
ಬೆಂಗಳೂರು (ಜುಲೈ.9): ಜೈಲಿನಲ್ಲಿರುವ ಶಂಕಿತ ಉಗ್ರರೊಂದಿಗೆ ನಿರಂತರ ಸಂಪರ್ಕ, ನೆರವು ನೀಡಿದ ಆರೋಪದಡಿ ಬೆಂಗಳೂರು ನಗರ ಮತ್ತು ಕೋಲಾರ ಜಿಲ್ಲೆಗಳ ಐದು ಸ್ಥಳಗಳ ಮೇಲೆ ಮಂಗಳವಾರ ದಾಳಿ ಮಾಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮನೋವೈದ್ಯ ಸೇರಿ ಮೂವರನ್ನು ಬಂಧಿಸಿದ್ದಾರೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮನೋವೈದ್ಯ ಡಾ। ನಾಗರಾಜ್, ಉತ್ತರ ವಿಭಾಗದ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಎಎಸ್‌ಐ ಚಾಂದ್ ಪಾಷಾ, ತಲೆಮರೆಸಿಕೊಂಡಿರುವ ಶಂಕಿತ ಉಗ್ರ ಜುನೈದ್ ಅಹಮ್ಮದ್‌ನ ತಾಯಿ ಅನೀಸ್ ಫಾತಿಮಾ ಬಂಧಿತರು. ಆರೋಪಿಗಳು ಹಾಗೂ ಇತರೆ ಶಂಕಿತರ ಮನೆಗಳ ಮೇಲಿನ ದಾಳಿ ವೇಳೆ ವಿವಿಧ ಡಿಜಿಟಲ್ ಸಾಧನಗಳು, ನಗದು, ಚಿನ್ನ ಹಾಗೂ ಅಪರಾಧದ ದಾಖಲೆಗಳು ಪತ್ತೆಯಾಗಿದ್ದು, ಅವುಗಳನ್ನು ಜಪ್ತಿ ಮಾಡಲಾಗಿದೆ.
ಲಷ್ಕರ್- ಎ-ತೊಯ್ಬಾ(ಎಲ್‌ಇಟಿ) ನಿಷೇಧಿತ ಉಗ್ರ ಸಂಘಟನೆ ಬೆಂಗಳೂರು ನಗರದಲ್ಲಿ ದುಷ್ಕೃತ್ಯಗಳನ್ನು ನಡೆಸುವ ಉದ್ದೇಶದಿಂದ ಜೈಲಿನಲ್ಲಿದ್ದುಕೊಂಡೇ ಸಂಚು ರೂಪಿಸಿದ್ದ ಆರೋಪದ ಸಂಬಂಧ 2023ರ ಜುಲೈನಲ್ಲಿ ಸಿಸಿಬಿ ಪೊಲೀಸರು ನಗರದ ವಿವಿಧೆಡೆ ದಾಳಿ ನಡೆಸಿ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದರು. ಈ ವೇಳೆ ಆರೋಪಿಗಳ ಮನೆಗಳಿಂದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಸ್ಫೋಟಕಗಳು, ಎರಡು ವಾಕಿಟಾಕಿಗಳು ಸೇರಿ ಡಿಜಿಟಲ್ ಸಾಧನಗಳನ್ನು ಜಪ್ತಿ ಮಾಡಿದ್ದರು. ಈ ಸಂಬಂಧ ಎನ್‌ಐಎ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು.
ಶಂಕಿತ ಉಗ್ರನಿಗೆ ಮೊಬೈಲ್ ಪೂರೈಕೆ:
ಈ ಪ್ರಕರಣದ ತನಿಖೆ ವೇಳೆ ಬೆಂಗಳೂರಿನಲ್ಲಿ 2008ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಹಾಗೂ ವಿವಿಧ ಭಯೋತ್ಪಾದಕ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ ಎಲ್‌ಇಟಿ ಉಗ್ರ ಸಂಘಟನೆ ಶಂಕಿತ ಉಗ್ರ ಕೇರಳ ಮೂಲದ ಟಿ.ನಾಸೀರ್ ಹಾಗೂ ಇತರೆ ಕೈದಿಗಳ ಬಳಕೆಗೆ ಜೈಲಿನ ಮನೋವೈದ್ಯ ಡಾ.ನಾಗರಾಜ್ ಅಕ್ರಮವಾಗಿ ಮೊಬೈಲ್ ಪೂರೈಸಿದ್ದರು. ಇವರ ಕೃತ್ಯಕ್ಕೆ ಪವಿತ್ರಾ ಎಂಬಾಕೆ ಬೆಂಬಲ ನೀಡಿರುವುದು ಕಂಡು ಬಂದಿದೆ.
ಶಂಕಿತ ಉಗ್ರನ ಬಗ್ಗೆ ಮಾಹಿತಿ ರವಾನೆ:
ತಲೆಮರೆಸಿಕೊಂಡಿರುವ ಶಂಕಿತ ಉಗ್ರ ಜುನೈದ್ ಅಹಮ್ಮದ್ ತಾಯಿ ಅನೀಸ್ ಫಾತಿಮಾ ಜೈಲಿನಲ್ಲಿರುವ ಶಂಕಿತ ಉಗ್ರ ಟಿ.ನಾಸೀರ್ ಸೂಚನೆ ಮೇರೆಗೆ ಉಗ್ರ ಚಟುವಟಿಕೆಗಳಿಗೆ ನಿಧಿ ಸಂಗ್ರಹಿಸಲು ಮತ್ತು ಆ ನಿಧಿ ಹಸ್ತಾಂತರಿಸಲು ಮಗನಿಗೆ ಸೂಚಿಸಿರುವುದು ಬೆಳಕಿಗೆ ಬಂದಿದೆ.
ಇನ್ನು ಎಎಸ್‌ಐ ಚಾಂದ್ ಪಾಷಾ 2022ರಲ್ಲಿ ಶಂಕಿತ ಉಗ್ರ ಟಿ.ನಾಸೀರ್‌ನನ್ನು ಜೈಲಿನಿಂದ ನ್ಯಾಯಾಲಯಗಳಿಗೆ ಕರೆದೊಯ್ಯವ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದ. ಈ ಮೂಲಕ ಟಿ.ನಾಸೀರ್ ಹಣ ಪಡೆದುಕೊಳ್ಳಲು ನೆರವು ನೀಡುತ್ತಿದ್ದ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.
ನಗರದಲ್ಲಿ ಉಗ್ರ ಕೃತ್ಯಗಳಿಗೆ ಸಂಚು ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಜುನೈದ್ ಅಹಮ್ಮದ್ ಸೇರಿ ಒಂಬತ್ತು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದೆ. ಅಂತೆಯೇ ತಲೆಮರೆಸಿಕೊಂಡಿರುವ ಶಂಕಿತ ಉಗ್ರನ ಪತ್ತೆಗೆ ಶೋಧ ಕಾರ್ಯ ಮುಂದುವರೆಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ