ರಾಜ್ಯದ ಜನತೆಗೆ ಮತ್ತೊಂದು ಆಘಾತ: ಬೆಲೆ ಏರಿಕೆ ಮಧ್ಯೆ ಹಾಲಿದ ದರ ಹೆಚ್ಚಳ..?

By Kannadaprabha NewsFirst Published Sep 30, 2021, 7:41 AM IST
Highlights

*  ಹಾಲು ಬೆಲೆ 2.5 ರು. ಹೆಚ್ಚಳಕ್ಕೆ ಕೆಎಂಎಫ್‌ ಮೊರೆ
*  ಕ್ಷೀರಭಾಗ್ಯದಡಿ ಫ್ಲೆಕ್ಸಿಪ್ಯಾಕ್‌/ಟೆಟ್ರಾ ಪ್ಯಾಕ್‌ ಹಾಲು ವಿತರಣೆ ಘೋಷಿಸಿ: ಬಾಲಚಂದ್ರ ಜಾರಕಿಹೊಳಿ ಮನವಿ
*  ಸೊಸೈಟಿ ಸಿಬ್ಬಂದಿಗೆ ಪ್ರೋತ್ಸಾಹ ಧನ ಮುಂದುವರಿಸಿ
 

ಬೆಂಗಳೂರು(ಸೆ.30):  ರಾಜ್ಯದಲ್ಲಿ ಎಲ್ಲದರ ಬೆಲೆ ಜಾಸ್ತಿಯಾಗಿದ್ದು, ಕಳೆದ ಎರಡೂವರೆ ವರ್ಷದಿಂದ ಹಾಲಿನ ದರ ಹೆಚ್ಚಳ ಮಾಡಿಲ್ಲ. ಹೀಗಾಗಿ ಪ್ರತಿ ಲೀಟರ್‌ ಹಾಲಿಗೆ ಐದು ರು. ಏರಿಕೆ ಮಾಡಬೇಕು ಎಂದು ಒಕ್ಕೂಟಗಳು ಕೋರಿದ್ದು, ಕನಿಷ್ಠ ಇದರ ಅರ್ಧದಷ್ಟಾದರೂ ಹೆಚ್ಚಳ ಮಾಡಬೇಕು ಎಂದು ಕೆಎಂಎಫ್‌(KMF) ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಬುಧವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಕೆಎಂಎಫ್‌ ನೂತನ ಯೋಜನೆಗಳ ಸಾಮೂಹಿಕ ಉದ್ಘಾಟನಾ ಸಮಾರಂಭದಲ್ಲಿ ಪ್ರಸ್ತಾವಿಕವಾಗಿ ಅವರು ಮಾತನಾಡಿದರು. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್‌) ಇಡೀ ಭಾರತ ದೇಶದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಗ್ರಾಹಕರಿಗೆ ಹಾಲು(Milk) ಕೊಡುತ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ಕಡಿಮೆ ದರ ಇದ್ದು, ಪ್ರತಿ ಲೀಟರ್‌ ಹಾಲಿಗೆ 36ರಿಂದ 38 ರು. ಮಾತ್ರ ನಿಗದಿ ಮಾಡಿದ್ದೇವೆ. ಪ್ರಸ್ತುತ ಸಾರಿಗೆ, ಮೇವು, ಇಂಧನ, ಕಚ್ಚಾ ವಸ್ತುಗಳು ಸೇರಿದಂತೆ ಎಲ್ಲದರ ಬೆಲೆ ಜಾಸ್ತಿಯಾಗಿದ್ದು ಹೈನುಗಾರರಿಗೆ ಹೊರೆಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ 14 ಹಾಲು ಒಕ್ಕೂಟಗಳ ಅಧ್ಯಕ್ಷರು ಪ್ರತಿ ಲೀಟರ್‌ ಹಾಲಿಗೆ 5 ರು.ದರ ಏರಿಕೆ ಮಾಡುವಂತೆ ಕೋರಿದ್ದಾರೆ ಎಂದರು.

ಪ್ರೋತ್ಸಾಹ ಧನ ಹೆಚ್ಚಿಸಲು ಮನವಿ:

ರೈತರಿಗೆ ಪ್ರತೀ ಲೀಟರ್‌ ಹಾಲಿಗೆ 6 ರು.ಗಳನ್ನು ಪ್ರೋತ್ಸಾಹ ಧನವಾಗಿ ನೀಡಬೇಕು. ಸೊಸೈಟಿಗಳಲ್ಲಿ ಕಾರ್ಯದರ್ಶಿ, ಹಾಲು ಪರೀಕ್ಷಕರು, ಸಹಾಯಕರು ಸೇರಿದಂತೆ 39 ಸಾವಿರ ಜನರು ಕೆಲಸ ಮಾಡುತ್ತಿದ್ದಾರೆ. ಸ್ಥಗಿತಗೊಂಡಿರುವ 20 ಪೈಸೆ ಪ್ರೋತ್ಸಾಹ ಧನ ನೀಡಬೇಕು. ಇದರಿಂದ 49 ಸಾವಿರ ಕುಟುಂಬಗಳಿಗೆ ಸಹಾಯವಾಗಲಿದ್ದು ಹೈನುಗಾರಿಕೆ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹೇಳಿದರು.

ಹಾಲು ಉತ್ಪಾದಕರ ಬ್ಯಾಂಕಿಗೆ 100 ಕೋಟಿ ರೂ. ನೆರವು: ಸಿಎಂ

ಫ್ಲೆಕ್ಸಿ ಪ್ಯಾಕ್‌ನಲ್ಲಿ ಕ್ಷೀರಭಾಗ್ಯ ಯೋಜನೆ!:

ಪ್ರಸ್ತುತ ಶಾಲಾ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯ ಯೋಜನೆಯ ಮೂಲಕ ಹಾಲನ್ನು ವಿತರಿಸಲಾಗುತ್ತಿದ್ದು ಅದರ ಬದಲಿಗೆ ಫ್ಲೆಕ್ಸಿ ಪ್ಯಾಕ್‌ ಅಥವಾ ಟೆಟ್ರಾ ಪ್ಯಾಕ್‌ ಮೂಲಕ ಹಾಲು ಸರಬರಾಜು ಮಾಡುವುದು ಸೂಕ್ತ. ಪ್ರತಿ ದಿನ 7 ಲಕ್ಷ ಲೀಟರ್‌ ಹಾಲನ್ನು ಪುಡಿಯಾಗಿ ಸಂಸ್ಕರಿಸುವುದರಿಂದ ಸಂಸ್ಥೆಗೆ ಹೆಚ್ಚಿನ ಹೊರೆಯಾಗುತ್ತಿದೆ ಎಂದರು.

ಸೋಲಾರ್‌ ವ್ಯವಸ್ಥೆಗೆ ನೆರವು:

ಪ್ರತಿ ವರ್ಷ ಕೆಎಂಎಫ್‌ ವಿದ್ಯುತ್‌ ಶುಲ್ಕವಾಗಿ 110 ಕೋಟಿ ರು. ಪಾವತಿಸುತ್ತಿದೆ. ಆದ್ದರಿಂದ ಎಲ್ಲೆಡೆ ಸೋಲಾರ್‌ ಘಟಕ ಅಳವಡಿಸಲು ಚಿಂತನೆ ನಡೆಸಿದ್ದು ಸರ್ಕಾರ ಸಬ್ಸಿಡಿ ಕೊಟ್ಟರೆ ಇದರಿಂದ ಸಂಸ್ಥೆಗೆ ಪ್ರತಿ ವರ್ಷ 30 ಕೋಟಿ ರು. ಉಳಿತಾಯವಾಗಲಿದೆ. ಜೊತೆಗೆ ಮಂಡಳಿಯಲ್ಲಿ ಪಾರದರ್ಶಕತೆ ಹಾಗೂ ಎಲ್ಲಾ ಸೌಲಭ್ಯಗಳ ಸುಗಮ ವ್ಯವಸ್ಥೆಗೆ ಎಆರ್‌ಪಿ ಕಂಪ್ಯೂಟರೀಕರಣಕ್ಕೆ ಉತ್ತೇಜನ ನೀಡಬೇಕು ಎಂದು ಮನವಿ ಮಾಡಿದರು.
 

click me!