ಬ್ಲ್ಯಾಕ್‌ ಫಂಗಸ್‌ಗೆ ಉಚಿತವಾಗಿ ಚಿಕಿತ್ಸೆ: ಸರ್ಕಾರದ ಮಹತ್ವದ ನಿರ್ಧಾರ!

By Kannadaprabha News  |  First Published May 18, 2021, 7:13 AM IST

* ಬ್ಲ್ಯಾಕ್ ಫಂಗಸ್‌ಗೆ ಉಚಿತವಾಗಿ ಚಿಕಿತ್ಸೆ, ಸರ್ಕಾರ ಮಹತ್ವದ ನಿರ್ಧಾರ

* ಬೆಂಗಳೂರು ಸೇರಿದಂತೆ 7 ಕಡೆ ಶುಶ್ರೂಷೆ

* ವೈದ್ಯರು ಹೇಳದೆ ಸ್ಟಿರಾಯ್ಡ್‌ ಪಡೆವಂತಿಲ್ಲ

* ತಜ್ಞರ ಸಭೆ ಬಳಿಕ ಡಾ| ಸುಧಾಕರ್‌ ಹೇಳಿಕೆ


ಬೆಂಗಳೂರು(ಮೇ.18): ಕೊರೋನಾ ಸೋಂಕಿತರನ್ನು ಸದ್ದಿಲ್ಲದೆ ಬಲಿ ಪಡೆಯುತ್ತಿರುವ ಹಾಗೂ ದೃಷ್ಟಿಹೀನರನ್ನಾಗಿ ಮಾಡುತ್ತಿರುವ ಮಾರಕ ‘ಬ್ಲ್ಯಾಕ್ ಫಂಗಸ್‌’ ಕಾಯಿಲೆಗೆ ಉಚಿತ ಚಿಕಿತ್ಸೆ ನೀಡುವುದಾಗಿ ರಾಜ್ಯ ಸರ್ಕಾರ ಮಹತ್ವದ ಘೋಷಣೆ ಮಾಡಿದೆ. ಇದೇ ವೇಳೆ, ಬ್ಲ್ಯಾಕ್ ಫಂಗಸ್‌ ಅನ್ನು ಅಧಿಸೂಚಿತ ಕಾಯಿಲೆಯೆಂದು ಪರಿಗಣಿಸಿದೆ. ಹೀಗಾಗಿ ಯಾವುದೇ ವೈದ್ಯರು ಈ ಕಾಯಿಲೆಯನ್ನು ಮುಚ್ಚಿಡುವಂತಿಲ್ಲ. ಅತಿಯಾದ ಸ್ಟೆರಾಯ್ಡ್‌ ಬಳಕೆಯೂ ಬ್ಲ್ಯಾಕ್ ಫಂಗಸ್‌ಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಇಲ್ಲದೆ ಸ್ಟೆರಾಯ್ಡ್‌ ಬಳಸುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆಯನ್ನೂ ಸರ್ಕಾರ ನೀಡಿದೆ.

ಮತ್ತೊಂದೆಡೆ, ಬ್ಲ್ಯಾಕ್ ಫಂಗಸ್‌ (ಕಪ್ಪು ಶಿಲೀಂಧ್ರ) ಚಿಕಿತ್ಸೆಗಾಗಿ ಮಂಗಳವಾರದಿಂದ ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯಲ್ಲಿ ಪ್ರಧಾನ ಚಿಕಿತ್ಸಾ ಘಟಕ ಹಾಗೂ ಗುರುವಾರದಿಂದ ರಾಜ್ಯಾದ್ಯಂತ ಆರು ಕಡೆ ಪ್ರಾದೇಶಿಕ ಚಿಕಿತ್ಸಾ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ ಎಂದೂ ಪ್ರಕಟಿಸಿದೆ.

Tap to resize

Latest Videos

ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಬ್ಲ್ಯಾಕ್ ಫಂಗಸ್‌ ನಿಯಂತ್ರಣ ಹಾಗೂ ಚಿಕಿತ್ಸೆ ಕುರಿತಂತೆ ವಿಕ್ಟೋರಿಯಾ ಆಸ್ಪತ್ರೆ ಇಎನ್‌ಟಿ ಮುಖ್ಯಸ್ಥ ಡಾ.ಎಚ್‌.ಎಸ್‌. ಸತೀಶ್‌ ನೇತೃತ್ವದಲ್ಲಿ ರಚಿಸಿರುವ ಉನ್ನತ ಮಟ್ಟದ ತಜ್ಞರ ಸಮಿತಿಯೊಂದಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಸೋಮವಾರ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ಆಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್‌ಗೆ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಿದರು.

ಮನೆ ಆರೈಕೆಯಲ್ಲಿರುವವರಿಗೆ ಸರ್ಕಾರ ಸ್ಟೆರಾಯ್ಡ್‌ ನೀಡುತ್ತಿಲ್ಲ. ಇನ್ನು ಕೊರೋನಾಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಬ್ಲ್ಯಾಕ್ ಫಂಗಸ್‌ ಕೋವಿಡ್‌ ನಂತರದ ರೋಗ ಆಗಿರುವುದರಿಂದ ಇದಕ್ಕೂ ಉಚಿತ ಚಿಕಿತ್ಸೆ ನೀಡಲಾಗುವುದು ಎಂದರು.

"

ಬ್ಲ್ಯಾಕ್ ಫಂಗಸ್‌ಗೆ ಆಂಪೊಟೆರಿಸಿನ್‌ ಔಷಧಿ ನೀಡುತ್ತಿದ್ದು, ಒಬ್ಬ ರೋಗಿಗೆ 40-60 ವಯಲ್‌ಗಳು ಬೇಕಾಗುತ್ತವೆ. ಕೇಂದ್ರ ಸರ್ಕಾರ ರಾಜ್ಯಕ್ಕೆ 1050 ವಯಲ್‌ಗಳ ಮಂಜೂರಾತಿ ನೀಡಿದ್ದು, 450 ವಯಲ್‌ ಬಂದಿವೆ. ಇದಲ್ಲದೆ, ರಾಜ್ಯ ಸರ್ಕಾರ ಇನ್ನೂ 20 ಸಾವಿರ ವಯಲ್‌ಗಳಿಗೆ ಖಾಸಗಿಯಾಗಿ ಆದೇಶ ನೀಡಿದೆ ಎಂದು ಮಾಹಿತಿ ನೀಡಿದರು.

ಇಎನ್‌ಟಿ ತಜ್ಞರ ಪರಿಶೀಲನೆ ಬಳಿಕವೇ ಡಿಸ್ಚಾರ್ಜ್:

ಬ್ಲ್ಯಾಕ್ ಫಂಗಸ್‌ ಮುಖ್ಯವಾಗಿ ಮೂಗು, ಬಾಯಿ, ಕಣ್ಣಿಗೆ ಸಂಬಂಧಿಸಿದ ಸೋಂಕು. ಶಿಲೀಂಧ್ರ ಸೋಂಕು ಉಂಟಾದ ತಕ್ಷಣ ಮೂಗಿನಲ್ಲಿ ಲಕ್ಷಣಗಳು ಕಂಡು ಬರುತ್ತವೆ. ಇದು ಅನಿಯಂತ್ರಿತ ಮಧುಮೇಹ, ದೀರ್ಘಕಾಲ ವೆಂಟಿಲೇಟರ್‌ನಲ್ಲಿದ್ದವರು, ಸ್ಟಿರಾಯ್ಡ್‌ ಹೆಚ್ಚಾಗಿ ಬಳಸಿದವರು, ರೋಗನಿರೋಧಕ ಶಕ್ತಿ ಇಲ್ಲದವರಲ್ಲಿ ಕಂಡು ಬರುತ್ತದೆ. ಕ್ಯಾನ್ಸರ್‌, ಎಚ್‌ಐವಿ, ಅಂಗಾಂಗ ಕಸಿಗೆ ಒಳಗಾದವರಲ್ಲಿ ಮಧುಮೇಹ ನಿಯಂತ್ರಣ ಕಳೆದುಕೊಂಡು ಸೋಂಕು ಉಂಟಾಗಬಹುದು. ಹಾಗಂತ ಇಂತಹವರೆಲ್ಲರಿಗೂ ಕಡ್ಡಾಯವಾಗಿ ಬರುವುದೂ ಇಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಈ ಲಕ್ಷಣಗಳಿರುವ ಸೋಂಕಿತರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡುವಾಗ ಇಎನ್‌ಟಿ ತಜ್ಞರ ಪರಿಶೀಲನೆಯ ಬಳಿಕವೇ ಬಿಡುಗಡೆ ಮಾಡಬೇಕು ಎಂದು ಡಾ.ಕೆ. ಸುಧಾಕರ್‌ ಸೂಚನೆ ನೀಡಿದರು.

ಬ್ಲ್ಯಾಕ್ ಫಂಗಸ್‌ ಸಾಂಕ್ರಾಮಿಕ ಅಲ್ಲ:

ಬ್ಲ್ಯಾಕ್ ಫಂಗಸ್‌ ಅನ್ನು ಅಧಿಸೂಚಿತ ಕಾಯಿಲೆಯಾಗಿ ಗುರುತಿಸಲಾಗಿದೆ. ಹೀಗಾಗಿ ಯಾವುದೇ ಆಸ್ಪತ್ರೆಯಲ್ಲಿ ಸೋಂಕು ಪತ್ತೆಯಾದರೂ ಕೂಡಲೇ ರಾಜ್ಯ ಸರ್ಕಾರಕ್ಕೆ ವರದಿ ನೀಡಬೇಕು. ಇಲ್ಲದಿದ್ದರೆ ಕಾನೂನಿನ ಪ್ರಕಾರ ಅಪರಾಧವಾಗಲಿದೆ. ಇನ್ನು ಕಪ್ಪು ಶಿಲೀಂಧ್ರ ಕಲುಷಿತ ವೆಂಟಿಲೇಟರ್‌, ಹ್ಯುಮಿಡಿಫೈಯರ್‌ನಿಂದಲೂ ಬರಬಹುದು. ಹೀಗಾಗಿ ಸೋಂಕಿನ ಮೂಲ ಪತ್ತೆ ಹಚ್ಚಿ ಬೇರೆಯವರಿಗೆ ಸೋಂಕು ಉಂಟಾಗದಂತೆ ಆಸ್ಪತ್ರೆಗಳು ಮುತುವರ್ಜಿ ವಹಿಸಬೇಕು. ಹ್ಯುಮಿಡಿಫೈಯರ್‌ಗೆ ಸ್ಟೆರಿಲೈಸ್‌ ನೀರೇ ಬಳಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬ್ಲ್ಯಾಕ್ ಫಂಗಸ್‌ ಕೊರೋನಾದಂತೆ ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ಜತೆಗೆ ಕೊರೋನಾ ಸೋಂಕಿತರೆಲ್ಲರಿಗೂ ಬರುವುದಿಲ್ಲ. ಸೂಕ್ತ ಮುನ್ನೆಚ್ಚರಿಕೆ ವಹಿಸಿದರೆ ಇದಕ್ಕೆ ಚಿಕಿತ್ಸೆ ಇದೆ. ಮೂಗಿನಲ್ಲಿ ಲಕ್ಷಣಗಳು ಕಾಣಿಸಿದ ತಕ್ಷಣ ಎಚ್ಚೆತ್ತುಕೊಳ್ಳಬೇಕು ಎಂದರು.

97 ಮಂದಿಗೆ ಸೋಂಕು, 4 ಸಾವು:

ಭಾನುವಾರದವರೆಗೆ ರಾಜ್ಯದಲ್ಲಿ 97 ಮಂದಿಗೆ ಬ್ಲ್ಯಾಕ್‌ ಫಂಗಸ್‌ ಕಾಣಿಸಿಕೊಂಡಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 4 ಮಂದಿ ಮೃತಪಟ್ಟಿದ್ದಾರೆ. 40ರಿಂದ 60 ವರ್ಷದವರಲ್ಲಿ ಹೆಚ್ಚಾಗಿ ಸೋಂಕು ವರದಿಯಾಗಿದೆ. ಇದಕ್ಕೆ ಸೂಕ್ತ ಔಷಧ ಲಭ್ಯವಿದ್ದು, ತಲಾ 20 ಸಾವಿರ ವಯಲ್‌ನಷ್ಟುಔಷಧಕ್ಕೆ ಆದೇಶ ಮಾಡಿದ್ದೇವೆ ಎಂದು ಸುಧಾಕರ್‌ ತಿಳಿಸಿದರು.

*ಉನ್ನತ ಮಟ್ಟದ ಸಮಿತಿ ರಚನೆ

ಇಎನ್‌ಟಿ ತಜ್ಞ ಡಾ. ಎಚ್‌.ಎಸ್‌. ಸತೀಶ್‌ ನೇತೃತ್ವದಲ್ಲಿ ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ನಾರಾಯಣ ನೇತ್ರಾಲಯದ ಅಧ್ಯಕ್ಷರಾದ ಡಾ. ಭುಜಂಗಶೆಟ್ಟಿ, ಮಿಂಟೋ ನಿರ್ದೇಶಕಿ ಡಾ.ಸುಜಾತಾ ರಾಥೋಡ್‌, ವಿಕ್ಟೋರಿಯಾ ಆಸ್ಪತ್ರೆ ಮೈಕ್ರೋ ಬಯೋಲಜಿ ಮುಖ್ಯಸ್ಥೆ ಡಾ. ಅಂಬಿಕಾ, ನರರೋಗ ತಜ್ಞ ಡಾ. ವಿವೇಕ್‌, ಡಾ.ಬಾಲಕೃಷ್ಣ ಕುಮಾರ್‌, ಡಾ. ಪ್ರದೀಪ್‌ ರಂಗಪ್ಪ, ಡಾ. ರಮೇಶ್‌, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ. ಗಿರೀಶ್‌, ಆರೋಗ್ಯ ಇಲಾಖೆ ನಿರ್ದೇಶಕರಾದ ಓಂ ಪ್ರಕಾಶ್‌ ಪಾಟೀಲ್‌, ಡ್ರಗ್‌ ಕಂಟ್ರೋಲರ್‌ಗಳು ಇದ್ದಾರೆ.

ಎಲ್ಲೆಲ್ಲಿ ಚಿಕಿತ್ಸೆ?

ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆ, ಮೈಸೂರು ವೈದ್ಯಕೀಯ ಕಾಲೇಜು, ಶಿವಮೊಗ್ಗ ವೈದ್ಯಕೀಯ ಕಾಲೇಜು, ಕಲಬುರಗಿಯ ಜಿಮ್ಸ್‌, ಹುಬ್ಬಳ್ಳಿಯ ಕಿಮ್ಸ್‌, ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆ ಹಾಗೂ ಕೆಎಂಸಿ ಮಣಿಪಾಲದಲ್ಲಿ ಬ್ಲ್ಯಾಕ್‌ ಫಂಗಸ್‌ಗೆ ಚಿಕಿತ್ಸೆ ಲಭಿಸಲಿದೆ.

ಸರ್ಕಾರದ ಸಲಹೆ

1. ವೈದ್ಯರು ಬ್ಲ್ಯಾಕ್‌ ಫಂಗಸ್‌ ಕಾಯಿಲೆ ಮುಚ್ಚಿಡುವಂತಿಲ್ಲ

2. ಮನೆ ಆರೈಕೆಯಲ್ಲಿರುವವರಿಗೆ ಸ್ಟೆರಾಯ್ಡ್‌ ನೀಡುವಂತಿಲ್ಲ

3. ಬ್ಲ್ಯಾಕ್ ಫಂಗಸ್‌ಗೆ ಆಂಪೊಟೆರಿಸಿನ್‌ ಔಷಧಿ ನೀಡಬೇಕು

4. ಕೋವಿಡ್‌ ಸೋಂಕಿತರನ್ನು ಇಎನ್‌ಟಿ ವೈದ್ಯರು ಪರೀಕ್ಷಿಸಿ ಡಿಸ್ಚಾಜ್‌ರ್‍ ಮಾಡಬೇಕು

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!