- ಹೆಚ್ಚಳ ಮಾಡುವಂತೆ ಬೊಮ್ಮಾಯಿಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಪತ್ರ
- ವೆಚ್ಚ 30% ಏರಿಕೆಯಿಂದ ಹೈನೋದ್ಯಮ ಸಂಕಷ್ಟದಲ್ಲಿದೆ ಎಂದ ಜಾರಕಿಹೊಳಿ
- ಖಾಸಗಿ ಸಂಸ್ಥೆಗಳಿಂದ ಈಗಾಗಲೇ ಹಾಲಿನ ಮಾರಾಟ ದರ ಹೆಚ್ಚಳ
ಬೆಂಗಳೂರು(ಏ.27): ಹಾಲಿನ ಸಂಸ್ಕರಣೆ, ಕಚ್ಚಾ ಸಾಮಗ್ರಿ, ವಿದ್ಯುತ್, ಸಾಗಾಣಿಕಾ ವೆಚ್ಚ ಸೇರಿದಂತೆ ಬಹುತೇಕ ಎಲ್ಲಾ ವೆಚ್ಚಗಳು ಶೇ.30ರಷ್ಟುಜಾಸ್ತಿಯಾಗಿದ್ದು ಹೈನೋದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಲೀಟರ್ ಹಾಲಿನ ದರವನ್ನು 3 ರು. ಹೆಚ್ಚಳ ಮಾಡುವಂತೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾರೆ.
ಅಮೂಲ್ ಸೇರಿದಂತೆ ದೇಶದ ವಿವಿಧ ಸಹಕಾರಿ ಮತ್ತು ಖಾಸಗಿ ಸಂಸ್ಥೆಗಳು ಹಾಲಿನ ಮಾರಾಟ ದರವನ್ನು ಹೆಚ್ಚಿಸಿವೆ. ನಂದಿನಿ ಹಾಲಿನ ಮಾರಾಟ ದರಕ್ಕೆ ಹೋಲಿಕೆ ಮಾಡಿದರೆ ಇತರೆ ಸಂಸ್ಥೆಗಳ ದರವು ಪ್ರತಿ ಲೀಟರ್‌ಗೆ 8ರಿಂದ 10 ರು. ಹೆಚ್ಚಿದೆ. ಹೀಗಾಗಿ ನಂದಿನಿ ಹಾಲಿನ ಮಾರಾಟ ದರವನ್ನು ಕನಿಷ್ಠ ಪ್ರತಿ ಲೀಟರ್‌ಗೆ 3 ರು. ಹೆಚ್ಚಿಸಲು ಕ್ರಮಕೈಗೊಳ್ಳಬೇಕು. ಇದರಿಂದ ಹಾಲು ಉತ್ಪಾದಕರಿಗೆ ಕನಿಷ್ಠ 2 ರು. ಮತ್ತು ಹಾಲು ಉತ್ಪಾದಕರ ಸಹಕಾರಿ ಸಂಘ, ಹಾಲು ಒಕ್ಕೂಟ ಹಾಗೂ ಹಾಲು ಮಾರಾಟಗಾರರಿಗೆ 1 ರು. ನೀಡಲು ಸಹಕಾರಿಯಾಗಲಿದೆ ಎಂದು ಪತ್ರ ಬರೆದು ಮುಖ್ಯಮಂತ್ರಿಯವರನ್ನು ಕೋರಿದ್ದಾರೆ.
Milk Production ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲೇ ಭಾರತ ನಂ.1, ಪ್ರಧಾನಿ ಮೋದಿ
ಕೆಎಂಎಫ್ ಹಾಗೂ ರಾಜ್ಯದಲ್ಲಿರುವ ಎಲ್ಲಾ 14 ಹಾಲು ಒಕ್ಕೂಟಗಳ ಒಟ್ಟಾರೆ ವಹಿವಾಟು 2019-20ರಲ್ಲಿ 16,440.74 ಕೋಟಿ ರು.ಇದ್ದು, ಪ್ರಸಕ್ತ ಸಾಲಿಗೆ 19,732 ಕೋಟಿ ರು.ಗಳಿಗೆ ಹೆಚ್ಚಳವಾಗಿದೆ. 2 ವರ್ಷಗಳ ಅವಧಿಯಲ್ಲಿ ಶೇ.20ರಷ್ಟುವಹಿವಾಟು ಜಾಸ್ತಿಯಾಗಿದ್ದು 2022-23ನೇ ಸಾಲಿನಲ್ಲಿ ಒಟ್ಟಾರೆ 25 ಸಾವಿರ ಕೋಟಿ ರು. ತಲುಪುವ ಗುರಿಯನ್ನು ಹೊಂದಲಾಗಿದೆ. ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಟ್ಟಡಕ್ಕೆ ಕೆಎಂಎಫ್‌ನಿಂದ ನೀಡಲಾಗುತ್ತಿರುವ ಅನುದಾನವನ್ನು 3.50 ಲಕ್ಷ ರು.ಗಳಿಂದ 5 ಲಕ್ಷ ರು.ಗಳಿಗೆ ಹೆಚ್ಚಿಸಲಾಗಿದೆ. 2020-21ನೇ ಸಾಲಿನಲ್ಲಿ 250 ಹಾಲು ಉತ್ಪಾದಕರ ಸಹಕಾರಿ ಸಂಘಗಳ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಸುಮಾರು 10.57 ಕೋಟಿ ರು. ಅನುದಾನ ಬಿಡುಗಡೆ ಮಾಡಲಾಗಿದೆ. 2021-22ನೇ ಸಾಲಿನಲ್ಲಿ 15.15 ಕೋಟಿ ರು.ಗಳ ಅನುದಾನವನ್ನು ಮೀಸಲು ಇಡಲಾಗಿದೆ ಎಂದು ತಿಳಿಸಿದ್ದಾರೆ.
ಪಶು ಸಂಗೋಪನೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹಲವು ಯೋಜನೆಗಳನ್ನು ರೂಪಿಸಲಾಗಿದೆ. 2019-20ರಲ್ಲಿ ವಾರ್ಷಿಕ ಕೆಎಂಎಫ್ 40ರಿಂದ 50 ಕೋಟಿ ರು.ಗಳನ್ನು ಈ ಯೋಜನೆಗಳಿಗೆ ನೀಡಲಾಗುತ್ತಿದೆ. ಮುಂದಿನ ಆಯವ್ಯಯದಲ್ಲಿ 50 ಕೋಟಿ ರು.ಗಳನ್ನು 80 ಕೋಟಿ ರು.ಗಳಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಮುಂದಿನ 5 ವರ್ಷಗಳಲ್ಲಿ ಸಮಗ್ರ ಮಾರುಕಟ್ಟೆಅಭಿವೃದ್ಧಿ ಯೋಜನೆ ರೂಪಿಸಿದ್ದು, 2026-27ನೇ ಸಾಲಿಗೆ 133.84 ಲಕ್ಷ ಲೀಟರ್ ಹಾಲು ಶೇಖರಿಸುವ ಗುರಿಯನ್ನು ಹೊಂದಲಾಗಿದೆ. ಅದರಲ್ಲಿ 110 ಲಕ್ಷ ಲೀಟರ್ ಹಾಲು ಮತ್ತು ಹಾಲಿನ ಉತ್ಪನ್ನಗಳ ರೂಪದಲ್ಲಿ ಮತ್ತು ಉಳಿದ ಹಾಲನ್ನು ಹಾಲಿನ ಪುಡಿ ಪರಿವರ್ತನೆಗಾಗಿ ಮಾರಾಟ ಮಾಡುವ ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೇಸಿಗೆ ಆರಂಭದ ಬೆನ್ನಲೇ ಹಾಲು ಉತ್ಪಾದನೆ ಕುಸಿತ
28ಕ್ಕೆ ರಾಜ್ಯ ಮಟ್ಟದ ಹಾಲು ಉತ್ಪಾದಕರ ಸಮಾವೇಶ
ಪ್ರತಿ ಲೀಟರ್ ಹಾಲಿಗೆ ಕನಿಷ್ಠ 50 ರು, ದರ ನಿಗದಿಗೊಳಿಬೇಕು, ಹೈನುಗಾರಿಕೆಯನ್ನು ಬಹುರಾಷ್ಟ್ರೀಯ ಕಂಪನಿಗಳಿಂದ ರಕ್ಷಿಸಿ ಸಹಕಾರಿ ಕ್ಷೇತ್ರವನ್ನು ಮತ್ತೊಷ್ಟುಬಲಪಡಿಸಬೇಕೆಂದು ಆಗ್ರಹಿಸಿ ಏ.28ಕ್ಕೆ ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರಾಜ್ಯ ಮಟ್ಟದ ಹಾಲು ಉತ್ಪಾದಕರ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ತಿಳಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಈ ಕುರಿತು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ, ರಾಜ್ಯ ಸರ್ಕಾರಗಳು ಹೈನುಗಾರಿಕೆಯನ್ನು ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕಲು ತುದಿಗಾಲಲ್ಲಿ ನಿಂತು ಆ ಮೂಲಕ ಹೈನುಗಾರಿಕೆಯನ್ನು ಬಹುರಾಷ್ಟ್ರೀಯ ಬಂಡವಾಳಶಾಹಿ ಕಂಪನಿಗಳಿಗೆ ಒಪ್ಪಿಸುವ ಹುನ್ನಾರ ನಡೆಸುತ್ತಿದೆ ಎಂದು ಟೀಕಿಸಿದರು.