19 ಜಿಲ್ಲೆ ಅನ್‌ಲಾಕ್‌: 11 ಜಿಲ್ಲೆಗಳಲ್ಲಿ ನಿರ್ಬಂಧ ಯಥಾಸ್ಥಿತಿ: ಏನಿರುತ್ತೆ, ಏನಿರಲ್ಲ?

By Kannadaprabha NewsFirst Published Jun 14, 2021, 7:24 AM IST
Highlights

* 19 ಜಿಲ್ಲೆ ಇಂದು ಅನ್‌ಲಾಕ್‌

* ಸೋಂಕು ಕಡಿಮೆಯಾದ ಜಿಲ್ಲೆಗಳಲ್ಲಿ ಕಠಿಣ ಕೊರೋನಾ ನಿರ್ಬಂಧ ಸಡಿಲ

* ಮಧ್ಯಾಹ್ನ 2ರವರೆಗೆ ಖರೀದಿ ಅವಕಾಶ

* ಕಾರ್ಖಾನೆ ತೆರೆಯಲು ಅನುಮತಿ

* ರಾತ್ರಿ 7ರಿಂದ ಕೊರೋನಾ ಕರ್ಫ್ಯೂ

* 11 ಜಿಲ್ಲೆಗಳಲ್ಲಿ ನಿರ್ಬಂಧ ಯಥಾಸ್ಥಿತಿ

ಬೆಂಗಳೂರು(ಜೂ.14): ಕೋವಿಡ್‌ ಸೋಂಕು ತೀವ್ರವಾಗಿರುವ 11 ಜಿಲ್ಲೆಗಳನ್ನು ಹೊರತುಪಡಿಸಿ ಇನ್ನುಳಿದ 19 ಜಿಲ್ಲೆಗಳಲ್ಲಿ ಸೋಮವಾರದಿಂದ ಮೊದಲ ಹಂತದ ಅನ್‌ಲಾಕ್‌ ಜಾರಿಗೆ ಬರಲಿದ್ದು, ನಿಧಾನವಾಗಿ ಜನಜೀವನ ಸಹಜ ಸ್ಥಿತಿಯತ್ತ ತೆರೆದುಕೊಳ್ಳಲಿದೆ.

ಈವರೆಗೆ ಇದ್ದ ಲಾಕ್‌ಡೌನ್‌ನ ಕೆಲವು ಕಟ್ಟುನಿಟ್ಟಿನ ನಿಯಮಗಳು ಸ್ವಲ್ಪ ಸಡಿಲವಾಗಲಿವೆ. ಪ್ರಮುಖವಾಗಿ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಗತ್ಯ ವಸ್ತುಗಳ ಮಾರಾಟ, ಖರೀದಿಗೆ ಅವಕಾಶ ಸಿಗಲಿದೆ. ಆದರೆ, ಅನಗತ್ಯ ಓಡಾಟಕ್ಕೆ ಕಡಿವಾಣ ಮುಂದುವರಿಯಲಿದೆ. ಮದ್ಯದಂಗಡಿ ಮಧ್ಯಾಹ್ನದವರೆಗೆ ತೆರೆಯಲಿದ್ದು, ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಹೊಟೇಲ್‌ಗಳಲ್ಲಿ ತಿಂಡಿ, ಊಟದ ಪಾರ್ಸೆಲ್‌ಗೆ ಅನುಮತಿ ನೀಡಲಾಗಿದೆ.

ಪಾಸಿಟಿವಿಟಿ ದರ ಕಡಿಮೆ ಇರುವ ಬೆಂಗಳೂರು ನಗರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ಉಡುಪಿ, ಹಾವೇರಿ, ಉತ್ತರ ಕನ್ನಡ, ಧಾರವಾಡ, ಗದಗ, ಕೊಪ್ಪಳ, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ, ಕಲಬುರ್ಗಿ ಮತ್ತು ಬೀದರ್‌ ಜಿಲ್ಲೆಗಳಲ್ಲಿ ಸೆಮಿ ಲಾಕ್‌ಡೌನ್‌ನ ನಿರ್ಬಂಧಗಳು ಸಡಿಲಿಕೆಯಾಗಲಿವೆ.

ಆದರೆ ಪಾಸಿಟಿವಿಟಿ ದರ ಹೆಚ್ಚಿರುವ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಈ ತಿಂಗಳ 21ರ ಬೆಳಗ್ಗೆ 6ಗಂಟೆವರೆಗೆ ಈಗಿರುವ ಸೆಮಿ ಲಾಕ್‌ಡೌನ್‌ ನಿರ್ಬಂಧಗಳು ಯಥಾರೀತಿ ಮುಂದುವರೆಯಲಿವೆ.

19 ಜಿಲ್ಲೆಗಳಲ್ಲಿ ಎಲ್ಲ ರೀತಿಯ ಕಾರ್ಖಾನೆಗಳು ಶೇ.50ರಷ್ಟುಸಿಬ್ಬಂದಿಯ ಹಾಜರಾತಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಗಾರ್ಮೆಂಟ್ಸ್‌ ವಲಯಗಳು ಶೇ.30ರಷ್ಟುಸಿಬ್ಬಂದಿಯ ಹಾಜರಿಯೊಂದಿಗೆ ಕಾರ್ಯನಿರ್ವಹಿಸಲಿವೆ. ಎಲ್ಲ ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸಲು ಅವಕಾಶ ನೀಡಲಾಗಿದೆ. ಪಾರ್ಕ್ಗಳನ್ನು ಬೆಳಗ್ಗೆ 5 ಗಂಟೆಯಿಂದ 10 ಗಂಟೆಯವರೆಗೆ ತೆರೆಯಬಹುದಾಗಿದೆ.

ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಕರಿಗೆ ಅವಕಾಶ ಒದಗಿಸಲಾಗಿದೆ. ಆದರೆ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ ಸಂಚಾರಕ್ಕೆ ನಿರ್ಬಂಧ ಮುಂದುವರೆಸಲಾಗಿದೆ. ಅಂತರ್‌ ಜಿಲ್ಲೆ ಮತ್ತು ರಾಜ್ಯ ಓಡಾಟಕ್ಕೆ ಅಗತ್ಯ ಪ್ರಯಾಣ ಟಿಕೆಟ್‌ ಇರಬೇಕು. ಸರಕು ಸಾಗಣೆಗೆ ಯಾವುದೇ ನಿರ್ಬಂಧ ಇಲ್ಲ.

ನಿರ್ಬಂಧ ಸಡಿಲಿಕೆಯಾಗುವ ಜಿಲ್ಲೆಗಳಲ್ಲೂ ಪ್ರತಿದಿನ ರಾತ್ರಿ 7 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಕೋವಿಡ್‌ ಕಫ್ರ್ಯೂ ಜಾರಿಯಲ್ಲಿರಲಿದೆ. ವಾರಾಂತ್ಯದ ಕಫ್ರ್ಯೂ ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಗ್ಗೆ 5ಗಂಟೆಯವರೆಗೆ ಜಾರಿಯಲ್ಲಿರುತ್ತದೆ. ನಿಗದಿಯಾಗಿರುವ ಮದುವೆ ಸಮಾರಂಭದಲ್ಲಿ 40 ಮಂದಿ ಮತ್ತು ಮೃತರ ಅಂತ್ಯ ಸಂಸ್ಕಾರದಲ್ಲಿ ಕೇವಲ ಐದು ಮಂದಿಗೆ ನೀಡಿರುವ ಅವಕಾಶವನ್ನು ಮುಂದುವರಿಸಲಾಗಿದೆ.

ಏನಿರುತ್ತೆ?

* ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಅಗತ್ಯ ವಸ್ತು ಮಾರಾಟ

* ಬೀದಿ ಬದಿ ವ್ಯಾಪಾರಿಗಳು, ಮದ್ಯದಂಗಡಿಗಳಿಗೂ ಅವಕಾಶ

* 50% ಸಿಬ್ಬಂದಿ ಹಾಜರಾತಿಯೊಂದಿಗೆ ಕಾರ್ಖಾನೆಗಳು

* 30% ಸಿಬ್ಬಂದಿಯೊಂದಿಗೆ ಗಾರ್ಮೆಂಟ್ಸ್‌ ಕಾರ್ಖಾನೆಗಳು

* ಎಲ್ಲ ಬಗೆಯ ನಿರ್ಮಾಣ ಚಟುವಟಿಕೆಗೆ ಅನುಮತಿ

* ಬೆಳಗ್ಗೆ 5ರಿಂದ 10 ಗಂಟೆವರೆಗೆ ಪಾರ್ಕ್ ಪ್ರವೇಶ

* ಆಟೋ, ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಕರಿಗೆ ಅವಕಾಶ

* ಸರಕು ಸಾಗಣೆ ಮತ್ತು ಆನ್‌ಲೈನ್‌ ಸೇವೆಗಳು

ಏನಿರಲ್ಲ?

* ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ಸಂಚಾರ

* ಅಗತ್ಯ ಸೇವೆ ಹೊರತುಪಡಿಸಿ ಇತರೆ ವಾಹನಗಳ ಓಡಾಟ

* ಮಾಲ್‌, ಸಿನಿಮಾ ಮಂದಿರ

* ಶಾಲೆ-ಕಾಲೇಜು

click me!