
ಬೆಂಗಳೂರು (ಏ.21) : ರಾಜಧಾನಿಯಲ್ಲಿ ಭಾನುವಾರವೂ ಮಳೆ ಮುಂದುವರೆದಿದ್ದು, ಪೂರ್ವ ಮುಂಗಾರು ಅವಧಿಯಲ್ಲಿ ವಾಡಿಕೆ ಪ್ರಮಾಣಕ್ಕಿಂತ ಶೇ.113ರಷ್ಟು ಹೆಚ್ಚಿನ ಮಳೆಯಾಗಿದೆ.
ಕಳೆದ ಎರಡು ವಾರದಿಂದ ನಗರದಲ್ಲಿ ಪೂರ್ವ ಮುಂಗಾರು ಮಳೆಯ ಅಬ್ಬರ ಇದ್ದು, ನಿರಂತವಾಗಿ ಮಳೆಯಾಗುತ್ತಿದೆ. ಭಾನುವಾರ ಬೆಳಗ್ಗೆಯಿಂದ ನಗರದಲ್ಲಿ ಮೋಡ ಕವಿದ ವಾತಾವರಣ ಹಾಗೂ ಬಿಸಿಲಿನ ಕಣ್ಣಾಮುಚ್ಚಾಲೆ ಕಂಡು ಬಂತು. ಆದರೆ, ಮಧ್ಯಾಹ್ನದ ಬಳಿಕ ಪ್ರಮುಖ ಭಾಗದಲ್ಲಿ ಗುಡುಗು, ಮಿಂಚು, ಗಾಳಿ ಸಹಿತ ಮಳೆ ಆರಂಭಗೊಂಡಿತ್ತು. ದೊಡ್ಡ ಪ್ರಮಾಣ ಮಳೆ ಬರುವ ನಿರೀಕ್ಷೆ ಕಂಡುಬಂತಾದರೂ, ವ್ಯಾಪಕಗಾಗಿ ಮಳೆ ಬರಲಿಲ್ಲ. ಅಲ್ಲಲ್ಲಿ ಸಣ್ಣ ಪ್ರಮಾಣ ಮಳೆ ಸುರಿದಿದೆ.
ರಾಜಾಜಿನಗರ, ಮಲ್ಲೇಶ್ವರ, ಮಹಾಲಕ್ಷ್ಮೀ ಲೇಔಟ್, ಆರ್.ಆರ್. ನಗರ, ಬಸವೇಶ್ವರ ನಗರ, ವಿ.ನಾಗೇನಹಳ್ಳಿ, ಹೊರಮಾವು, ಗುರುಡಾಚಾರ್ ಪಾಳ್ಯ, ಬಿಳೇಕಹಳ್ಳಿ, ರಾಮಮೂರ್ತಿನಗರ, ಕಾಡುಗುಡಿ, ಬಿಟಿಎಂ ಲೇಔಟ್, ಹೂಡಿ, ಬಸವನಪುರ, ಕೆ.ಆರ್.ಪುರ, ಚಾಮರಾಜಪೇಟೆ, ಕೃಷ್ಣರಾಜೇಂದ್ರ ಮಾರುಕಟ್ಟೆ, ಕೆಂಪೇಗೌಡ ಬಸ್ ನಿಲ್ದಾಣ, ದೊಡ್ಡನೆಕ್ಕುಂಡಿ ಮೊದಲಾದ ಕಡೆ ಹಗುರ ಮಳೆಯಾಗಿದೆ. ನಗರದ ಪ್ರಮುಖ ಜಂಕ್ಷನ್, ಅಂಡರ್‌ಪಾಸ್‌ಗಳಲ್ಲಿ ತುಸು ನೀರು ನಿಂತಿದ್ದರಿಂದ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ವಾಹನ ಸವಾರರು ಮಳೆಯಲ್ಲಿ ನೆನೆದುಕೊಂಡು ತೆರಳುತ್ತಿದ್ದರು. ಕೆಲ ರಸ್ತೆಗಳಲ್ಲಿ ಮಳೆ ನೀರು ನಿಂತಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು.
ಇದನ್ನೂ ಓದಿ: ಜಮ್ಮುವಿನಲ್ಲಿ ಮೇಘಸ್ಫೋಟ: 3 ಸಾವು, 100ಕ್ಕೂ ಹೆಚ್ಚು ಜನರ ರಕ್ಷಣೆ, ರಾಷ್ಟ್ರೀಯ ಹೆದ್ದಾರಿ ಸ್ಥಗಿತ!
ನಗರದಾದ್ಯಂತ ಮಳೆ ಬಿದ್ದರೂ ಹೆಚ್ಚಿನ ಪ್ರಮಾಣ ಮಳೆಯಾಗಿಲ್ಲ. ಜಕ್ಕೂರಿನಲ್ಲಿ 1.2 ಸೆಂ.ಮೀ ಅತ್ಯಧಿಕ ಮಳೆಯಾಗಿದೆ. ಚೌಡೇಶ್ವರಿ, ಹಂಪಿನಗರದಲ್ಲಿ ತಲಾ 1.1, ವಿದ್ಯಾರಣ್ಯಪುರ, ವನ್ನಾರ್‌ಪೇಟೆಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಭಾನುವಾರ ಸರಾಸರಿ 3.7 ಮಿ.ಮೀ ಮಳೆಯಾಗಿದ್ದು, ಸೋಮವಾರವೂ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
50 ದಿನದಲ್ಲಿ 61.2 ಸೆಂ.ಮೀ ಮಳೆ
ಮಾ.1 ರಿಂದ ಪೂರ್ವ ಮುಂಗಾರು ಅವಧಿ ಆರಂಭಗೊಂಡಿದ್ದು, ಏ.20ರವರೆಗೆ ವಾಡಿಕೆ ಪ್ರಕಾರ ನಗರದಲ್ಲಿ ಈ ಅವಧಿಯಲ್ಲಿ 28.8 ಸೆಂ.ಮೀ ನಷ್ಟು ಮಳೆಯಾಗಬೇಕು. ಆದರೆ, ನಗರದಲ್ಲಿ ಈ ಬಾರಿ 61.2 ಸೆಂ.ಮೀ ಮಳೆಯಾಗಿದೆ. ಈ ಮೂಲಕ ವಾಡಿಕೆ ಪ್ರಮಾಣಕ್ಕಿಂತ ಶೇ.113ರಷ್ಟು ಹೆಚ್ಚಿನ ಪ್ರಮಾಣ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ