ದೇಶದ ಅಭಿವೃದ್ದಿಯಲ್ಲಿ ಕೃಷಿ ಕ್ಷೇತ್ರದ ಪಾತ್ರ ಅನನ್ಯ: ಸಂಸದ ಯದುವೀರ್ ಒಡೆಯರ್

Published : Aug 24, 2025, 08:27 AM IST
Yaduveer wadiyar on dharmasthala case

ಸಾರಾಂಶ

ಇತ್ತೀಚಿನ ವರ್ಷಗಳಲ್ಲಿ ಯುವ ಜನಾಂಗ ಉದ್ಯೋಗ ಸೇರಿದಂತೆ ಇನ್ನಿತರ ಅವಶ್ಯಕತೆಗಾಗಿ ಗ್ರಾಮ ತೊರೆದು ಪಟ್ಟಣ ಸೇರುತ್ತಿರುವ ವಿಷಯ ಆತಂಕಕಾರಿ ಬೆಳವಣಿಗೆಯಾಗಿದೆ.

ಕುಶಾಲನಗರ (ಆ.24): ಕೊಡಗು ಜಿಲ್ಲಾ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಹುದುಗೂರು ಗ್ರಾಮದ ಕಾಳಿಕಾಂಬ ಯುವಕ ಸಂಘದ ಸಹಯೋಗದೊಂದಿಗೆ ಗ್ರಾಮದ ಐಮುಡಿಯಂಡ ಗಣೇಶ್ ಅವರ ಗದ್ದೆಯಲ್ಲಿ ಆಯೋಜಿಸಿದ್ದ 7 ನೇ ವರ್ಷದ ನಾಟಿ ಹಬ್ಬ ಹಾಗೂ ಕೆಸರು ಗದ್ದೆ ಕ್ರೀಡಾಕೂಟವನ್ನು ಸಂಸದ ಯದುವೀರ್ ಒಡೆಯರ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ದೇಶದ ಅಭಿವೃದ್ದಿಯಲ್ಲಿ ಕೃಷಿ ಕ್ಷೇತ್ರ ಮಹತ್ತರ ಪಾತ್ರ ವಹಿಸುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಯುವ ಜನಾಂಗ ಉದ್ಯೋಗ ಸೇರಿದಂತೆ ಇನ್ನಿತರ ಅವಶ್ಯಕತೆಗಾಗಿ ಗ್ರಾಮ ತೊರೆದು ಪಟ್ಟಣ ಸೇರುತ್ತಿರುವ ವಿಷಯ ಆತಂಕಕಾರಿ ಬೆಳವಣಿಗೆಯಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ಸಂಘವು ಪ್ರತಿ ವರ್ಷ ಗದ್ದೆ ನಾಟಿ ಕಾರ್ಯಕ್ರಮವನ್ನು ಸಾರ್ವಜನಿಕವಾಗಿ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂರಕ್ಷಣೆ ನಮ್ಮೆಲ್ಲರ ಹೊಣೆ: ಕೃಷಿ ಕ್ಷೇತ್ರದ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೈತರ ಅಭ್ಯುದಯಕ್ಕೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಕೃಷಿಕ ಸಮ್ಮಾನ್ ಮೂಲಕ ಆರ್ಥಿಕ ಸದೃಢತೆ ನೀಡುತ್ತಿದೆ. ರಸಗೊಬ್ಬರ, ಸುಧಾರಿತ ತಳಿಗಳ ಪರಿಚಯ, ಸಹಾಯಧನವನ್ನು ಹೆಚ್ಚಿಸುತ್ತಿದೆ. ಇವುಗಳ ಬಗ್ಗೆ ರೈತರು ಮಾಹಿತಿ ಪಡೆದುಕೊಂಡು ಸವಲತ್ತುಗಳನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾರತ ಎಲ್ಲಾ ಕ್ಷೇತ್ರದಲ್ಲೂ ಪ್ರಗತಿ ಸಾಧಿಸುತ್ತಿದೆ. ಕೃಷಿ ಕ್ಷೇತ್ರವು ಹೆಚ್ಚಿನ ಆದಾಯ ಹಾಗೂ ಸುಸ್ಥಿರ ಬದುಕಿಗೆ ಪೂರಕ ಕ್ಷೇತ್ರವೆಂದು ವರದಿಗಳು ತಿಳಿಸಿವೆ. ಈ ನಿಟ್ಟಿನಲ್ಲಿ ಕೃಷಿ ಕ್ಷೇತ್ರವನ್ನು ಕಡೆಗಣಿಸದೇ ರೂಢಿಸಿಕೊಂಡು ಹೋಗಬೇಕು. ಮೋದಿ ಪರಿಕಲ್ಪನೆಯ ವಿಕಸಿತ ಭಾರತದ ಸಾಕಾರಕ್ಕೆ ಎಲ್ಲರೂ ಶ್ರಮಿಸಬೇಕೆಂದರು.

ಕೃಷಿಯಿಂದ ವಿಮುಖರಾಗುತ್ತಿದ್ದಾರೆ: ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಮಾಜಿ ಸಚಿವ ಎಂ.ಪಿ.‌ಅಪ್ಪಚ್ಚು ರಂಜನ್ ಮಾತನಾಡಿ, ಕಾಳುಮೆಣಸನ್ನು ಜಿ.ಎಸ್.ಟಿ. ವ್ಯಾಪ್ತಿಯಿಂದ ಹೊರಗಿಡಲು ಸಂಸದರು ಕೇಂದ್ರ ವಾಣಿಜ್ಯ ಸಚಿವರೊಂದಿಗೆ ವ್ಯವಹರಿಸಿದ ಪರಿಣಾಮ ಕಾಳುಮೆಣಸಿಗೆ ಜಿ.ಎಸ್.ಟಿ. ಇಲ್ಲವಾಗಿದೆ. ಇದರಿಂದಾಗಿ ಪ್ರತಿ ಕೆ.ಜಿ.‌ಮೆಣಸಿನ ಮೇಲೆ 50 ರುಪಾಯಿ ಹೆಚ್ಚುವರಿ ಹಣ ರೈತರಿಗೆ ಲಭಿಸುತ್ತಿದೆ ಎಂದು ಮಾಹಿತಿ ನೀಡಿದರು. ಇತ್ತೀಚಿನ ದಿನಗಳಲ್ಲಿ ಹಲವು ಕೃಷಿಕರು ಬತ್ತದ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಗದ್ದೆಗಳು ಕಾಫಿ ತೋಟಗಳಾಗಿ ಪರಿವರ್ತನೆಯಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು. ಗದ್ದೆಗಳನ್ನು ಕೃಷಿಕಾರ್ಯಕ್ಕೆ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮುಡಿಸುವ ಕಾರ್ಯ ಯಿಫಾ ಸಂಘಟನೆಯಿಂದ ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಹರಪ್ಪಳ್ಳಿ ರವೀಂದ್ರ ಮಾತನಾಡಿ, ರೈತರೇ ದೇಶದ ಬೆನ್ನೆಲುಬು. ಕೃಷಿ ಕ್ಷೇತ್ರದ ಸುಧಾರಣೆಗೆ ಸರ್ಕಾರಗಳು ಹೆಚ್ಚಿನ ಆದ್ಯತೆ ನೀಡಬೇಕು. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಬೇಕು. ಯುವ ಜನಾಂಗ ಕೃಷಿಯತ್ತ ಹೆಚ್ಚು ಆಸಕ್ತಿ ವಹಿಸಬೇಕು ಎಂದರು. ಮತ್ತೋರ್ವ ಅತಿಥಿ, ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ ಮಾತನಾಡಿ, ಮಕ್ಕಳು ಹಾಗೂ ಮುಂದಿನ ಪೀಳಿಗೆಗೆ ನಾಟಿ ಕಾರ್ಯ ಪರಿಚಯಿಸುವ ನಿಟ್ಟಿನಲ್ಲಿ ಆಯೋಜಿಸಿದ ಕಾರ್ಯಕ್ರಮ ಶ್ಲಾಘನೀಯ. ಕೊಡಗಿನಲ್ಲಿ ರೈತರು ಸಿ ಮತ್ತು ಡಿ ವರ್ಗದ ಜಮೀನಿಗೆ ಸಂಬಂಧಿಸಿದಂತೆ ಸರ್ಕಾರಗಳ ಕೆಲವೊಂದು ಆದೇಶಗಳು ರೈತರ ನಿದ್ದೆಗೆಡಿಸಿವೆ. ಈ ಬಗ್ಗೆ ಸಂಸದರು ಕೇಂದ್ರ ಸರ್ಕಾರದ ಗಮನ ಸೆಳೆಯಬೇಕೆಂದರು. ಜಿಲ್ಲಾ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಗಿರೀಶ್ ಮಲ್ಲಪ್ಪ ಮಾತನಾಡಿ, ಇಂದಿನ ಯುವ ಜನಾಂಗ, ಮಕ್ಕಳಿಗೆ ಬತ್ತ ಬೆಳೆಯುವ ಬಗೆ ತಿಳಿದಿಲ್ಲ. ಇದು ಭವಿಷ್ಯಕ್ಕೆ ಸವಾಲಾಗಿದೆ. ಈ ನಿಟ್ಟಿನಲ್ಲಿ ಯಿಫಾ ಕಾರ್ಯ ಅಭಿನಂದನಾರ್ಹ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಂಗ್ ಇಂಡಿಯನ್ ಫಾರ್ಮರ್ಸ್ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಮಾತನಾಡಿ, ಸಂಘದ ಬೆಳವಣಿಗೆ, ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಶ್ರೀ ಕಾಳಿಕಾಂಬ ಯುವಕ ಸಂಘದ ಅಧ್ಯಕ್ಷ ಐಮುಡಿಯಂಡ ಶರತ್, ಉದ್ಯಮಿ ಪುರುಷೋತ್ತಮ್ ರೈ, ಹುದುಗೂರು ಗ್ರಾಮ ಸಮಿತಿ ಅಧ್ಯಕ್ಷ ಟಿ.ಎಂ. ಚಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಕಾಳಪ್ಪ, ಪ್ರಮುಖರಾದ ಬಿ.ಬಿ. ಭಾರತೀಶ್, ಗೌತಮ್ ಗೌಡ, ಉದ್ಯಮಿ ಕೀರ್ತಿ ಗೌಡ, ಚಂದ್ರಶೇಖರ್ ಹೇರೂರು, ಮಹೇಶ್ ಗುರಪ್ಪ, ಯಿಫಾ ಸಂಘಟನೆ ಉಪಾಧ್ಯಕ್ಷ ಹರ್ಷಿತ್ ಶಿವಪ್ಪ, ಕಾರ್ಯದರ್ಶಿ ಸಜನ್ ಮಂದಣ್ಣ, ಖಜಾಂಚಿ ಮೋಹಿತ್ ತಿಮ್ಮಯ್ಯ, ನಿರ್ದೇಶಕ ಆದರ್ಶ್ ತಮ್ಮಯ್ಯ ಸೇರಿದಂತೆ ಇತರರು ಇದ್ದರು. ಕ್ರೀಡಾಕೂಟ ಹಾಗು ನಾಟಿ ಕಾರ್ಯಕ್ಕೆ ಗದ್ದೆ ನೀಡಿದ ಹುದುಗೂರಿನ ಐಮುಡಿಯಂಡ ಗಣೇಶ್ ಅವರನ್ನು ಸನ್ಮಾನಿಸಲಾಯಿತು. ವಿಜಯ ಹಾನಗಲ್ ಸ್ವಾಗತಿಸಿ, ವಂದಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌