
ಬೆಂಗಳೂರು (ಏ.10): ಇಂದು ಕೆಪಿಸಿಸಿ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದರು. ಈ ಸಂದರ್ಭದಲ್ಲಿ ಶಾಸಕರಾದ ವಿನಯ ಕುಲಕರ್ಣಿ, ರಮೇಶ್ ಬಾಬು, ಮಾಜಿ ಶಾಸಕಿ ಹಾಗೂ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ ಮತ್ತು ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು.
ಬಿಜೆಪಿ ಜನಾಕ್ರೋಶಕ್ಕೆ ಡಿಕೆಶಿ ತಿರುಗೇಟು:
ಇಂದು ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಜನ ಆಕ್ರೋಶಗೊಂಡಿದ್ದಾರೆ. ಬಿಜೆಪಿಯವರು ಮಾಡುತ್ತಿರುವ ಜನಾಕ್ರೋಶ ಯಾತ್ರೆ ಎಂದರೆ ಕೇಂದ್ರ ಸರ್ಕಾರದ ಮೇಲೆ ಮಾಡುತ್ತಿರುವ ಯಾತ್ರೆಯೇ ಆಗಿದೆ. ಅವರಿಗೆ ಮೇಲೆ ಮಾಡಲು ಏನೂ ಇಲ್ಲ. ನಾವು ಬಜೆಟ್‌ನಲ್ಲಿ 52 ಸಾವಿರ ಕೋಟಿ ರೂಪಾಯಿ ಇಟ್ಟು ಜನರಿಗೆ ಸಹಾಯ ಮಾಡುತ್ತಿದ್ದೇವೆ. ಎಲ್ಲಾ ವರ್ಗದ ಜನರಿಗೆ ಅನುಕೂಲ ಮಾಡಿದ್ದೇವೆ. ಆದರೆ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಮಾಡಿ ಇವರ ಜನಾಕ್ರೋಶ ಯಾತ್ರೆಗೆ ಗಿಫ್ಟ್ ಕೊಟ್ಟಿದೆ' ಎಂದು ಡಿಕೆ ಶಿವಕುಮಾರ್ ತೀಕ್ಷ್ಣವಾಗಿ ಟೀಕಿಸಿದರು.
ಇದನ್ನೂ ಓದಿ: ಬೆಲೆ ಏರಿಕೆ ವಿರುದ್ಧ ವಾಟಾಳ್ ಪ್ರತಿಭಟನೆ; ರಾಜ್ಯ, ಕೇಂದ್ರದ ವಿರುದ್ಧ ಕಿಡಿ!
ಕೇಂದ್ರ ಸರ್ಕಾರದ ವಿರುದ್ಧ ಆರೋಪ:
ನಿನ್ನೆ ಮಾತ್ರ ಕಚ್ಚಾ ತೈಲ ಬೆಲೆ ಇಳಿಕೆಯಾಗಿದೆ. ಆದರೆ ಟ್ಯಾಕ್ಸ್ ಹಾಕಿ ಪೆಟ್ರೋಲ್ ಬೆಲೆಯನ್ನು 103 ರೂಪಾಯಿ ಮಾಡಿದ್ದಾರೆ. ಲೀಟರ್‌ಗೆ 43 ರೂಪಾಯಿ ಲಾಭ ಅವರಿಗೆ ಸಿಗುತ್ತಿದೆ. ಇದರಲ್ಲಿ 43 ಲಕ್ಷ ಕೋಟಿ ರೂಪಾಯಿ ಲೂಟಿ ಹೊಡಿಯಲು ಸಿಗುತ್ತಿದೆ ಎಂದು ಶಿವಕುಮಾರ್ ಆರೋಪಿಸಿದರು.
ಚಿನ್ನದ ದರ ಲೆಕ್ಕ ಹಾಕಿ, ಮೂರು ವರ್ಷದ ಹಿಂದೆ ಎಷ್ಟಿತ್ತು, ಈಗ ಎಷ್ಟಾಗಿದೆ? ಯುಪಿಎ ಸರ್ಕಾರ ಇದ್ದಾಗ 28 ಸಾವಿರ ಇತ್ತು. ಸಿಮೆಂಟ್, ಕಬ್ಬಿಣ, ವೆಹಿಕಲ್, ಮೊಬೈಲ್, ಟಿವಿ, ಫ್ರಿಡ್ಜ್ ಎಲ್ಲದರ ಬೆಲೆ ಹೆಚ್ಚಾಗಿದೆ. ಇದೆಲ್ಲಾ ಬಿಜೆಪಿಯವರಿಗೆ ಕಾಣಿಸುತ್ತಿಲ್ವಾ? ಏನ್ರಿ ಅಶೋಕ್, ವಿಜಯೇಂದ್ರ ಕಾಣಿಸುತ್ತಿಲ್ವಾ? ಎಂದು ಪ್ರಶ್ನಿಸಿದರು.
ರೈತರ ಪರ ನಿಲುವು:
ರೈತರ ಬದುಕನ್ನು ಉಳಿಸಲು ನಾವು ಹಾಲಿನ ದರ ಏರಿಕೆ ಮಾಡಿದ್ದೇವೆ. ಭೂಸಾ ಹಿಂಡಿ ಬೆಲೆ ಏಕೆ ಕಡಿಮೆ ಮಾಡಲಾಗಿಲ್ಲ? ಬೇರೆ ರಾಜ್ಯಗಳಲ್ಲಿ ಹಾಲಿನ ದರ ಹೆಚ್ಚಾಗಿದೆ. ನಾವು ರೈತರನ್ನು ಉಳಿಸಲು ಈ ತೀರ್ಮಾನ ತೆಗೆದುಕೊಂಡಿದ್ದೇವೆ. ನೀರಿನ ಬೆಲೆಯನ್ನು ಕಡಿಮೆ ಪ್ರಮಾಣದಲ್ಲಿ ಹೆಚ್ಚಿಸಿದ್ದೇವೆ, ಇನ್ನೂ ಹೆಚ್ಚು ಮಾಡಬಹುದಿತ್ತು ಎಂದು ಶಿವಕುಮಾರ್ ಸಮರ್ಥಿಸಿಕೊಂಡರು.
ಬಿಜೆಪಿಗೆ ತಿರುಗೇಟು:
ಇದು ರೈತ ವಿರೋಧಿ ಪಕ್ಷ. ಬ್ಯಾಂಕ್‌ಗಳಲ್ಲಿ ಎಲ್ಲದಕ್ಕೂ ದುಡ್ಡು ವಸೂಲಿ ಮಾಡುತ್ತಿದ್ದಾರೆ. ಖರ್ಗೆ ಸಾಹೇಬರು ಹೇಳಿದ್ದರು, ಇದು ದೊಡ್ಡ ಸ್ಕ್ಯಾಮ್ ಆಗಿದೆ ಎಂದು. ಚೆಕ್ ಬುಕ್ ತೆಗೆದುಕೊಂಡರೆ ದುಡ್ಡು, ಪ್ರತಿ ಟ್ರಾನ್ಸಾಕ್ಷನ್‌ಗೂ ದುಡ್ಡು. ನೀವು ಇದೆಲ್ಲಕ್ಕೂ ಉತ್ತರ ಕೊಡಬೇಕು. ಪೋಸ್ಟರ್‌ನಲ್ಲಿ ನಮ್ಮ ಸಿದ್ದರಾಮಯ್ಯನವರ ಫೋಟೋ ಬೇಡ, ನಿಮ್ಮ ನ್ಯಾಷನಲ್ ಲೀಡರ್ ಫೋಟೋ ಹಾಕಿ. ಗ್ಯಾರಂಟಿ ಯೋಜನೆ ವಿರುದ್ಧವಾಗಿರೋದು ನಿಮ್ಮ ಹೋರಾಟ' ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಕಾಂಗ್ರೆಸ್‌ನಿಂದ ಜನಾಕ್ರೋಶ ಯಾತ್ರೆ ಘೋಷಣೆ:
ಜನಾಕ್ರೋಶ ಯಾತ್ರೆಯ ಮೊದಲು ಕೇಂದ್ರ ಸರ್ಕಾರದ ವಿರುದ್ಧ ಎಂದು ಹಾಕಿ ಹೋರಾಡಿ. ಇದೇ 17ರಂದು ನಾವು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಜನಾಕ್ರೋಶ ಯಾತ್ರೆ ಮಾಡುತ್ತೇವೆ. ಸುರ್ಜೇವಾಲ ಅವರು ಇರ್ತಾರೆ, ನಾನೂ ಭಾಗವಹಿಸುತ್ತೇನೆ. ಕೇಂದ್ರ ಸರ್ಕಾರದ ವಿರುದ್ಧ ಜನರ ಆಕ್ರೋಶವನ್ನು ತೋರಿಸುತ್ತೇವೆ ಎಂದು ಡಿಸಿಎಂ ಘೋಷಿಸಿದರು.
ಗುತ್ತಿಗೆದಾರರ ಆರೋಪಕ್ಕೆ ಪ್ರತಿಕ್ರಿಯೆ:
ಬಸವರಾಜ ರಾಯರೆಡ್ಡಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ, 'ನಾನು ಹೇಳಿಲ್ಲ ಎಂದಿದ್ದಾರಲ್ಲ, ನಾನೊಮ್ಮೆ ಅವರ ಬಳಿ ಚರ್ಚೆ ಮಾಡುತ್ತೇನೆ. ಗುತ್ತಿಗೆದಾರರ ಸಂಘದವರು ಲೋಕಾಯುಕ್ತಕ್ಕೋ, ಪೊಲೀಸರಿಗೋ ದೂರು ಕೊಡಲಿ. ಬರೆದು ದೂರು ಕೊಟ್ಟರೆ ತನಿಖೆ ಮಾಡಿಸೋಣ. ನನ್ನ ಇಲಾಖೆ ಮೇಲೆ ಆರೋಪ ಮಾಡಿದ್ದರೂ ಸಂತೋಷ, ಲಿಖಿತ ರೂಪದಲ್ಲಿ ಕೊಡಲಿ, ತನಿಖೆಗೆ ಒಪ್ಪಿಸುತ್ತೇವೆ ಎಂದರು.
ಇದನ್ನೂ ಓದಿ: ಡಿಕೆಶಿ ಭಯದಿಂದ ಸಿದ್ದರಾಮಯ್ಯ ಬೆಂಗ್ಳೂರು ಬಿಡ್ತಿಲ್ಲ: ಬಿ.ವೈ.ವಿಜಯೇಂದ್ರ
ಎರಡನೇ ಏರ್‌ಪೋರ್ಟ್ ವಿಚಾರ:
ಎರಡನೇ ಏರ್‌ಪೋರ್ಟ್ ಶಿರಾದಲ್ಲಿ ಮಾಡುವ ಬಗ್ಗೆ ಕೈ ಶಾಸಕರಿಂದ ಸಹಿ ಸಂಗ್ರಹದ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಬಿಡದಿಯಲ್ಲಿ ಮಾಡಿ ಎಂದು ನಾನು ಹೇಳಿಲ್ಲ. ನನ್ನ ಜೊತೆ ಯಾರೂ ಚರ್ಚೆ ಮಾಡಿಲ್ಲ. ಕರ್ನಾಟಕದಲ್ಲಿ ಎಲ್ಲಿಯಾದರೂ ಸಂತೋಷವೇ. ನಾನು ಅಖಂಡ ಕರ್ನಾಟಕದ ಮೇಲೆ ನಂಬಿಕೆ ಇಟ್ಟವನು. ಚಾಮರಾಜನಗರವೂ ಒಂದೇ, ಬೀದರ್-ಗುಲ್ಬರ್ಗವೂ ಒಂದೇ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ