ಬೆಂಗಳೂರಿಗೆ ಆಲಿಕಲ್ಲು ಮಳೆ ಎಚ್ಚರಿಕೆ, ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಚಿಕ್ಕಮಗಳೂರಿನಲ್ಲಿ ಬೆಳಗ್ಗಿನಿಂದಲೇ ಮಳೆ

Published : May 26, 2026, 03:39 PM IST
Karnataka weather forecast

ಸಾರಾಂಶ

ಭಾರತೀಯ ಹವಾಮಾನ ಇಲಾಖೆಯು (IMD) ಕರ್ನಾಟಕದಾದ್ಯಂತ ಮುಂದಿನ 5-6 ದಿನಗಳ ಕಾಲ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದ್ದು, ಶೀಘ್ರದಲ್ಲೇ ಮುಂಗಾರು ಮಾರುತಗಳು ರಾಜ್ಯವನ್ನು ಪ್ರವೇಶಿಸಲಿವೆ.

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕರಾವಳಿ ಮತ್ತು ಒಳನಾಡಿನ ಜಿಲ್ಲೆಗಳಲ್ಲಿ ಕಳೆದ ಎರಡು ವಾರಗಳಿಂದ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆ ಇನ್ನಷ್ಟು ತೀವ್ರಗೊಳ್ಳುವ ಮುನ್ಸೂಚನೆ ಸಿಕ್ಕಿದೆ. ಮುಂದಿನ 5 ರಿಂದ 6 ದಿನಗಳ ಕಾಲ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಹಾಗೂ ತೀವ್ರ ವೇಗದ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ನೆಚ್ಚರಿಕೆ ನೀಡಿದೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ‘ಯೆಲ್ಲೋ ಅಲರ್ಟ್’ (Yellow Alert) ಘೋಷಿಸಲಾಗಿದೆ.

ಮತ್ತೊಂದೆಡೆ, ನೈಋತ್ಯ ಮುಂಗಾರು (Monsoon) ಮಾರುತಗಳ ಪ್ರವೇಶಕ್ಕೆ ವಾತಾವರಣ ಸಂಪೂರ್ಣ ಅನುಕೂಲಕರವಾಗಿದೆ. ಮುಂದಿನ 2-3 ದಿನಗಳಲ್ಲಿ ನೈಋತ್ಯ ಮತ್ತು ಆಗ್ನೇಯ ಸಮುದ್ರ, ಬಂಗಾಳಕೊಲ್ಲಿ ಹಾಗೂ ಅಂಡಮಾನ್ ಸಮುದ್ರದ ಉಳಿದ ಭಾಗಗಳಿಗೆ ಮುಂಗಾರು ಮತ್ತಷ್ಟು ವಿಸ್ತರಿಸಲಿದ್ದು, ಶೀಘ್ರದಲ್ಲೇ ರಾಜ್ಯಕ್ಕೆ ಮುಂಗಾರು ಮಳೆ ಅಧಿಕೃತವಾಗಿ ಪ್ರವೇಶಿಸಲಿದೆ.

ಬೆಂಗಳೂರಿಗೆ ಆಲಿಕಲ್ಲು ಮಳೆ ಎಚ್ಚರಿಕೆ: ತಾಪಮಾನ ಇಳಿಕೆ

ರಾಜಧಾನಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಹವಾಮಾನದಲ್ಲಿ ಭಾರಿ ಏರುಪೇರಾಗಲಿದೆ. ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಬಿರುಗಾಳಿ ಬೀಸಲಿದ್ದು, ಕೆಲವು ಪ್ರದೇಶಗಳಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಮಳೆಯ ಆರ್ಭಟದಿಂದಾಗಿ ನಗರದ ಉಷ್ಣಾಂಶದಲ್ಲಿ ಗಣನೀಯ ಇಳಿಕೆಯಾಗಲಿದ್ದು, ಗರಿಷ್ಠ ಉಷ್ಣಾಂಶ 32°C ಹಾಗೂ ಕನಿಷ್ಠ ಉಷ್ಣಾಂಶ 22°C ಆಸುಪಾಸಿನಲ್ಲಿ ಇರಲಿದೆ ಎಂದು ಇಲಾಖೆ ತಿಳಿಸಿದೆ. ಆದರೆ, ಮೇ 28 ಮತ್ತು 30 ರಂದು ಮಳೆಯ ಪ್ರಮಾಣ ತಗ್ಗಲಿದ್ದು, ಯಾವುದೇ ಪ್ರಮುಖ ಮುನ್ಸೂಚನೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಯಾವ ಯಾವ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ?

ದಕ್ಷಿಣ ಒಳನಾಡು (ಭಾರಿ ಮಳೆ):

 ಚಾಮರಾಜನಗರ, ಕೋಲಾರ, ರಾಮನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ನಿರೀಕ್ಷೆಯಿದೆ.

ಉತ್ತರ ಒಳನಾಡು (ಸಾಧಾರಣ ಮಳೆ): 

ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಬಾಗಲಕೋಟೆ, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ.

ಕರಾವಳಿ ಭಾಗ: 

ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಮುಂದಿನ ನಾಲ್ಕು ದಿನಗಳ ಕಾಲ ಕರಾವಳಿ ತೀರದಲ್ಲಿ ಗುಡುಗಿನ ಅಬ್ಬರ ಜೋರಾಗಿರಲಿದೆ.

ಕಾಫಿನಾಡಿನಲ್ಲಿ ವರುಣನ ರೌದ್ರಾವತಾರ: ಕಂಗಾಲಾದ ಪ್ರವಾಸಿಗರು!

ಸೋಮವಾರ ಚಿಕ್ಕಮಗಳೂರು, ವಿಜಯನಗರ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ವಿಶೇಷವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೇವಲ 20 ನಿಮಿಷಗಳ ಕಾಲ ಸುರಿದ ಗುಡುಗು-ಮಿಂಚಿನ ಅಬ್ಬರದ ಮಳೆಗೆ ಇಡೀ ನಗರವೇ ಕಂಗಾಲಾಗಿದೆ. ಸಿಡಿಲಿನ ಹೊಡೆತಕ್ಕೆ ನಗರದ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಗಿರಿಭಾಗದಲ್ಲಿ ಆತಂಕದ ವಾತಾವರಣ:

ಮುಳ್ಳಯ್ಯನಗಿರಿ ತಪ್ಪಲು ಹಾಗೂ ದತ್ತಪೀಠದ ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳ ಮೇಲೆ ಅರ್ಧ ಅಡಿಯಷ್ಟು ನೀರು ನದಿಯಂತೆ ಹರಿಯುತ್ತಿದೆ. ಭಾರಿ ಗಾಳಿ-ಮಳೆಗೆ ಸಿಲುಕಿದ ಪ್ರವಾಸಿಗರು ವಾಹನ ಚಲಾಯಿಸಲು ಸಾಧ್ಯವಾಗದೆ ಪರದಾಡುವಂತಾಯಿತು. ಪ್ರಸಿದ್ಧ ಹೊನ್ನಮ್ಮನಹಳ್ಳ ಜಲಪಾತವು ಮಳೆಯ ನೀರಿನಿಂದಾಗಿ ಮೈದುಂಬಿ ಹರಿಯುತ್ತಿದ್ದು, ಜಲಪಾತದ ನೀರು ಪ್ರವಾಸಿಗರು ಚಲಿಸುವ ಮೆಟ್ಟಿಲುಗಳ ಮೇಲೆಯೇ ಧುಮುಕುತ್ತಿದೆ. ಚಿಕ್ಕಮಗಳೂರು ನಗರದ ರಸ್ತೆಗಳೂ ಕೂಡ ಜಲಾವೃತಗೊಂಡಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ಜಿಲ್ಲೆಗೆ ಈಗಾಗಲೇ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಸಾರ್ವಜನಿಕರಿಗೆ ಹವಾಮಾನ ಇಲಾಖೆಯ ಪ್ರಮುಖ ಸೂಚನೆಗಳು

  • ಮಳೆಯ ಸಮಯದಲ್ಲಿ ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವುದರಿಂದ ಹಳೆಯ ಮರಗಳು, ಒಣಗಿದ ರೆಂಬೆಗಳು ಹಾಗೂ ವಿದ್ಯುತ್ ಕಂಬಗಳು ಉರುಳಿ ಬೀಳುವ ಅಪಾಯ ಹೆಚ್ಚಿರುತ್ತದೆ.
  • ಸಾರ್ವಜನಿಕರು, ವಾಹನ ಸವಾರರು ಹಾಗೂ ತೋಟದ ಕಾರ್ಮಿಕರು ಮಳೆ ಬರುವಾಗ ಯಾವುದೇ ಕಾರಣಕ್ಕೂ ಮರಗಳ ಕೆಳಗೆ ಅಥವಾ ವಿದ್ಯುತ್ ಕಂಬಗಳ ಬಳಿ ಆಶ್ರಯ ಪಡೆಯಬಾರದು.
  • ತೀವ್ರವಾದ ಗುಡುಗು ಮತ್ತು ಸಿಡಿಲು ಇರುವುದರಿಂದ ಇಲೆಕ್ಟ್ರಾನಿಕ್ ಉಪಕರಣಗಳ ಬಳಕೆಯ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೇಕೆದಾಟು ಯೋಜನೆ ಬಗ್ಗೆ ಡಿಕೆಶಿ ಇಲ್ಲಿ ಮಾತಾಡಿದ್ದಕ್ಕೆ, ತಮಿಳುನಾಡಲ್ಲಿ ಹೊತ್ತಿಕೊಂಡ ಜ್ವಾಲೆ, ತೀವ್ರ ರಾಜಕೀಯ ಸಂಘರ್ಷ
'ದೆಹಲಿಗೆ ಅಲ್ಲ, ಅಮೆರಿಕಕ್ಕೆ ಹೋಗ್ತಾ ಇದ್ದೇನೆ..' ರಾಜಕೀಯ ಗೊಂದಲದ ಮಧ್ಯೆ ರಾಜಣ್ಣ ಹೊಸ ಬಾಂಬ್!