
-ದಿವ್ಯಾ ಹೆಗಡೆ ಕಬ್ಬಿನಗದ್ದೆ
ಮೊನ್ನೆ ಮೊನ್ನೆ ತಮಿಳುನಾಡಿನ ಸಚಿವ ಇ.ವಿ.ವೇಲು ಸಂಸ್ಕೃತ ಮತ್ತು ತಮಿಳಿನ ಕುರಿತು ನೀಡಿದ ಹೇಳಿಕೆ ಯಾಕೋ ಅಷ್ಟು ಚರ್ಚೆಯಾಗದೇ ಉಳಿದಿದೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ವಿವಾಹ ಕರ್ಮದಲ್ಲಿ ಹೇಳುವ ಮಂತ್ರವನ್ನು ಮಿಮಿಕ್ರಿ ಮಾಡಿ, ‘ಈ ಸಂಸ್ಕೃತ ಭಾಷೆ ಯಾರಿಗೆ ತಾನೇ ಅರ್ಥವಾಗುತ್ತದೆ? ನಮ್ಮ ತಮಿಳಿನಲ್ಲಾದರೆ ಪ್ರೇಮಿಗಳಿಬ್ಬರು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು. ಐ ಲವ್ ಯೂ ಅಂತ ಹೇಳಬಹುದು. ಆದರೆ ಸಂಸ್ಕೃತದಲ್ಲಿ ಹೀಗೆ ಹೇಳಲು ಸಾಧ್ಯವೇ? ಯಾರಿಗೂ ಅರ್ಥವಾಗದ ಭಾಷೆಗೆ ಕೇಂದ್ರ ಸರ್ಕಾರ ₹2,500 ಕೋಟಿ ಅನುದಾನ ಕೊಟ್ಟಿದೆ. ಆದರೆ ತಮಿಳಿಗೆ ಕೇವಲ ₹167 ಕೊಟಿ ಕೊಟ್ಟಿದೆ. ದೇಶದಲ್ಲಿ ಜಿಎಸ್‌ಟಿಗೆ ಹೆಚ್ಚಿನ ಕೊಡುಗೆ ನೀಡುವ 2ನೇ ರಾಜ್ಯ ತಮಿಳುನಾಡು. ನಮ್ಮ ತೆರಿಗೆ ಹಣವನ್ನು ಸಂಸ್ಕೃತದ ಉದ್ಧಾರಕ್ಕೆ ಕೇಂದ್ರ ಬಳಸುತ್ತಿದೆ’ ಎಂದು ಕಿಡಿ ಕಾರಿದ್ದಾರೆ. ತಮಿಳಿಗೆ ಕೇಂದ್ರ ಎಷ್ಟು ಅನುದಾನ ಕೊಡುತ್ತಿದೆ, ಅದು ಹೆಚ್ಚೋ ಕಡಿಮೆಯೋ ಎಂಬ ಚರ್ಚೆ ಒತ್ತಟ್ಟಿಗಿರಲಿ. ಆದರೆ ಸಂಸ್ಕೃತದ ಮೇಲೆ ಸಚಿವರಿಗೆ ಯಾಕಷ್ಟು ಕೋಪ? ಸಂಸ್ಕೃತ ಮಂತ್ರಗಳನ್ನು ಅಪಹಾಸ್ಯ ಮಾಡುವಷ್ಟು ಕುದಿ ಹುಟ್ಟಿದ್ದೇಕೆ ಎಂಬ ಪ್ರಶ್ನೆ ವಿಚಾರ ಮಾಡಬೇಕಾದದ್ದು.
ಇತ್ತೀಚೆಗಷ್ಟೇ ಖ್ಯಾತ ನಟ ಕಮಲ್ ಹಾಸನ್ ‘ಕನ್ನಡ ತಮಿಳಿನಿಂದ ಹುಟ್ಟಿದ್ದು’ ಎಂಬ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಹೇಳಿಕೆ ಹಿಂಪಡೆಯುವುದಿಲ್ಲ ಮತ್ತು ಈ ಬಗ್ಗೆ ಕ್ಷಮೆಯನ್ನೂ ಕೋರುವುದಿಲ್ಲ ಎಂದು ಕೋರ್ಟಿನ ವರೆಗೂ ಹೋಗಿಬಂದರು. ಕಳೆದ ತಿಂಗಳಷ್ಟೇ ಸಂಸ್ಕೃತದ ಮೇಲೆ ಹರಿಹಾಯ್ದ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ‘ಸಂಸ್ಕೃತಕ್ಕೆ ಕೋಟಿ ಕೋಟಿ ಲಾಭ. ತಮಿಳು ಮತ್ತು ಇತರ ದಕ್ಷಿಣ ಭಾರತೀಯ ಭಾಷೆಗಳಿಗೆ ಮೊಸಳೆ ಕಣ್ಣೀರು ಮಾತ್ರ ಸಿಗುತ್ತದೆ. ತಮಿಳಿನ ಮೇಲೆ ಸುಳ್ಳು ಪ್ರೀತಿ, ಎಲ್ಲಾ ಹಣ ಸಂಸ್ಕೃತಕ್ಕೆ’ ಎಂದಿದ್ದರು. ಇಂಥ ಹೇಳಿಕೆಯನ್ನು ಅವರು ಆಗಾಗ ಕೊಡುತ್ತಿರುತ್ತಾರೆ.
ಕಳೆದ ವರ್ಷ ತಮಿಳುನಾಡು ಸಚಿವ ದಯಾನಿಧಿ ಮಾರನ್ ‘ತಮಿಳು ಮೂಲದ ಸುಂದರ್ ಪಿಚೈ ಗೂಗಲ್ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ. ಅವರೇನಾದರೂ ಇಂಗ್ಲಿಷ್ ಬದಲಿಗೆ ಹಿಂದಿ ಕಲಿತಿದ್ದರೆ ಕಟ್ಟಡ ಕಾರ್ಮಿಕನಾಗಿ ಉಳಿಯಬೇಕಿತ್ತು’ ಎಂದಿದ್ದರು. ಅದಕ್ಕೂ ಹಿಂದೆ ‘ಇಂಗ್ಲಿಷ್ ಕಲಿತವರು ಐಟಿಯಲ್ಲಿ ಉತ್ತಮ ಕೆಲಸ ಮಾಡುತ್ತಾರೆ. ಆದರೆ ಹಿಂದಿ ಕಲಿತವರು ಶೌಚಾಲಯ ತೊಳೆಯುವುದರಲ್ಲೇ ಜೀವನ ಕಳೆಯುತ್ತಾರೆ’ ಎಂದಿದ್ದರು. ತಮಿಳು ನಾಯಕರು, ಚಿತ್ರತಾರೆಯರು ತಮಿಳನ್ನು ಹೊಗಳುವ ಭರದಲ್ಲಿ ಇತರ ಭಾಷೆಗಳನ್ನು ತೆಗಳಿದ ಸಾಕಷ್ಟು ಉದಾಹರಣೆಗಳು ಇತಿಹಾಸದಲ್ಲಿ ಸಿಗುತ್ತವೆ. ಇವೆಲ್ಲವೂ ಕೇವಲ ತಮಿಳು ಅಭಿಮಾನದಿಂದ ಬಂದ ಮಾತುಗಳೇ? ಯಾವುದೇ ಭಾಷೆಯ ಮೇಲೆ ಅಭಿಮಾನವಿದ್ದ ಮಾತ್ರಕ್ಕೆ ಬೇರೆ ಭಾಷೆಯ ಮೇಲೆ ದ್ವೇಷ ಹುಟ್ಟಬೇಕೆ? ಅಷ್ಟಕ್ಕೂ ತಮಿಳಿಗರಿಗೆ ತಮ್ಮ ಭಾಷೆಯನ್ನು ಬಿಟ್ಟು, ಇತರ ಭಾಷೆಗಳ ಮೇಲೆ ಅದರಲ್ಲೂ ಸಂಸ್ಕೃತದ ಮೇಲೆ ಇಂಥ ವೈರ ಹುಟ್ಟಿಕೊಳ್ಳಲು ಕಾರಣವಾದರೂ ಏನು? ಇಂಥ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಅದು ಬ್ರಿಟಿಷ್ ಕಾಲದ ಕುತಂತ್ರಗಳನ್ನು ಬಿಚ್ಚಿಡುತ್ತಾ ಹೋಗುತ್ತದೆ.
ಬ್ರಿಟಿಷರು ಬಿತ್ತಿದ ಬೀಜ:
1857ರ ಸ್ವಾತಂತ್ರ್ಯ ಸಂಗ್ರಾಮ ಬ್ರಿಟಿಷರಿಗೆ ಬಿಸಿ ಮುಟ್ಟಿಸಿತ್ತು. ಅದರಲ್ಲೂ ಭಾರತೀಯರು ಎಲ್ಲ ಭೇದಗಳನ್ನು ಮರೆತು ತೋರಿದ ಒಗ್ಗಟ್ಟು ಬ್ರಿಟಿಷರ ನಿದ್ದೆಗೆಡಿಸಿತ್ತು. ಭಾರತದಂಥ ವಿಶಾಲ ರಾಷ್ಟ್ರದ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕಾದರೆ ‘ಒಡೆದು ಆಳುವ ನೀತಿ’ಯೇ ಪರಿಹಾರ ಎಂಬುದು ಮನದಟ್ಟಾಗಲು ಹೆಚ್ಚು ಸಮಯವೇನೂ ಬೇಕಿರಲಿಲ್ಲ. ಆಗ ಬ್ರಿಟಿಷರ ಈ ಒಡೆಯುವ ನೀತಿಗೆ ಬಲಿಯಾಗಿದ್ದು ಭಾಷೆ! ಉತ್ತರ ಮತ್ತು ದಕ್ಷಿಣ ಭಾರತೀಯರಲ್ಲಿ ಪ್ರತ್ಯೇಕತೆಯನ್ನು ಸೃಷ್ಟಿಸುವುದು, ಅದಕ್ಕಾಗಿ ಭಾಷೆಯನ್ನು ಬಲಿಗೊಡುವುದು ಅವರಿಗೆ ಅನಿವಾರ್ಯವಾಗಿತ್ತು. ತಮಿಳುನಾಡಿನ ಮದ್ರಾಸ್ (ಈಗಿನ ಚೆನ್ನೈ), ಕೊಯಮತ್ತೂರು, ಮದುರೈ ಮತ್ತು ತಿರುಚಿನಾಪಳ್ಳಿ, ಆಂಧ್ರಪ್ರದೇಶದ ರಾಯಲಸೀಮಾ, ಕೇರಳದ ಮಲಬಾರ್ ಪ್ರದೇಶ ಹಾಗೂ ಕರ್ನಾಟಕದ ಕೆಲವು ಜಿಲ್ಲೆಗಳನ್ನು ಮದ್ರಾಸ್ ಪ್ರೆಸಿಡೆನ್ಸಿಗೆ ಸೇರಿಸಲಾಗಿತ್ತು. ಬ್ರಿಟಿಷರ ಪ್ರತ್ಯೇಕತಾ ನೀತಿಗೆ ಈ ಮದ್ರಾಸ್ ಪ್ರೆಸಿಡೆನ್ಸಿ ಮೊದಲ ಬಲಿಪಶುವಾಯಿತು. ತಮಿಳು vs ಸಂಸ್ಕೃತ, ತಮಿಳು vs ಹಿಂದಿ ಮೊದಲಾದ ಇವತ್ತಿಗೂ ದೇಶದ ಸಮಗ್ರತೆ, ಏಕತೆಗೆ ಧಕ್ಕೆ ತರುತ್ತಿರುವ ವಾದಗಳಿಗೆ ಬೀಜ ಬಿತ್ತನೆಯಾಗಿದ್ದೇ ಆಗ.
ಕಾಲ್ಡ್‌ವೆಲ್ ಕೊಟ್ಟ ಪೆಟ್ಟು:
1838ರ ಜನವರಿ 8. ಭಾರತಕ್ಕೆ ಐರ‍್ಲೆಂಡ್‌ನ ಮಿಷನರಿ ರಾಬರ್ಟ್ ಕಾಲ್ಡ್‌ವೆಲ್‌ನ ‘ಆಗಮನ’ವಾಯಿತು. ಬೈಬಲ್ ಹಾಗೂ ಕ್ರಿಶ್ಚಿಯಾನಿಟಿಯ ಪ್ರಸಾರದ ಉದ್ದೇಶದಿಂದಲೇ ಮದ್ರಾಸಿಗೆ ಬಂದಿಳಿದ ಅವನಿಗೆ, ಇಲ್ಲಿ ತನ್ನ ಕಾರ್ಯಸಾಧ್ಯವಾಗಬೇಕಾದರೆ ತಮಿಳು ಕಲಿಯಬೇಕೆಂಬುದು ಸ್ಪಷ್ಟವಾಯಿತು. ತಮಿಳನ್ನು ಕಲಿಯುತ್ತಾ ಕಲಿಯುತ್ತಾ ಇತರ ಭಾರತೀಯ ಭಾಷೆಗಳ ಮೇಲೂ ಆಸಕ್ತಿ ಮೂಡತೊಡಗಿತು. ಅದಾಗಲೇ ಗ್ರೀಕ್ ಹಾಗೂ ಲ್ಯಾಟಿನ್ ಭಾಷೆಗಳನ್ನು ಕಲಿತಿದ್ದ ಅವನಿಗೆ, ದಕ್ಷಿಣ ಭಾರತೀಯ ಭಾಷೆಗಳು ಹಾಗೂ ಸಂಸ್ಕೃತವನ್ನು ಕಲಿತ ಬಳಿಕ ಭಾರತದಲ್ಲಿ ಪ್ರತ್ಯೇಕತೆಯನ್ನು ಸೃಷ್ಟಿಸಲು ಭಾಷೆ ಬಹುದೊಡ್ಡ ಸಾಧನ ಎಂಬುದು ತಿಳಿಯಿತು. ಅಲ್ಲಿಯವರೆಗೆ ಸಂಸ್ಕೃತ ಸೇರಿದಂತೆ ಎಲ್ಲ ಭಾರತೀಯ ಭಾಷೆಗಳ ಮಧ್ಯೆಯೂ ಸೌಹಾರ್ದವಿತ್ತು. ಕಾಲ್ಡ್‌ವೆಲ್ ಸಂಸ್ಕೃತ ಹಾಗೂ ದಕ್ಷಿಣ ಭಾರತೀಯ ಭಾಷೆಗಳ ಮಧ್ಯ ದೊಡ್ಡ ಕಂದಕಕ್ಕೆ ಅಡಿಪಾಯ ಹಾಕಿದ. ಇಂಡೋ ಆರ್ಯನ್ (ಸಂಸ್ಕೃತ) ಹಾಗೂ ದ್ರಾವಿಡ (ದಕ್ಷಿಣ) ಭಾಷೆಗಳು ಪ್ರತ್ಯೇಕ. ಅವು ಪರಸ್ಪರ ವಿರುದ್ಧ. ಸಂಸ್ಕೃತ ಆರ್ಯರ ಭಾಷೆ. ಭಾರತದ ಮೇಲೆ ದಾಳಿ ಮಾಡಿದ ಆರ್ಯರು ದ್ರಾವಿಡರ ನಾಶಕ್ಕೆ ಕಾರಣರಾದರು. ಆರ್ಯರು ದಕ್ಷಿಣ ದೇಶಕ್ಕೆ ಬರುವುದಕ್ಕೆ ಮೊದಲೇ ತಮಿಳು ಸಂಸ್ಕೃತಿಯು ಆದಿಕಾಲದಿಂದಲೂ ಪ್ರತ್ಯೇಕವಾದ, ಸ್ವತಂತ್ರವಾದ ಅಸ್ತಿತ್ವದಲ್ಲಿತ್ತು ಎಂಬ ಅಸ್ತಿಭಾರವನ್ನು ಕಾಲ್ಡ್‌ವೆಲ್ ಕಟ್ಟಿಕೊಟ್ಟ. ‘ದ್ರಾವಿಡ ಅಥವಾ ದಕ್ಷಿಣ ಭಾರತೀಯ ಭಾಷಾ ಕುಟುಂಬದ ತುಲನಾತ್ಮಕ ವ್ಯಾಕರಣ’ ಎಂಬ ಕೃತಿ ರಚಿಸಿದ. ಇದು ಆರ್ಯರು ಹಾಗೂ ಆರ್ಯರ ಭಾಷೆ ಸಂಸ್ಕೃತವು ದಕ್ಷಿಣ ಭಾರತ ಹಾಗೂ ತಮಿಳಿನ ಶತ್ರು ಎಂಬ ಭಾವನೆ ಬೇರೂರಲು ಮೊದಲ ಮೆಟ್ಟಿಲಾಯಿತು.
ರಾಜಕೀಯ ಪೋಷಣೆಯ ಅವಾಂತರ
ಕಾಲ್ಡ್‌ವೆಲ್ ಹಾಕಿಕೊಟ್ಟ ಅಡಿಪಾಯದ ಮೇಲೆ ಬ್ರಿಟಿಷ್ ಮಾನಸಿಕತೆಯನ್ನು ಮೈಗೂಡಿಸಿಕೊಂಡ ಹಲವರು ದೊಡ್ಡ ಕಟ್ಟಡವನ್ನೇ ಎಬ್ಬಿಸಿಬಿಟ್ಟರು. ಇತಿಹಾಸಕಾರ ಸುಂದರಂ ಪಿಳ್ಳೈ, ‘ಸಾಂಸ್ಕೃತಿಕ ದೃಷ್ಟಿಯಿಂದ ತಮಿಳುಕುಲ ಸ್ವಯಂಭುವಾಗಿದ್ದು. ಯಾರ ನೆರವನ್ನೂ ಪಡೆದದ್ದಲ್ಲ. ಸಂಸ್ಕೃತದ ಕಲೆಯಾಗಲಿ, ವೇದಾಂತವಗಲಿ ತಮಿಳಿನ ಮೇಲೆ ಎಳ್ಳಷ್ಟೂ ಪ್ರಭಾವವನ್ನು ಬೀರಿಲ್ಲ’ ಎಂದು ಘೋಷಿಸಿದರು. 1913ರಲ್ಲಿ ಚರಿತ್ರೆಕಾರ ಎನ್.ಸುಬ್ಬರಾವ್, ‘ಭಾರತದಲ್ಲೆಲ್ಲ ಸಂಸ್ಕೃತವನ್ನು ಅನುಕರಿಸದೆ ತಲೆಯೆತ್ತಿ ನಿಂತಿರುವ ಭಾಷೆಯೇ ತಮಿಳು. ಸಂಸ್ಕೃತವನ್ನೂ ಪ್ರತಿಭಾಹೀನವಾಗಿಸಿರುವ ಭಾಷೆ ತಮಿಳು. ತಮಿಳರು ತಮ್ಮದೇ ಆದ ಮತ, ಸಿದ್ಧಾಂತವನ್ನು ಬೆಳೆಸಿಕೊಂಡಿದ್ದಾರೆ’ ಎಂದು ಪ್ರಚಾರ ಮಾಡಿದರು. ಈ ಪ್ರಚಾರದ ಫಲವಾಗಿ ಸಂಸ್ಕೃತದ ಪ್ರಭಾವದಿಂದ ಸಂಪೂರ್ಣ ಮುಕ್ತವಾದ ‘ಶುದ್ಧ ತಮಿಳು’ ಭಾಷೆಯನ್ನು ಸ್ಥಾಪಿಸಲು ಸ್ವಾಮಿ ವೇದಾಚಲಂ ಮುಂದಾದರು. ಇದರ ಭಾಗವಾಗಿ ತಮ್ಮ ಹೆಸರನ್ನೇ ತಮಿಳಿನಲ್ಲಿ ಮರೈಮಲೈ ಅಡಿಗಳ್ (ವೇದಾಚಲ ದಾಸ) ಎಂದು ಬದಲಿಸಿಕೊಂಡರು! ಪರಮಸುಂದರ-ನೆಡುಮಾರನ್, ಸೋಮಸುಂದರ-ಮದಿಯಳಗನ್, ನಾರಾಯಣ-ನೆಡುಂಚೆಳಿಯನ್, ಧರ್ಮರಾಜ-ಕೊಡೈವಳ್ಳರ್ ಇತ್ಯಾದಿ ಅಪ್ಪಟ ತಮಿಳು ಹೆಸರುಗಳು ಚಾಲ್ತಿಗೆ ಬಂದವು!
1971-76ರವರೆಗೆ ತಮಿಳುನಾಡಿನ ಗವರ್ನರ್ ಆಗಿದ್ದ ಕೆ.ಕೆ.ಷಾ, ತಮಿಳು ಬೇರೆ, ಸಂಸ್ಕೃತ ಬೇರೆ ಎಂಬುದು ಸುಳ್ಳು. ತಮಿಳಿನಲ್ಲಿರುವ ನ್ಯೂನತೆಗಳನ್ನು ತಿದ್ದಿ, ಅಂಕುಡೊಂಕುಗಳನ್ನು ಸರಿ ಮಾಡಿ ಹುಟ್ಟಿಕೊಂಡ ಭಾಷೆಯೇ ಸಂಸ್ಕೃತ ಎಂದು ಸಾರಿದರು. ಹೀಗೆ ಬ್ರಿಟಿಷರು ನೆಟ್ಟ ಭಾಷಾ ಪ್ರತ್ಯೇಕತೆಯ ಸಸಿಗೆ ಕಾಲಕಾಲಕ್ಕೆ ಬಂದ ರಾಜಕೀಯ ಧುರೀಣರು ನೀರೆರೆಯುತ್ತಾ ಬಂದರು. ತಮಿಳಿಗರ ಭಾಷೆ ಮತ್ತು ಪ್ರಾದೇಶಿಕ ಹೆಮ್ಮೆಯನ್ನು, ಸಹಜ ಆತ್ಮಾಭಿಮಾನವನ್ನು ತಮ್ಮ ರಾಜಕೀಯ ದಾಳವಾಗಿ ಬಳಸಿಕೊಂಡರು. ತಮಿಳಿನ ವಿರುದ್ಧ ಬೇರೆ ಭಾಷೆಗಳನ್ನು ಎತ್ತಿಕಟ್ಟಿ ವೋಟ್ ಬ್ಯಾಂಕ್ ಅನ್ನು ಭದ್ರಪಡಿಸಿಕೊಂಡರು. ದಕ್ಷಿಣ ಭಾರತವನ್ನು ಉತ್ತರ ಭಾರತದಿಂದ ಪ್ರತ್ಯೇಕವಾಗಿ ನೋಡುವ ಮಾನಸಿಕತೆ, ಸಂಸ್ಕೃತ ದ್ವೇಷ, ಇತರ ದಕ್ಷಿಣ ಭಾರತೀಯ ಭಾಷೆಗಳ ಮೇಲೆ ತಾತ್ಸಾರ, ಇಂಗ್ಲಿಷ್ ವ್ಯಾಮೋಹ ಇತ್ಯಾದಿಗಳನ್ನು ಬಹಳ ಚಾಣಾಕ್ಷತನದಿಂದ ಪೋಷಿಸಿಕೊಂಡು ಬಂದರು. ಇವುಗಳ ಫಲವೇ ಇಂದು ಕಮಲ್ ಹಾಸನ್, ಇ.ವಿ. ವೇಲು, ಮಾರನ್ ಕೊಡುತ್ತಿರುವ ಹೇಳಿಕೆಗಳು. ಇವರೆಲ್ಲರ ಮಾತಿನಲ್ಲಿ ತಮಿಳು ಅಭಿಮಾನ ಮಾತ್ರವಿದ್ದರೆ ಯಾರಿಗೂ ಸಮಸ್ಯೆಯಿರಲಿಲ್ಲ. ಆದರೆ ಬೇರೆ ಭಾಷೆಗಳ ನಿಂದನೆ, ಇತಿಹಾಸವನ್ನೇ ಬದಲು ಮಾಡುವ ಕುತ್ಸಿತತೆ ಇದ್ದಿದ್ದು ಅಪಾಯಕಾರಿ. ಈ ಕಾರಣದಿಂದಲೇ ಕಮಲ್ ಹಾಸನ್ ಹೇಳಿಕೆಗೆ ಇಡೀ ಕರ್ನಾಟಕ ತಿರುಗಿಬಿತ್ತು. ದಶಕಗಳಿಂದ ಗಳಿಸಿದ್ದ ಕನ್ನಡಿಗರ ಅಭಿಮಾನವನ್ನು ಕಮಲ್ ಕಳೆದುಕೊಂಡರು.
ದ್ವೇಷ ಅಳಿಯಲಿ, ಪ್ರೀತಿ ಬೆಳೆಯಲಿ
ಇಲ್ಲಿ ಗಮನಿಸಬೇಕಾದ ಗಂಭೀರ ಅಂಶವೆಂದರೆ, ಭಾಷೆಯ ವಿಷಯವಾಗಿಯೇ ಭಾರತೀಯರಲ್ಲಿ ಒಳ ಜಗಳಗಳಾಗುತ್ತಿರುವುದು. ಭಾರತವನ್ನು ನುಂಗಿ ನೀರು ಕುಡಿಯಲು ಬಂದಿದ್ದ ಬ್ರಿಟಿಷರು ಯಾವ ದೂರಾಲೋಚನೆ ಇಟ್ಟುಕೊಂಡು ಸಿದ್ಧಾಂತಗಳನ್ನು ಸ್ಥಾಪಿಸಿದ್ದರೋ, ಅದು ಈಗ ಕೆಲಸ ಮಾಡುತ್ತಿರುವುದು. ಪರಸ್ಪರ ಭಾಷೆಗಳ ಮಧ್ಯೆ ಬೆಂಕಿ ಹಚ್ಚಿ ಮೈಕಾಯಿಸಿಕೊಳ್ಳುವ ಅವರ ತಂತ್ರ ಈಗಲೂ ಯಶಸ್ವಿಯಾಗುತ್ತಿರುವುದು. ಬ್ರಿಟಿಷರು ಭಾರತದಿಂದ ತೊಲಗಿ ಮುಕ್ಕಾಲು ಶತಮಾನವೇ ಕಳೆದರೂ ನಮ್ಮ ನಮ್ಮಲ್ಲೇ ಒಗ್ಗಟ್ಟಿನ ಕೊರತೆ, ಪರಸ್ಪರ ವೈಷಮ್ಯ ತಾಂಡವವಾಡುತ್ತಿರುವುದು ದೇಶದ ಹಿತದಿಂದ ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಬೇರೆ ಭಾಷೆಯ ಮೇಲೆ ತನ್ನದನ್ನು ಹೇರಿಕೆ ಮಾಡುವುದನ್ನು ಖಂಡಿಸಿದಷ್ಟೇ ಬಲವಾಗಿ, ತನ್ನದೇ ಪರಮೋಚ್ಚ ಎಂಬ ದಾರ್ಷ್ಟ್ಯವನ್ನು ಖಂಡಿಸುವುದೂ ಅಗತ್ಯ. ಕನ್ನಡಿಗರು ಕಮಲ್ ಪ್ರಕರಣದಲ್ಲಿ ಆ ಕೆಲಸವನ್ನು ಮಾಡಿದ್ದಾರೆ. ಭಾಷಾ ದುರಭಿಮಾನ ಕಳೆದು, ಪರಸ್ಪರ ಭಾಷೆಗಳ ಮೇಲೆ ಗೌರವ, ಪ್ರೀತಿ ಮೂಡಿದರೆ ಸಮಾಜಕ್ಕೂ, ದೇಶಕ್ಕೂ ಒಳ್ಳೆಯದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ