
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜೂ.23): ಕೆಲಸ ಮಾಡಲಿಲ್ಲ ಎಂದರೆ ಅಥವಾ ಕೆಲಸಕ್ಕೆ ನಿರಂತರವಾಗಿ ಗೈರು ಹಾಜರಾದರೆ ಅಂತಹವರರಿಗೆ ಯಾವುದೇ ಸಂಸ್ಥೆಗೆ ನೋಟಿಸ್ ನೀಡುವ ಮುಂದುವರೆದು ಕಾನೂನು ಕ್ರಮ ಕೈಗೊಳ್ಳುವ ಅಧಿಕಾರ ಇರುತ್ತೇ ಅಲ್ವಾ.? ಆದರೆ ಬ್ಯಾಂಕೊಂದು ಮುಂದಿನ 15 ವರ್ಷಗಳ ಕಾಲ ಕೆಲಸ ಬಿಡುವುದಿಲ್ಲ ಎಂದು ಬಾಂಡ್ ಬರೆದುಕೊಡದ ಕಾರಣಕ್ಕೆ ನೌಕರರನ್ನು ಕೆಲಸದಿಂದ ಹೊರ ಹಾಕಿರುವ ಆರೋಪ ಕೇಳಿ ಬಂದಿದೆ.
ರೈತರಿಗಾಗಿ ಇರುವ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿಗೆ ರಾಜ್ಯದಲ್ಲಿ ಒಳ್ಳೆಯ ಹೆಸರು ಇದೆ. ಬ್ಯಾಂಕ್ ಉತ್ತಮ ಆದಾಯವನ್ನು ಗಳಿಸುತ್ತಾ ರೈತರಿಗೆ ಒಳ್ಳೆಯ ಸೇವೆಯನ್ನು ಒದಗಿಸುತ್ತಿದೆ. ಆದರೆ ತನ್ನ ನೌಕರರಿಗೆ ಮಾತ್ರ ಇನ್ನಿಲ್ಲದ ಕಿರುಕುಳ ನೀಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಇರುವ ಬ್ಯಾಂಕಿಗೆ 2020-21 ರ ಬ್ಯಾಚ್‌ನಲ್ಲಿ ನೇಮಕವಾಗಿದ್ದ ನೌಕರರಿಗೆ ಬ್ಯಾಂಕ್ ಆಡಳಿತ ಮಂಡಳಿ ಕಿರುಕುಳ ನೀಡುತ್ತಿದೆ ಎನ್ನಲಾಗಿದೆ. ವಿವಿಧ ಹುದ್ದೆಗಳಿಗೆ ನೇಮಕ ಆಗುವಾಗ 5 ವರ್ಷಗಳ ಕಾಲ ಉದ್ಯೋಗ ಬಿಡುವಂತಿಲ್ಲ. ಒಂದು ವೇಳೆ ಮಧ್ಯದಲ್ಲಿ ಉದ್ಯೋಗ ಬಿಟ್ಟರೆ ತಾವು ಎಲ್ಲಿಯವರೆಗೆ ವೇತನ ಪಡೆದಿರುತ್ತೇವೆಯೋ ಅಲ್ಲಿಯವರೆಗಿನ ವೇತನದ ಅರ್ಧ ಸಂಬಳ ಹಾಗೂ ಪಡೆದಿರುವ ವಿವಿಧ ಸೌಲಭ್ಯಗಳನ್ನು ಬ್ಯಾಂಕಿಗೆ ವಾಪಸ್ ನೀಡಿ ಹೋಗುತ್ತೇವೆ ಎಂದು ಬರೆದುಕೊಡುವಂತೆ ನಿಯಮವಿತ್ತಂತೆ. ಈ ನಿಯಮನ್ನು ಒಪ್ಪಿ ಉದ್ಯೋಗಿಗಳು ಸಹಿ ಮಾಡಿ ಉದ್ಯೋಗಕ್ಕೆ ಸೇರಿದ್ದಾರೆ.
ಈ ಒಪ್ಪಂದ ಮುಗಿಯುವುದಕ್ಕೆ ಇನ್ನೂ ಒಂದು ವರ್ಷ ಇರುವಾಗಲೇ ಆ ಬ್ಯಾಚ್‌ನಲ್ಲಿ ಕೆಲಸಕ್ಕೆ ಸೇರಿದ ಉದ್ಯೋಗಿಗಳಿಗೆ ಮುಂದಿನ 15 ವರ್ಷಗಳ ಕಾಲ ಉದ್ಯೋಗ ಬಿಡುವುದಿಲ್ಲ ಎಂದು ಮತ್ತೆ ಬಾಂಡ್ ಪೇಪರ್ ಮೇಲೆ ಬರೆದು ಸಹಿ ಮಾಡಿಕೊಡುವಂತೆ ಆಡಳಿತ ಮಂಡಳಿ ಕಿರುಕುಳ ನೀಡುತ್ತಿದೆಯಂತೆ. ಈ ಕರಾರಿಗೆ ಒಪ್ಪಿ ಸಹಿ ಹಾಕದ ಉದ್ಯೋಗಿಗಳಿಗೆ ಕಳೆದ 10 ದಿನಗಳಿಂದ ಯಾವುದೇ ಕೆಲಸ ನೀಡುತ್ತಿಲ್ಲ. ಬ್ಯಾಂಕಿಗೆ ಕರ್ತವ್ಯಕ್ಕೆ ಹಾಜರಾದರೂ ಅವರನ್ನು ಹೊರಗೆ ಕೂರಿಸಲಾಗುತ್ತಿದೆ. ಕಳೆದ 10 ದಿನಗಳಿಂದ ಹೊರಗೆ ಕುಳಿತ ಸಿಬ್ಬಂದಿ ಬೇಸತ್ತು ಇದೀಗ ಆಡಳಿತ ಮಂಡಳಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ತಮಗೆ ನ್ಯಾಯ ದೊರೆಕಿಸಿಕೊಡುವಂತೆ ನೊಂದ ಉದ್ಯೋಗಿಗಳಾದ ರಿಯಾ ಚಂಗಪ್ಪ ಮತ್ತು ಅಪ್ಪಣ್ಣ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಬ್ಯಾಂಕಿನವರ ನಡವಳಿಕೆಯಿಂದ ಬೇಸತ್ತಿರುವ ಉದ್ಯೋಗಿಗಳ ಪೋಷಕರು ಬ್ಯಾಂಕ್ ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ನಾವು ನಮ್ಮ ಮಕ್ಕಳನ್ನು ಕಷ್ಟಪಟ್ಟು ಓದಿಸಿದ್ದು ಯಾಕೆ? ಉದ್ಯೋಗಕ್ಕೆ ಹಾಜರಾದರೂ ಕೆಲಸ ಕೊಡದೆ ಬಾಗಿಲ ಬಳಿ ಕೂರಿಸುವುದಕ್ಕಾ? ನಾವು ಯಾರ ಮನೆಯ ಕೂಲಿಗೂ ಕಳುಹಿಸಿಲ್ಲ. ಅಷ್ಟಕ್ಕೂ ಈ ಬ್ಯಾಂಕು ಕೊಡಗಿನ ರೈತರ ಬ್ಯಾಂಕ್ ಆಗಿದೆಯೇ ವಿನಃ ಯಾರ ಸ್ವಂತ ಆಸ್ತಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಿಯಾ ಹಾಗೂ ಅಪ್ಪಣ್ಣ ಅವರು ಮಾಧ್ಯಮಗಳ ಮುಂದೆ ಬಂದಿದ್ದಾರೆ. ಆದರೆ ಬ್ಯಾಂಕ್‌ನವರ ಕಿರುಕುಳವನ್ನು ಎದುರಿಸಲಾಗದೆ ಒಂದು ತಿಂಗಳಲ್ಲೇ 14 ಉದ್ಯೋಗಿಗಳು ಕೆಲಸ ಬಿಟ್ಟಿದ್ದಾರೆ ಎಂದು ರಿಯಾ ಅವರ ತಂದೆ ರವಿ ಚಂಗಪ್ಪ ಹೇಳಿದ್ದಾರೆ. ಇನ್ನು ಉದ್ಯೋಗಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇದು ಆಡಳಿತ ಮಂಡಳಿಯ ನಿರ್ಧಾರ. ಆ ನಿರ್ಧಾರವನ್ನು ನಾವು ಜಾರಿ ಮಾಡಿದ್ದೇವೆ ಅಷ್ಟೇ. ಏನಿದ್ದರೂ ಆಡಳಿತ ಮಂಡಳಿಯವರನ್ನೇ ಕೇಳಿ ಎಂದಿದ್ದಾರೆ.
ಒಟ್ಟಿನಲ್ಲಿ ಬ್ಯಾಂಕನ್ನು ಉದ್ಧಾರ ಮಾಡುತ್ತೇವೆ ಅಂತಲೋ, ಇಲ್ಲ ನಾನು ಮಾಡಿದ್ದೆಲ್ಲವೂ ಸರಿ ಅಂತಲೋ ಇಲ್ಲದ ಕಾನೂನುಗಳನ್ನು ರೂಪಿಸಿ ನೌಕರರಿಗೆ ಕಿರುಕುಳ ನೀಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಯಾವ ಕಾರಣಕ್ಕೆ ಉದ್ಯೋಗಿಗಳನ್ನು ಹೊರಗೆ ಕೂರಿಸಿದ್ದಾರೆ ಎನ್ನುವುದಕ್ಕೆ ಬ್ಯಾಂಕ್ ಆಡಳಿತ ಮಂಡಳಿಯೇ ಸ್ಪಷ್ಟಪಡಿಸಬೇಕಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ