
ಚಂದ್ರು ಕೊಂಚಿಗೇರಿ
ಹೂವಿನಹಡಗಲಿ (ನ.23): ಸರ್ಕಾರ ಅಸ್ಪೃಶ್ಯತೆ ನಿವಾರಣೆಗೆ ನೂರಾರು ಕಾಯ್ದೆ ಕಾನೂನು, ಹತ್ತಾರು ಸೌಲಭ್ಯಗಳನ್ನು ಜಾರಿ ಮಾಡಿದೆ. ಆದರೂ ಈ ಅಸ್ಪೃಶ್ಯತೆ ರೋಗ ಇನ್ನೂ ಮಾಸಿಲ್ಲ. ಈ ನಡುವೆ ಇಂದಿನ ಯುವ ಜನಾಂಗ ಜಾತೀಯತೆ ಮೀರಿ ಸದ್ದಿಲ್ಲದೇ ಅಂತರ್ಜಾತಿ ವಿವಾಹವಾಗುತ್ತಿದ್ದಾರೆ.
ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಅಂತರ್ಜಾತಿ ವಿವಾಹಗಳು ಗಗನ ಕುಸುಮ ಎನ್ನುವಂತಿತ್ತು. ಒಂದು ವೇಳೆ ಅಂತರ್ಜಾತಿ ವಿವಾಹವಾದರೂ ಸತಿ- ಪತಿ ಇಬ್ಬರೂ ಸುಖದಿಂದ ಬಾಳುವ ಪರಿಸ್ಥಿತಿ ಇರುತ್ತಿರಲಿಲ್ಲ. ಆದರೀಗ ವಿಪರೀತ ಜಾತಿ ಸಂಕೋಲೆಗಳ ನಡುವೆ ನಾಗರಿಕ ಸಮಾಜದಲ್ಲಿ ಅಂತರ್ಜಾತಿ ವಿವಾಹಿತರನ್ನು ನೋಡುವ ಸಂಪ್ರದಾಯ ಬದಲಾಗುತ್ತಿದೆ. ಅನ್ಯ ಜಾತಿಯ ಯುವಕ, ಯುವತಿ ಪರಸ್ಪರ ಪ್ರೀತಿಸಿ ಜಾತಿ ಮೀರಿ ವಿವಾಹವಾಗುತ್ತಿದ್ದಾರೆ.
ಅನ್ಯ ಜಾತಿಯ ಯುವಕ, ಯುವತಿ ಮದುವೆಯಾಗಿದ್ದಾರೆಂಬ ಕಾರಣಕ್ಕಾಗಿ, ಆರಂಭದಲ್ಲಿ ಹಾವು ಮುಂಗುಸಿಯಂತೆ ನೋಡುವ ಅದೆಷ್ಟೋ ಕುಟುಂಬಗಳು, ಏನೋ ತಪ್ಪು ಮಾಡಿದ್ದಾರೆ ಎಂದು ಮನ್ನಿಸಿ ಮನೆಯ ಹಿರಿಯರು ಈಗ ಅಪ್ಪಿಕೊಳ್ಳುತ್ತಿರುವ ಪ್ರಸಂಗಳು ಹೆಚ್ಚಾಗುತ್ತಿವೆ.
ಅಂತರ್ಜಾತಿ ವಿವಾಹ ದಂಪತಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ನೀಡುತ್ತಿರುವ ಪ್ರೋತ್ಸಾಹ ಧನದಿಂದ ಅಂತರ್ಜಾತಿ ಆಗಿರುವ ಕುಟುಂಬಗಳು ಉತ್ತಮ ಬದುಕನ್ನು ಕಟ್ಟಿಕೊಂಡಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಯುವಕರು ಅನ್ಯ ಜಾತಿಯ ಯುವತಿಯನ್ನು ಮದುವೆಯಾದರೆ ₹3 ಲಕ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಯುವತಿಯನ್ನು ಇತರೆ ಜಾತಿಯ ಯುವಕ ಮದುವೆಯಾದರೆ ₹5 ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತಿದೆ. ಜತೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಯುವಕ, ಯುವತಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸರಳವಾಗಿ ವಿವಾಹ ಆಗಿದ್ದರೆ ಅಂತಹ ಕುಟುಂಬಕ್ಕೆ ₹50 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ.
ತಾಲೂಕಿನಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ 2021ರಿಂದ 2015 ರವರೆಗೂ ಒಟ್ಟು 15 ಅಂತರ್ಜಾತಿ ವಿವಾಹಗಳ ಜೋಡಿಗಳು ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ 4 ಜೋಡಿ ಫಲಾನುಭವಿಗಳಿಗೆ ಪ್ರೋತ್ಸಾಹ ಧನ ನೀಡಲಾಗಿದೆ. ಇನ್ನು 11 ಜೋಡಿಗಳಿಗೆ ಪ್ರೋತ್ಸಾಹಧನ ನೀಡಬೇಕಿದೆ.
ಈಚಿಗೆ ಯುವಕ, ಯುವತಿಯರು ಅಕ್ಷರವಂತರ ಸಂಖ್ಯೆ ಹೆಚ್ಚಾಗುತ್ತಿರುವ, ಹಿನ್ನೆಲೆಯಲ್ಲಿ ಜಾತಿ ಸಂಕೋಲೆಗಳನ್ನು ಮೀರಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.
ಕಳೆದ 2015-16ನೇ ಸಾಲಿನಲ್ಲಿ ಆಯ- ವ್ಯಯ ಘೋಷಣೆಯಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮದುವೆ, ವಯಸ್ಸಿಗೆ ಬಂದಿರುವ ಮಕ್ಕಳಿಗೆ ಸಾಂಪ್ರಾದಾಯಿಕವಾಗಿ ಮದುವೆ ಮಾಡಿಕೊಳ್ಳಲು, ಒಡುವೆ ವಸ್ತ್ರಗಳನ್ನು ಕೊಂಡುಕೊಳ್ಳಲು ಸಾಮರ್ಥ್ಯ ಇಲ್ಲದ ಬಡ ಕುಟುಂಬಗಳಿಗೆ ಸರಳ ವಿವಾಹಕ್ಕೆ ಪ್ರೋತ್ಸಾಹಿಸಿದಲ್ಲಿ ವರದಕ್ಷಣೆ ಪಿಡುಗನ್ನು ಹಾಗು ದುಂದುವೆಚ್ಚವನ್ನು ತಡೆಗಟ್ಟಲು, ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ, ಸರಳ ವಿವಾಹವಾದ ಆದರ್ಶ ದಂಪತಿಗಳಿಗೆ 50 ಸಾವಿರ ರುಗಳ ಆರ್ಥಿಕ ನೆರವು ನೀಡಲಾಗುತ್ತಿದೆ.
ಈಗಾಗಲೇ ತಾಲೂಕಿನಲ್ಲಿ ಕಳೆದ 5 ವರ್ಷದಲ್ಲಿ 15 ಜೋಡಿ ಅಂತರ್ಜಾತಿ ವಿವಾಹವಾಗಿರುವ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಈಗಾಗಲೇ 4 ಜೋಡಿಗಳಿಗೆ ಪ್ರೋತ್ಸಾಹ ಧನ ನೀಡಿದ್ದು, ಉಳಿದ 11 ಜೋಡಿಗಳಿಗೆ ಹಂತ ಹಂತವಾಗಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆನಂದ ಡೊಳ್ಳಿನ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ