

Published : Jul 27, 2025, 06:14 AM IST
farmer

ಸಾರಾಂಶ

ಮುಂಗಾರು ಈ ಬಾರಿ ಉತ್ತಮವಾಗಿ ಸುರಿಯುತ್ತಿರುವ ನಡುವೆ ರಾಜ್ಯದಲ್ಲಿ ಬೆಳೆಗಳಿಗೆ ಅಗತ್ಯವಾದ ಯೂರಿಯಾ ರಸಗೊಬ್ಬರದ ಅಭಾವ ಕೂಡ ಮುಂದುವರಿದಿದೆ.

ಬೆಂಗಳೂರು (ಜು.27): ಮುಂಗಾರು ಈ ಬಾರಿ ಉತ್ತಮವಾಗಿ ಸುರಿಯುತ್ತಿರುವ ನಡುವೆ ರಾಜ್ಯದಲ್ಲಿ ಬೆಳೆಗಳಿಗೆ ಅಗತ್ಯವಾದ ಯೂರಿಯಾ ರಸಗೊಬ್ಬರದ ಅಭಾವ ಕೂಡ ಮುಂದುವರಿದಿದೆ. ಯೂರಿಯಾಗಾಗಿ ರಾಜ್ಯದ ವಿವಿಧೆಡೆ ರೈತರು ಮುಗಿಬೀಳುತ್ತಿದ್ದು, ಶನಿವಾರವೂ ಅಲ್ಲಲ್ಲಿ ಪ್ರತಿಭಟನೆಗಳು ನಡೆದಿವೆ. ಇದರ ನಡುವೆ, ಕೊಪ್ಪಳ ಜಿಲ್ಲೆಯಲ್ಲಿ ರೈತನೊಬ್ಬ ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ದಾವಣಗೆರೆ ಜಿಲ್ಲೆಯ ಜಗಳೂರು, ಚಿತ್ರದುರ್ಗ, ಗದಗ ಜಿಲ್ಲೆಯ ನರಗುಂದ ಸೇರಿ ಅನೇಕ ಕಡೆ ಗೊಬ್ಬರದ ಅಂಗಡಿಗಳ ಮುಂದೆ ಹನುಮನ ಬಾಲದಂತೆ ಸರದಿ ಕಂಡುಬಂದಿದೆ.

ಕೊಪ್ಪಳದಲ್ಲಿ ಮಣ್ಣು ತಿಂದ ರೈತ: ಕೊಪ್ಪಳದ ಬಸವೇಶ್ವರ ವೃತ್ತದ ಬಳಿ ಇರುವ ತಾಲೂಕು ಒಕ್ಕಲುತನ ಹುಟ್ಟುವಳಿ ಸಹಕಾರಿ ಸಂಘದ (ಟಿಎಪಿಎಂಸಿ) ಮುಂಭಾಗ ರೈತರು ಬೆಳಗ್ಗೆ 5 ಗಂಟೆಯಿಂದಲೇ ಜಮಾಯಿಸಿದ್ದರು. ಆದರೆ, ಸಂಘದ ಬಾಗಿಲಿಗೆ ‘ಯೂರಿಯಾ ನೋ ಸ್ಟಾಕ್‌’ ಬೋರ್ಡ್‌ ಹಾಕಲಾಗಿತ್ತು. ಈ ಬೋರ್ಡ್‌ ನೋಡಿ ಆಕ್ರೋಶಗೊಂಡ ತಾಲೂಕಿನ ಕುಣಿಕೇರಿ ಗ್ರಾಮದ ಚಂದ್ರಪ್ಪ ಬಡಿಗಿ, ‘ಬೆಳೆಗೆ ಗೊಬ್ಬರ ಕೊಡದೆ ಇದ್ದರೆ ಮಾಡಿದ ಖರ್ಚು ಬರುವುದಿಲ್ಲ, ಮಣ್ಣು ತಿಂದು ಸಾಯಬೇಕಾ’ ಎಂದು ತಾವೇ ಮಣ್ಣು ತಿಂದು, ಆಕ್ರೋಶ ವ್ಯಕ್ತಪಡಿಸಿದರು.

ರೈತರು ಯೂರಿಯಾ ರಸಗೊಬ್ಬರ ಸಿಗದೆ ಎಂತಹ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಈ ಸರ್ಕಾರಕ್ಕೆ ಅರಿವಾಗಲೆಂದು ಮಣ್ಣು ತಿಂದಿದ್ದೇನೆ ಎಂದು ಅವರು ಹೇಳಿದರು. ಆದರೆ, ಆತನನ್ನು ಕೇಳುವವರ್‍ಯಾರೂ ಅಲ್ಲಿರಲಿಲ್ಲ. ನಾಲ್ಕನೇ ಶನಿವಾರ ಆಗಿದ್ದರಿಂದ ಅಧಿಕಾರಿಗಳು ಬರಲಿಲ್ಲ. ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ ರೈತ, ಕೊನೆಗೆ ಮಣ್ಣು ತೂರಿ ಅಲ್ಲಿಂದ ತೆರಳಿದರು. ಇದೇ ವೇಳೆ, ಕೊಪ್ಪಳ ಜಿಲ್ಲೆಯಾದ್ಯಂತ ಯೂರಿಯಾ ಅಭಾವ ಸೃಷ್ಟಿಯಾಗಿದ್ದು, ಗೊಬ್ಬರಕ್ಕಾಗಿ ರೈತರು ಪರದಾಡುತ್ತಿದ್ದಾರೆ.

ಸುರಿವ ಮಳೆಯಲ್ಲೂ ಕ್ಯೂ ನಿಂತ ರೈತರು: ಈ ಮಧ್ಯೆ, ಚಿತ್ರದುರ್ಗದ ಎಪಿಎಂಸಿ ಆವರಣದ ಸಮೀಪ ಸಾವಿರಾರು ರೈತರು, ರೈತ ಮಹಿಳೆಯರು ಬೆಳಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದರು. ಕೃಷಿಕರ ಈ ಸರದಿಯ ಸಾಲು ಮುಕ್ಕಾಲು ಕಿ.ಮೀ.ದೂರದವರೆಗೂ ಇದ್ದುದು ಯೂರಿಯಾ ಗೊಬ್ಬರಕ್ಕೆ ಇರುವ ಬೇಡಿಕೆಯನ್ನು ಸೂಚಿಸುವಂತಿತ್ತು. ಇದರಿಂದಾಗಿ ಎಪಿಎಂಸಿ ಮಾರುಕಟ್ಟೆಯ ಕಡೆಗೆ ಹೋಗುತ್ತಿದ್ದ ರಸ್ತೆಗಳನ್ನು ಪೊಲೀಸರು ಕೆಲ ಹೊತ್ತು ಬಂದ್‌ ಮಾಡಬೇಕಾಯಿತು. ಭದ್ರತೆಗಾಗಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಆಗ್ರೋ ಕೇಂದ್ರದ ಎದುರು, ದಾವಣಗೆರೆ ಜಿಲ್ಲೆ ಜಗಳೂರು ಪಟ್ಟಣದಲ್ಲಿ ಪ್ರಾಥಮಿಕ ಕೃಷಿಪತ್ತಿನ ಸಂಘದ ಎದುರು ಸುರಿಯುವ ಮಳೆಯನ್ನೂ ಲೆಕ್ಕಿಸದೆ ರೈತರು ಬೆಳಗ್ಗೆಯಿಂದಲೇ ಗೊಬ್ಬರಕ್ಕಾಗಿ ಕ್ಯೂ ನಿಂತಿದ್ದರು. ಈ ಮಧ್ಯೆ, ಹೊನ್ನಾಳಿ ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಯೂರಿಯಾ ರಸಗೊಬ್ಬರವನ್ನು ಪೊಲೀಸ್ ಬಂದೋಬಸ್ತ್ ನಲ್ಲಿ ರೈತರಿಗೆ ವಿತರಿಸಲಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!