ರಾಜ್ಯದಲ್ಲಿ ಮತ್ತೆ 21 ಮಂದಿಗೆ ಕೊರೋನಾ, ಸೋಂಕಿತರ ಸಂಖ್ಯೆ 474ಕ್ಕೆ ಏರಿಕೆ!

By Kannadaprabha NewsFirst Published Apr 25, 2020, 8:53 AM IST
Highlights

ರಾಜ್ಯದಲ್ಲಿ ಮತ್ತೆ 21 ಮಂದಿಗೆ ಕೊರೋನಾ| ಬೆಂಗಳೂರು 12, ಬಾಗಲಕೋಟೆ 3, ವಿಜಯಪುರ, ರಾಯಬಾಗದಲ್ಲಿ ತಲಾ 2| ತುಮಕೂರು, ಚಿಕ್ಕಬಳ್ಳಾಪುರದಲ್ಲಿ ತಲಾ 1| ಸೋಂಕಿತರ ಸಂಖ್ಯೆ 474ಕ್ಕೆ ಏರಿಕೆ| ಈ ಪೈಕಿ 152 ಮಂದಿ ಗುಣಮುಖ| ರಾಜ್ಯದಲ್ಲಿ ಈಗ ಒಟ್ಟು 304 ಪ್ರಕರಣ ಸಕ್ರಿಯ

ಬೆಂಗಳೂರು(ಏ.25): ರಾಜ್ಯದಲ್ಲಿ ಕೊರೋನಾ ವೈರಾಣು ಹಾವಳಿ ಮುಂದುವರೆದಿದ್ದು ಬೆಂಗಳೂರಿನಲ್ಲಿ ಗುರುವಾರ ತಡರಾತ್ರಿ ವರದಿಯಾದ 8 ಪ್ರಕರಣ ಸೇರಿದಂತೆ ಶುಕ್ರವಾರ ಸಂಜೆ 5 ಗಂಟೆ ವೇಳೆಗೆ 29 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 21 ಪ್ರಕರಣ ಶುಕ್ರವಾರ ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 474ಕ್ಕೆ ಏರಿಕೆಯಾಗಿದೆ. ಈ ಪೈಕಿ 152 ಜನ ಗುಣಮುಖರಾಗಿದ್ದಾರೆ. ಈವರೆಗೆ 18 ಜನ ಸಾವನ್ನಪ್ಪಿದ್ದಾರೆ.

ಗುರುವಾರ ಸಂಜೆ ವೇಳೆಗೆ 446ರಷ್ಟಾಗಿದ್ದ ಸೋಂಕಿತರ ಸಂಖ್ಯೆಗೆ ಗುರುವಾರ ತಡರಾತ್ರಿ ಪಾದರಾಯನಪುರದ 3, ಹೊಂಗಸಂದ್ರದ 4, ಟಿಪ್ಪುನಗರದ ಒಂದು ಸೇರಿ ಎಂಟು ಪ್ರಕರಣ ಸೇರ್ಪಡೆಯಾಗಿತ್ತು. ಈ ಮೂಲಕ ಗುರುವಾರ ತಡರಾತ್ರಿ ವೇಳೆಗೆ ಸೋಂಕಿತರ ಸಂಖ್ಯೆ 453ಕ್ಕೆ ಏರಿಕೆಯಾಗಿತ್ತು.

ಶುಕ್ರವಾರ ಮತ್ತೆ ಹೊಂಗಸಂದ್ರದ 6 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಹೊಂಗಸಂದ್ರದಲ್ಲಿ ಒಬ್ಬ ಬಿಹಾರಿಯಿಂದ ಬರೋಬ್ಬರಿ 19 ಮಂದಿಗೆ ಸೋಂಕು ಹರಡಿದಂತಾಗಿದ್ದು, ಹೊಂಗಸಂದ್ರದ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಪಾದರಾಯನಪುರದಲ್ಲಿ ಶುಕ್ರವಾರ ಮತ್ತಿಬ್ಬರಿಗೆ ಸೋಂಕು ದೃಢಪಟ್ಟಿದ್ದು, ರಾಮನಗರ ಜೈಲಿನಲ್ಲಿದ್ದ 5 ಮಂದಿ ಪಾದರಾಯನಪುರ ಸೋಂಕಿತರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಶುಕ್ರವಾರ ವರದಿಯಾದ 21 ಪ್ರಕರಣಗಳಲ್ಲಿ ಬೆಂಗಳೂರಿನಲ್ಲಿ 12, ಬಾಗಲಕೋಟೆಯಲ್ಲಿ ಮೂರು, ವಿಜಯಪುರ ಹಾಗೂ ಬೆಳಗಾವಿಯಲ್ಲಿ ತಲಾ ಇಬ್ಬರು, ತುಮಕೂರು, ಚಿಕ್ಕಬಳ್ಳಾಪುರದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.

ಈ ಎಲ್ಲಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದ ವ್ಯಕ್ತಿಗಳನ್ನು ಪತ್ತೆ ಮಾಡಿ ಸರ್ಕಾರ ಸಾಮೂಹಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು, ಕಡ್ಡಾಯವಾಗಿ ಎಲ್ಲರ ಸೋಂಕು ಪರೀಕ್ಷೆ ಮಾಡಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರಾಜಧಾನಿಯಲ್ಲಿ ಸೋಂಕಿನ ಉಬ್ಬರ:

ಬೆಂಗಳೂರಿನ ಹೊಂಗಸಂದ್ರ ಹಾಗೂ ಪಾದರಾಯನಪುರ ಕಂಟೈನ್‌ಮೆಂಟ್‌ ವಲಯದಲ್ಲಿ ಸೋಂಕು ಪ್ರಕರಣಗಳು ನಿರಂತರವಾಗಿ ಹೆಚ್ಚಳವಾಗುತ್ತಿವೆ. ಹೊಂಗಸಂದ್ರದಲ್ಲಿ ಬಿಹಾರ ಮೂಲಕ ಕಾರ್ಮಿಕನ ( ಸೋಂಕಿತ - 419) ನೇರ ಸಂಪರ್ಕದಿಂದ ಮತ್ತೆ ಏಳು ಮಂದಿ ಪುರುಷರಿಗೆ ಸೋಂಕು ತಗುಲಿದೆ. ಈ ಮೂಲಕ ಆ ಒಬ್ಬ ವ್ಯಕ್ತಿಯಿಂದ ಎರಡು ದಿನಗಳಲ್ಲಿ ಇತರ 19 ಮಂದಿಗೆ ಸೋಂಕು ತಗುಲಿದಂತಾಗಿದೆ.

ಪಾದರಾಯನಪುರಕ್ಕೆ ಸಂಬಂಧಿಸಿದಂತೆ ರಾಮನಗರದ ಜೈಲಿನಲ್ಲಿದ್ದವರ ಪೈಕಿ ಗುರುವಾರ ತಡರಾತ್ರಿ ಮೂರು ಪ್ರಕರಣಗಳು ಹಾಗೂ ನಿನ್ನೆ ಎರಡು ಪ್ರಕರಣಗಳು ದೃಢಪಟ್ಟಿವೆ. ಆ ಪ್ರದೇಶದ ಒಟ್ಟು ಪ್ರಕರಣಗಳ ಸಂಖ್ಯೆ 23ಕ್ಕೆ ತಲುಪಿದೆ. ಈ ಎರಡು ವಾರ್ಡ್‌ನ ಪ್ರಕರಣಗಳನ್ನು ಹೊರತು ಪಡಿಸಿ ಸೋಂಕು ಜ್ವರ (ಇನ್ಫೂಯೆಂಜಾ ಲೈಕ್‌ ಇಲ್‌ನೆಸ್‌) ದಿಂದ ಬಳಲುತ್ತಿದ್ದ 49 ವರ್ಷದ ಮಹಿಳೆ, ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 45 ವರ್ಷದ ಮಹಿಳೆ ಹಾಗೂ 50 ವರ್ಷದ ಪುರುಷರಿಗೆ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಬೆಂಗಳೂರಿನ ಸೋಂಕಿತ ಪ್ರಕರಣಗಳ ಸಂಖ್ಯೆ 120ಕ್ಕೆ ಏರಿಕೆಯಾಗಿದೆ.

ತಬ್ಲೀಘಿಗಳಿಂದ ಮತ್ತಿಬ್ಬರಿಗೆ ಸೋಂಕು:

ಬೆಳಗಾವಿಯ ರಾಯಭಾಗದಲ್ಲಿ ನಿಜಾಮುದ್ದೀನ್‌ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿ ಬಂದಿದ್ದ ಇಬ್ಬರು ತಬ್ಲಘಿಘಿಘಿಘಿಘಿಘಿಘಿಘಿಗಳಿಂದ ಪ್ರತ್ಯೇಕ ಪ್ರಕರಣದಲ್ಲಿ 10 ವರ್ಷದ ಬಾಲಕಿ ಹಾಗೂ 15 ವರ್ಷದ ಬಾಲಕನಿಗೆ ಸೋಂಕು ಹರಡಿದೆ.

ವಿಜಯಪುರದಲ್ಲಿ ಜಿಲ್ಲೆಯ ಮೊದಲ ಸೋಂಕಿತ ವೃದ್ಧೆಯ ನೇರ ಸಂಪರ್ಕದಿಂದ 17 ವರ್ಷದ ಬಾಲಕ, 27 ವರ್ಷದ ಯುವಕನಿಗೆ ಸೋಂಕು ತಗುಲಿದೆ. ಬಾಗಲಕೋಟೆಯಲ್ಲಿ ಸೋಂಕಿತ ಪೊಲೀಸ್‌ನಿಂದ ಸೋಂಕು ಹರಡಿಸಿಕೊಂಡಿದ್ದ 43 ವರ್ಷದ ವ್ಯಕ್ತಿಯಿಂದ 14 ವರ್ಷದ ಬಾಲಕ ಹಾಗೂ 28 ವರ್ಷದ ಯುವಕನಿಗೆ ಸೋಂಕು ಹರಡಿದೆ. ಉಳಿದಂತೆ ಚಿಕ್ಕಬಳ್ಳಾಪುರದಲ್ಲಿ ಸೋಂಕಿನಿಂದ ಮೃತಪಟ್ಟಿದ್ದ ಮಹಿಳೆಯಿಂದ 39 ವರ್ಷದ ಪುರುಷನಿಗೆ, ತುಮಕೂರಿನಲ್ಲಿ ಸೂರತ್‌ ಪ್ರಯಾಣ ಹಿನ್ನೆಲೆ ಹೊಂದಿದ್ದ 32 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

7 ಮಂದಿ ಬಿಡುಗಡೆ:

ಕೊರೊನಾ ಸೋಂಕಿತರ ಪೈಕಿ ರಾಜ್ಯದ ವಿವಿಧೆಡೆ ಏಳು ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಕಲಬುರಗಿ 3, ಬೆಂಗಳೂರು ಗ್ರಾಮಾಂತರ 2, ಉತ್ತರ ಕನ್ನಡ ಹಾಗೂ ಧಾರವಾಡ ತಲಾ ಒಬ್ಬರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೂ ಒಟ್ಟು 152 ಮಂದಿ ಗುಣಮುಖರಾಗಿದ್ದು, 18 ಮಂದಿ ಸಾವನ್ನಪ್ಪಿದ್ದಾರೆ. ಉಳಿದ 304 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ 5 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ.

click me!