KRS ನಲ್ಲಿ ಐಫೆಲ್‌ ಟವರ್‌ ರೀತಿಯ ಕಾವೇರಿ ಪ್ರತಿಮೆ

By Web DeskFirst Published Nov 16, 2018, 9:45 AM IST
Highlights

ಕೆಆರ್ ಎಸ್ ಅನ್ನು ಡಿಸ್ನಿ ಲ್ಯಾಂಡ್ ರೀತಿ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದ್ದು ಇದೀಗ ಐಫೆಲ್ ಟವರ್ ರೀತಿ ಕಾವೇರಿ ಪ್ರತಿಮೆ ನಿರ್ಮಾಣ ಮಾಡಲು ಯೋಜನೆ ರೂಪಿಸಿದೆ. 

ಬೆಂಗಳೂರು :  ಕೆಆರ್‌ಎಸ್‌ನ ಬೃಂದಾವನ ಉದ್ಯಾನವನ್ನು ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಪಿಪಿಪಿ ಮಾದರಿ ಯೋಜನೆಗೆ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ. ಜತೆಗೆ ಐಫೆಲ್‌ ಟವರ್‌ ಮಾದರಿಯಲ್ಲಿ ಕಾವೇರಿಯ ಎತ್ತರದ ಪ್ರತಿಮೆ ನಿರ್ಮಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಪ್ರತಿಮೆಗೂ ಗುಜರಾತ್‌ನ ಸರ್ದಾರ್‌ ಪಟೇಲ್‌ ಪ್ರತಿಮೆಗೂ ಸಂಬಂಧವಿಲ್ಲ. ಕಾವೇರಿ ಪ್ರತಿಮೆಯನ್ನು ಎಷ್ಟುಎತ್ತರ ನಿರ್ಮಾಣ ಮಾಡಬೇಕು ಎಂಬುದು ಇನ್ನೂ ಅಂತಿಮಗೊಂಡಿಲ್ಲ. ಸುತ್ತಲೂ ಇರುವ ವನ್ಯಜೀವಿ ಧಾಮ, ಕೊಡಗಿನ ಪ್ರೇಕ್ಷಣೀಯ ಸ್ಥಳಗಳ ಜತೆಗೆ ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಕೆಆರ್‌ಎಸ್‌ ಅಭಿವೃದ್ಧಿಪಡಿಸಿದರೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಉತ್ತೇಜನ ಸಿಗಲಿದೆ. ಹೀಗಾಗಿ ಯೋಜನೆ ಜಾರಿಗೆ ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು.

ಈಗಾಗಲೇ ಇಲಾಖೆ ಬಳಿ 300 ಎಕರೆ ಜಾಗ ಇದ್ದು, ಹೆಚ್ಚುವರಿ 200 ಎಕರೆ ಹೊಂದಿಸಿಕೊಳ್ಳಲಾಗುವುದು. ಕಾವೇರಿ ಪ್ರತಿಮೆಯನ್ನು ಐಫೆಲ್‌ ಟವರ್‌ ಮಾದರಿಯಲ್ಲಿ ನಿರ್ಮಿಸಬೇಕು. ಮೇಲೆ ಹೋಗಲು ಲಿಫ್ಟ್‌ ಅಳವಡಿಕೆ ಮಾಡಬೇಕು. ಹಾಗೂ ಪ್ರತಿಮೆ ಮೇಲಿಂದ ಸುತ್ತಲಿನ ಪರಿಸರ, ಜಲಾಶಯ ವೀಕ್ಷಿಸಲು ಗ್ಲಾಸ್‌ ಅಳವಡಿಕೆ ಮಾಡಬೇಕು ಎಂಬ ಚಿಂತನೆ ಇದೆ ಎಂದರು.

ಪಟೇಲ್‌ ಪ್ರತಿಮೆಗೆ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರವಾಸೋದ್ಯಮ ಅಭಿವೃದ್ಧಿಗೆ ಎತ್ತರದ ಪ್ರತಿಮೆ ನಿರ್ಮಿಸುವ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಕಾಂಗ್ರೆಸ್‌ ಅಭಿಪ್ರಾಯ ವ್ಯಕ್ತಪಡಿಸಿದ ವಿಷಯ ನನಗೆ ಗೊತ್ತಿಲ್ಲ. ಇಷ್ಟಕ್ಕೂ ಕಾವೇರಿ ಪ್ರತಿಮೆ ಹಾಗೂ ಡಿಸ್ನಿಲ್ಯಾಂಡ್‌ ಮಾದರಿ ಅಭಿವೃದ್ಧಿ ಇನ್ನೂ ಪ್ರಸ್ತಾವನೆ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಅಗತ್ಯ ಮಾಹಿತಿ ನೀಡುತ್ತೇನೆ ಎಂದು ಹೇಳಿದರು.

ಕಾವೇರಿ ಪ್ರತಿಮೆ ಸ್ಥಾಪನೆಗೆ ಸ್ವಾಗತ: ರವಿ

ರಾಜ್ಯ ಸರ್ಕಾರವು ಕೆಆರ್‌ಎಸ್‌ ಉದ್ಯಾನವನ್ನು ಡಿಸ್ನಿಲ್ಯಾಂಡ್‌ ರೀತಿ ಅಭಿವೃದ್ಧಿಪಡಿಸಲು ಹಾಗೂ ಕಾವೇರಿ ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿರುವುದನ್ನು ಸ್ವಾಗತಿಸುತ್ತೇವೆ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಹೇಳಿದ್ದಾರೆ.

ಕಾಂಗ್ರೆಸ್‌ನವರು ರಾಜಕೀಯ ಕಾರಣಕ್ಕಾಗಿ ಉತ್ತಮ ಕಾರ್ಯಗಳನ್ನು ಟೀಕಿಸುತ್ತಾರೆ. ಆದರೆ ಕೆಆರ್‌ಎಸ್‌ ಅನ್ನು ಡಿಸ್ನಿಲ್ಯಾಂಡ್‌ ಮಾದರಿ ಅಭಿವೃದ್ಧಿಪಡಿಸುವುದರಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಒಳ್ಳೆಯದಾಗಲಿದೆ. ಇದರಿಂದ ಉದ್ಯೋಗ ಸೃಷ್ಟಿಯೂ ಆಗಲಿದೆ. ಹೀಗಾಗಿ ನಾವು ಇದನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು.

click me!