ರಾಜ್ಯದಲ್ಲಿ ಮತ್ತೆರಡು ಬಲಿ| ಬೆಂಗಳೂರಲ್ಲಿ ವೃದ್ಧ ಸಾವು| ವಿಜಯಪುರದಲ್ಲಿ ಮೃತ ವ್ಯಕ್ತಿಗೆ ಸೋಂಕು ದೃಢ| ಸಾವಿನ ಸಂಖ್ಯೆ 10ಕ್ಕೇರಿಕೆ| ಮತ್ತೆ 13 ಜನಕ್ಕೆ ವೈರಸ್| 260ಕ್ಕೇರಿದ ಸೋಂಕಿತರು
ಬೆಂಗಳೂರು(ಏ.15): ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತ ಮತ್ತೊಬ್ಬ ವೃದ್ಧ ಮಂಗಳವಾರ ಮೃತಪಟ್ಟಿದ್ದಾರೆ. ಜೊತೆಗೆ ವಿಜಯಪುರದಲ್ಲಿ ಭಾನುವಾರ ಸಂಭವಿಸಿದ್ದ 69 ವರ್ಷದ ವೃದ್ಧನ ಸಾವಿಗೆ ಕೊರೋನಾ ಸೋಂಕು ತಗುಲಿದ್ದೇ ಕಾರಣ ಎಂಬುದು ದೃಢಪಟ್ಟಿದೆ. ಹೀಗಾಗಿ, ಮೃತರ ಸಂಖ್ಯೆ 10ಕ್ಕೆ ಏರಿದೆ.
ಇದೇ ವೇಳೆ ರಾಜ್ಯದಲ್ಲಿ ಮಂಗಳವಾರ ಮತ್ತೆ 13 ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 260ಕ್ಕೆ ಏರಿಕೆಯಾಗಿದೆ.
undefined
ಈ 13 ಹೊಸ ಸೋಂಕು ಪ್ರಕರಣಗಳ ಪೈಕಿ ಬಾಗಲಕೋಟೆ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ತಲಾ ಮೂರು, ಬೆಂಗಳೂರು ನಗರದಲ್ಲಿ ಮೂರು, ಚಿಕ್ಕಬಳ್ಳಾಪುರ, ಬೆಳಗಾವಿ, ಉತ್ತರ ಕನ್ನಡ ಮತ್ತು ವಿಜಯಪುರದಲ್ಲಿ (ಭಾನುವಾರ ಮೃತಪಟ್ಟವ್ಯಕ್ತಿಯು ಸೋಂಕಿತ ಮಹಿಳೆಯ ಪತಿ) ತಲಾ ಒಬ್ಬರಿಗೆ ಸೋಂಕು ಪತ್ತೆಯಾಗಿದೆ.
ಇನ್ನು ಈ 13 ಜನರಲ್ಲಿ ಒಂಬತ್ತು ಜನರಿಗೆ ತಮ್ಮ ಕುಟುಂಬ, ನೆರೆಹೊರೆಯ ಸೋಂಕಿತರ ಸಂಪರ್ಕದಿಂದ ವೈರಸ್ ತಗುಲಿದೆ. ಇನ್ನುಳಿದ ನಾಲ್ವರಲ್ಲಿ ಇಬ್ಬರಿಗೆ ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾದಾಗ ಸೋಂಕು ಪತ್ತೆಯಾಗಿದೆ. ಇನ್ನಿಬ್ಬರಲ್ಲಿ ಒಬ್ಬರು ದೆಹಲಿ ಪ್ರಯಾಣದ ಹಿನ್ನೆಲೆ ಮತ್ತು ಮತ್ತೊಬ್ಬರು ಆಂಧ್ರಪ್ರದೇಶದ ಹಿಂದೂಪುರದ ಪ್ರಯಾಣ ಮಾಡಿದ ಹಿನ್ನೆಲೆ ಹೊಂದಿದ್ದಾರೆ.
ಮೃತಪಟ್ಟಬೆಂಗಳೂರು ಮೂಲದ 76 ವರ್ಷದ ವೃದ್ಧರು ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಏ.12ರಂದು ಸೋಂಕು ದೃಢಪಟ್ಟಿತ್ತು. ಈ ಮಧ್ಯೆ, ಭಾನುವಾರ ವಿಜಯಪುರದಲ್ಲಿ ಕೊರೋನಾ ಸೋಂಕಿತ ವೃದ್ಧೆಯ ಪತಿಯೊಬ್ಬರು ಸಾವನ್ನಪ್ಪಿದ್ದರು. ಸ್ಥಳೀಯ ಜಿಲ್ಲಾಡಳಿತ ವೈದ್ಯಕೀಯ ಶಿಷ್ಟಾಚಾರ ಅನುಸರಿಸಿ ಸೋಮವಾರ ಅವರ ಅಂತ್ಯಕ್ರಿಯೆ ನಡೆಸಿತ್ತು. ಇದೀಗ ಆ ಮೃತ ವೃದ್ಧರ ಗಂಟಲು ದ್ರವದ ಪರೀಕ್ಷಾ ವರದಿ ಬಂದಿದ್ದು, ಕೊರೋನಾ ಸೋಂಕು ತಗುಲಿದ್ದರಿಂದಲೇ ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ಮಂಗಳವಾರ ಖಚಿತಪಡಿಸಿದೆ.
ಬೆಂಗಳೂರಲ್ಲಿ ಮೃತರ ಸಂಖ್ಯೆ 3ಕ್ಕೆ ಏರಿಕೆ:
ಸೋಮವಾರವಷ್ಟೇ ಬೆಂಗಳೂರು ಮೂಲದ 65 ವರ್ಷದ ವ್ಯಕ್ತಿಯೊಬ್ಬರು ಸೋಂಕಿನಿಂದ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಮಂಗಳವಾರ ಮತ್ತೊಬ್ಬ ವೃದ್ಧ ಮೃತಪಟ್ಟಿದ್ದಾರೆ.
ಇದಕ್ಕೂ ಮುನ್ನ ನಗರದಲ್ಲಿ ಕೊರೋನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಚಿಕ್ಕಬಳ್ಳಾಪುರ ಮೂಲದ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಇದರೊಂದಿಗೆ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ಮೂರಕ್ಕೇರಿದಂತಾಗಿದೆ.
71 ಜನ ಡಿಸ್ಚಾರ್ಜ್
ಮಂಗಳವಾರ 11 ಜನರು ಕೊರೋನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಒಟ್ಟು 260 ಸೋಂಕಿತರ ಪೈಕಿ ಇದುವರೆಗೆ ಬಿಡಗಡೆಯಾದವರ ಸಂಖ್ಯೆ 71ಕ್ಕೆ ಏರಿಕೆಯಾಗಿದೆ. ಉಳಿದ 179 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 10 ಜನ ಸೋಂಕಿತರು ಮೃತಪಟ್ಟಿದ್ದಾರೆ.