
ಕನ್ನಡಪ್ರಭ ವಾರ್ತೆ, ಬೆಂಗಳೂರು (ಜು.2): ಕರ್ನಾಟಕದಲ್ಲಿ ನಿರ್ಮಾಣ ಕಾಮಗಾರಿಗಳಿಗೆ ದಿಢೀರ್ ಬ್ರೇಕ್ ಬೀಳುವ ಸಾಧ್ಯತೆ ಹೆಚ್ಚಾಗಿದೆ. ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕಲ್ಲು ಗಣಿ ಮತ್ತು ಸ್ಟೋನ್ ಕ್ರಶರ್ ಮಾಲೀಕರ ನಡುವಿನ ರಾಜಧನ ದಂಡ ಜಟಾಪಟಿಯು ತಾರಕಕ್ಕೇರಿದೆ. 2023ರಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (ಕೆಎಸ್‌ಎಎಸ್‌ಎಸಿ) ಮೂಲಕ ನಡೆಸಿದ (ಡಿಜಿಪಿಎಸ್) ಡ್ರೋನ್ ಸಮೀಕ್ಷಾ ವರದಿ ಜಾರಿಗೊಳಿಸಲು ಜರುಗಿಸುತ್ತಿರುವ ಕಠಿಣ ಕ್ರಮಗಳ ವಿರುದ್ಧ ಕಲ್ಲು ಗಣಿ ಹಾಗೂ ಕ್ರಷರ್ ಮಾಲೀಕರು ಹೋರಾಡಲು ತೀರ್ಮಾನಿಸಿದ್ದಾರೆ.
ಡ್ರೋನ್ ಸಮೀಕ್ಷಾ ವರದಿ ಆಧರಿಸಿ ರಾಜ್ಯಾದ್ಯಂತ 2000ಕ್ಕೂ ಹೆಚ್ಚು ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್‌ಗಳಿಂದ ₹4850 ಕೋಟಿ ರಾಜಧನ ದಂಡ ಸಂಗ್ರಹಿಸಲು ನೀಡುತ್ತಿರುವ ಅಂತಿಮ ನೋಟಿಸ್ ವಿರುದ್ಧ ಬಂದ್ ಅಸ್ತ್ರ ಪ್ರಯೋಗಿಸಲು ಕರ್ನಾಟಕ ರಾಜ್ಯ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟ ತೀರ್ಮಾನಿಸಿದೆ. ಕನಿಷ್ಠ ₹2 ಕೋಟಿಯಿಂದ ಹಿಡಿದು ಕೆಲವು ಕಲ್ಲು ಗಣಿಗಳಿಗೆ ₹10 ಕೋಟಿವರೆಗೂ ದಂಡ ಪಾವತಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೋಟಿಸ್ ಜಾರಿ ಮಾಡುತ್ತಿದೆ.
2023ರಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ರಾಜ್ಯದ ಎಲ್ಲಾ ಕಲ್ಲು ಗಣಿ ಮತ್ತು ಕ್ರಷರ್‌ಗಳಲ್ಲಿ 2006ರಿಂದ ಈವರೆಗೆ ನಡೆದಿರುವ ಕಲ್ಲು ಗಣಿಗಾರಿಕೆಯ ಆಳ - ಅಗಲ ಅಳೆಯುವ ಮೂಲಕ ಗಣಿಗಾರಿಕೆ ಪ್ರಮಾಣ ಅಳೆಯುವ ಜವಾಬ್ದಾರಿಯನ್ನು ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರಕ್ಕೆ ನೀಡಿತು. ಅನ್ವಯಿಕ ಕೇಂದ್ರದವರು ಡ್ರೋನ್ ಆಧರಿಸಿದ ಡಿಜಿಪಿಎಸ್ ತಾಂತ್ರಿಕತೆ ಬಳಸಿ ಕಲ್ಲು ಗಣಿ ಕ್ವಾರಿಗಳು, ಕ್ರಷರ್‌ಗಳ ಸಮೀಕ್ಷೆ ನಡೆಸಿತು. ಅಲ್ಲಿ ತನಕ ಸದರಿ ಗಣಿ ಸಲ್ಲಿಸಿರುವ ಗಣಿಗಾರಿಕೆಯ ಲೆಕ್ಕ, ಪಾವತಿಸಿರುವ ರಾಜಧನಕ್ಕೂ ನಡೆದಿರುವ ಗಣಿಗಾರಿಕೆಗೂ ಇರುವ ವ್ಯತ್ಯಾಸವನ್ನು ಲೆಕ್ಕ ಹಾಕಿ ವರದಿ ನೀಡಿದರು. ಸರ್ಕಾರಕ್ಕೆ ತಪ್ಪು ಲೆಕ್ಕ ನೀಡಿ ತಪ್ಪಿಸಿರುವ ರಾಜಧನ ವಸೂಲಿ ಮಾಡಲು ಈಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಟ್ಟು ನಿಟ್ಟಿನ ನೋಟಿಸ್ ಜಾರಿ ಮಾಡುತ್ತಿದೆ. ರಾಜಧನ ದಂಡ ವಸೂಲಿಗಾಗಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಿದ್ಧತೆ ನಡೆಸುತ್ತಿದೆ.
ಡ್ರೋನ್ ಮತ್ತು ಉಪಗ್ರಹ ಆಧರಿಸಿ ಮಾಡಿದ್ದೇವೆ ಎನ್ನುತ್ತಿರುವ ಸಮೀಕ್ಷೆಯೇ ಬೋಗಸ್. ಇದು ವೈಜ್ಞಾನಿಕವಲ್ಲ. ಆಳ ಅಗಲ ಅಳೆದು ಕಲ್ಲು ಉತ್ಪಾದನೆ ಅಳೆಯಲಾಗದು. ಎಷ್ಟೋ ಬಾರಿ ಕಲ್ಲು ಟೊಳ್ಳು ಇರುತ್ತದೆ. ಮಣ್ಣು ಮಿಶ್ರಿತ ಕೆಟ್ಟ ಕಲ್ಲೂ ಸಿಗುತ್ತದೆ. ಇದೆಲ್ಲ ನಷ್ಟವನ್ನು ಯಾರ ಬಳಿ ಹೇಳೋದು. ಜೊತೆಗೆ ರಾಜಧನ ಕಟ್ಟಿಸಿಕೊಳ್ಳುವ ವ್ಯವಸ್ಥೆಯಲ್ಲೂ ದೋಷವಿದೆ. ಇದನ್ನೆಲ್ಲ ಕೇಳಿಸಿಕೊಳ್ಳಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸಿದ್ಧರಿಲ್ಲ. ಹೀಗಾಗಿ ಹೋರಾಟ ಒಂದೇ ನಮಗಿರುವ ದಾರಿ ಎಂದು ಕರ್ನಾಟಕ ರಾಜ್ಯ ಕಲ್ಲು ಗಣಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟದ ಅಧ್ಯಕ್ಷ ಸಿದ್ದರಾಜು ಅವರು ‘ಕನ್ನಡಪ್ರಭ’ಕ್ಕೆ ವಿವರಿಸಿದರು.
17 ವರ್ಷದ ರಾಜಧನ ದಂಡವನ್ನು ಒಂದೇ ಬಾರಿ ಕಟ್ಟಿ ಎಂದು ಹೇಳುತ್ತಿದ್ದಾರೆ. ಸರ್ಕಾರಿ ಇಲಾಖೆಗಳ ಕಾಮಗಾರಿಗಳಿಗೆ ನೀಡುವ ಕಲ್ಲು ಗಣಿ ಉತ್ಪನ್ನಗಳಿಗೆ ಸರ್ಕಾರದ ಗುತ್ತಿಗೆದಾರರ ಬಿಲ್ ಪಾವತಿ ವೇಳೆ ರಾಜಧನ ಮುರಿದುಕೊಳ್ಳುತ್ತಾರೆ. ಆದರೆ, ಇದನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಲೆಕ್ಕಕ್ಕೇ ತೆಗೆದುಕೊಳ್ಳುತ್ತಿಲ್ಲ. ರಾಜಧನ ಪಾವತಿಗೆ ಎಲ್ಲಕ್ಕೂ ಒಂದೇ ವ್ಯವಸ್ಥೆ ಮಾಡಿ ಎಂದರೆ ಇಲಾಖೆ ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಿ.ಎಸ್. ಭಾಸ್ಕರ್ ಹಾಗೂ ಸಂಘಟನಾ ಕಾರ್ಯದರ್ಶಿ ಕೆ.ವಿ ಚೌಧರಿ ಹೇಳಿದರು.
ಈಗಾಗಲೇ ಕಲ್ಲು ಗಣಿ ಮತ್ತು ಕ್ರಷರ್ ಬಂದ್ ಮಾಡಿ ಪ್ರತಿಭಟಿಸಲು ಒತ್ತಡ ಬರುತ್ತಿದೆ. ಹೀಗಾಗಿ ಒಕ್ಕೂಟದ ಪದಾಧಿಕಾರಿಗಳು ಎಲ್ಲಾ ಜಿಲ್ಲೆಗಳ ಕಲ್ಲು ಗಣಿ ಮಾಲೀಕರನ್ನು ಸಂಪರ್ಕಿಸಿ ಸಭೆಗೆ ದಿನ ನಿಗದಿ ಮಾಡುತ್ತಿದ್ದೇವೆ. ಸಭೆಯಲ್ಲಿ ಅನಿರ್ದಿಷ್ಟಾವಧಿ ಬಂದ್ ಮಾಡುವ ನಿರ್ಣಯ ಕೈಗೊಳ್ಳಲಿದ್ದೇವೆ. ಕಲ್ಲು ಗಣಿಗಾರಿಕೆ ನಂಬಿ 4 ಲಕ್ಷ ಕುಟುಂಬಗಳು ಬದುಕುತ್ತಿವೆ. ನಾವು ನೀಡುವ ಉತ್ಪನ್ನಗಳನ್ನು ಆಧರಿಸಿಯೇ ನಡೆಯುವ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿಸಿಕೊಂಡವರಿಂದಲೂ ಬೆಂಬಲ ಕೇಳಿದ್ದೇವೆ ಎಂದು ಪ್ರಧಾನ ಕಾರ್ಯದರ್ಶಿ ಸಿ.ಎಸ್. ಭಾಸ್ಕರ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ