
ಬೆಂಗಳೂರು (ಸೆ.16): ಮುಂದಿನ ಎರಡು ದಿನ ರಾಜ್ಯದ ಬಹುತೇಕ ಕಡೆ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ವಿವಿಧ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಮಧ್ಯ ಭಾರತ, ಬಂಗಾಳಕೊಲ್ಲಿ ಹಾಗೂ ಹಿಂದೂ ಮಹಾನಗರದಲ್ಲಿ ಮಳೆ ಮಾರುತಗಳ ಪ್ರಭಾವದಿಂದ ಉತ್ತರ ಒಳನಾಡು ಹಾಗೂ ಕರಾವಳಿಯ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡ್ಮೂರು ದಿನ ಹೆಚ್ಚಿನ ಪ್ರಮಾಣ ಮಳೆಯಾಗುವ ಸಾಧ್ಯತೆ ಇದೆ.
ಸೆ.16ರಂದು ಮಂಗಳವಾರ ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು. ವಿಜಯನಗರ, ಯಾದಗಿರಿ ಜಿಲ್ಲೆಗಳಿಗೆ, ಸೆ.17ರಂದು ಬುಧವಾರ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ ಹಾಗೂ ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ರಾಜ್ಯಾದ್ಯಂತ ಸೆ.18 ಮತ್ತು 19ಕ್ಕೆ ಸಾಧಾರಣ ಮಳೆ ಮುಂದುವರೆಯಲಿದೆ. ಸೆ.20 ರಿಂದ ರಾಜ್ಯದಲ್ಲಿ ಮಳೆ ಕ್ಷೀಣಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದೇವದುರ್ಗ ಮತ್ತು ಅರಕೇರಾ ತಾಲೂಕಿನಾದ್ಯಂತ ಕಳೆದ ಒಂದು ತಿಂಗಳಿನಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಜಮೀನಲ್ಲಿ ಭರವಸೆಯೊಂದಿಗೆ ಹಾಕಿದ್ದ ಹತ್ತಿ ಬೆಳೆಗಳು ಹಾಳಾಗುವ ದುಸ್ಥಿತಿ ತಲುಪಿದೆ. ಮುಂಗಾರು ಮಳೆ ಬಿತ್ತನೆ ಸಂದರ್ಭದಲ್ಲಿ ರೈತರಿಗೆ ಭರವಸೆಯನ್ನು ಮೂಡಿಸಿತ್ತು. ಸಕಾಲಕ್ಕೆ ಮಳೆ ಬಿದ್ದ ಪರಿಣಾಮ ಅನೇಕ ರೈತರು ಹತ್ತಿ ಬೆಳೆಯನ್ನು ಬೆಳೆದಿದ್ದಾರೆ. ಆದರೆ, ಹತ್ತಿ ಬೆಳೆ ಹೂ, ಕಾಯಿ ಬಿಡುವ ಸಂದರ್ಭದಲ್ಲಿ ಅತಿ ಮಳೆಯಿಂದ ತೇವಾಂಶ ಹೆಚ್ಚಾಗಿ ಬೆಳೆಗಳಿಗೆ ತಾಮ್ರ ರೋಗ, ಕಾಯಿಗಳಿಗೆ ಹುಳುಗಳ ಕಾಟ ಹೆಚ್ಚಾಗಿ ರೈತರು ಆತಂಕದಲ್ಲಿದ್ದಾರೆ. ಜಮೀನಲ್ಲಿಯ ಕಸ ಕೀಳಲೂ ಕೂಡ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣಗೊಂಡಿದೆ. ಬೆಳೆ ಇರುವ ಜಮೀನುಗಳೆಲ್ಲಾ ಜಲಾವೃತಗೊಂಡು, ಬಸಿ ನೀರಿನಿಂದ, ಅತಿಯಾದ ತೇವಾಂಶದಿಂದ ಬೆಳೆಗಳು ಹಾಳಾಗುವ ಮಮತ್ತು ಅಪಾರ ಹಾನಿಯಾಗುವ ಲಕ್ಷಣಗಳು ಕಂಡುಬರುತ್ತಿವೆ.
ಹತ್ತಿ ಬೆಳೆಗೆ ರೈತರು ಪ್ರತಿ ಎಕರೆಗೆ 20, 25 ಸಾವಿರ ಖರ್ಚು ಮಾಡಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಯೂರಿಯಾ, ಡಿಎಪಿ ಗೊಬ್ಬರದ ಕೊರತೆಯಿದ್ದು, ಸಹಕಾರ ಸಂಘಗಳಲ್ಲಿ ರೈತರ ಸಾಲು ಸಾಮಾನ್ಯವಾಗಿದೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಪಾಲಿ ನಿಂತರೂ ರೈತರಿಗೆ ದೊರಕುವುದು ಕೇವಲ ಒಂದು ಅಥವಾ ಎರಡು ಚೀಲ ಗೊಬ್ಬರ. ಗೊಬ್ಬರದ ಅಂಗಡಿ ಮಾಲೀಕರು ಕೃತಕ ಅಭಾವ ಸೃಷ್ಠಿಸಿ ಹೆಚ್ಚಿನ ಬೆಲೆಗೆ ಗೊಬ್ಬರ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.ಹಾಗೇ ಸಣ್ಣ ರೈತರಿಗೆ ಗೊಬ್ಬರ ನೀಡುತ್ತಿಲ್ಲ.ದೊಡ್ಡ ರೈತರು ಗೊಬ್ಬರದ ವ್ಯಾಪಾರಿಗಳಲ್ಲಿ ಒಂದು ವರ್ಷದ ಅವಧಿಗೆ ಗೊಬ್ಬರ, ಬೀಜಗಳನ್ನು ಉದ್ರಿ ಕೊಡುವ ಪರಿಪಾಠ ನಮ್ಮಲಿದೆ.ಹೀಗಾಗಿ ದೊಡ್ಡ ರೈತರಿಗೆ ಮಾತ್ರ ಯೂರಿಯಾ ಹಾಗೂ ಡಿಎಪಿ ಗೊಬ್ಬರ ಲಭ್ಯವಾಗಿದೆ. ಸಣ್ಣ ರೈತರು ಯೂರಿಯಾ ಗೊಬ್ಬರ ಹಾಗೂ 10-16,17-17.15-26 ಡಿಎಪಿ ಗೊಬ್ಬರಕ್ಕಾಗಿ ಪರದಾಡುವಂತಹ ವಾತಾವರಣ ನಿರ್ಮಾಣಗೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ