ಜ್ಞಾನಪೀಠ, ಭಾರತ ರತ್ನ ಪುರಸ್ಕೃತರ ಹುಟ್ಟೂರಿಗೆ ಕೋಟಿ ಭಾಗ್ಯ: ರಾಜ್ಯೋತ್ಸವದಂದು ಪ್ರಿಯಾಂಕ್ ಖರ್ಗೆ ಘೋಷಣೆ

Published : Nov 01, 2025, 11:35 AM IST
priyank kharge

ಸಾರಾಂಶ

ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ, ಜ್ಞಾನಪೀಠ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತರ ಹುಟ್ಟೂರುಗಳ ಸರ್ವತೋಮುಖ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ತಲಾ ಒಂದು ಕೋಟಿ ರೂಪಾಯಿ ವಿಶೇಷ ಅನುದಾನ ಘೋಷಿಸಿದೆ. ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಯವರು ಈ ಘೋಷಣೆ ಮಾಡಿದ್ದಾರೆ.

ಕಲಬುರಗಿ (ನ.01): ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ರಾಜ್ಯ ಸರ್ಕಾರವು ನಾಡಿನ ಸಾಹಿತ್ಯ ಮತ್ತು ರಾಷ್ಟ್ರಕ್ಕೆ ಮಹತ್ತರ ಕೊಡುಗೆ ನೀಡಿದ ಮಹನೀಯರ ಹುಟ್ಟೂರಿಗೆ ವಿಶೇಷ ನೆರವು ಘೋಷಿಸಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹಾಗೂ ಭಾರತ ರತ್ನ ಗೌರವ ಪಡೆದ ಕನ್ನಡಿಗರ ಹುಟ್ಟೂರುಗಳ ಸರ್ವತೋಮುಖ ಅಭಿವೃದ್ಧಿಗಾಗಿ ತಲಾ ಒಂದು ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಒದಗಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ಧರಿಸಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿಯಲ್ಲಿ ಶನಿವಾರ ಘೋಷಿಸಿದರು.

ಈ ಮಹತ್ವದ ಯೋಜನೆಯನ್ನು ರಾಜ್ಯೋತ್ಸವದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಜ್ಞಾನಪೀಠ ಪ್ರಶಸ್ತಿಯು ಭಾರತದ ಅತ್ಯುನ್ನತ ಸಾಹಿತ್ಯ ಗೌರವವಾಗಿದ್ದರೆ, ಭಾರತ ರತ್ನವು ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾಗಿದೆ. ಇಂತಹ ಪ್ರಶಸ್ತಿಗಳನ್ನು ಪಡೆದ ಮಹಾನ್ ವ್ಯಕ್ತಿಗಳ ನಾಡಿಗೆ ಸಣ್ಣದೊಂದು ಕಾಣಿಕೆ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ಯಾವೆಲ್ಲಾ ಕ್ಷೇತ್ರಗಳಿಗೆ ಅನುದಾನ?

ಪ್ರಕಟಿಸಿದ ಒಂದು ಕೋಟಿ ರೂಪಾಯಿ ಅನುದಾನವನ್ನು ಆಯಾ ಗ್ರಾಮಗಳ ನಿರ್ದಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಬಳಸಿಕೊಳ್ಳಲು ಗ್ರಾಮ ಪಂಚಾಯಿತಿಗಳಿಗೆ ಅವಕಾಶ ನೀಡಲಾಗುತ್ತದೆ. ಕುಡಿಯುವ ನೀರಿನ ಸಮಸ್ಯೆ, ರಸ್ತೆಗಳ ಅಭಿವೃದ್ಧಿ, ಒಳಚರಂಡಿ ವ್ಯವಸ್ಥೆ, ಸಮುದಾಯ ಭವನಗಳ ನಿರ್ಮಾಣ, ಮತ್ತು ಗ್ರಾಮದ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಈ ನಿಧಿಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಮಾಸ್ತಿ ವೆಂಕಟೇಶ ಅಯ್ಯಂಗಾರ್ ನೆನಪು:

ಇತ್ತೀಚೆಗೆ ತಮಗೆ ಮಹಾಕವಿ ಕುವೆಂಪು, ಜ್ಞಾನಪೀಠ ಪುರಸ್ಕೃತ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಹುಟ್ಟೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿನ ಜನರ ಮೂಲಭೂತ ಸೌಕರ್ಯಗಳ ಕೊರತೆಯನ್ನು ಸ್ವತಃ ಗಮನಿಸಿದ್ದೆ. ಸಾಹಿತಿಗಳ ನಾಡಿನ ಬಗ್ಗೆ ನಮ್ಮ ಇಲಾಖೆಯಿಂದ ಒಂದು ಸಣ್ಣ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಯಿತು ಎಂದು ಸಚಿವ ಪ್ರೀಯಾಂಕ್ ಖರ್ಗೆ ವಿವರಿಸಿದರು.

ಅನುದಾನ ಹೆಚ್ಚಳದ ಭರವಸೆ:

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಪ್ರಸ್ತುತ ಘೋಷಿಸಲಾದ ಒಂದು ಕೋಟಿ ರೂಪಾಯಿ ಅನುದಾನವು ಆರಂಭಿಕ ಕೊಡುಗೆಯಾಗಿದೆ ಎಂದು ತಿಳಿಸಿದರು. ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಈಗಾಗಲೇ ಚರ್ಚೆ ನಡೆಸಿದ್ದು, ಭವಿಷ್ಯದ ದಿನಗಳಲ್ಲಿ ಈ ಮಹನೀಯರ ಹುಟ್ಟೂರುಗಳ ಅಭಿವೃದ್ಧಿಗಾಗಿ ಅನುದಾನದ ಪ್ರಮಾಣವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.

ರಾಜ್ಯದ ಸಾಹಿತ್ಯ ಹಾಗೂ ದೇಶದ ಸೇವೆಗೆ ಮಹೋನ್ನತ ಕೊಡುಗೆ ನೀಡಿದ ವ್ಯಕ್ತಿಗಳ ನಾಡನ್ನು ಅಭಿವೃದ್ಧಿ ಪಡಿಸುವ ಸರ್ಕಾರದ ಈ ನಿರ್ಧಾರವು ನಾಡಿನ ಜನತೆಯಲ್ಲಿ ಸಂತಸವನ್ನು ಮೂಡಿಸಿದೆ. ರಾಜ್ಯೋತ್ಸವದ ಸಂದರ್ಭದಲ್ಲಿ ಬಂದ ಈ ಘೋಷಣೆಯು, ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ಸರ್ಕಾರದ ಬದ್ಧತೆಯನ್ನು ಎತ್ತಿ ತೋರಿಸಿದೆ ಎಂದು ರಾಜಕೀಯ ವಲಯಗಳು ಅಭಿಪ್ರಾಯಪಟ್ಟಿವೆ. ಈ ಯೋಜನೆಯ ಅನುಷ್ಠಾನ ಕುರಿತು ಗ್ರಾಮೀಣಾಭಿವೃದ್ಧಿ ಇಲಾಖೆ ಶೀಘ್ರದಲ್ಲೇ ಸುತ್ತೋಲೆ ಹೊರಡಿಸಲಿದೆ ಎಂದು ತಿಳಿದುಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ರಸ್ತೆ-ಚರಂಡಿ ನಿರ್ಮಾಣದಿಂದ ಬಡವರು ಉದ್ದಾರ ಆಗ್ತಾರಾ?' ಗ್ಯಾರಂಟಿ ಸ್ಕೀಂ ಟೀಕಿಸಿದ ವಿಪಕ್ಷಗಳಿಗೆ ಗೃಹಸಚಿವ ಪರಂ ತಿರುಗೇಟು!
ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ, ದಾವಣಗೆರೆ ವ್ಯಾಪ್ತಿಯ ಶಾಲೆಗಳಿಗೆ ನಾಳೆ ರಜೆ