
ಮಂಡ್ಯ (ಏ.26): ಮುಂದಿನ ದಸರಾ ಹಬ್ಬದ ವೇಳೆಗೆ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಆರಂಭಿಸಲು ನಿರ್ಧರಿಸಿರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ನಲ್ಲಿರುವ ಅತಿಥಿಗೃಹದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಕೆಆರ್‌ಎಸ್‌ನಲ್ಲಿ ಕಾವೇರಿ ಆರತಿ ಮಾಡುವುದಾಗಿ ಘೋಷಣೆ ಮಾಡಿದ್ದೆ. ಅದರಂತೆ ಸಚಿವ ಸಂಪುಟ ಸಭೆಯಲ್ಲಿ 92 ಕೋಟಿ ಮಂಜೂರಾಗಿದೆ. ಕಾವೇರಿ ಆರತಿ ರಾಜ್ಯದ ಸಂಸ್ಕೃತಿ. ಪ್ರವಾಸಿಗರು ಧಾರ್ಮಿಕವಾಗಿ ಪೂಜೆ ಮಾಡಲು ಅವಕಾಶ ಮಾಡಿಕೊಡಲು ತೀರ್ಮಾನಿಸಿರುವುದಾಗಿ ಹೇಳಿದರು.
ಕಾವೇರಿ ಆರತಿ ರಾಜ್ಯದ ಸಂಸ್ಕೃತಿ. ಕಾವೇರಿ ನೀರು ಅವಲಂಬಿಸಿರುವ ಎಲ್ಲಾ ಜನರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು. ಕೇರಳ ತಮಿಳುನಾಡು ಜನರು ಬಂದು ಪೂಜೆ ಸಲ್ಲಿಸಬಹುದು ಎಂದ ಅವರು, ಕಾವೇರಿ ಆರತಿ ಹೇಗಿರಬೇಕು, ಯಾವ ಸ್ಥಳದಲ್ಲಿ ನಡೆಯಬೇಕು ಎಂಬ ಬಗ್ಗೆ ಸಲಹೆ ನೀಡಲು ಇಲ್ಲಿಗೆ ಬಂದಿದ್ದೇನೆ. ಅದಕ್ಕಾಗಿ ಇಬ್ಬರು ಜಿಲ್ಲಾಧಿಕಾರಿಗಳನ್ನು ಒಳಗೊಂಡಂತೆ ಅಧಿಕಾರಿಗಳ ಸಮಿತಿ ರಚನೆ ಮಾಡಿದ್ದೇನೆ. ಸಾಂಸ್ಕೃತಿಕ ಮತ್ತು ಧಾರ್ಮಿಕವಾಗಿ ಕಾವೇರಿ ಆರತಿ ಹೇಗಿರಬೇಕು ಎಂಬುದನ್ನು ತಿಳಿಸಿದ್ದೇನೆ ಎಂದರು.
ಹಿಂದುಳಿದ ಚಾ.ನಗರಕ್ಕೆ ಬಂಪರ್ ಗಿಫ್ಟ್: ಮಲೆಮಹದೇಶ್ವರದ ಬೆಟ್ಟದಲ್ಲಿ ಹಲವು ಯೋಜನೆ ಘೋಷಣೆ
ಕಾವೇರಿ ಆರತಿಗೆ ಬರುವ ಜನರಿಗೆ ಎರಡು ರೀತಿಯ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಒಂದು ಉಚಿತ ಪ್ರವೇಶ ಹಾಗೂ ಟಿಕೆಟ್ ಪಡೆದು ಪ್ರವೇಶ ನೀಡಲು ನಿರ್ಧರಿಸಿದೆ. ಹತ್ತು ಸಾವಿರ ಜನರು ಒಂದೇ ಕಡೆ ಕುಳಿತು ಕಾವೇರಿ ಆರತಿ ನೋಡುವಂತೆ ವ್ಯವಸ್ಥೆ ಮಾಡುತ್ತಿದ್ದೇವೆ. ವಾರದಲ್ಲಿ ಎಷ್ಟು ಬಾರಿ ಆರತಿ ನಡೆಯಬೇಕು ಎಂಬುದನ್ನು ಮುಂದೆ ತೀರ್ಮಾನಿಸುತ್ತೇವೆ. ಇದರಿಂದ ಬಂದ ಹಣವನ್ನ ನಾವು ಪಂಚಾಯಿತಿ ಅಭಿವೃದ್ಧಿಗೆ ಬಳಸುತ್ತೇವೆ. ಇಲ್ಲಿನ ಹಣವನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಆಸೆ ನಮಗಿಲ್ಲ ಎಂದು ನುಡಿದರು.
ಬೃಂದಾವನ ಉನ್ನತಿಕರಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ, ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಈ ವ್ಯಾಪ್ತಿಯಲ್ಲಿ ನಾಲ್ಕು ಪಂಚಾಯಿತಿಗಳು ಬರಲಿವೆ. ಅವುಗಳ ಅಧಿಕಾರದಲ್ಲಿ ಯಾವುದೆ ಬದಲಾವಣೆ ಇರುವುದಿಲ್ಲ. ಪಂಚಾಯಿತಿಗಳಿಗೆ ಶಕ್ತಿ ತುಂಬುವ ಕೆಲಸ ಮಾಡ್ತಿದ್ದೇವೆ. ಮಲೆ ಮಹದೇಶ್ವರ ಬೆಟ್ಟ ಕೂಡ ಅಭಿವೃದ್ಧಿ ಆಗಿದೆ. ಅಲ್ಲಿ ಕೂಡ ಪಂಚಾಯತಿಯ ಅಧಿಕಾರ ಕಸಿದುಕೊಂಡಿಲ್ಲ. ಸ್ಥಳೀಯರ ಉದ್ಯೋಗಕ್ಕೆ ಪಂಚಾಯತಿ ಕಡೆಯಿಂದಲೇ ಆಯ್ಕೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಕಾವೇರಿ ಅಮ್ಯೂಸ್ಮೆಂಟ್ ಪಾರ್ಕ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಯೋಜನೆಗೆ ವಿರೋಧ ಮಾಡುತ್ತಿರುವ ರೈತರನ್ನು ಕರೆದು ನಾನು ಮಾತನಾಡುತ್ತೇನೆ. ರೈತ ಸಂಘಟನೆಗಳಿಗೆ ಇಂತಹ ವಿಚಾರಗಳು ಗೊತ್ತಿಲ್ಲ. ಅಣೆಕಟ್ಟು ಭದ್ರತೆಗೆ ಏನು ಬೇಕೋ ಎಲ್ಲವನ್ನೂ ಮಾಡುತ್ತೇವೆ. ಗೇಟ್‌ಗಳ ಬದಲಾವಣೆ ಮಾಡಬೇಕಾದ ಕಡೆ ಅಗತ್ಯವಾಗಿ ಮಾಡುತ್ತೇವೆ ಎಂದು ನುಡಿದರು. ಶಾಸಕ ರಮೇಶ್ ಬಾಬು ಬಂಡಿ ಸಿದ್ದೇಗೌಡ. ದರ್ಶನ್ ಪುಟ್ಟಣ್ಣಯ್ಯ, ದಿನೇಶ್ ಗೂಳಿಗೌಡ. ಜಿಲ್ಲಾಧಿಕಾರಿ ಡಾ.ಕುಮಾರ್, ಜಿಪಂ ಸಿಇಓ ಕೆ.ಆರ್.ನಂದಿನಿ, ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್, ಕಾವೇರಿ ನೀರಾವರಿ ನಿಗಮದ ಎಂ.ಡಿ.ಮಹೇಶ್ ಇತರರಿದ್ದರು.
ಪಹಲ್ಗಾಂನಲ್ಲಿ ಉಗ್ರ ದಾಳಿ ಇಡೀ ಪ್ರಪಂಚಕ್ಕೆ ಆಘಾತಕಾರಿ: ಡಿಕೆಶಿ
ಬೋಟಿಂಗ್ ಪಾಯಿಂಟ್ ಬಳಿ ಕಾವೇರಿ ಆರತಿ: ಕೃಷ್ಣರಾಜಸಾಗರ ಜಲಾಶಯದ ಬೋಟಿಂಗ್ ಪಾಯಿಂಟ್ ಬಳಿ ಕಾವೇರಿ ಆರತಿ ನಡೆಸಲು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾವೇರಿ ಆರತಿ ಸಂಬಂಧ ನಿಗದಿಯಾಗಿರುವ ಸ್ಥಳವನ್ನು ಅಧಿಕಾರಿಗಳ ಜೊತೆ ತೆರಳಿ ಅಂತಿಮ ಹಂತದ ಪರಿಶೀಲನೆ ನಡೆಸಿದರು. ಜಿಲ್ಲೆಯ ಶಾಸಕರು ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ