ಶಾಲೆಗಳಲ್ಲಿ ಇನ್ನುಮುಂದೆ ‘ವಾಟ್ಸಾಪ್ ಹೋಂವರ್ಕ್’ ಬಂದ್! ಶಿಕ್ಷಣ ಇಲಾಖೆಗೆ ‘ಮಕ್ಕಳ ಹಕ್ಕುಗಳ ಆಯೋಗ’ದ ಖಡಕ್ ಸೂಚನೆ

Published : Mar 24, 2026, 04:32 PM IST
Karnataka govt children Social Media Ban Update

ಸಾರಾಂಶ

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು, ಮಕ್ಕಳ ಮೇಲೆ ಆಗುತ್ತಿರುವ ಡಿಜಿಟಲ್ ದುಷ್ಪರಿಣಾಮಗಳನ್ನು ತಡೆಯಲು ಶಾಲೆಗಳಲ್ಲಿ ವಾಟ್ಸಾಪ್ ಮೂಲಕ ಹೋಂವರ್ಕ್ ನೀಡುವುದನ್ನು ನಿಷೇಧಿಸಿದೆ. ಹೋಂವರ್ಕ್‌ಗಾಗಿ ಶಾಲಾ ಡೈರಿ ಬಳಕೆಯನ್ನು ಕಡ್ಡಾಯಗೊಳಿಸಿದೆ.

ಬೆಂಗಳೂರು (ಮಾ.24): ಆಧುನಿಕ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (KSCPCR) ಶಾಲಾ ಮಕ್ಕಳ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಶಾಲೆಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ನಿಷೇಧಿಸುವಂತೆ ಮತ್ತು ಪ್ರಮುಖವಾಗಿ ‘ವಾಟ್ಸಾಪ್ ಮೂಲಕ ಹೋಂವರ್ಕ್’ ನೀಡುವ ಪದ್ಧತಿಯನ್ನು ತಕ್ಷಣವೇ ನಿಲ್ಲಿಸುವಂತೆ ಶಿಕ್ಷಣ ಇಲಾಖೆಗೆ ಖಡಕ್ ಸೂಚನೆ ನೀಡಿದೆ.

ವಾಟ್ಸಾಪ್ ಹೋಂವರ್ಕ್ ಪದ್ಧತಿಗೆ ಬ್ರೇಕ್:

ಕೊರೊನಾ ನಂತರದ ದಿನಗಳಲ್ಲಿ ಶಾಲೆಗಳಲ್ಲಿ ವಾಟ್ಸಾಪ್ ಮೂಲಕ ಹೋಂವರ್ಕ್ ನೀಡುವುದು ಮತ್ತು ಶಾಲಾ ಪ್ರಕಟಣೆಗಳನ್ನು ಹಂಚಿಕೊಳ್ಳುವುದು ಅತಿ ಸಾಮಾನ್ಯವಾಗಿದೆ. ಆದರೆ, ಇದು ಮಕ್ಕಳನ್ನು ಮೊಬೈಲ್‌ಗೆ ದಾಸರನ್ನಾಗಿಸುತ್ತಿದೆ ಎಂದು ಆಯೋಗ ಕಳವಳ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ, ಹೋಂವರ್ಕ್ ನೀಡಲು ಮೊಬೈಲ್ ಅಥವಾ ವಾಟ್ಸಾಪ್ ಅನ್ನು ಮೂಲ ಸಾಧನವಾಗಿ ಬಳಸುವುದನ್ನು ನಿಷೇಧಿಸಬೇಕು ಎಂದು ಆಯೋಗವು ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದೆ.

ಡೈರಿ ಬರವಣಿಗೆಗೆ ಆದ್ಯತೆ:

ಪ್ರತಿ ವಿದ್ಯಾರ್ಥಿಯು ಶಾಲೆಯಲ್ಲಿ ನೀಡುವ ಮನೆಕೆಲಸವನ್ನು (Homework) ಕಡ್ಡಾಯವಾಗಿ ಶಾಲಾ ಡೈರಿಯಲ್ಲಿಯೇ ಬರೆದುಕೊಳ್ಳಬೇಕು. ಶಿಕ್ಷಕರು ಕೂಡ ಡೈರಿ, ಪಠ್ಯಪುಸ್ತಕ ಮತ್ತು ನೇರ ಬೋಧನಾ ವಿಧಾನಗಳನ್ನೇ ಪ್ರಮುಖವಾಗಿ ಬಳಸಬೇಕು. ತುರ್ತು ಮಾಹಿತಿ ಅಥವಾ ಸಾಮಾನ್ಯ ಶೈಕ್ಷಣಿಕ ಸೂಚನೆಗಳಿಗೆ ಮಾತ್ರ ವಾಟ್ಸಾಪ್ ಗ್ರೂಪ್‌ಗಳನ್ನು ಸೀಮಿತಗೊಳಿಸಬೇಕು ಎಂದು ಸೂಚಿಸಲಾಗಿದೆ.

ಡಿಜಿಟಲ್ ಸುರಕ್ಷತೆ ಮತ್ತು ಫೋಟೋಗಳ ಹಂಚಿಕೆ:

ಇತ್ತೀಚಿನ ದಿನಗಳಲ್ಲಿ ಶಾಲೆಗಳು ಮಕ್ಕಳ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಕ್ಕಾಗಿ ಬಳಸುತ್ತಿವೆ. ಇನ್ನು ಮುಂದೆ ಮಕ್ಕಳ ಯಾವುದೇ ಫೋಟೋ ಅಥವಾ ವಿಡಿಯೋಗಳನ್ನು ಡಿಜಿಟಲ್ ವೇದಿಕೆಗಳಲ್ಲಿ ಹಂಚಿಕೊಳ್ಳುವ ಮೊದಲು ಪೋಷಕರ 'ಪೂರ್ವ ಲಿಖಿತ ಅನುಮತಿ' ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಅಲ್ಲದೆ, ವಾಟ್ಸಾಪ್ ಗುಂಪುಗಳಲ್ಲಿ ಮಕ್ಕಳ ವೈಯಕ್ತಿಕ ವಿಡಿಯೋಗಳನ್ನು ಹಂಚಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಲು ಶಿಫಾರಸು ಮಾಡಲಾಗಿದೆ.

ಪೋಷಕರ ಸಭೆಯಲ್ಲಿ ಜಾಗೃತಿ:

ಶಾಲೆಗಳು ಕೇವಲ ಶೈಕ್ಷಣಿಕ ಪ್ರಗತಿಯ ಬಗ್ಗೆ ಮಾತ್ರವಲ್ಲದೆ, ಮಕ್ಕಳ ‘ಸ್ಕ್ರೀನ್ ಟೈಮ್’ (Screen Time) ನಿಂದ ಆಗುವ ದುಷ್ಪರಿಣಾಮಗಳ ಬಗ್ಗೆಯೂ ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು. ಪೋಷಕರ ಸಭೆಗಳಲ್ಲಿ ಡಿಜಿಟಲ್ ಸುರಕ್ಷತೆ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಆಯೋಗ ತಿಳಿಸಿದೆ.

ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ:

ಈ ಮಾರ್ಗಸೂಚಿಗಳ ಅನುಷ್ಠಾನದ ಜವಾಬ್ದಾರಿಯನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದ ಶಿಕ್ಷಣಾಧಿಕಾರಿಗಳಿಗೆ ನೀಡಲಾಗಿದೆ. ಅಧಿಕಾರಿಗಳು ನಿಯಮಿತವಾಗಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಒಂದು ವೇಳೆ ಯಾವುದೇ ಶಾಲೆ ಈ ನಿಯಮಗಳನ್ನು ಉಲ್ಲಂಘಿಸಿ ಮಕ್ಕಳನ್ನು ಡಿಜಿಟಲ್ ಗುಲಾಮಗಿರಿಗೆ ತಳ್ಳುತ್ತಿರುವುದು ಕಂಡುಬಂದಲ್ಲಿ, ಅಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಯೋಗ ಸೂಚಿಸಿದೆ. ಈ ಕುರಿತು ಕೈಗೊಂಡ ಕ್ರಮಗಳ ವರದಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

ಈ ಶಿಫಾರಸುಗಳು ಜಾರಿಗೆ ಬಂದಲ್ಲಿ, ಮಕ್ಕಳು ಮೊಬೈಲ್ ಫೋನ್‌ಗಳಿಂದ ದೂರವಿದ್ದು, ಸಾಂಪ್ರದಾಯಿಕ ಕಲಿಕಾ ಪದ್ಧತಿಗೆ ಮರಳಲು ಸಹಕಾರಿಯಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಧಾರವಾಡ: ಮಾಜಿ ಶಾಸಕರ ಪುತ್ರನನ್ನು ಕಾರಿನಲ್ಲೇ ಸುಟ್ಟು ಹಾಕಿದ ದುಷ್ಕರ್ಮಿಗಳು!
ಮೈಸೂರು ಮಹಾರಾಜ ಯದುವೀರ್ ಒಡೆಯರ್ ಹುಟ್ಟುಹಬ್ಬ: ಬೆಸ್ಟ್ ಫ್ರೆಂಡ್’ಗೆ ಪತ್ನಿಯಿಂದ ಸ್ಪೆಷಲ್ ವಿಶ್