ಕನ್ನಡ ನಾಡಿನ ಜೀವನದಿ ಕಾವೇರಿ.. ಕೆಆರ್‌ಎಸ್‌ ಜಲಾಶಯ ಬಹುತೇಕ ಭರ್ತಿ

Published : Jul 28, 2023, 11:07 AM ISTUpdated : Jul 28, 2023, 11:15 AM IST
ಕನ್ನಡ ನಾಡಿನ ಜೀವನದಿ ಕಾವೇರಿ.. ಕೆಆರ್‌ಎಸ್‌ ಜಲಾಶಯ ಬಹುತೇಕ ಭರ್ತಿ

ಸಾರಾಂಶ

ಕನ್ನಡ ನಾಡಿನ ಜೀವನದಿ ಆಗಿರುವ ಕಾವೇರಿ ನದಿಯಲ್ಲಿ ನೀರು ಭೋರ್ಗರೆದು ಹರಿಯುತ್ತಿದ್ದು, ಕೃಷ್ಣರಾಜಸಾಗರ (ಕೆಆರ್‌ಎಸ್‌) ಜಲಾಶಯ ಬಹುತೇಕ ಭರ್ತಿಯಾಗಿದೆ.

ಮಂಡ್ಯ (ಜು.28): ಕನ್ನಡ ನಾಡಿನ ಜನರ ಜೀವನಾಡಿ ಆಗಿರುವ ಕಾವೇರಿ ನದಿಗೆ ನಿರ್ಮಿಸಲಾದ ದೊಡ್ಡ ಜಲಾಶಯವಾದ ಕೃಷ್ಣರಾಜ ಸಾಗರ ಜಲಾಶಯ (KRS Dam) 110 ಅಡಿ ಭರ್ತಿಯಾಗಿದೆ. ಅಂದರೆ ಒಟ್ಟು 124 ಅಡಿ ಜಲಾಶಯದಲ್ಲಿ ಇನ್ನು 14 ಅಡಿಗಳು ಮಾತ್ರ ಬಾಕಿಯಿದೆ. ಇನ್ನು ಕೊಡಗು ಭಾಗದಲ್ಲಿ ಮಳೆ ಸುರಿಯುತ್ತಿದ್ದು, ಹಾರಂಗಿ ಜಲಾಶಯದ ನೀರನ್ನು ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದು, ಬಹುತೇಕ ಭರ್ತಿಯಾಗಲಿದೆ ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಜಲಾಶಯವು ಮಂಡ್ಯ ಜಿಲ್ಲೆಯ ರೈತರ ಜೀವನಾಡಿ ಆಗಿದೆ. ಇನ್ನು ಸುಮಾರು 1.3 ಕೋಟಿ ಜನಸಂಖ್ಯೆಯನ್ನು ಹೊಂದಿರುವ ರಾಜ್ಯದ ರಜಧಾನಿ ಬೆಂಗಳೂರಿನ ಕುಡಿಯುವ ನೀರಿನ ಮೂಲವೂ ಕೆ.ಆರ್‌.ಎಸ್. ಜಲಾಶಯವಾಗಿದೆ. ಈ ಹಿನ್ನೆಲೆಯಲ್ಲಿ ಡ್ಯಾಮ್‌ ಭರ್ತಿಗಾಗಿ ಇಡೀ ನಾಡಿನ ಜನರು ಪ್ರಾರ್ಥನೆ ಮಾಡಿದ್ದರು. ಮುಂಗಾರು ಮಳೆ ವಿಳಂಬವಾಗಿದ್ದರಿಂದ ಜುಲೈ ಎರಡನೇ ವಾರದವರೆಗೂ ಬರಗಾಲ ಕಾರ್ಮೋಡ ಕವಿದಿತ್ತು. ಕೇವಲ 15 ದಿನಗಳ ಹಿಂದೆ ಖಾಲಿ- ಖಾಲಿ ಆಗಿದ್ದ ಜಲಾಶಯ ಜುಲೈ ಅಂತ್ಯದ ವೇಳೆಗೆ ಭರ್ತಿ ಆಗುತ್ತಿದ್ದು, ಮಂಡ್ಯ ರೈತರು ಮತ್ತು ಬೆಂಗಳೂರಿನ ಜನತೆಗೆ ಸಂತಸದಾಯಕವಾದ ವಿಷಯವಾಗಿದೆ. 

ಬತ್ತಿ ಹೋಗಿದ್ದ ಬಸವಸಾಗರ ಜಲಾಶಯಕ್ಕೆ ಬಂತು ಜೀವಕಳೆ: ಕೃ‍ಷ್ಣ ನದಿ ತೀರದಲ್ಲಿ ಪ್ರವಾಹ ಭೀತಿ

ಜಲಾಶಯಕ್ಕೆ 33,566 ಕ್ಯೂಸೆಕ್ ನೀರು‌ ಒಳ ಹರಿವು: ಒಟ್ಟು 124.80 ಗರಿಷ್ಠ ಮಟ್ಟವಿರುವ ಕೆಆರ್‌ಎಸ್‌ ಜಲಾಶಯದಲ್ಲಿ ಶುಕ್ರವಾರ ಬೆಳಗಗ್ಗಿನ ಮಾಹಿತಿ ಅನ್ವಯ 110.82 ಅಡಿ ನೀರು ಭರ್ತಿಯಾಗಿದೆ. ಈ ಮೂಲಕ ಕೆಆರ್‌ಎಸ್‌ ಡ್ಯಾಂ ಭರ್ತಿಗೆ ಇನ್ನೂ 14 ಅಡಿ ಮಾತ್ರ ಬಾಕಿಯಿದೆ. ಈ ಮೂಲಕ ನೀರಿನ ಹಾಹಾಕಾರವನ್ನು ಮಳೆ ದೂರಾಗಿಸಿದೆ. ಒಟ್ಟು 49.452 ಟಿಎಂಸಿ ಸಾಂದ್ರತೆ ಉಳ್ಳ ಕೆಆರ್‌ಎಸ್‌ ಡ್ಯಾಂನಲ್ಲಿ 32.554 ಟಿಎಂಸಿ ನೀರು ಶೇಖರಣೆಯಾಗಿದೆ. ಸದ್ಯ ಡ್ಯಾಂಗೆ 33,566 ಕ್ಯೂಸೆಕ್ ನೀರು‌ ಒಳ ಹರಿವು ಬರುತ್ತಿದೆ. ಜಲಾಶಯದಿಂದ ಮಂಡ್ಯ ಜಿಲ್ಲೆಯ ವಿವಿಧ ನಾಲೆಗಳಿಗೆ (ನೀರು ಕಾಲುವೆಗಳು) 3,106 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. 

ಕೇವಲ 78 ಅಡಿಗೆ ಕುಸಿದಿದ್ದ ಜಲಾಶಯ: ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ವೈಫಲ್ಯದಿಂದ ಜಿಲ್ಲೆಯ ರೈತರು ತೀವ್ರ ಆತಂಕಗೊಂಡಿದ್ದರು. ಕೆಆರ್‌ಎಸ್‌ ಜಲಾಶಯದಲ್ಲೂ ನೀರಿನ ಮಟ್ಟಕುಸಿದಿದ್ದರಿಂದ ಬೆಳೆ ಬೆಳೆಯಲಾಗದ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು. ಕೃಷಿ ಸಚಿವರು ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹೊಸ ಬೆಳೆ ಬೆಳೆಯದಂತೆ ರೈತರಲ್ಲಿ ಮನವಿಯನ್ನೂ ಮಾಡಿದ್ದರು. ಜಲಾಶಯದ ನೀರಿನ ಮಟ್ಟ ಜುಲೈ ಮೊದಲ ವಾರದಲ್ಲಿ 78 ಅಡಿಗೆ ತಲುಪಿದ್ದರಿಂದ ಉತ್ತಮ ಮಳೆಯಾಗಬಹುದೆಂಬ ನಿರೀಕ್ಷೆಯೂ ಹುಸಿಯಾಗಿತ್ತು.

ವಿಜಯಪುರ: ಆಲಮಟ್ಟಿ ಜಲಾಶಯ ತುಂಬೋಕೆ 2 ಮೀ. ಬಾಕಿ

ರೈತರ ಮೊಗದಲ್ಲಿ ಸಂತಸ: ಮುಂಗಾರು ಪೂರ್ವ ಮಳೆ ಕೈಕೊಟ್ಟಿದ್ದರಿಂದ ಬೇಸಿಗೆ ಬೆಳೆಗೆ ಕಟ್ಟುಪದ್ಧತಿಯಲ್ಲಿ ನೀರು ಹರಿಸಿದ್ದರಿಂದ ಜಲಾಶಯದಲ್ಲಿ 3 ಟಿಎಂಸಿ ಅಡಿಯಷ್ಟು ಮಾತ್ರ ನೀರು ಸಂಗ್ರಹಗೊಂಡಿತ್ತು. ಈಗ ಜಲಾಶಯ ಭರ್ತಿಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮುಡಿದೆ. ಇನ್ನು ಸಾಮಾನ್ಯ ವರ್ಷಗಳಂತೆ ಕಬ್ಬು, ಭತ್ತ ಸೇರಿ ಇತ್ಯಾದಿ ಬೆಳೆಗಳನ್ನು ಬೆಳೆಯಲು ಅನುಕೂಲ ಆಗಲಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
ಯಕ್ಷಗಾನ ಕಲಾವಿದರ ಅಪಮಾನ: 'ಬಿಳಿಮಲೆಗೆ ಒಂದು ನೋಟಿಸ್ ಕೊಡೋಕೂ ಕಷ್ಟವೇ? ಸುನೀಲ್ ಕುಮಾರ್ ಪ್ರಶ್ನೆ, ಈ ವಿಷಯ ದೊಡ್ಡದು ಮಾಡೋದು ಬೇಡ ಎಂದ ತಂಗಡಗಿ