
ವಿಶ್ವನಾಥ್ ಮಲೆಬೆನ್ನೂರು
ಪೆಹಲ್ಗಾಂ (ನ.23): ಭಾರತಾಂಬೆಯ ಕಿರೀಟದಂತಿರುವ ಜಮ್ಮು ಕಾಶ್ಮೀರದ ಪೆಹಲ್ಗಾಂನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಶನಿವಾರ ಅದ್ಧೂರಿಯಾಗಿ ಜರುಗಿತು. ಇದೇ ವೇಳೆ ಕಳೆದ ಏಪ್ರಿಲ್‌ನಲ್ಲಿ ಉಗ್ರರ ದಾಳಿಯಿಂದ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ರಾಜ್ಯೋತ್ಸವ ಆಚರಿಸಲು ಆಗಮಿಸಿದ್ದ ಸುಮಾರು ಐದು ನೂರಕ್ಕೂ ಹೆಚ್ಚು ಅಧಿಕಾರಿ, ನೌಕರರು ಕನ್ನಡಪರ ಘೋಷಣೆ ಕೂಗಿ ಭುವನೇಶ್ವರಿ ತಾಯಿಗೆ ನಮಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡಿ, ಅಧಿಕಾರಿ, ಸಿಬ್ಬಂದಿ ಮನೆ, ಮನಗಳಲ್ಲಿ ಹೆಚ್ಚೆಚ್ಚು ಕನ್ನಡ ಮಾತನಾಡವ ಕೆಲಸ ಮಾಡಬೇಕು. ಜತೆಗೆ, ಗಡಿನಾಡ ಜಿಲ್ಲೆಗಳಾದ ಬೆಳಗಾವಿ, ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ನೆರಭಾಷೆಯ ಹಾವಳಿಯಿಂದ ಕನ್ನಡ ಕಣ್ಮರೆಯಾಗುತ್ತಿದ್ದು, ಅಲ್ಲಿ ಸರ್ಕಾರಿ ಅಧಿಕಾರಿ, ನೌಕರರು ಕನ್ನಡ ಭಾಷೆ ಉಳಿವಿಗೆ ಶ್ರಮಿಸಬೇಕು ಎಂದು ಹೇಳಿದರು.
ಅಡಳಿತ ವ್ಯವಸ್ಥೆ ಅಧಿಕಾರಿ ನೌಕರರು ಕನ್ನಡ ಭಾಷೆಯನ್ನು ಹೆಚ್ಚು ಬಳಕೆ ಮಾಡುವ ಕೆಲಸ ನಾವೆಲ್ಲರೂ ಮಾಡಬೇಕಾಗಲಿದೆ. ಸರ್ಕಾರ ಈ ವಿಚಾರದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದೆ ಎಂದು ತಿಳಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಬಿಬಿಎಂಪಿ ಮಾಜಿ ಮೇಯರ್ ಆರ್.ಸಂಪತ್ ರಾಜ್ ಮಾತನಾಡಿ, ಪೆಹಲ್ಗಾಂಗೆ ಸಂಭ್ರಮಕ್ಕೆ ಮಾತ್ರ ಬಂದಿಲ್ಲ. ಪೆಹಲ್ಗಾಂನಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸುವುದಕ್ಕೆ ಆಗಮಿಸಿದ್ದೇವೆ. ಪ್ರವಾಸಿಗರಿಗೆ ಕಾಶ್ಮೀರಿಗರು ತೋರಿಸುವ ಪ್ರೀತಿ, ಗೌರವಕ್ಕೆ ಸಾಟಿ ಇಲ್ಲ ಎಂದರು.
ಪೆಹಲ್ಗಾಂ ಪೊಲೀಸ್ ವಿಭಾಗದ ಡಿವೈಎಸ್.ಪಿ ಫಾರಕ್ ಅಹ್ಮದ್ ಮಾತನಾಡಿ, ಕರ್ನಾಟಕ ರಾಜ್ಯೋತ್ಸವದ ಮೂಲಕ ಸಂಸ್ಕೃತ ಪರಿಚಯಿಸಿದ್ದೀರಿ. ಕನ್ನಡ ಭಾಷೆ ಅರ್ಥವಾಗುವುದಿಲ್ಲ. ನಿಮ್ಮ ಪ್ರೀತಿ, ವಿಶ್ವಾಸದ ಕಾರಣಕ್ಕೆ ಭಾಗವಹಿಸಿದ್ದೇನೆ. ಪೆಹಲ್ಗಾಂನ ಹುತಾತ್ಮರಿಗೆ ಈ ಕಾರ್ಯಕ್ರಮ ಅರ್ಪಣೆ ಮಾಡಿರುವುದು ಸಂತಸ ತಂದಿದೆ. ಇದೇ ರೀತಿ ಬೇರೆಯವರು ಆಗಮಿಸಿ ಕಾರ್ಯಕ್ರಮಗಳನ್ನು ನಡೆಸಬೇಕು ಎಂದರು.
ಬೆಂಗಳೂರು ದೂರದರ್ಶನದ ಕೇಂದ್ರ ವಿಭಾಗದ ಮುಖ್ಯಸ್ಥೆ ಎಚ್.ಎನ್.ಆರತಿ ಮಾತನಾಡಿ, ಕರ್ನಾಟಕ ಮತ್ತು ಕಾಶ್ಮೀರದ ಸಂಬಂಧವು ತಲತಲಾಂತರದ್ದಾಗಿದೆ. ಡೊಳ್ಳು ಕುಣಿತ ಸೇರಿದಂತೆ ನಾಡಿನ ಎಲ್ಲ ಕಲಾ ಸಂಸ್ಕೃತಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿರುವುದು ಕನ್ನಡದ ಮೇಲಿನ ಅಭಿಮಾನ ದೊಡ್ಡಾಗಿದೆ ಎಂದು ಹೇಳಿದರು.
ಮಾಜಿ ಮೇಯರ್ ಗೌತಮ್ ರಾಜ್,ಸಚಿವಾಲಯ ಸಂಘದ ಅಧ್ಯಕ್ಷ ರಮೇಶ್ ಸಂಗಾ ಮಾತನಾಡಿದರು. ಗಾಯಕಿ ಅನುರಾಧ ಭಟ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಪೆಹಲ್ಗಾಂ ಪೊಲೀಸ್ ಇನ್ಸ್‌ಪೆಕ್ಟರ್ ಪರ್ವೇಜ್ ಅಹ್ಮದ್ ಮೊದಲಾದವರಿದ್ದರು.
ಪೆಹಲ್ಗಾಂ ದುರ್ಘನೆಯ ಕಿಚ್ಚು, ಇಂದು ಪೆಹಲ್ಗಾಂನಲ್ಲಿ ಕರ್ನಾಟಕ ರಾಜ್ಯೋತ್ಸವದ ಅರ್ಥಪೂರ್ಣ ಆಚರಣೆಗೆ ಕಾರಣವಾಯಿತು.
- ಎ.ಅಮೃತರಾಜ್, ಅಧ್ಯಕ್ಷರು, ಜಿಬಿಎ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ