ನಂದಿನಿ ಹಾಲು ದರ 3 ರು. ಏರಿಕೆ : ರೈತರಿಗೆ ಬಂಪರ್

By Kannadaprabha NewsFirst Published Jan 18, 2020, 7:38 AM IST
Highlights

ಕೆಎಂಎಫ್‌ ಆಡಳಿತ ಮಂಡಳಿ ಸಭೆಯಲ್ಲಿ ಹಾಲು ದರ ಹೆಚ್ಚಳ ಕುರಿತು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಮೂಲಗಳ ಪ್ರಕಾರ, ಹಾಲಿನ ದರವನ್ನು 3 ರು. ನಷ್ಟುಹೆಚ್ಚಳ ಮಾಡುವುದು ಸೂಕ್ತ ಎಂದು ಸಭೆ ನಿರ್ಧರಿಸಿತು ಎನ್ನಲಾಗಿದೆ.

ಬೆಂಗಳೂರು [ಜ.18]:  ಮೂರು ವರ್ಷದ ನಂತರ ಹಾಲು ದರ ಏರಿಕೆ ಮಾಡಲು ಶುಕ್ರವಾರ ನಡೆದ ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್‌)ದ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಿದ್ದು, ಏರಿಕೆಯಾಗುವ 3 ರು. ಪೈಕಿ ಸುಮಾರು 2 ರು.ಗಳನ್ನು ರೈತರಿಗೆ ನೀಡಲು ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

ಶುಕ್ರವಾರ ನಡೆದ ಕೆಎಂಎಫ್‌ ಆಡಳಿತ ಮಂಡಳಿ ಸಭೆಯಲ್ಲಿ ಹಾಲು ದರ ಹೆಚ್ಚಳ ಕುರಿತು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಆದರೆ, ಹಾಲಿನ ದರ ಎಷ್ಟುಹೆಚ್ಚಳ ಮಾಡಬೇಕು ಎಂಬ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೊಂದಿಗೆ ಸಮಾಲೋಚಿಸಿ ತೀರ್ಮಾನಿಸುವ ಅಧಿಕಾರವನ್ನು ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಭೆ ನೀಡಿತು. ಒಂದೆರಡು ದಿನದಲ್ಲಿ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

1 ರು. ನೇರ ರೈತರಿಗೆ:

ಮೂಲಗಳ ಪ್ರಕಾರ, ಹಾಲಿನ ದರವನ್ನು 3 ರು. ನಷ್ಟುಹೆಚ್ಚಳ ಮಾಡುವುದು ಸೂಕ್ತ ಎಂದು ಸಭೆ ನಿರ್ಧರಿಸಿತು ಎನ್ನಲಾಗಿದೆ. ಹೆಚ್ಚಳವಾಗುವ ಮೂರು ರು. ಪೈಕಿ 1 ರು. ಅನ್ನು ರೈತರಿಗೆ ನೇರವಾಗಿ ನೀಡಲು ಕೆಎಂಎಫ್‌ ಉದ್ದೇಶಿದೆ. ಅಂದರೆ, ಪ್ರಸ್ತುತ ರಾಜ್ಯ ಸರ್ಕಾರವು ಹಾಲು ಪೂರೈಕೆ ಮಾಡುವ ರೈತರಿಗೆ ನೀಡುತ್ತಿರುವ 5 ರು. ಪ್ರೋತ್ಸಾಹ ಧನಕ್ಕೆ ಕೆಎಂಎಫ್‌ ವತಿಯಿಂದ 1 ರು. ಸೇರಿಸಿ ಒಟ್ಟು 6 ರು. ನೀಡುವ ಉದ್ದೇಶ ಹೊಂದಿದೆ.

ಹಸು ವಿಮೆಗೆ 50 ಪೈಸೆ:

ಜತೆಗೆ ಕೆಎಂಎಫ್‌ಗೆ ಹಾಲು ಪೂರೈಕೆ ಮಾಡುವ ರೈತರ ಜಾನುವಾರು ಅಸು ನೀಗಿದರೆ ವಿಮೆ ಮೂಲಕ ಪ್ರತಿ ಹಸುವಿಗೆ ಸುಮಾರು 50 ಸಾವಿರ ರು. ಹಣ ದೊರೆಯುವಂತೆ ಮಾಡಲು ಹೆಚ್ಚಳವಾಗುವ ದರದಲ್ಲಿ 50 ಪೈಸೆ ಬಳಸಲು ಉದ್ದೇಶಿಸಿದೆ. ರಾಜ್ಯದಲ್ಲಿ ಇರುವ 14 ಹಾಲು ಉತ್ಪಾದಕ ಸಹಕಾರಿ ಒಕ್ಕೂಟಗಳ ವ್ಯಾಪ್ತಿಯಲ್ಲಿ ಸುಮಾರು 25 ಲಕ್ಷಕ್ಕೂ ಅಧಿಕ ಹಸುಗಳಿವೆ. ಈ ಪೈಕಿ ವರ್ಷಕ್ಕೆ ಸರಿಸುಮಾರು 20 ರಿಂದ 25 ಸಾವಿರ ಹಸುಗಳು ಅಸುನೀಗುತ್ತಿರುವುದು ಕಂಡು ಬಂದಿದೆ. ಹೀಗೆ ಮರಣ ಹೊಂದುವ ಪ್ರತಿ ರಾಸುಗಳಿಗೆ ತಲಾ 50 ಸಾವಿರ ರು.ಗಳನ್ನು ನೀಡಲು 50 ಪೈಸೆಯನ್ನು ವಿಮೆಗೆ ಬಳಸಲು ನಿರ್ಧರಿಸಲಾಗಿದೆ.

ಇದಲ್ಲದೆ, ರಾಜ್ಯದ ಎಲ್ಲಾ ಹಾಲು ಅಭಿವೃದ್ಧಿ ಸಹಕಾರ ಸಂಘಗಳಿಗೆ ಅಭಿವೃದ್ಧಿಗಾಗಿ ಪ್ರತಿ ಲೀಟರ್‌ಗೆ 50 ಪೈಸೆ ನೀಡುವುದು. ಅಂದರೆ ಹೆಚ್ಚಳವಾಗುವ ಮೂರು ರು. ಪೈಕಿ ನೇರ ಪ್ರೋತ್ಸಾಹ ಹಣ 1 ರು., ಜಾನುವಾರು ವಿಮೆ 50 ಪೈಸೆ ಹಾಗೂ ಒಕ್ಕೂಟಗಳ ಅಭಿವೃದ್ಧಿಗೆ 50 ಪೈಸೆ ಸೇರಿ ಎರಡು ರು. ರೈತರಿಗೆ ಪ್ರತ್ಯಕ್ಷ- ಪರೋಕ್ಷವಾಗಿ ಸಂದಾಯವಾಗುತ್ತದೆ.

ಹೈನುಗಾರರಿಗೆ ಇನ್ಮುಂದೆ ಸಿಗುತ್ತೆ ಪಿಂಚಣಿ...

ಮಾರಾಟಗಾರರಿಗೆ 50 ಪೈಸೆ ಕಮಿಷನ್‌:  ಬಾಕಿ ಉಳಿದ ಒಂದು ರು. ಪೈಕಿ 50 ಪೈಸೆಯನ್ನು ಹಾಲು ಮಾರಾಟಗಾರರಿಗೆ ಕಮಿಷನ್‌ ನೀಡಲು ಬಳಸಲು ಹಾಲು ಮಹಾಮಂಡಳಿ ನಿರ್ಧರಿಸಿದೆ. ಉಳಿದ 50 ಪೈಸೆಯನ್ನು ಮಹಾಮಂಡಲ ಅಭಿವೃದ್ಧಿಗೆ ಬಳಸಲು ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಹೊಸ ವರ್ಷದ ಆರಂಭದಲ್ಲೇ ಹಾಲು ಉತ್ಪಾದಕರಿಗೆ ಬಂಪರ್..! ದರ ಹೆಚ್ಚಳ...

ಇಡೀ ದೇಶದಲ್ಲಿ ಅತ್ಯುತ್ತಮ ಗುಣಮಟ್ಟದ ಹಾಲನ್ನು ಅತಿ ಕಡಿಮೆ ದರದಲ್ಲಿ ಕೆಎಂಎಫ್‌ ನೀಡುತ್ತಿದೆ. ಆದರೆ 2016ರಲ್ಲಿ ಕೇವಲ 2 ರು.ಹೆಚ್ಚಳ ಮಾಡಿದ್ದು ಹೊರತುಪಡಿಸಿದರೆ ಕಳೆದ ಮೂರು ವರ್ಷಗಳಿಂದ ಹಾಲಿನ ದರ ಹೆಚ್ಚಳ ಮಾಡಿಲ್ಲ. ಹೀಗಾಗಿ ಈ ಬಾರಿ ಪ್ರತಿ ಲೀಟರ್‌ ಹಾಲಿಗೆ 3 ರು.ಹೆಚ್ಚಳ ಮಾಡಬೇಕು ಎಂದು ಕೆಎಂಎಫ್‌ ಕಾರ್ಯಕಾರಿ ಮಂಡಳಿ ನಿರ್ಧರಿಸಿದ್ದು, ಪರಿಷ್ಕೃತ ದರದಲ್ಲಿ ರೈತರಿಗೆ ಎಷ್ಟುಹಣ ನೀಡಲಾಗುವುದು ಮತ್ತು ಒಕ್ಕೂಟದ ಅಭಿವೃದ್ಧಿಗೆ ಎಷ್ಟುಹಣ ಬಳಸಲು ನಿರ್ಧರಿಸಲಾಗಿದೆ ಎಂಬಿತ್ಯಾದಿ ಅಂಶಗಳನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿಕೊಡಲು ಕೆಎಂಎಫ್‌ ತೀರ್ಮಾನಿಸಿದೆ.

ಕೆಎಂಎಫ್‌ ಪ್ರತೀ ದಿನ ಸುಮಾರು 70 ಲಕ್ಷ ಲೀಟರ್‌ ಹಾಲನ್ನು ಸಂಗ್ರಹಿಸುತ್ತಿದ್ದು, 40 ಲಕ್ಷ ಲೀಟರ್‌ ಹಾಲು ಹಾಗೂ ಮೊಸರು ರೂಪದಲ್ಲಿ ಮತ್ತು 30 ಲಕ್ಷ ಲೀಟರ್‌ ಹಾಲಿನ ಪೌಡರ್‌ ಹಾಗೂ ಇತರ ಉತ್ಪನ್ನಗಳನ್ನಾಗಿ ತಯಾರು ಮಾಡುತ್ತಿದೆ.

click me!