200 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆಗೆ ನಿರ್ಧಾರ| ಆಕ್ಸಿಜನ್ ಕೊರತೆಯಿಂದ ಬಹಳಷ್ಟು ಕೊರೋನಾ ಸೋಂಕಿತರು ಸಾವಿಗೀಡಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರ ಅನುಕೂಲಕ್ಕಾಗಿ ಈ ವ್ಯವಸ್ಥೆ| ತಿಂಗಳೊಳಗೆ ಕೊರೋನಾ ಸೋಂಕಿತರಿಗೆ ಅಗತ್ಯವಿರುವವರೆಗೆ ನಿರಂತರ ಆಕ್ಸಿಜನ್ ಪೂರೈಕೆ: ಜಾರಕಿಹೊಳಿ
ಬೆಂಗಳೂರು(ಮೇ.05): ಕೊರೋನಾ ಎರಡನೇ ಅಲೆಯಲ್ಲಿ ಉಂಟಾಗಿರುವ ತೀವ್ರ ಆಕ್ಸಿಜನ್ ಕೊರತೆ ಜನರ ಉಸಿರುಗಟ್ಟಿಸುತ್ತಿರುವ ನಡುವೆಯೇ ಕರ್ನಾಟಕ ಹಾಲು ಮಹಾಮಂಡಳಿಯು(ಕೆಎಂಎಫ್) ಸುಮಾರು ಒಂದು ಕೋಟಿ ರು. ವೆಚ್ಚದಲ್ಲಿ 200 ಹಾಸಿಗೆಗಳಿಗೆ ಆಕ್ಸಿಜನ್ ಪೂರೈಕೆ ಮಾಡುವ ನಿರ್ಧಾರ ತೆಗೆದುಕೊಂಡಿದೆ.
ಮಂಗಳವಾರ ಕೆಎಂಎಫ್ ಪ್ರಧಾನ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಮಂಡಳಿ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಆಕ್ಸಿಜನ್ ಕೊರತೆಯಿಂದ ಬಹಳಷ್ಟು ಕೊರೋನಾ ಸೋಂಕಿತರು ಸಾವಿಗೀಡಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡಲಾಗುತ್ತಿದೆ. ಬೆಡ್, ಸಿಲಿಂಡರ್ ಮತ್ತು ಆಕ್ಸಿಜನ್ ಉತ್ಪಾದನೆ ಮಾಡಲು ಸಾಮರ್ಥ್ಯವಿರುವ ಕಂಪನಿಯೊಂದಕ್ಕೆ ಟೆಂಡರು ನೀಡಲಾಗುತ್ತಿದೆ. ಸೋಂಕಿತರಿಗೆ ಆಕ್ಸಿಜನ್‌ನ್ನು ಉಚಿತವಾಗಿ ನೀಡಲು ಯೋಜಿಸಿದ್ದು, ಸರ್ಕಾರಿ ಆಸ್ಪತ್ರೆಯೊಂದನ್ನು ಗುರುತಿಸಿ ಅಲ್ಲಿ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಸೋಂಕಿತರಿಗೆ ಈ ಸೌಲಭ್ಯ ಪೂರ್ತಿಯಾಗಿ ಉಚಿತವಾಗಿದ್ದು, ತಿಂಗಳೊಳಗೆ ಕೊರೋನಾ ಸೋಂಕಿತರಿಗೆ ಅಗತ್ಯವಿರುವವರೆಗೆ ನಿರಂತರ ಆಕ್ಸಿಜನ್ ಪೂರೈಕೆ ಮಾಡಲಾಗುವುದು ಎಂದರು.
ಕೆಎಂಎಫ್‌ನಿಂದ ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್
ನಿತ್ಯ 81.5 ಲಕ್ಷ ಲೀ. ಹಾಲು ಸಂಗ್ರಹ:
ಕೆಎಂಎಫ್ ಪ್ರಸಕ್ತ 2020-21ನೇ ಸಾಲಿನಲ್ಲಿ 170 ಕೋಟಿ ರು.ಗಳ ನಿವ್ವಳ ಲಾಭ ಗಳಿಸಿದೆ. ಕೊರೋನಾ ನಡುವೆಯೂ ದಿನನಿತ್ಯ 81.50 ಲಕ್ಷ ಲೀ. ಹಾಲು ಸಂಗ್ರಹವಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ 28 ಲಕ್ಷ ಲೀ. ಹಾಲನ್ನು ಹಾಲಿನ ಪೌಡರನ್ನಾಗಿ ಪರಿವರ್ತಿಸಲಾಗುತ್ತಿದೆ. 52 ಲಕ್ಷ ಲೀ. ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ, ಪಶು ಸಂಗೋಪನೆ, ಮಾರುಕಟ್ಟೆ, ಗುಣ ನಿಯಂತ್ರಣ, ಅಭಿಯಂತರ ಹಾಗೂ ಖರೀದಿ ವಿಭಾಗದ ಮುಖ್ಯಸ್ಥರು ಹಾಜರಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona