ರಾಜ್ಯದಲ್ಲಿ ಸಾವಿನ ಸಂಖ್ಯೆ ಭಾರಿ ಏರಿಕೆ: ನಿನ್ನೆ 39 ಬಲಿ!

By Kannadaprabha NewsFirst Published Apr 7, 2021, 7:23 AM IST
Highlights

ರಾಜ್ಯದಲ್ಲಿ ಸಾವಿನ ಸಂಖ್ಯೆ ಭಾರಿ ಏರಿಕೆ: ನಿನ್ನೆ 39 ಬಲಿ| ಒಂದೇ ದಿನ 6150 ಕೊರೋನಾ ಕೇಸು ದಾಖಲು| ಸೋಂಕು 168 ದಿನ, ಸಾವು 158 ದಿನದ ದಾಖಲೆ

ಬೆಂಗಳೂರು(ಏ.07): ನಿತ್ಯದ ಕೋವಿಡ್‌-19 ಸೋಂಕು ಹಾಗೂ ಸಾವಿನ ಸಂಖ್ಯೆಯಲ್ಲಿ ಮಂಗಳವಾರ ತೀವ್ರತರದ ಏರಿಕೆ ದಾಖಲಾಗಿದೆ. ಒಂದೇ ರಾಜ್ಯದಲ್ಲಿ 6,150 ಪ್ರಕರಣ ದಾಖಲಾಗಿದ್ದು, 168 ದಿನಗಳ ಬಳಿಕ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ 6 ಸಾವಿರ ದಾಟಿದೆ. ಈ ಮಧ್ಯೆ ಕೋವಿಡ್‌ನಿಂದಾಗಿ 39 ಮಂದಿ ಮರಣವನ್ನಪ್ಪಿದ್ದಾರೆ. ಇದೂ ಕೂಡ 158 ದಿನದ ದಾಖಲೆ.

ರಾಜ್ಯದಲ್ಲಿ ಕಳೆದ ಭಾನುವಾರ (ಏ.4) ರಂದು 4,553, ಸೋಮವಾರ (ಏ.5ಕ್ಕೆ) 5,279 ಸೋಂಕು ವರದಿಯಾಗಿತ್ತು. ಈ ಸಂಖ್ಯೆ ಮಂಗಳವಾರಕ್ಕೆ 6150ಕ್ಕೆ ಮುಟ್ಟಿದೆ.

ರಾಜ್ಯದಲ್ಲಿ ಈ ಹಿಂದೆ ನಿತ್ಯದ ಸೋಂಕಿನ ಇಷ್ಟೊಂದು ಪ್ರಕರಣ ವರದಿಯಾಗಿದ್ದು ಅಕ್ಟೋಬರ್‌ 20. ಅಂದು 6,297 ಪ್ರಕರಣ ವರದಿಯಾಗಿದ್ದವು. ಅಲ್ಲಿಂದ ಇಳಿಕೆ ಗತಿಯಲ್ಲಿ ಸಾಗಿದ್ದ ಕೋವಿಡ್‌ ಪ್ರಕರಣಗಳು ಮಾಚ್‌ರ್‍ 1ಕ್ಕೆ 349 ಇಳಿದಿತ್ತು. ಇದಾಗಿ ಒಂದು ಮಾಸದಲ್ಲೇ ಸೋಂಕು ಮತ್ತೆ ಆರು ಸಾವಿರ ಗಡಿ ದಾಟಿದೆ.

ಇದರ ಜತೆಗೆ ಸಾವಿನ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಮಂಗಳವಾರ 39 ಮಂದಿ ಮೃತಪಟ್ಟಿದ್ದು, ಅಕ್ಟೋಬರ್‌ 30ರ (49 ಸಾವು) ಬಳಿಕ ಏಕದಿನದ ಅತ್ಯಧಿಕ ಸಾವಿನ ಪ್ರಕರಣ ದಾಖಲಾಗಿದೆ. ಉಳಿದಂತೆ 3,487 ಮಂದಿ ಗುಣಮುಖರಾಗಿದ್ದು 45,107 ಸಕ್ರಿಯ ಪ್ರಕರಣಗಳಿವೆ. 351 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಗಳೂರಲ್ಲೇ ಸಾವು, ಸೋಂಕು ಅಧಿಕ:

ಬೆಂಗಳೂರು ನಗರವೊಂದರಲ್ಲೇ 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೈಸೂರು ಮತ್ತು ಧಾರವಾಡದಲ್ಲಿ ತಲಾ ಮೂವರು, ಕಲಬುರಗಿಯಲ್ಲಿ ಇಬ್ಬರು, ಮಂಡ್ಯ, ಕೋಲಾರ, ಬೀದರ್‌, ಬೆಂಗಳೂರು ಗ್ರಾಮಾಂತರ ಮತ್ತು ಬಳ್ಳಾರಿಯಲ್ಲಿ ತಲಾ ಒಬ್ಬರು ಮರಣವನ್ನಪ್ಪಿದ್ದಾರೆ.

ಬೆಂಗಳೂರು ನಗರದಲ್ಲಿ 4,266, ಕಲಬುರಗಿ 261, ಮೈಸೂರು 237, ಬೀದರ್‌ 167 ಹಾಸನ 110, ಮಂಡ್ಯ ಜಿಲ್ಲೆಯಲ್ಲಿ 102 ಪ್ರಕರಣ ವರದಿಯಾಗಿದೆ. ರಾಜ್ಯದೆಲ್ಲೆಡೆ ಕೋವಿಡ್‌ ರಣ ಕೇಕೆ ಹಾಕುತ್ತಿದ್ದರೂ ಹಾವೇರಿ ಮತ್ತು ಚಾಮರಾಜನಗರದಲ್ಲಿ ತಲಾ 5 ಪ್ರಕರಣ ಮಾತ್ರ ವರದಿಯಾಗಿದೆ.

ಮರಣವನ್ನಪ್ಪಿದ್ದ ಬಹುತೇಕರಲ್ಲಿ ಕೋವಿಡ್‌ನ ಗುಣಲಕ್ಷಣಗಳಾದ ಉಸಿರಾಟದ ತೊಂದರೆ, ಕಫ, ಜ್ವರ ಇತ್ತು.

ರಾಜ್ಯದಲ್ಲಿ ಈವರೆಗೆ ಒಟ್ಟು 10.26 ಲಕ್ಷ ಮಂದಿಯಲ್ಲಿ ಕೋವಿಡ್‌ ಧೃಢಪಟ್ಟಿದ್ದು ಈ ಪೈಕಿ 9.68 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಮರಣವನ್ನಪ್ಪಿದವರ ಒಟ್ಟು ಸಂಖ್ಯೆ 12,696ಕ್ಕೆ ತಲುಪಿದೆ.

ಪಾಸಿಟಿವಿಟಿ ದರ 6%ಗೆ ಏರಿಕೆ!

ಮಂಗಳವಾರ ರಾಜ್ಯಾದ್ಯಂತ 1.02 ಲಕ್ಷ ಕೋವಿಡ್‌ ಪರೀಕ್ಷೆ ನಡೆದಿದೆ. ಈ ಪೈಕಿ 6150 ಜನರಲ್ಲಿ ಸೋಂಕು ದೃಢಪಟ್ಟಿದೆ. ಹೀಗಾಗಿ ಪಾಸಿಟಿವಿಟಿ ದರ ಶೇ.6.02 ಆದಂತಾಗಿದೆ. ಮಾಚ್‌ರ್‍ ಮೊದಲ ವಾರ ಪಾಸಿಟಿವಿಟಿ ದರ ಕೇವಲ ಶೇ.0.7 ಇತ್ತು. ಇದು ಈಗ ಒಂದೇ ತಿಂಗಳಲ್ಲಿ ಸುಮಾರು 6 ಪಟ್ಟು ಹೆಚ್ಚಳ ಆಗಿರುವುದು ಆತಂಕಕಾರಿಯಾಗಿದೆ.

click me!