
ಬೆಂಗಳೂರು (ಜ.24): ಸಿಲಿಕಾನ್ ಸಿಟಿ ಜನರಿಗೆ ಹಾಗೂ ರಾಜ್ಯದ ಸಾಮಾನ್ಯ ಗ್ರಾಹಕರಿಗೆ ಕರ್ನಾಟಕ ಸಹಕಾರ ಹಾಲು ಉತ್ಪಾದಕ ಮಹಾಮಂಡಳ (ಕೆಎಂಎಫ್) ಭರ್ಜರಿ ಉಡುಗೊರೆ ನೀಡಿದೆ. ಬೆಲೆ ಏರಿಕೆಯ ಈ ಕಾಲದಲ್ಲಿ ಕೇವಲ 10 ರೂಪಾಯಿಗೆ ನಂದಿನಿ ಹಾಲು ಮತ್ತು ಮೊಸರನ್ನು ಪರಿಚಯಿಸುವ ಮೂಲಕ ಕೆಎಂಎಫ್ ಹೊಸ ದಾಖಲೆ ಬರೆದಿದೆ. ವಿಧಾನ ಸೌಧದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹೊಸ ಉತ್ಪನ್ನಗಳನ್ನು ಸಾಂಕೇತಿಕವಾಗಿ ಲೋಕಾರ್ಪಣೆ ಮಾಡಿದರು.
ಈ ಹಿಂದೆ ಮಾರುಕಟ್ಟೆಯಲ್ಲಿ ಕನಿಷ್ಠ 200 ML ನ ಹಾಲಿನ ಪಾಕೆಟ್‌ಗಳು ಲಭ್ಯವಿದ್ದವು. ಆದರೆ ಈಗ ಬದಲಾಗುತ್ತಿರುವ ಜೀವನಶೈಲಿಯನ್ನು ಗಮನದಲ್ಲಿಟ್ಟುಕೊಂಡು ಕೆಎಂಎಫ್ ಸಣ್ಣ ಪ್ಯಾಕೆಟ್‌ಗಳನ್ನು ಪರಿಚಯಿಸಿದೆ.
ಹಾಲು: 160 ML ಹಾಲಿನ ಪಾಕೆಟ್ ಬೆಲೆ ಕೇವಲ 10 ರೂಪಾಯಿ.
ಮೊಸರು: 140 ML ಮೊಸರಿನ ಪಾಕೆಟ್ ಬೆಲೆ ಕೇವಲ 10 ರೂಪಾಯಿ.
ಈ ಸಣ್ಣ ಪ್ಯಾಕೆಟ್‌ಗಳು ವಿಶೇಷವಾಗಿ ಬ್ಯಾಚುಲರ್‌ಗಳಿಗೆ, ಮನೆಯಲ್ಲಿ ಒಬ್ಬರೇ ವಾಸಿಸುವವರಿಗೆ ಮತ್ತು ಪ್ರವಾಸದಲ್ಲಿರುವವರಿಗೆ ಅತಿ ಹೆಚ್ಚು ಅನುಕೂಲಕರವಾಗಲಿವೆ. ಹಣದ ಉಳಿತಾಯದ ಜೊತೆಗೆ ಹಾಲಿನ ವ್ಯರ್ಥವನ್ನೂ ಇದು ತಡೆಯಲಿದೆ.
ಹಾಲು, ಮೊಸರಿನ ಪ್ಯಾಕೆಟ್‌ಗಳೊಂದಿಗೆ ಕೆಎಂಎಫ್ ಹೊಸ ಮಾದರಿಯ ಫ್ಲೇವರ್ಡ್ ಲಸ್ಸಿಗಳನ್ನು ಮಾರುಕಟ್ಟೆಗೆ ಬಿಟ್ಟಿದೆ. 15 ರೂಪಾಯಿಗೆ ರುಚಿಕರವಾದ ಮಾವಿನ ಲಸ್ಸಿ ಮತ್ತು ಸ್ಟ್ರಾಬೆರಿ ಲಸ್ಸಿ ಲಭ್ಯವಿದ್ದು, ಕೇವಲ ಹಣ್ಣಿನ ರುಚಿಯಷ್ಟೇ ಅಲ್ಲದೆ ಆರೋಗ್ಯಕರ ಪ್ರೊಬಯಾಟಿಕ್ ಅಂಶಗಳನ್ನು ಇವು ಒಳಗೊಂಡಿವೆ. ಜೊತೆಗೆ ಕ್ಯೂಆರ್ ಕೋಡ್ ಭದ್ರತೆಯೊಂದಿಗೆ ಹೈ ಆರೋಮ ತುಪ್ಪ ಹಾಗೂ ಹೆಚ್ಚಿನ ಪ್ರೋಟಿನ್ ಅಂಶವುಳ್ಳ 'ಎನ್-ಪ್ರೋ' ಹಾಲನ್ನು ಸಹ ಬಿಡುಗಡೆ ಮಾಡಲಾಗಿದೆ.
ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಂದಿನಿ ಸಂಸ್ಥೆಯು ಕಳೆದ 5 ದಶಕಗಳಿಂದ 'ಗೋವಿನಿಂದ ಗ್ರಾಹಕರವರೆಗೆ' ಎಂಬ ಧ್ಯೇಯದೊಂದಿಗೆ ಉತ್ತಮ ಸೇವೆ ನೀಡುತ್ತಿದೆ ಎಂದು ಶ್ಲಾಘಿಸಿದರು. ಸಮಾರಂಭದಲ್ಲಿ ಕೆಎಂಎಫ್ ಅಧ್ಯಕ್ಷ ಕೆ.ವೈ. ನಂಜೇಗೌಡ, ಶಾಸಕ ಅಶೋಕ್ ಕುಮಾರ್ ರೈ, ಕೆಎಂಎಫ್ ಆಡಳಿತಾಧಿಕಾರಿ ಟಿ.ಹೆಚ್.ಎಂ. ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಶೀಘ್ರದಲ್ಲೇ ರಾಜ್ಯಾದ್ಯಂತ ಇರುವ ಎಲ್ಲಾ ನಂದಿನಿ ಮಳಿಗೆಗಳಲ್ಲಿ ಹಾಗೂ ಅಧಿಕೃತ ಮಾರಾಟಗಾರರ ಬಳಿ ಈ ಹತ್ತು ರೂಪಾಯಿ ದರದ ಪಾಕೆಟ್‌ಗಳು ಸಾರ್ವಜನಿಕರ ಖರೀದಿಗೆ ಲಭ್ಯವಿರಲಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ