
ಬೆಂಗಳೂರು (ಅ.15): ರಾಜ್ಯದ ಶಾಲಾ ಮತ್ತು ಪದವಿ ಪೂರ್ವ ಶಿಕ್ಷಣ ಪರೀಕ್ಷೆಗಳಲ್ಲಿ ದೊಡ್ಡ ಬದಲಾವಣೆಗೆ ಸರ್ಕಾರ ಸಿದ್ಧತೆ ನಡೆಸಿದ್ದು, 2025-26ನೇ ಸಾಲಿನಿಂದಲೇ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ಉತ್ತೀರ್ಣತಾ ಅಂಕವನ್ನು ಶೇ. 35 ರಿಂದ ಶೇ. 33 ಕ್ಕೆ ಇಳಿಕೆ ಮಾಡುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಧಿಕೃತವಾಗಿ ಘೋಷಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಈ ನಿರ್ಧಾರವು ವಿದ್ಯಾರ್ಥಿಗಳ ಉತ್ತೀರ್ಣತಾ ಪ್ರಮಾಣ ಹೆಚ್ಚಿಸುವ ಮತ್ತು ಸಿಬಿಎಸ್‌ಇ ಹಾಗೂ ನೆರೆ ರಾಜ್ಯಗಳ ಏಕರೂಪ ಪದ್ಧತಿಯನ್ನು ರಾಜ್ಯದಲ್ಲಿ ಅಳವಡಿಸುವ ದೃಷ್ಟಿಯಿಂದ ತೆಗೆದುಕೊಳ್ಳಲಾಗಿದೆ.
ಎಸ್‌ಎಸ್‌ಎಲ್‌ಸಿ (SSLC): ಪ್ರಸ್ತುತ 625 ಅಂಕಗಳಿಗೆ ಕನಿಷ್ಟ ಶೇ. 35ರಷ್ಟು (219 ಅಂಕಗಳು) ಗಳಿಸುವುದು ಕಡ್ಡಾಯವಿತ್ತು. ಹೊಸ ನಿಯಮದ ಪ್ರಕಾರ, 625 ಅಂಕಗಳಿಗೆ ಕನಿಷ್ಟ 206 ಅಂಕ (ಶೇ. 33) ಗಳಿಸಿದರೆ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ. ಪ್ರತಿ ವಿಷಯದಲ್ಲಿ ಕಡ್ಡಾಯವಾಗಿ ಕನಿಷ್ಠ 30 ಅಂಕ ಪಡೆಯಲೇಬೇಕು.
ದ್ವಿತೀಯ ಪಿಯುಸಿ (II PUC): 600 ಅಂಕಗಳಿಗೆ ಕನಿಷ್ಟ ಶೇ. 35ರಷ್ಟು (210 ಅಂಕಗಳು) ಪಡೆಯಬೇಕಿತ್ತು. ಹೊಸ ನಿಯಮದಂತೆ, 600 ಅಂಕಗಳಿಗೆ ಕನಿಷ್ಟ 198 ಅಂಕ (ಶೇ. 33) ಪಡೆದರೆ ಪಾಸ್ ಆಗುತ್ತಾರೆ. ಪ್ರತಿ ವಿಷಯದಲ್ಲಿ ಲಿಖಿತ ಮತ್ತು ಆಂತರಿಕ ಅಂಕ ಸೇರಿ 30 ಅಂಕ ಬರುವುದು ಕಡ್ಡಾಯ.
ಪಾಸಿಂಗ್ ಮಾರ್ಕ್ಸ್ ಕಡಿತ ಮಾಡುವ ವಿಚಾರವನ್ನು ಶಾಲಾ ಪರೀಕ್ಷಾ ಮಂಡಳಿ ಕರಡು ಅಧಿಸೂಚನೆ ಮೂಲಕ ಸಾರ್ವಜನಿಕ ಡೊಮೇನ್‌ಗೆ ಹಾಕಿ ಅಭಿಪ್ರಾಯ ಕೇಳಿತ್ತು. ಶೇ. 33ರಷ್ಟು ಅಂಕದ ಪರವಾಗಿ 701 ಪತ್ರಗಳು ಬಂದಿದ್ವು. ಆದರೆ, ಶೇ. 35 ಅಂಕ ಪರವಾಗಿ ಕೇವಲ 8 ಪತ್ರಗಳು ಬಂದಿದ್ದವು. ಹೀಗಾಗಿ ಬಹುಮತದ ಅಭಿಪ್ರಾಯಕ್ಕೆ ಮನ್ನಣೆ ನೀಡಿ 2025-26ನೇ ಸಾಲಿನಿಂದ ಶೇ. 33ರಷ್ಟು ಮಾನದಂಡವನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ, ಎಂದು ಸಚಿವರು ವಿವರಿಸಿದರು.
ಪರೀಕ್ಷಾ ಅವ್ಯವಸ್ಥೆಯನ್ನು ಸುಧಾರಣೆ ತರುವುದು ಮುಖ್ಯವಾಗಿತ್ತು. ಮಕ್ಕಳು ಬೇರೆ ವ್ಯವಸ್ಥೆಯಲ್ಲಿ ಪಾಸ್ ಆದ್ರೆ ಮುಂದೆ ತೊಂದರೆಯಾಗುತ್ತೆ. ಹೀಗಾಗಿ ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷೆ ನಡೆಸಲಾಯಿತು. ಮೂರು ಬೋರ್ಡ್ ಪರೀಕ್ಷೆಗಳು ಉತ್ತಮ ಪರಿಣಾಮ ಬೀರಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಸಿಎಂ ನೀಡಿದ ಶೇ. 75ರಷ್ಟು ಗುರಿಯ ಬದಲಿಗೆ ಈ ವರ್ಷ ಶೇ. 79ರಷ್ಟು ತೇರ್ಗಡೆ ಪ್ರಮಾಣ ರೀಚ್ ಆಗಲು ಸಾಧ್ಯವಾಯಿತು. ವೆಬ್ ಕಾಸ್ಟಿಂಗ್‌ನಿಂದ ಪರೀಕ್ಷೆಗಳು ಕಟ್ಟುನಿಟ್ಟು ಆಗಿದ್ದು, ಯಾವುದೇ ಲೋಪದೋಷಗಳಿಲ್ಲದೆ ನಡೆದಿದೆ ಎಂದು ಸಚಿವರು ತಿಳಿಸಿದರು.
ಆದರೆ, ಪ್ರಥಮ ಭಾಷೆಯ ಗರಿಷ್ಠ ಅಂಕವನ್ನು 125 ರಿಂದ 100 ಕ್ಕೆ ಇಳಿಸುವ ವಿಚಾರ ಇನ್ನೂ ಅಂತಿಮ ಆಗಿಲ್ಲ. ಈ ಕುರಿತು ಸಾರ್ವಜನಿಕರ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತೇವೆ ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಹಾಗೂ ನೂತನ ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ