Suvarna News   | Asianet News
Published : Jul 08, 2022, 09:10 AM ISTUpdated : Jul 08, 2022, 05:35 PM IST

Karnataka Rain Live Updates: ಮಳೆಯಿಂದ ಒಂದು ತಿಂಗಳಲ್ಲಿ 12 ಜನ ಸಾವು, 65 ಜಾವುನಾರುಗಳು ಸಾವು

ಸಾರಾಂಶ

ಕಳೆದ ನಾಲ್ಕು ದಿನಗಳಿಂದ ಬಿಡದೇ ಸುರಿಯುತ್ತಿದ್ದ ಮಳೆರಾಯ ಕೊಂಚ ವಿಶ್ರಮಿಸಿದಂತೆ ಕಾಣುತ್ತಿದೆ. ಆದರೆ, ಮಳೆ ನಿಂತ ಹೋದ ಮೇಲೂ ಹಲವೆಡೆ ಪ್ರವಾಹ ಪರಿಸ್ಥಿತಿ ಮುಂದುವರಿದಿದ್ದು, ಜನರ ಪರದಾಟ ಮಾತ್ರ ನಿಂತಿಲ್ಲ. ಈಗಾಗಲೇ ಕೊಡಗು, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನೆರೆ ರಾಜ್ಯಗಳಾದ ಕೇರಳ ಹಾಗೂ ಮಹಾರಾಷ್ಟ್ರದಲ್ಲಿಯೂ ಮಳೆಯ ಅಬ್ಬರವಿದ್ದು, ಗಡಿ ಭಾಗಗಳಲ್ಲಿ ಅವಾಂತರ ಸೃಷ್ಟಿಯಾಗಿದೆ. ಮಹಾರಾಷ್ಟ್ರದ ಮಳೆಯಿಂದ ಬೆಳಗಾವಿಯ ಕೆಲವು ತಾಲೂಕಿನಲ್ಲಿ ಪ್ರವಾಹ ಭೀತಿ ಇದ್ದರೂ, ಭಯ ಪಡುವ ಅಗತ್ಯವಿಲ್ಲವೆಂದಿದ್ದಾರೆ ಸಂಬಂಧಿಸಿದ ಅಧಿಕಾರಿಗಳು. ಕೆಆರ್‌ಎಸ್ ನೀರಿನ ಮಟ್ಟವೂ ಹೆಚ್ಚುತ್ತಿದ್ದು, ಜನರು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿದೆ. 

Karnataka Rain Live Updates: ಮಳೆಯಿಂದ ಒಂದು ತಿಂಗಳಲ್ಲಿ 12 ಜನ ಸಾವು, 65 ಜಾವುನಾರುಗಳು ಸಾವು

05:35 PM (IST) Jul 08

ಮಳೆಯಿಂದ 12 ಜನ, 65 ಜಾನುವಾರು ಸಾವು: ಸಿಎಂ ಬೊಮ್ಮಾಯಿ

ಮಳೆಪೀಡಿತ ಜಿಲ್ಲೆಗಳ ಅಧಿಕಾರಿಗಳ ಜತೆ ಸಭೆಯ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ ಮಳೆಯಿಂದ ಒಂದು ತಿಂಗಳಲ್ಲಿ ಸುಮಾರು 12 ಜನ ಸಾವನ್ನಪ್ಪಿದ್ದಾರೆ ಮತ್ತು 65 ಜಾನುವಾರುಗಳು ಸಾವನಪ್ಪಿವೆ ಎಂದು ತಿಳಿಸಿದ್ದಾರೆ. ಭೂಕುಸಿತ ಎಲ್ಲೆಲ್ಲಿ ಆಗಿದೆಯೋ ಅಲ್ಲಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸಾಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದರು. ಮನೆ ಹಾನಿ ಸಂದರ್ಭದಲ್ಲಿ ತಕ್ಷಣ ಹತ್ತು ಸಾವಿರ ರೂಪಾಯಿ ಮಂಜೂರು ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು. ಮಳೆ ನಿಂತ ನಂತರ ಬೆಳೆ ಹಾನಿ ಪರಿಹಾರ ನೀಡುವಂತೆ ಸೂಚನೆ ನೀಡಿದ್ದೇನೆ, SDRF, NDRF ತಂಡಗಳು ಮಳೆ ಪೀಡಿತ ಜಿಲ್ಲೆಗಳಲ್ಲಿವೆ. ಆ ತಂಡಗಳ ಸದುಪಯೋಗ ಪಡಿಸಿಕೊಳ್ಳಲು ಸೂಚಿಸಲಾಗಿದೆ. ಬಿದ್ದಿರೋ ಎಲೆಕ್ಟ್ರಿಕ್‌ ಕಂಬಗಳನ್ನು ದುರಸ್ಥಿ ಮಾಡಬೇಕು, ಕಡಲ್ಕೊರೆತವನ್ನು ಸಂಪೂರ್ಣವಾಗಿ ತಡೆಯಬೇಕು ಎಂದು ಚಿಂತಿಸಲಾಗಿದೆ. ಜಿಲ್ಲಾಧಿಕಾರಿಗಳ ಬಳಿ 735 ಕೋಟಿ ರೂಪಾಯಿಯಿದೆ. ಕಡಲ್ಕೊರೆತಕ್ಕೆ ಪರ್ಮನೆಂಟ್‌ ಪರಿಹಾರ ಕಂಡುಕೊಳ್ಳುವತ್ತ ಹೆಜ್ಜೆ ಹಾಕುತ್ತೇವೆ ಎಂದು ಬೊಮ್ಮಾಯಿ ಹೇಳಿದರು.  

04:32 PM (IST) Jul 08

ಮುಂದಿನ ಐದು ದಿನ ರಾಜ್ಯದಲ್ಲಿ ಮಳೆಯ ತೀವ್ರತೆ ಇನ್ನೂ ಹೆಚ್ಚು

ಮುಂದಿನ ಐದು ದಿನಗಳು ರಾಜ್ಯಾದ್ಯಂತ ಮಳೆ ಹೆಚ್ಚಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಸಂಸ್ಥೆಯ ಮುಖ್ಯಸ್ಥ ಮನೋಜ್‌ ರಾಜನ್‌ ತಿಳಿಸಿದ್ದಾರೆ. ಮುಖ್ಯಮಂತ್ರಿ ನಡೆಸಿದ ಸಭೆಯಲ್ಲಿ ಮನೋಜ್‌ ರಾಜನ್‌ ಹವಾಮಾನ ಮುನ್ಸೂಚನೆ ನೀಡಿದ್ದು, ಕರಾವಳಿಯಲ್ಲಿ ಇಂದು ಮತ್ತು ನಾಳೆ ಅತಿ ಹೆಚ್ಚು ಮಳೆಯಾಗಲಿದೆ ಎಂದಿದ್ದಾರೆ. ಎರಡು ದಿನ ಕರಾವಳಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಇನ್ನು ಉತ್ತರ ಒಳನಾಡು (ಬೆಳಗಾವಿ, ಹಾವೇರಿ, ಹುಬ್ಬಳ್ಳಿ - ಧಾರವಾಡ, ಕಲಬುರಗಿ) ಜಿಲ್ಲೆಗಳಲ್ಲಿ ಆರೇಂಜ್‌ ಅಲರ್ಟ್‌ ಜಾರಿ ಮಾಡಲಾಗಿದ್ದು, ದಕ್ಷಿಣ ಒಳನಾಡಿನ (ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು) ಜಿಲ್ಲೆಗಳಲ್ಲೂ ಎರಡು ದಿನ ಆರೇಂಜ್‌ ಅಲರ್ಟ್‌ ನೀಡಲಾಗಿದೆ. ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದ್ದು, ಇಂದಿಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. 

04:07 PM (IST) Jul 08

ಕಾರವಾರದ ಕದ್ರಾ ಜಲಾಶಯದಿಂದ ನೀರು ಬಿಡುಗಡೆ

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಜಲಾಶಯಗಳಿಗೆ ವ್ಯಾಪಕ ನೀರಿನ ಒಳಹರಿವು ಬರುತ್ತಿದೆ. ಜಲಾಶಯದ ಗರಿಷ್ಠ ಪ್ರಮಾಣಕ್ಕಿಂತ ಅಧಿಕ ನೀರಿನ ಒಳಹರಿವು ಇರುವುದರಿಂದ, ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ಮಾಹಿತಿಯ ಪ್ರಕಾರ 7,000 ಕ್ಯುಸೆಕ್‌ ನೀರು ಬಿಡಲಾಗಿದೆ. ಇದರಿಂದ ಪ್ರವಾಹ ಸಂಭವಿಸುವುದಿಲ್ಲ ಎನ್ನಲಾಗಿದೆ. 

03:39 PM (IST) Jul 08

ಮಳೆ ಪೀಡಿತ 13 ಜಿಲ್ಲೆಗಳ ಜಿಲ್ಲಾಡಳಿತ ಜೊತೆ ಸಿಎಂ ಸಭೆ ಆರಂಭ

ಮಳೆ ಪೀಡಿತ 13 ಜಿಲ್ಲೆಗಳ ಜಿಲ್ಲಾಧಿಕಾರಿ ಮತ್ತು ಆಡಳಿತ ಮಂಡಳಿ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ಆರಂಭಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಿಎಂ ಮಾತನಾಡುತ್ತಿದ್ದಾರೆ. ಸಭೆಯಲ್ಲಿ ಸಚಿವರಾದ ಗೋವಿಂದ ಎಂ. ಕಾರಜೋಳ, ವಿ.ಸೋಮಣ್ಣ, ಎಸ್.ಟಿ. ಸೋಮಶೇಖರ್, ಗೋಪಾಲಯ್ಯ, ಸುನಿಲ್ ಕುಮಾರ್, ನಾರಾಯಣಗೌಡ ಭಾಗಿಯಾಗಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ,  ಅಭಿವೃದ್ಧಿ ಆಯುಕ್ತರು ಹಾಗೂ ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ ಸೂದ್‌, ಆರ್ ಡಿ ಪಿ ಆರ್ ಇಲಾಖೆ ಎಸಿಎಸ್ ಅತೀಕ್  ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದಾರೆ. ಮೊದಲಿಗೆ ಉಡುಪಿ ಜಿಲ್ಲೆಯ ಮಳೆ ಪರಿಸ್ಥಿತಿ ಬಗ್ಗೆ ವಿವರಣೆ ಪಡೆಯುತ್ತಿರುವ ಸಿಎಂ
ಉಡುಪಿ ಜಿಲ್ಲೆಯ ಮಳೆ ಪರಿಸ್ಥಿತಿ ಬಗ್ಗೆ ಉಡುಪಿ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆಯುತ್ತಿರುವ ಸಿಎಂ ನಂತರ ಉಳಿದ ಜಿಲ್ಲೆಗಳ ಕುರಿತು ಚರ್ಚಿಸಲಿದ್ದಾರೆ. ಕೊಡಗು, ಉಡುಪಿ, ದಕ್ಷಿಣ ಕನ್ನಡ, ಮೈಸೂರು, ಉತ್ತರ ಕನ್ನಡ, ಶಿವಮೊಗ್ಗ, ಹಾಸನ, ಬೆಳಗಾವಿ, ಬಾಗಲಕೋಟೆ, ಬೀದರ್, ಕಲಬುರ್ಗಿ, ಹಾವೇರಿ ಮತ್ತು ಬೆಂಗಳೂರು ನಗರ ಜಿಲ್ಲೆ ಜಿಲ್ಲೆಗಳ ಜಿಲ್ಲಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

03:05 PM (IST) Jul 08

ಮಂಗಳೂರು ವಿಮಾನ ನಿಲ್ದಾಣ ಬಳಿ ಗುಡ್ಡ ಕುಸಿತ

ಮಂಗಳೂರು ಏರ್ ಪೋರ್ಟ್ ಸಮೀಪದ ಗುಡ್ಡ ಕುಸಿದು ರಸ್ತೆ ತುಂಡಾಗಿದ್ದು, ಏರ್ ಪೋರ್ಟ್ ರನ್ ವೇಗೆ ಅಪಾಯವಿಲ್ಲ ಅಂತ ಮಂಗಳೂರು ವಿಮಾನ ನಿಲ್ದಾಣ ಆಡಳಿತ ಸ್ಪಷ್ಟನೆ ನೀಡಿದೆ. ರನ್ ವೇ ಮತ್ತು ತಡೆಗೋಡೆಯ ಫೋಟೋ ಸಹಿತ ಸ್ಪಷ್ಟನೆಯನ್ನು ನೀಡಿದ್ದು, ರನ್ ವೇಯ ಸುಮಾರು 75-100 ಮೀ. ಕೆಳಗೆ ಮೋರಿ ಕೊಚ್ಚಿ ಹೋಗಿದೆ. ಸ್ಥಳೀಯ ಅಧಿಕಾರಿಗಳು ಮೋರಿ ಕೊಚ್ಚಿಹೋಗುವುದರಿಂದ ಸೃಷ್ಟಿಯಾದ ಕಂದಕವನ್ನು ತುಂಬುತ್ತಿದ್ದಾರೆ. ಅದ್ಯಪಾಡಿ ಮುಖ್ಯ ಕಾಂಕ್ರೀಟ್ ರಸ್ತೆಯ ಒಂದು ಭಾಗವನ್ನು ಸ್ಥಗಿತಗೊಳಿಸಲಾಗಿದೆ. ಈ ತುಂಡಾದ ದಾರಿಯ ಮಧ್ಯಭಾಗದಿಂದ ಒಳಗಿನ ತಡೆಗೋಡೆಗೆ 75 ಮೀ ಅಂತರ ಇದೆ. ಏರ್ ಪೋರ್ಟ್ ‌ಒಳಗಿನ ತಡೆಗೋಡೆಯ ಹಲವು ಮೀಟರ್ ಅಂತರದಲ್ಲಿ ರನ್ ವೇ ಇದೆ. ರನ್ವೇಗೆ ಯಾವುದೇ ಅಪಾಯವಿಲ್ಲ, ಕಾರ್ಯಾಚರಣೆಗಳು ಸಾಮಾನ್ಯವಾಗಿ ನಡೆಯುತ್ತಿವೆ ಎಂದು ಸ್ಪಷ್ಟನೆ ಹೇಳಿದೆ.

01:00 PM (IST) Jul 08

ರಾಜ್ಯದ ಎಲ್ಲ ಜಲಾಶಯಗಳ ಇಂದಿನ ನೀರಿನ ಮಟ್ಟದ ಮಾಹಿತಿ ಇಲ್ಲಿದೆ

ರಾಜ್ಯದ ಎಲ್ಲಾ ಜಲಾಶಯಗಳು ಬಹುತೇಕ ಭರ್ತಿಯಾಗುತ್ತಿವೆ. ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರಾಜ್ಯದ ಜಲಾಶಯಗಳ ನೀರಿನ ಒಳಹರಿವು ಹೆಚ್ಚಾಗಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಸಂಸ್ಥೆ ಟ್ವೀಟ್‌ ಮಾಡಿದ್ದು, ಇಂದಿನ ಜಲಾಶಯಗಳ ನೀರಿನ ಮಟ್ಟವನ್ನು ತಿಳಿಸಿದ್ದಾರೆ. 

 

12:52 PM (IST) Jul 08

ನೋಡುಗರ ಕಣ್ಮನ ಸೆಳೆಯುತ್ತಿವೆ ಜಲಪಾತಗಳು

ಕಳೆದ ಹದಿನೈದು ದಿನಗಳಿಂದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆ ಆಗುತ್ತಿದ್ದು ಬೆಳಗಾವಿ ನಗರ ಹಾಗೂ ಖಾನಾಪುರ ಸೇರಿ ಜಿಲ್ಲೆಯ ವಿವಿಧೆಡೆ ನಿರಂತರ ಮಳೆಯಾಗುತ್ತಿದೆ. ಇದರಿಂದಾಗಿ ಬೆಳಗಾವಿಗೆ ಸಮೀಪ ಇರುವಂತಹ ಜಲಪಾತಗಳು ಮೈದುಂಬಿ ಹರಿಯುತ್ತಿದ್ದು ನೋಡುಗರ ಕಣ್ಮ‌ನ ಸೆಳೆಯುತ್ತಿವೆ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಬಿ, ಜಾಂಬೋಟಿ, ಭೀಮಗಡ, ಲೋಂಡಾ, ನಾಗರಗಾಳಿ ಅರಣ್ಯಪ್ರದೇಶದ ವಿವಿಧೆಡೆ ಹತ್ತಾರು ಜಲಪಾತಗಳಿವೆ. ಎತ್ತರದ ಬೆಟ್ಟಗಳ ಮೇಲಿಂದ ಶುಭ್ರವಾದ ನೀರು ಪ್ರಪಾತಕ್ಕೆ ಧುಮ್ಮುಕ್ಕುವ ದೃಶ್ಯ ನೋಡಲು ಎರಡು ಕಣ್ಣುಗಳು ಸಾಲದು‌.

ಇನ್ನಷ್ಟು ಓದಿ: Belagavi: ನೋಡುಗರ ಕಣ್ಮನ ಸೆಳೆಯುತ್ತಿವೆ ನಯನಮನೋಹರ ಜಲಪಾತಗಳು

12:50 PM (IST) Jul 08

ಮಂಗಳೂರಿನ ಅಡ್ಯಾರ್‌ನಲ್ಲಿ ಮನೆಗಳು ಮುಳುಗಡೆ, ಹಾವೇರಿಯಲ್ಲಿ ಅಪಾಯ ಮಟ್ಟ ತಲುಪಿದ ವರದಾ ನದಿ

ದ.ಕ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಬೆನ್ನಲ್ಲೇ ಭಾರೀ ಮಳೆಯಾಗುತ್ತಿದೆ. ಭಾರೀ‌ ಮಳೆಗೆ ಅಡ್ಯಾರ್ ಭಾಗದ ಹಲವರು ಮನೆಗಳಿಗೆ ನೀರು ನುಗ್ಗಿದೆ. ಅಡ್ಯಾರ್ ರಾಷ್ಟ್ರೀಯ ಹೆದ್ದಾರಿ ಬದಿಯ ಕೆಲ ಮನೆಗಳು ಮುಳುಗಡೆಯಾಗಿವೆ. ಮನೆಯ ಬಾವಿ ಸೇರಿ ಭಾಗಶಃ ಮನೆಗಳು ಮುಳುಗಡೆಯಾಗಿ ಅನಾಹುತವಾಗಿದೆ. ಮನೆ ಮುಳುಗಿದ ಹಿನ್ನೆಲೆ ಮನೆ ಖಾಲಿ ‌ಮಾಡಿ ಸುರಕ್ಷಿತ ಸ್ಥಳಗಳಿಗೆ ಜನರು ತೆರಳುತ್ತಿದ್ದಾರೆ. ಹೆದ್ದಾರಿ ಬದಿ ಚರಂಡಿ ಅವ್ಯವಸ್ಥೆ ಕಾರಣದಿಂದ ಮನೆಗಳಿಗೆ‌ ನೀರು ನುಗ್ಗಿದೆ. ರಸ್ತೆ ಮೇಲೂ ಭಾರೀ‌ ಪ್ರಮಾಣದಲ್ಲಿ ನೀರು ಹರಿದು ಅನಾಹುತವಾಗಿದೆ. ಸುಮಾರು ಐದಾರು ಮನೆಗಳಿಗೆ ನೀರು ನುಗ್ಗಿ ಬಹುತೇಕ ಮುಳುಗಡೆಯಾಗಿವೆ. ಮನೆ ಮುಳುಗಡೆಗೆ ಚರಂಡಿ ಅವ್ಯವಸ್ಥೆ ಕಾರಣ ಅಂತ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಅಡ್ಯಾರ್ ಗ್ರಾಮಸ್ಥರು ಮಾತನಾಡಿದ್ದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಹಲವು ದಿನಗಳಿಂದ ಇಲ್ಲಿನ ಸಮಸ್ಯೆ ಬಗ್ಗೆ ಸ್ಥಳೀಯ ಪಂಚಾಯತ್‌ಗೆ ಹೇಳಿದ್ದೇವೆ, ಚರಂಡಿ ನಿರ್ಮಿಸಿ ಮಳೆ ನೀರು ಹೋಗಲು ದಾರಿ ಮಾಡಿಕೊಡಲು ಮನವಿ ಮಾಡಿದ್ದೆವು. ಪಿಡಿಓ ಬಂದು ನೋಡಿ ಹೋಗ್ತಾರೆ, ಆದರೆ ಸಮಸ್ಯೆ ‌ಪರಿಹಾರ ಮಾಡಿಲ್ಲ. ಸ್ಥಳೀಯ ಶಾಸಕ ಭರತ್ ಶೆಟ್ಟಿಯವರಿಗೂ ಹೇಳಿದ್ದೇವೆ. ಈಗ ಹೆದ್ದಾರಿ ಬದಿಯಲ್ಲಿ ನೀರು ಹರಿದು ರಸ್ತೆಗೆ ಬಂದು ಮನೆಗೆ ನುಗ್ಗಿದೆ. ಮನೆಯಲ್ಲಿ ನಮಗೆ ಇರಲು ಆಗ್ತಿಲ್ಲ, ಸಮಸ್ಯೆ ಯಾರೂ ಕೇಳ್ತಿಲ್ಲ ಎಂದು ಸ್ಥಳೀಯರು ದೂರುತ್ತಿದ್ದಾರೆ. 

ಹಾವೇರಿ ಜಿಲ್ಲೆಯಲ್ಲಿ ಮೂರು ದಿನಗಳಿಂದ ಜಿಟಿ ಜಿಟಿ ಮಳೆ ಹಿನ್ನೆಲೆಯಲ್ಲಿ ಅಪಾಯದ ಮಟ್ಟ ಮೀರಿ ವರದಾ ನದಿ ಹರಿಯುತ್ತಿದೆ. ಜಿಲ್ಲೆಯ ಪ್ರಮುಖ ನದಿ ವರದಾ ಉಕ್ಕಿ ಹರಿಯುತ್ತಿದ್ದಾಳೆ. ಹಾವೇರಿ ತಾಲೂಕು ಕೋಳೂರು ಹಾಗೂ ಕಳಸೂರು ಗ್ರಾಮದ ವರದಾ ನದಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಕೃಷಿ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಿದ್ದು, ಕಳಸೂರು ಮಾರ್ಗವಾಗಿ ತೊಂಡೂರು- ಹೊಸಳ್ಳಿ ಗ್ರಾಮಗಳು ಹಾಗೂ ಮುಂದೆ ಸವಣೂರು ಪಟ್ಟಣಕ್ಕೆ ಸಂಪರ್ಕ ಕಲ್ಪಿಸೋ ಸೇತುವೆ ಮುಳುಗಡೆಯಾಗಿದೆ. ಸೇತುವೆ ಮುಳುಗಡೆಯಾದ ಕಾರಣ ಜಮೀನುಗಳಿಗೆ ಸಂಪರ್ಕ ಕಲ್ಪಿಸೋ ರಸ್ತೆಗಳೂ ಬಂದ್ ಆಗಿವೆ. 

12:42 PM (IST) Jul 08

ಪದ್ಮಶ್ರೀ ತುಳಸೀಗೌಡ ಮನೆಗೆ ನುಗ್ಗಿದ ನೀರು

ಪದ್ಮಶ್ರೀ ಪ್ರಶಸ್ತಿ ವಿಜೇತೆ ತುಳಸಿಗೌಡ ಅವರ ಮನೆಗೆ ನೀರು ನುಗ್ಗಿದ್ದು ಸಂಪರ್ಕ ಕಡಿತಗೊಂಡಿದೆ. ಪದ್ಮಶ್ರೀ ತುಳಸಿ ಗೌಡರವರ ಮನೆಗೆ ತರಳಲು ಪುಟ್ಟ ಸೇತುವೆ‌ಯೇ ಬೇಕು ಎಂಬುವ ಸ್ಥಿತಿ ನಿರ್ಮಾಣವಾಗಿದೆ. ಮನೆ ಮುಂದೆ ಹಳ್ಳ ಹರಿದ ಹಿನ್ನಲೆ ಓಡಾಡಲು ತೊಂದರೆಯಾಗುತ್ತಿದೆ, ಸೇತುವೆ ಮಾಡಿಕೊಡಿ ಎಂದು ತುಳಸಿ ಗೌಡರವರು ಮಾಡಿದ ಮನವಿಯ ವಿಡಿಯೋ ವೈರಲ್ ಆಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ತುಳಸಿಗೌಡ ನೆಲೆಸಿದ್ದಾರೆ. ಕಳೆದ ವರ್ಷ ಸೇತುವೆ ಮಾಡಲು ಮನವಿ ಮಾಡಿದ್ದ ತುಳಸಜ್ಜಿ. ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಹಳ್ಳ ತುಂಬಿ ಹರಿಯುತ್ತದೆ, ಮನೆಯೊಳಗೆ ನೀರು ನುಗ್ಗುತ್ತದೆ. ನೀರಿನ ಸೆಳೆತಕ್ಕೆ  ಓಡಾಡಲು ತೊಂದರೆ ಎಂದು ಮನವಿ ಮಾಡಿದ್ದ ತುಳಸಿಯಜ್ಜಿ. ಆದರೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

12:37 PM (IST) Jul 08

ನೇತ್ರಾವತಿ ನದಿಗೆ ಭಾರೀ ನೀರಿನ ಒಳಹರಿವು

ನೇತ್ರಾವತಿ ನದಿ ನೀರಿನ ಹರಿವು ಹೆಚ್ಚಳ ಬೆನ್ನಲ್ಲೇ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಅಡ್ಯಾರ್, ಪಾವೂರು ಸೇರಿ ನದಿಪಾತ್ರದ ಭಾಗದಲ್ಲಿ ಜನ ಆತಂಕದಲ್ಲಿದ್ದಾರೆ. ನೀರಿನ ‌ಹರಿವು ಇನ್ನಷ್ಟು ಹೆಚ್ಚಾದ್ರೆ ನದಿ ಪಾತ್ರಗಳಲ್ಲಿ ಮುಳುಗಡೆಯಾಗುವ ಸಾಧ್ಯತೆಯಿದೆ. ಭಾರೀ ಪ್ರಮಾಣದಲ್ಲಿ ನೇತ್ರಾವತಿಗೆ ನೀರು ಹರಿದು ಬರುತ್ತಿದೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಅಪಾಯಕಾರಿ ನೀರಿನ ಹರಿವಿನ ಮಧ್ಯೆಯೇ ಸ್ಥಳೀಯರು ಮೀನು ಹಿಡಿಯುತ್ತಿದ್ದಾರೆ. ನದಿ ತಟದಲ್ಲಿ ಗಾಳ ಹಾಕಿ ಜನ ಮೀನು ಹಿಡಿಯುತ್ತಿದ್ದಾರೆ. ಅಪಾಯದ ಮುನ್ಸೂಚನೆಯಿದ್ದರೂ ಜನ ಲೆಕ್ಕಕ್ಕೆ ಹಾಕುತ್ತಿಲ್ಲ.

12:15 PM (IST) Jul 08

ಜಿಟಿಜಿಟಿ ಮಳೆ..ಮರೆಯಲಾಗದ ಬೆಚ್ಚನೆಯ ಸವಿ ಸವಿ ನೆನಪು

ಕಳೆದ ಕೆಲವು ದಿನಗಳಿಂದ ಆಕಾಶಕ್ಕೆ ತೂತು ಬಿದ್ದಂತೆ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ನದಿ-ಕೊಳಗಳು ಉಕ್ಕುಕ್ಕಿ ಹರಿಯುತ್ತಿವೆ. ಧರೆಗೆ ಮಳೆ ಬಿದ್ದಾಗಿದೆ. ಇಳೆ ತಂಪಾಗಿದೆ. ಮೊದಲ ಮಳೆಗೆ ಮಣ್ಣಿನ ಸುವಾಸನೆಯನ್ನು ಆಘ್ರಾಣಿಸಿ ಖುಷಿಪಡುತ್ತಿರುವಾಗಲೇ ಓತಪ್ರೋತವಾಗಿ ಮಳೆ ಸುರಿದು ತಂಪಿನ ವಾತಾವರಣವನ್ನು ಸೃಷ್ಟಿಸಿದೆ. ಹೀಗೆ ಮಳೆ ಸುರಿಯುವಾಗಲ್ಲೆಲ್ಲಾ ಮನಸ್ಸು ಬಾಲ್ಯಕಾಲಕ್ಕೆ ಓಡುತ್ತದೆ. ಆಗೆಲ್ಲಾ ಮಳೆ ಬಂದಾಗ ಹೀಗೆಲ್ಲಾ ಸಿಟ್ಟು ಬರುತ್ತಿರಲ್ಲಿಲ್ಲ. ಕಿರಿಕಿರಿಯೆನಿಸುತ್ತಿರಲ್ಲಿಲ್ಲ. ಮನೆಗ್ಯಾರೋ ನೆಂಟರು ಬಂದರೇನೋ ಎಂಬಷ್ಟು ಖುಷಿಯಾಗುತ್ತಿತ್ತು.ಹೊರಗಡೆ ಜಿಟಿಜಿಟಿ ಮಳೆ, ಮೈ ಮರಗಟ್ಟವ ಚಳಿಯಲ್ಲಿ ಬೆಚ್ಚನೆ ಕಂಬಳಿ ಹೊದ್ದು ಮನೆಯೊಳಗಿನ ಕಿಟಿಕಿಯಿಂದಲೇ ಮಳೆ ನೋಡುವ ಚಂದ ಬೇರೆಯಿತ್ತು. ಹಳೆಯ ನೆನಪುಗಳನ್ನು ನಮ್ಮೊಡನೆ ನೀವೂ ಮೆಲುಕು ಹಾಕಿ. 

ಇನ್ನಷ್ಟು ಓದಿ: ಜಿಟಿಜಿಟಿ ಮಳೆ..ಮರೆಯಲಾಗದ ಬೆಚ್ಚನೆಯ ಸವಿ ಸವಿ ನೆನಪು

12:12 PM (IST) Jul 08

ಕಾರ್ಗತ್ತಲ ಜಡಿ ಮಳೆಯಲ್ಲಿ ಪ್ರತ್ಯಕ್ಷವಾದ ಹೆಬ್ಬಾವು: ಕೆರೆ ದಂಡೆ ಒಡೆದು ತೋಟಕ್ಕೆ ಹಾನಿ

ಶಿವಮೊಗ್ಗ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಬಾಲಕೃಷ್ಣ ಎಂಬುವರ ಅಡಕೆ ತೋಟದಲ್ಲಿ ಆಹಾರ ಹುಡುಕಿಕೊಂಡು ಬಂದಿದ್ದ ಹೆಬ್ಬಾವೊಂದು ಹೆಗ್ಗಣವೊಂದನ್ನು ಭಕ್ಷಿಸಿ ಮರವೊಂದರ ಬಳಿ ಬೀಡುಬಿಟ್ಟಿತ್ತು. ಇದನ್ನು ಗಮನಿಸಿದ ಕುಟುಂಬದವರು ಭಯ ಆತಂಕದಿಂದ ಉರಗ ತಜ್ಞ ಸ್ನೇಕ್ ಕಿರಣ್‌ಗೆ ಮಾಹಿತಿ ನೀಡಿದ್ದಾರೆ. 

ಇನ್ನಷ್ಟು ಓದಿ: ಕಾರ್ಗತ್ತಲ ಜಡಿ ಮಳೆಯಲ್ಲಿ ಪ್ರತ್ಯಕ್ಷವಾದ ಹೆಬ್ಬಾವು: ಕೆರೆ ದಂಡೆ ಒಡೆದು ತೋಟಕ್ಕೆ ಹಾನಿ

12:06 PM (IST) Jul 08

ಮಹಾಮಳೆಗೆ ರಾಷ್ಟ್ರೀಯ ಹೆದ್ದಾರಿಯೇ ಮುಳುಗಡೆ

ಅಬ್ಬರದ ಮಳೆಯಿಂದ ಕಾರವಾರದ ಬಿಣಗಾ, ಅರಗಾದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲೇ‌ ತುಂಬಿರುವ ನೀರು ತುಂಬಿಕೊಂಡಿದೆ. ಬಿಣಗಾ, ಅರಗಾದಲ್ಲಿ ಹಾದುಹೋದ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ತುಂಬಿ‌ ಕಾರವಾರ- ಅಂಕೋಲಾ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್‌ ಜಾಮ್‌ ಆಗಿದ್ದು, ಸವಾರರು ಮುಂದೂ ಹೋಗುವಂತಿಲ್ಲ ಮತ್ತು ಹಿಂದೂ ಹೋಗುವಂತಿಲ್ಲದೇ ಪರದಾಡುತ್ತಿದ್ದಾರೆ. ಸುಗಮ ಸಂಚಾರಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಒಂದೆಡೆ ರಸ್ತೆ ಬ್ಲಾಕ್ ಆದ್ರೆ ಮತ್ತೊಂದೆಡೆ ಮನೆಗಳ ಒಳಗೂ ನೀರು ನುಗ್ಗಿದೆ. ಕಾರವಾರ ತಾಲೂಕಿನ ಆಸ್ನೋಟಿ, ಬಿಣಗಾ, ಅರಗಾ ಬಳಿ ಮನೆಗಳು ಜಲಾವೃತವಾಗಿವೆ. ಬಿಣಗಾದಲ್ಲಿ 30 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿದ್ದ ಧಾನ್ಯಗಳು, ದಾಖಲೆಗಳು, ಎಲೆಕ್ಟ್ರಾನಿಕ್ ಉಪಕರಣಗಳು ಸಂಪೂರ್ಣ ನಾಶವಾಗಿವೆ. 30 ಕ್ಕೂ ಹೆಚ್ಚು ವಾಹನಗಳು ಜಲಸಮಾಧಿಯಾಗಿವೆ. ಬೇರೆಡೆ ಹೋಗಲು ಕೂಡಾ ಸಾಧ್ಯವಾಗದೇ ಮನೆಗಳಲ್ಲೇ ಜನರು ಜೀವ ಕೈಯಲ್ಲಿಡಿದು ಕುಳಿತಿದ್ದಾರೆ. ಸುತ್ತಲಿನ ಹೋಟೆಲ್, ಕಾರ್ ಸರ್ವಿಸ್ ಸ್ಟೇಷನ್ ಕೂಡಾ ಜಲಾವೃತವಾಗಿದ್ದು, ಬೇರೆ ಆಶ್ರಯವೇ ಇಲ್ಲದಂತಾಗಿದೆ. ಮಳೆ ಹೆಚ್ಚಾಗುತ್ತಿದ್ದಂತೇ ಭೀತಿ ಎದುರಿಸುತ್ತಿರುವ ಜನರು ಸೀಬರ್ಡ್ ಹಾಗೂ ಐಆರ್‌ಬಿಯವರ ನಿರ್ಲಕ್ಷ್ಯದಿಂದಲೇ ನೆರೆ ಸೃಷ್ಠಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಮಗಾರಿ ನಡೆಸಿ ನೀರು ಸರಾಗವಾಗಿ ಹೋಗುವ ಚರಂಡಿ, ನಾಲೆಯನ್ನು ಬಂದ್ ಮಾಡಿದ್ದರಿಂದಲೇ ನೆರೆ ಸೃಷ್ಠಿಯಾಗಿದೆ ಎಂದು ಆರೋಪಿಸುತ್ತಿದ್ದಾರೆ. 

11:58 AM (IST) Jul 08

ಹೇಮಾವತಿ ಜಲಾಶಯ ಬಹುತೇಕ ಭರ್ತಿ

ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಅರಕಲಗೂಡು, ಬೇಲೂರಿನಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಹಾಸನ ಜಿಲ್ಲೆಯ ಅರೆ ಮಲೆನಾಡು, ಮಲೆನಾಡು ಹಾಗೂ ಚಿಕ್ಕಮಗಳೂರಿನಲ್ಲಿ ಭಾರಿ ಮಳೆ ಹಿನ್ನಲೆಯಲ್ಲಿ ಹೇಮಾವತಿ ಜಲಾಶಯದ ಒಳಹರಿವಿನಲ್ಲಿ ಭಾರಿ ಹೆಚ್ಚಳವಾಗಿದೆ. ಹೇಮಾವತಿ ಜಲಾಶಯಕ್ಕೆ 18,000 ಕ್ಯೂಸೆಕ್ ಒಳಹರಿವು ಬರುತ್ತಿದೆ. ಹೇಮಾವತಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2,922 ಅಡಿ. ಇಂದು ಜಲಾಶಯದಲ್ಲಿನ ನೀರಿನ ಮಟ್ಟ 2917 ಅಡಿಯಿದೆ. ಜಲಾಶಯ ಭರ್ತಿಗೆ 5 ಅಡಿ ಮಾತ್ರ ಬಾಕಿ ಉಳಿದಿದ್ದು, ಜಲಾಶಯದ ನೀರಿನ ‌ಸಂಗ್ರಹ ಪ್ರಮಾಣ 37.103 ಟಿಎಂಸಿಯಲ್ಲಿ, 31.061 ಟಿಎಂಸಿ ನೀರು ಶೇಖರಣೆಯಾಗಿದೆ. ಮಳೆ ಇದೇ ರೀತಿ ಮುಂದುವರೆದರೆ, ಇನ್ನೊಂದು ದಿನದಲ್ಲಿ ಹೇಮಾವತಿ ಜಲಾಶಯ ತಂಬಲಿದೆ.

11:31 AM (IST) Jul 08

ಮುಂದಿನ 6 ದಿನ ಮುಂದುವರೆಯಲಿದೆ ಮಳೆಯ ಆರ್ಭಟ

ರಾಜ್ಯದಲ್ಲಿ ಮುಂದುವರಿದ ಮಳೆ ಆರ್ಭಟ. ಮುಂದಿನ ಮೂರು ದಿನಗಳು ಕೂಡ ಮಳೆ ಆರ್ಭಟ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಭಾರತೀಯ ಹವಾಮಾನ ಇಲಾಖೆ ಈ ಬಗ್ಗೆ ಮುನ್ಸೂಚನೆ ನೀಡಿದೆ. ಕಳೆದ 24 ಗಂಟೆ ಅವಧಿಯಲ್ಲಿ ಮೂರು ಪ್ರದೇಶಗಳಲ್ಲಿ 200 mm ಗೂ ಅಧಿಕ ಮಳೆಯಾಗಿದೆ. 

ಉತ್ತರಕನ್ನಡ ಜಿಲ್ಲೆಯಲ್ಲಿ ದಾಖಲೆ ಮಳೆ:

ಉತ್ತರ ಕನ್ನಡದ ಶಿರಾಲಿಯಲ್ಲಿ 230.8 mm ಮಳೆ 

ದಕ್ಷಿಣ ಕನ್ನಡದ ಮೂಲ್ಕಿಯಲ್ಲಿ 224 mm ಮಳೆ

ಉತ್ತರಕನ್ನಡದ ಕಾರವಾರದಲ್ಲಿ 205.2 mm ಮಳೆ

15 ಪ್ರದೇಶಗಳಲ್ಲಿ 100 mm ರಿಂದ 200 mm ವರೆಗೂ ಮಳೆ

ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲೇ ಅತಿ ಹೆಚ್ಚು ಮಳೆ

ಉತ್ತರಕನ್ನಡ:

ಹೊನ್ನಾವರ - 198.7 mm
ಅಂಕೋಲಾ - 177.4 mm
ಮನ್ಕಿ - 177.4 mm
ಗೇರುಸೊಪ್ಪ - 173 mm
ಕುಮಟಾ - 144.8 mm
ಸಿದ್ದಾಪುರ - 137.8 mm

ಉಡುಪಿ:
ಕುಂದಾಪುರ - 162.8mm
ಬೆಳ್ತಂಗಡಿ - 134.2 mm

ದಕ್ಷಿಣ ಕನ್ನಡ:
ಪಣಂಬೂರು - 114 mm
ಧರ್ಮಸ್ಥಳ - 107.8 mm
ಮಂಗಳೂರು - 106.6 mm
ಪುತ್ತೂರು - 102 mm 

ಶಿವಮೊಗ್ಗ:
ಲಿಂಗನಮಕ್ಕಿ - 125.4 mm

ಚಿಕ್ಕಮಗಳೂರು
ಶೃಂಗೇರಿ - 117.6 mm 
ಜಯಪುರ - 102.8 mm

11:10 AM (IST) Jul 08

ಶಿವಮೊಗ್ಗ ಜಿಲ್ಲೆಯ ಜಲಾಶಯಗಳ ನೀರಿನ ಮಟ್ಟ

ತುಂಗಾ ಜಲಾಶಯ:

ದಿನಾಂಕ: 08/07/2022

ಇಂದಿನ ಮಟ್ಟ: 586.51 mtr

ಗರಿಷ್ಠ ಮಟ್ಟ : 588.24 ಅಡಿ

ಒಳಹರಿವು: 48209 cusecs

ಹೊರಹರಿವು: 54065 cusecs

ನೀರು ಸಂಗ್ರಹ: 2.309 Tmc

ಸಾಮರ್ಥ್ಯ: 3.24 Tmc
ಕಳೆದ ವರ್ಷ ಈ ದಿನ ನೀರು ಸಂಗ್ರಹ: 588.24  ಅಡಿ
 

ಭದ್ರಾ ಜಲಾಶಯ:

ದಿನಾಂಕ: 08/07/2022

ಇಂದಿನ ಮಟ್ಟ: 166'4" ಅಡಿ

ಗರಿಷ್ಠ ಮಟ್ಟ : 186 ಅಡಿ

ಒಳಹರಿವು: 29942 cusecs

ಹೊರಹರಿವು: 143 cusecs

ನೀರು ಸಂಗ್ರಹ: 40.574 Tmc

ಸಾಮರ್ಥ್ಯ: 71.535 Tmc
ಕಳೆದ ವರ್ಷ ಈ ದಿನದ ನೀರು ಸಂಗ್ರಹ 155'8" ಅಡಿ

ಲಿಂಗನಮಕ್ಕಿ ಜಲಾಶಯ:
ದಿನಾಂಕ: 08/07/2022

ಇಂದಿನ ಮಟ್ಟ: 1772.60 ಅಡಿ

ಗರಿಷ್ಠ ಮಟ್ಟ : 1819 ಅಡಿ

ಒಳಹರಿವು: 56645 cusecs

ಹೊರಹರಿವು: 283.80 cusecs

ನೀರು ಸಂಗ್ರಹ: 43.23 Tmc

ಸಾಮರ್ಥ್ಯ: 151.64 Tmc
ಕಳೆದ ವರ್ಷ ಈ ದಿನ ನೀರು ಸಂಗ್ರಹ: 1783.95  ಅಡಿ

10:52 AM (IST) Jul 08

ಮಂಗಳೂರಿನ ಕಣ್ಣೂರಿನಲ್ಲಿ ಮನೆಗಳ ಮೇಲೆ ಗುಡ್ಡ ಕುಸಿತ

ಮಂಗಳೂರಿನ ಕಣ್ಣೂರಿನಲ್ಲಿ ಮನೆಗಳ ಮೇಲೆ ಗುಡ್ಡ ಕುಸಿತವಾಗಿದೆ. ಕಣ್ಣೂರಿನ ಬೊಳ್ಳೂರುಗುಡ್ಡೆಯಲ್ಲಿ ಗುಡ್ಡಗಳ ಮೇಲೆ ಭಾರೀ ಬಿರುಕು ಕಾಣಿಸಿಕೊಂಡಿದ್ದು, ದೊಡ್ಡ ಪ್ರಮಾಣದಲ್ಲಿ ಬಿರುಕು ಬಿಟ್ಟು ಅಪಾಯದ ಸ್ಥಿತಿಯಲ್ಲಿದೆ. ಮನೆಗಳ ಸಮೀಪವೇ ಭಾರೀ ಬಿರುಕು ಬಿಟ್ಟಿರುವ ಹಿನ್ನೆಲೆ, ಬೊಳ್ಳೂರು ಗ್ರಾಮಸ್ಥರು ಸಂಕಷ್ಟದಲ್ಲಿದ್ದಾರೆ. ಕ್ಷಣ ಕ್ಷಣಕ್ಕೂ‌ ಮಳೆ ಹೆಚ್ಚಾದ ಪರಿಣಾಮ ಗುಡ್ಡದ ಮಣ್ಣು ಜರಿಯುತ್ತಿದೆ. ಮನೆಗಳಿಗೆ ಬರಲು ಇದ್ದ ಮೆಟ್ಟಿಲುಗಳು ಧರೆಗುರುಳಿ ಸಂಪರ್ಕ ಸಾಧ್ಯವಾಗುತ್ತಿಲ್ಲ. ಈಗಾಗಲೇ ಹತ್ತಾರು‌ ಮನೆಯವರು ಖಾಲಿ ಮಾಡಿ ಹೋಗಿದ್ದಾರೆ. ಆದರೆ ಇದು ನಮ್ಮ ಮನೆ, ಬೇರೆಯವರ ಮನೆಯಲ್ಲಿ ಎಷ್ಟು ದಿನ ಇರೋದು ಎಂಬ ಬೇಸರ ಗ್ರಾಮಸ್ಥರನ್ನು ಕಾಡುತ್ತಿದೆ. ಪಾಲಿಕೆಯವರು ತಡೆ ಗೋಡೆ ನಿರ್ಮಿಸಿದ್ರೆ ಹೀಗಾಗ್ತಾ ಇರಲಿಲ್ಲ ಎಂಬ ಆಕ್ರೋಶ ಅವರದ್ದಾಗಿದೆ. 

10:48 AM (IST) Jul 08

ತುಂಗಾಭದ್ರಾ ನದಿ ಪಾತ್ರದಲ್ಲಿ ಏರಿಕೆಯಾದ ನೀರಿನ ಮಟ್ಟ

ತುಂಗಾಭದ್ರಾ ನದಿ ಪಾತ್ರದಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಪ್ರವಾಹದ ಭೀತಿಯಲ್ಲಿ ನದಿ ದಂಡೆ ಗ್ರಾಮಸ್ಥರಿದ್ದಾರೆ. ಆಗುಂಬೆ, ಶೃಂಗೇರಿ, ತೀರ್ಥಹಳ್ಳಿ ಭಾಗಗಳಲ್ಲಿ ಸುರಿಯುತ್ತಿರುವ ಮಳೆಯಿಂದ ತುಂಗಾ ಜಲಾಶಯಕ್ಕೆ ವ್ಯಾಪಕ ಪ್ರಮಾಣದ ನೀರಿನ ಒಳಹರಿವಿದೆ. ತುಂಗಾ ಜಲಾಶಯದಿಂದ ನದಿ ಪಾತ್ರಕ್ಕೆ 60 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ತುಂಗಾಭದ್ರಾ ನದಿ ಪಾತ್ರದಲ್ಲಿ 10 ಮೀಟರ್ ಪ್ರಮಾಣದ ನೀರಿದ್ದು, ಪ್ರವಾಹ ಭೀತಿ ಸೃಷ್ಟಿಸಿದೆ. ಹರಿಹರ ತಾಲ್ಲೂಕಿನ‌ ಉಕ್ಕಡಗಾತ್ರಿ ಕ್ಷೇತ್ರದ ಬಳಿ ತುಂಬಿ ಹರಿಯುತ್ತಿರುವ ತುಂಗಾಭದ್ರಾ ನದಿ, ಹೆಚ್ಚಿದ ನೀರಿನ ಮಟ್ಟದಿಂದ ಸ್ನಾನಗಟ್ಟ ಮುಳುಗಡೆಯಾಗಿದೆ. ಉಕ್ಕಡಗಾತ್ರಿ ಶ್ರೀ ಕರಿಬಸವೇಶ್ವರ ಅಜ್ಜಯ್ಯನ ದೇವಸ್ಥಾನದ ಕೆಳಗಡೆ ಅಂಗಡಿಗಳು ಮುಳುಗಡೆಗೊಂಡಿವೆ. ಉಕ್ಕಡಗಾತ್ರಿ ಬಳಿಯ ಪತೇಪುರ ಉಕ್ಕಡಗಾತ್ರಿಯ ಸಂಪರ್ಕ ಸೇತುವೆ ಕೂಡ ಮುಳುಗಡೆತಾಗಿದೆ. 

10:42 AM (IST) Jul 08

ಗತ ವೈಭವಕ್ಕೆ ಮರಳಿದ ವಿಶ್ವವಿಖ್ಯಾತ ಜೋಗ್‌ ಫಾಲ್ಸ್‌

ಮುಂಗಾರು ಮಳೆ  ಮಲೆನಾಡಿನಲ್ಲಿ ರುದ್ರ ನರ್ತನ ಮಾಡುತ್ತಿದ್ದು ವಿಶ್ವವಿಖ್ಯಾತ ಜೋಗಫಾಲ್ಸ್ ಮರಳಿ ಗತವೈಭವ ಪಡೆದಿದೆ. ಪ್ರಕೃತಿ ನಿರ್ಮಿತ ಜಲಸಿರಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ನೋಡಲು ನಯನ ಮನೋಹರವಾಗಿ ಕಾಣುವ ಜೋಗದ ಜಲಪಾತ, ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಧರೆಗಿಳಿದ ಸ್ವರ್ಗ ಜೋಗ ಜಲಪಾತವನ್ನು ಕಣ್ತುಂಬ ಸವಿಯಲು ದೂರ ದೂರದಿಂದ ಪ್ರವಾಸಿಗರು ಬರಲು ಆರಂಭಿಸಿದ್ದಾರೆ. ಜೋಗದ ಜಲಪಾತ ಶಿವಮೊಗ್ಗದಿಂದ 110 ಕಿ.ಮೀ.ದೂರ ಹೊನ್ನಾವರ ರಸ್ತೆಯಲ್ಲಿದೆ. 956 ಅಡಿ ಎತ್ತರದಿಂದ  ನೀರಿನ ತೆರೆ ಹಾಸುತ್ತ ರುದ್ರ ರಮಣೀಯವಾಗಿ ಧುಮ್ಮಿಕ್ಕುವ  ಜೋಗದ ಜಲಪಾತ, ಶರಾವತಿ ನದಿಯ ಅಸದೃಶ ನೆಗೆತದಿಂದ ಉಂಟಾಗಿರುವ ನಯನ ಮನೋಹರ ಜಲಪಾತ.

10:15 AM (IST) Jul 08

KRSಗೆ ಹೆಚ್ಚುವರಿ ನೀರು ಬಿಡುಗಡೆ: ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ

ಕೃಷ್ಣರಾಜಸಾಗರ ಜಲಾಶಯದ ಜಲಾನಯನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ಜುಲೈ  07 ರಂದು ಬೆಳಿಗ್ಗೆ 6.00 ಗಂಟೆಗೆ 33602 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟವು 124.80 ಅಡಿಗಳಾಗಿದ್ದು, ಜುಲೈ  07 ರಂದು ಬೆಳಗ್ಗೆ 6.00 ಗಂಟೆಗೆ 116.94 ಅಡಿಗಳಾಗಿದ್ದು, ಇನ್ನೂ 7.86 ಅಡಿಗಳಷ್ಟು ನೀರನ್ನು ಜಲಾಶಯದಲ್ಲಿ ಸಂಗ್ರಹಿಸಬಹುದು.

ಜಲಾನಯನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜಲಾಶಯಕ್ಕೆ ನೀರು ಹರಿದು ಬರುವ ಸಾಧ್ಯತೆ ಇರುವುದರಿಂದ ಜಲಾಶಯದಿಂದ ಯಾವುದೇ ಸಮಯದಲ್ಲಾದರೂ ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ ನದಿ ಪಾತ್ರ, ನದಿ ದಂಡೆ ಮತ್ತು ನದಿಯ ಆಸುಪಾಸಿನಲ್ಲಿ ವಾಸಿರುವ ಎಲ್ಲಾ ಗ್ರಾಮಸ್ಥರು/ಸ್ಥಳಿಯ ವಾಸಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತಕ್ಷಣವೇ ತೆರಳಲು ಕೃಷ್ಣರಾಜಸಾಗರ ಆಧುನೀಕರಣ ಮತ್ತು ಮಧ್ಯಮ ನೀರಾವರಿ ಯೋಜನಾ ವೃತ್ತದ ಸೂಪರಿಂಟೆಂಡಿಂಗ್ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

09:51 AM (IST) Jul 08

Chikkamagaluru: ಭಾರೀ ಮಳೆ, ಧುಮ್ಮಿಕ್ಕಿ ಹರೀತಿರೋ ಹೆಬ್ಬೆ ಫಾಲ್ಸ್

ಚಿಕ್ಕಮಗಳೂರು: ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಕಣ್ಣು ಕೊರೈಸುವಂತೆ ಧುಮ್ಮಿಕ್ಕಿ ಹರೀತಿರೋ ಹೆಬ್ಬೆ ಫಾಲ್ಸ್. ಸುರಿಯುತ್ತಿರುವುದು ನೀರೋ...ಹಾಲೋ ಎಂಬಂತೆ ಎಂಬಂತೆ ಭಾಸವಾಗುವಂಥ ದೃಶ್ಯ ಸೃಷ್ಟಿಯಾಗಿದೆ. ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಸಮೀಪದ ಹೆಬ್ಬೆ ಫಾಲ್ಸ್. ಭೂತಾಯಿಗೆ 80 ಅಡಿ ಎತ್ತರದಿಂದ ಪ್ರಕೃತಿಯೇ ಮಾಡ್ತಿರೋ ಹಾಲಿನ ಅಭಿಷೇಕ. 100 ಆಡಿ ದೂರಕ್ಕೆ ಚಿಮ್ಮುತ್ತಿರೋ ಜಲಪಾತದ ನೀರು. ಹೆಬ್ಬೆ ಜಲಪಾತದ ಸೌಂದರ್ಯ ಕಂಡು ಪ್ರವಾಸಿಗರು ಮೂಕ ವಿಸ್ಮಿತ. 

 

09:21 AM (IST) Jul 08

Shivamooga: ಮಳೆಗೆ ರಜೆ ಮುಂದುವರಿಕೆ

ಭಾರೀ ಮಳೆಯ ಕಾರಣ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರ ತಾಲ್ಲೂಕುಗಳ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಜು.8 ರ ಶುಕ್ರವಾರ ರಜೆ ಘೋಷಿಸಲಾಗಿದೆ  ಎಂದು
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ. ಜು.6 ಮತ್ತು 7 ರಂದು ಕೂಡ ರಜೆ ಘೋಷಿಸಲಾಗಿತ್ತು.

09:16 AM (IST) Jul 08

ಮುಂದುವರಿಯುತ್ತೆ ಮಳೆ: ಅನಾಹುತದ ಅಪಾಯ ಕಡಿಮೆ!

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇನ್ನೂ 4 ದಿನಗಳ ಕಾಲ ಗಾಳಿಸಹಿತ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, 20.45 ಸೆಂ.ಮೀ.ಗೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಮುಖ್ಯವಾಗಿ ನದಿ ತೀರದ ಜನರು ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಸುರಿದ ಮಳೆಗೆ 8 ಮನೆಗಳಿಗೆ ಭಾಗಶಃ ಹಾನಿಯಾಗಿದ್ದರೆ, 4 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. 81 ವಿದ್ಯುತ್‌ ಕಂಬಗಳು ಮುರಿದಿವೆ. ಜೊತೆಗೆ ಉಳ್ಳಾಲದ ಉಚ್ಚಿಲ ಸೀಗ್ರೌಂಡಿನಲ್ಲಿ ಕಡಲ್ಕೊರೆತ ಮುಂದುವರಿದಿದ್ದು ಅನೇಕ ಮನೆಗಳು ಅಪಾಯದ ಅಂಚಿನಲ್ಲಿವೆ.

09:15 AM (IST) Jul 08

ಮಳೆ ಭೀತಿ: ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಘಟ್ಟಪ್ರದೇಶಗಳಲ್ಲೂ ಭಾರೀ ಮಳೆ ಮುಂದುವರಿದಿದ್ದು ಕೊಡಗಿನ ಜಿಲ್ಲೆಯ ಎಲ್ಲ ಶಾಲೆ ಕಾಲೇಜುಗಳಿಗೆ ಮತ್ತು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಕಳಸ, ಎನ್‌.ಆರ್‌.ಪುರ, ಮೂಡಿಗೆರೆ ತಾಲೂಕುಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

09:13 AM (IST) Jul 08

Haveri: ಮುಂದಿವರಿದ ಮಳೆರಾಯನ ಆರ್ಭಟ

ಹಾವೇರಿ ಜಿಲ್ಲೆಯಲ್ಲಿ ರಾತ್ರಿ ಮಳೆ ಜೋರಾಗಿದ್ದು, ಈಗಲೂ ಮುಂದುವರಿದಿದೆ. ಬಿಡದೇ ಸುರಿಯುತ್ತಿರುವ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. 

09:12 AM (IST) Jul 08

ಉತ್ತರ ಕನ್ನಡ: ರಾತ್ರಿ ಇಡೀ ಸುರಿದಿದೆ ಮಳೆ

ರಾತ್ರಿಯಿಡಿ ಮಳೆ ಕಾರವಾರ ಸಮೀಪ ಬಿಣಗಾ, ಅರಗಾದಲ್ಲಿ ರಾಷ್ಟ್ರೀಯ ಹೆದ್ದಾರಿ ಜಲಾವೃತ. ಸಂಚಾರ ಬಂದ್. 


More Trending News