ಆಕ್ಸಿಜನ್‌ ಇಲ್ಲದೆ ಇನ್ನೆಷ್ಟು ಜನ ಸಾಯ್ಬೇಕು?: ಕೇಂದ್ರಕ್ಕೆ ಹೈಕೋರ್ಟ್‌ ಹಿಗ್ಗಾಮುಗ್ಗಾ ತರಾಟೆ

By Kannadaprabha News  |  First Published May 5, 2021, 9:26 AM IST

ರಾಜ್ಯದ ಜನ ಸಾಯ್ತಿದ್ದಾರೆ, ಆಕ್ಸಿಜನ್‌ ಪ್ರಮಾಣವನ್ನು ಯಾವಾಗ ಹೆಚ್ಚಳ ಮಾಡ್ತೀರಿ?| ಇಂದು ತಿಳಿಸದಿದ್ದರೆ ಆದೇಶ ಹೊರಡಿಸುವ ಎಚ್ಚರಿಕೆ ನೀಡಿದ ಹೈಕೋರ್ಟ್‌| ಕೂಡಲೇ ರಾಜ್ಯದ ಕೋಟಾದ ಆಕ್ಸಿಜನ್‌ ಪ್ರಮಾಣ ಹೆಚ್ಚಿಸಬೇಕು’ ಎಂದು ತಾಕೀತು ಮಾಡಿದ ನ್ಯಾಯಪೀಠ| 


ಬೆಂಗಳೂರು(ಮೇ.05): ಆಕ್ಸಿಜನ್‌ ಕೊರತೆಯಿಂದ ಜನರು ಸಾಯುತ್ತಿದ್ದರೂ, ರಾಜ್ಯಕ್ಕೆ ಆಕ್ಸಿಜನ್‌ ಪೂರೈಕೆಯ ಪ್ರಮಾಣ ಹೆಚ್ಚಿಸದ ಕೇಂದ್ರ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್‌, ರಾಜ್ಯದ ಆಕ್ಸಿಜನ್‌ ಬಳಕೆಗೆ ವಿಧಿಸಿರುವ ಮಿತಿ ಮತ್ತು ಪೂರೈಕೆಯ ಪ್ರಮಾಣ ಹೆಚ್ಚಿಸುವ ಕುರಿತು ಬುಧವಾರ ಬೆಳಗ್ಗೆ 10 ಗಂಟೆಯೊಳಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡು ತಿಳಿಸದಿದ್ದರೆ ನ್ಯಾಯಾಲಯವೇ ಈ ಸಂಬಂಧ ಸೂಕ್ತ ಆದೇಶ ಹೊರಡಿಸಲಿದೆ ಎಂದು ಎಚ್ಚರಿಸಿದೆ.

‘ರಾಜ್ಯದಲ್ಲಿ ಆಕ್ಸಿಜನ್‌ ಕೊರತೆಯಿಂದ ಜನ ಸಾಯುತ್ತಿದ್ದರೂ ಇನ್ನೂ ಯಾವಾಗ ಆಕ್ಸಿಜನ್‌ ಪ್ರಮಾಣ ಹೆಚ್ಚಿಸುತ್ತೀರಿ? ಇನ್ನೆಷ್ಟುಜನ ಸಾಯಬೇಕು? ನೀವು ನಿರ್ಧಾರ ತೆಗೆದುಕೊಳ್ಳುವವರೆಗೆ ಕಾಯುತ್ತಾ ಕೂರಬೇಕೇ?’ ಎಂದು ಕಟುವಾಗಿ ಪ್ರಶ್ನಿಸಿದ ನ್ಯಾಯಪೀಠ, ದೇಶದ ಇತರೆ ರಾಜ್ಯಗಳಲ್ಲಿ ದಾಖಲಾಗಿರುವ ಕೋವಿಡ್‌ ಪ್ರಕರಣಗಳು ಹಾಗೂ ರಾಜ್ಯವಾರು ಆಕ್ಸಿಜನ್‌ ಪೂರೈಕೆ ವಿವರ ಒದಗಿಸುವಂತೆ ತಾಕೀತು ಮಾಡಿದೆ.

Latest Videos

undefined

"

ಕೋವಿಡ್‌ ಸೋಂಕು ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ಪೀಠ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿತು.

ಆಕ್ಸಿಜನ್ ಇಲ್ಲದೇ, ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 20 ಮಂದಿ ಸಾವು

ಇದಕ್ಕೂ ಮುನ್ನ, ‘ರಾಜ್ಯದಲ್ಲಿ ಎಷ್ಟುಆಕ್ಸಿಜನ್‌ ಬೇಡಿಕೆ ಇದೆ? ಕೇಂದ್ರ ಸರ್ಕಾರದಿಂದ ಎಷ್ಟುಪೂರೈಕೆಯಾಗುತ್ತಿದೆ’ ಎಂದು ವಿಚಾರಣೆ ವೇಳೆ ನ್ಯಾಯಪೀಠ ರಾಜ್ಯ ಸರ್ಕಾರವನ್ನು ಪ್ರಶ್ನಿಸಿತು. ಸರ್ಕಾರದ ಪರ ಅಡ್ವೋಕೇಟ್‌ ಜನರ್‌ ಪ್ರಭುಲಿಂಗ ನಾವದಗಿ, ‘ಮೇ 5ರ ವರೆಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಅಂದಾಜಿನ ಮೇಲೆ ಪ್ರತಿದಿನ 1,792 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಅಗತ್ಯವಿದೆ. ಆಸ್ಪತ್ರೆಗಳಿಗೆ ಸರ್ಕಾರದ ವತಿಯಿಂದಲೇ ಆಮ್ಲಜನಕ ಪೂರೈಸಲಾಗುತ್ತಿದೆ’ ಎಂದು ತಿಳಿಸಿದರು.

‘ಕೇಂದ್ರ ಸರ್ಕಾರದ ಪರ ವಕೀಲರು, ಕರ್ನಾಟಕಕ್ಕೆ ಈ ಮೊದಲು 802 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಬಳಕೆಗೆ ಮಿತಿ ನಿಗದಿಪಡಿಸಲಾಗಿತ್ತು. ಆ ಮಿತಿಯನ್ನು 865 ಮೆಟ್ರಿಕ್‌ ಟನ್‌ಗೆ ಹೆಚ್ಚಳ ಮಾಡಲಾಗಿದೆ’ ಎಂದು ತಿಳಿಸಿದರು. ಇದರಿಂದ ತೀವ್ರ ಅಸಮಾಧಾನಗೊಂಡ ನ್ಯಾಯಪೀಠ, ‘ರಾಜ್ಯಕ್ಕೆ ಪ್ರತಿದಿನ ಕನಿಷ್ಠ 1,162 ಮೆಟ್ರಿಕ್‌ ಟನ್‌ ಆಮ್ಲಜನಕದ ಅಗತ್ಯವಿದೆ ಎಂದು ಏ.30ರಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಕೇಂದ್ರ ಸರ್ಕಾರ ಮಾತ್ರ 865 ಮೆಟ್ರಿಕ್‌ ಟನ್‌ಗೆ ಹೆಚ್ಚಿಸಿದೆ. ಇಷ್ಟು ಸಣ್ಣ ಪ್ರಮಾಣದಲ್ಲಿ ಹೆಚ್ಚಳ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಕೂಡಲೇ ರಾಜ್ಯದ ಕೋಟಾದ ಆಕ್ಸಿಜನ್‌ ಪ್ರಮಾಣ ಹೆಚ್ಚಿಸಬೇಕು’ ಎಂದು ತಾಕೀತು ಮಾಡಿತು.

ಕೇಂದ್ರ ಸರ್ಕಾರದ ಪರ ವಕೀಲರು, ‘ಸಂಬಂಧಪಟ್ಟ ಸಚಿವಾಲಯಗಳ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು. ಅದಕ್ಕಾಗಿ ಒಂದು ದಿನ ಕಾಲಾವಕಾಶ ನೀಡಿ’ ಎಂದು ಕೋರಿದರು.

ಹುಬ್ಬಳ್ಳಿ: ಐಸಿಯುನಲ್ಲಿ ದುರಂತ, 5 ಕೊರೋನಾ ರೋಗಿಗಳ ಸಾವು

ಇದರಿಂದ ಮತ್ತಷ್ಟು ಆಕ್ರೋಶಗೊಂಡ ನ್ಯಾಯಪೀಠ, ‘ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಚಾಮರಾಜನಗರ, ಕಲಬುರಗಿಯಲ್ಲಿ ಆಕ್ಸಿಜನ್‌ ಕೊರತೆಯಿಂದ ರೋಗಿಗಳು ಮೃತಪಟ್ಟಿದ್ದಾರೆ. ಕೇಂದ್ರ ನಿರ್ಧಾರ ತೆಗೆದುಕೊಳ್ಳುವವರೆಗೆ ಕಾಯುತ್ತಾ ಕೂರಬೇಕೇ? ಅಷ್ಟರಲ್ಲಿ ಇನ್ನೆಷ್ಟು ಜನ ಸಾಯಬೇಕು? ಬುಧವಾರ ಬೆಳಗ್ಗೆ 10ರೊಳಗೆ ರಾಜ್ಯಕ್ಕೆ ಆಕ್ಸಿಜನ್‌ ಪೂರೈಕೆ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡು ಕೋರ್ಟ್‌ಗೆ ತಿಳಿಸಬೇಕು. ಸಾಧ್ಯವಿಲ್ಲ ಎನ್ನುವುದಾದರೆ ನ್ಯಾಯಾಲಯವೇ ಸೂಕ್ತ ಆದೇಶ ಹೊರಡಿಸಲಿದೆ’ ಎಂದು ಸೂಚಿಸಿ ವಿಚಾರಣೆ ಮುಂದೂಡಿತು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!