ರಾಜ್ಯದಲ್ಲಿ ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗಿಯಾದ ಸರ್ಕಾರಿ ನೌಕರರ ಅಮಾನತು: ಸಚಿವ ಪ್ರಿಯಾಂಕ್ ಖರ್ಗೆ

Published : Oct 16, 2025, 02:12 PM IST
Priyank kharge

ಸಾರಾಂಶ

ಸಚಿವ ಪ್ರಿಯಾಂಕ್ ಖರ್ಗೆಯವರು, ಆರ್‌ಎಸ್‌ಎಸ್‌ನಂತಹ ಸಂಸ್ಥೆಗಳ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ. ಕರ್ನಾಟಕ ಸಿವಿಲ್ ಸರ್ವೀಸ್ ನಿಯಮಗಳನ್ನು ಉಲ್ಲಂಘಿಸಿದರೆ ತಕ್ಷಣವೇ ಅಮಾನತು ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು (ಅ.16): ರಾಜ್ಯದಲ್ಲಿ ಕೆಲವು ಸರ್ಕಾರಿ ನೌಕರರು ರಾಜಕೀಯ ಚಟುವಟಿಕೆಗಳಲ್ಲಿ, ವಿಶೇಷವಾಗಿ ಆರ್‌ಎಸ್‌ಎಸ್‌ನಂತಹ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ನಿಯಮ ಉಲ್ಲಂಘಿಸಿದವರನ್ನು ತಕ್ಷಣವೇ ಅಮಾನತು ಮಾಡುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ರಾಜ್ಯದಲ್ಲಿ ಕರ್ನಾಟಕ ಸಿವಿಲ್ ಸರ್ವೀಸ್ ರೂಲ್ಸ್ ಜಾರಿಯಲ್ಲಿದೆ. ಸರ್ಕಾರಿ ನೌಕರರು ಹೆಚ್ಚು ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು ಎಂದು ಸ್ಪಷ್ಟ ನಿಯಮವಿದೆ. ಆದರೂ ನಿನ್ನೆ ಮೊನ್ನೆ ಕೆಲವರು ಆರ್‌ಎಸ್‌ಎಸ್ ಫಂಕ್ಷನ್‌ಗಳಲ್ಲಿ ಭಾಷಣ ಮಾಡಿದ್ದಾರೆ. ನಮ್ಮ ಇಲಾಖೆಯಲ್ಲಿಯೂ ಕೆಲವರು ಹೋಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿಯಮ ಉಲ್ಲಂಘಿಸಿದರೆ ಸಸ್ಪೆಂಡ್‌ ಖಚಿತ:

ಆರ್‌ಎಸ್‌ಎಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಸರ್ಕಾರಿ ಅಧಿಕಾರಿಗಳ ಕುರಿತು ವರದಿ ಕೇಳಿದ್ದೇನೆ. ಆ ವರದಿ ಬರುತ್ತಲೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಅಮಾನತು (ಸಸ್ಪೆಂಡ್) ಮಾಡುತ್ತೇನೆ. ಈ ವಿಚಾರವನ್ನು ನಾನು ಇವತ್ತಿನ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಆ ನಿಟ್ಟಿನಲ್ಲಿ ನನ್ನ ಮನವಿಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ. ಇದೇ ವೇಳೆ, ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಆವರಣಗಳಲ್ಲಿ ಇಂತಹ ಸಂಘಟನೆಗಳ ಚಟುವಟಿಕೆಗಳನ್ನು ನಿಷೇಧಿಸುವ ಕುರಿತು ಮಾತನಾಡಿದ ಅವರು, ನಾನು ಯಾವತ್ತೂ ಒಂದೇ ಸಂಸ್ಥೆ (ಆರ್‌ಎಸ್‌ಎಸ್) ಅಂತ ಹೇಳಿಲ್ಲ. ಇಂತಹ ಯಾವುದೇ ಸಂಸ್ಥೆ ಇರಲಿ, ಅವರು ಸರ್ಕಾರಿ ನೌಕರರನ್ನು ಅಥವಾ ಸರ್ಕಾರಿ ಆಸ್ತಿಗಳನ್ನು ದುರ್ಬಳಕೆ ಮಾಡಬಾರದು ಎಂದರು.

ಶೆಟ್ಟರ್ ಸರ್ಕಾರದ ಆದೇಶದ ಉಲ್ಲೇಖ:

ಈ ಕುರಿತು ಹಿಂದೆಯೂ ಆದೇಶಗಳು ಹೊರಡಿಸಲಾಗಿದ್ದವು ಎಂಬುದನ್ನು ಖರ್ಗೆ ನೆನಪಿಸಿದರು. "2012 ರಲ್ಲಿಯೇ ಒಂದು ಆರ್ಡರ್ ಇದೆ. ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ ಆಗಿದ್ದಾಗ, 'ಶಾಲೆಗಳಲ್ಲಿ ಈ ರೀತಿಯವರು ಭಾಗವಹಿಸಬಾರದು' ಅಂತ ಆದೇಶ ಮಾಡಿದ್ದರು. ಹಿಂದೆ ಹಲವು ಡಿಪಾರ್ಟ್‌ಮೆಂಟ್‌ಗಳು ಆರ್ಡರ್ ಮಾಡಿವೆ. ಇವತ್ತು ಲೋಪಗಳಿವೆ, ಅದಕ್ಕೆ ಇವರೆಲ್ಲರೂ ಬೆಳೆದಿದ್ದಾರೆ. ಈ ಹಿಂದೆ ಸರ್ದಾರ್ ಪಟೇಲ್, ಇಂದಿರಾ ಗಾಂಧಿ ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡಲಿಲ್ಲ ಎಂದು ಕೆಲವರು ಹೇಳುವುದಕ್ಕೆ ಪ್ರತಿಕ್ರಿಯಿಸಿ, 'ಹೌದು, ಅವತ್ತು ವಾಪಸ್ ಪಡೆದಿದ್ದು ಸರಿಯಲ್ಲ ಅಂತಲೇ ನಾವು ಹೇಳುತ್ತಿದ್ದೇವೆ' ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

ಗುರುಪೂರ್ಣಿಮೆ ದೇಣಿಗೆ ಬಗ್ಗೆ ಎಚ್ಚರಿಕೆ:

ಸರ್ಕಾರಿ ನೌಕರರು ದೇಣಿಗೆ ಸಂಗ್ರಹಿಸುವ ಕುರಿತು ಎಚ್ಚರಿಕೆ ನೀಡಿದ ಖರ್ಗೆ, 'ಅಧಿಕೃತವಾಗಿ ದೇಣಿಗೆ ಕೊಡಿ. ಎರಡು ವರ್ಷದ ಹಿಂದೆ ನಾನೇ ಇಶ್ಯೂ ರೈಸ್ ಮಾಡಿದ್ದೆ. ಗುರುಪೂರ್ಣಿಮೆ ವೇಳೆ ಪಿಡಿಒಗಳಿಂದ ₹ 2 ಸಾವಿರದಷ್ಟು ಹಣ ಪಡೆದಿದ್ದರು. ನೀವು ನಿಮ್ಮ ವೈಯಕ್ತಿಕ ಹಣವನ್ನ ಯಾರಿಗೆ ಬೇಕಾದರೂ ದೇಣಿಗೆ ಕೊಡಿ. ಆದರೆ, ಸರ್ಕಾರದ ಹಣವನ್ನ ಕೊಡಬೇಡಿ. ಸರ್ಕಾರಿ ಅಧಿಕಾರಿಗಳು ಸರ್ಕಾರದ ಹಣವನ್ನು ದುರುಪಯೋಗ ಮಾಡಬಾರದು ಎಂದು ಸಚಿವರು ಸ್ಪಷ್ಟ ಎಚ್ಚರಿಕೆ ನೀಡಿದರು.

ಹಿಂದುತ್ವ ರಾಜಕೀಯದ ಟೀಕೆ:

ಇದೇ ವೇಳೆ, ಹಿಂದುತ್ವದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, 'ಹಿಂದುತ್ವವನ್ನು ಯಾರು ತಂದಿದ್ದು? ಸಾರ್ವಕರ್ ತಾನೇ ಹಿಂದುತ್ವವನ್ನು ತಂದಿದ್ದು? ಮೊದಲು ಎಲ್ಲರೂ ಹಿಂದೂ ಅಂತಾನೇ ಇತ್ತು. ಇವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳೋಕೆ ಹಿಂದುತ್ವವನ್ನು ತಂದಿದ್ದಾರೆ. ಕೆಲವು ವಿಚಾರಗಳಲ್ಲಿ ನಾನು ನಂಬಲ್ಲ. ನಮ್ಮ ತಾಯಿ ನಂಬ್ತಾರೆ. ಆದರೆ, ನನ್ನ ನಂಬಿಕೆ ಬೇರೆಯವರಿಗೆ ತೊಂದರೆ ಕೊಡಬಾರದು ಮತ್ತು ಸಂವಿಧಾನದ ಆಶಯಗಳಿಗೆ ಧಕ್ಕೆ ಬರಬಾರದು. ಅಸ್ಸಾಂ, ಮಿಜೋರಾಂ, ಗೋವಾ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದರ ಹಿಂದೆ ಹಣ ಅಥವಾ ಬೇರೆ ರಾಜಕೀಯ ಕಾರಣಗಳಿವೆ ಎಂದು ಅವರು ಪರೋಕ್ಷವಾಗಿ ಆರೋಪಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ
ವರುಣಾ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ, ಆದರೂ ಶ್ರಮಿಸುವೆ: ಯತೀಂದ್ರ ಸಿದ್ದರಾಮಯ್ಯ