
ಬೆಂಗಳೂರು : ‘ಮಡಮಕ್ಕಿ’ ಚಿತ್ರ ಖ್ಯಾತಿಯ ತನುಷ್ ನಾಯಕರಾಗಿ ಅಭಿನಯಿಸುತ್ತಿರುವ ‘ಮಿಸ್ಟರ್ ನಟ್ವರ್‌ಲಾಲ್’ ಚಿತ್ರ ವಿವಾದಕ್ಕೆ ಸಿಲುಕಿದೆ. ಈ ಚಿತ್ರದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಸನ್ನಿವೇಶ ಮತ್ತು ಅವರ ಹೆಸರನ್ನು ಬಳಸಿಕೊಳ್ಳುವುದರ ವಿರುದ್ಧ ಗೌರಿ ಲಂಕೇಶ್ ಸಹೋದರಿ, ನಿರ್ದೇಶಕಿ ಕವಿತಾ ಲಂಕೇಶ್ ಆಕ್ಷೇಪ ಎತ್ತಿದ್ದು, ಚಿತ್ರತಂಡದ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
‘ಗೌರಿ ಹತ್ಯೆ ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ. ಈ ಸಂದರ್ಭದಲ್ಲೇ ಅವರ ಹೆಸರು ಮತ್ತು ಹತ್ಯೆ ಘಟನೆಯನ್ನು ಸಿನಿಮಾ ರೂಪದಲ್ಲಿ ತೋರಿಸುವುದು ಸರಿಯಲ್ಲ. ಈ ಹಿನ್ನೆಲೆಯಲ್ಲಿ ಚಿತ್ರತಂಡವರು ಗೌರಿ ಹೆಸರು ಮತ್ತು ಅವರ ಹತ್ಯೆ ಘಟನೆಯ ಸನ್ನಿವೇಶವನ್ನು ಚಿತ್ರದಲ್ಲಿ ಬಳಸಬಾರದು. ತಕ್ಷಣವೇ ಅವರಿಗೆ ವಾಣಿಜ್ಯ ಮಂಡಳಿ ಸೂಚನೆ ನೀಡಬೇಕು’ ಎಂದು ದೂರಿನಲ್ಲಿ ಕೇಳಿಕೊಂಡಿದ್ದಾರೆ. ಕವಿತಾ ಲಂಕೇಶ್ ನೀಡಿದ ದೂರಿನನ್ವಯ ಚಿತ್ರ ತಂಡದವರನ್ನು ಕರೆಸಿ ವಿಚಾರಣೆ ನಡೆಸುವುದಾಗಿ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ಭರವಸೆ ನೀಡಿದ್ದಾರೆನ್ನಲಾಗಿದೆ.
ಈ ನಡುವೆ ಚಿತ್ರತಂಡ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಘಟನೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದೆ.
ಮಿಸ್ಟರ್ ನಟ್ವರ್‌ಲಾಲ್ ಚಿತ್ರದಲ್ಲಿ ಏನಿದೆ ಅನ್ನುವುದು ನನಗೂ ಗೊತ್ತಿಲ್ಲ. ಆದರೆ ಪತ್ರಿಕೆಗಳಲ್ಲಿ ಸುದ್ದಿಯಾದಂತೆ ಗೌರಿ ಲಂಕೇಶ್ ಹತ್ಯೆ ಘಟನೆಯನ್ನೇ ಒಂದು ಸನ್ನಿವೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ, ಅವರ ಪಾತ್ರವೂ ಇರುತ್ತದೆ ಎಂದು ಗೊತ್ತಾಗಿದೆ. ಇದು ತಪ್ಪು. ಇದಕ್ಕೆ ಆಕ್ಷೇಪ ಸಲ್ಲಿಸಿ ನಾನು ವಾಣಿಜ್ಯ ಮಂಡಳಿಗೆ ದೂರು ನೀಡಿದ್ದೇನೆ.- ಕವಿತಾ ಲಂಕೇಶ್.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ