ಬೆಂಗಳೂರು 2ನೇ ಏರ್ಪೋರ್ಟ್: ಬಿಗ್ ಅಪ್ಡೇಟ್ ಕೊಟ್ಟ ಎಂ.ಬಿ. ಪಾಟೀಲ

Published : Apr 10, 2025, 05:14 PM ISTUpdated : Apr 10, 2025, 05:24 PM IST
ಬೆಂಗಳೂರು 2ನೇ ಏರ್ಪೋರ್ಟ್: ಬಿಗ್ ಅಪ್ಡೇಟ್ ಕೊಟ್ಟ ಎಂ.ಬಿ. ಪಾಟೀಲ

ಸಾರಾಂಶ

ಬೆಂಗಳೂರಿನ ಸಮೀಪ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಗುರುತಿಸಲಾದ ಮೂರು ಸ್ಥಳಗಳನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಪರಿಶೀಲಿಸಿದೆ. ಒಂದು ತಿಂಗಳಲ್ಲಿ ವರದಿ ನೀಡಲಿದ್ದು, ನಂತರ ಪರಿಣಿತ ಕಂಪನಿಗಳೊಂದಿಗೆ ವಿಸ್ತೃತ ಅಧ್ಯಯನ ನಡೆಸಲಾಗುವುದು. 2033ರವರೆಗೆ 150 ಕಿ.ಮೀ ವ್ಯಾಪ್ತಿಯಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸುವಂತಿಲ್ಲ. ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಸಿದ್ಧವಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.

ಬೆಂಗಳೂರು (ಏ.10): ರಾಜ್ಯದ ರಾಜಧಾನಿ ಬೆಂಗಳೂರಿನ ಸಮೀಪ ನಿರ್ಮಿಸಲು ಉದ್ದೇಶಿಸಿರುವ 2ನೇ ಏರ್ಪೋರ್ಟ್ ಸಂಬಂಧ ರಾಜ್ಯ ಸರ್ಕಾರ ಗುರುತಿಸಿದ್ದ 3 ಸ್ಥಳಗಳ ಪರಿಶೀಲನೆ ನಡೆಸಿರುವ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ (ಎಎಐ) ಉನ್ನತ ಮಟ್ಟದ ತಂಡವು ಮುಂದಿನ ಒಂದು ತಿಂಗಳಲ್ಲಿ ತನ್ನ ಅಭಿಪ್ರಾಯ ತಿಳಿಸುವ ಸಾಧ್ಯತೆಯಿದೆ. ಬಳಿಕ ಇದನ್ನು ವಿಸ್ತೃತ ಅಧ್ಯಯನಕ್ಕೆ ವಿಮಾನ‌ ನಿಲ್ದಾಣಗಳ ಅಭಿವೃದ್ಧಿಪಡಿಸುವಂತಹ ಪರಿಣತ ಕಂಪನಿಗಳ ಮುಂದೆ ಕೊಂಡೊಯ್ಯಲಾಗುವುದು. ಬಳಿಕ ಸರಕಾರವು ವಿಮಾನ‌ ನಿಲ್ದಾಣಕ್ಕೆ ಸ್ಥಳವನ್ನು ಅಂತಿಮಗೊಳಿಸಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.

ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಎಐ ತಂಡ ಬಂದು ಹೋಗಿರುವುದು ನಿಜ. ವಿಮಾನ‌ ನಿಲ್ದಾಣವನ್ನು ಎಲ್ಲಿ ಮಾಡಿದರೆ ಸೂಕ್ತವೆನ್ನುವುದು ಪ್ರಯಾಣಿಕರ ದಟ್ಟಣೆ, ಕಾರ್ಗೋ ದಟ್ಟಣೆ ಮತ್ತು ಕೈಗಾರಿಕಾ ಅಗತ್ಯ ಮುಂತಾದ ಅಂಶಗಳನ್ನು ಅವಲಂಬಿಸಿದೆ. ಈಗ ದೇವನಹಳ್ಳಿ ಬಳಿ ವಿಮಾನ‌ ನಿಲ್ದಾಣವಿದೆ. 2033ರವರೆಗೂ ಇಲ್ಲಿಂದ 150 ಕಿ.ಮೀ. ಅಂತರದಲ್ಲಿ ಇನ್ನೊಂದು ಏರ್ಪೋರ್ಟ್ ಮಾಡಬಾರದು ಎನ್ನುವ ಷರತ್ತಿದೆ. ನಾವು ಈಗಿನಿಂದಲೇ ಪ್ರಾರಂಭಿಸಿದರೆ, 2030ರ ವೇಳೆಗೆ ಎರಡನೇ ಏರ್ಪೋರ್ಟ್ ಅಭಿವೃದ್ಧಿ ಪ್ರಾರಂಭಿಸಬಹುದು. ಇಲ್ಲದೆ ಹೋದರೆ 2040ನೇ ಇಸವಿ ಬಂದರೂ ವಿಮಾನ‌ ನಿಲ್ದಾಣ ಆಗುವುದಿಲ್ಲ ಎಂದು ವಿವರಿಸಿದರು.

ಹಿರಿಯ ನಾಯಕ ಟಿ ಬಿ ಜಯಚಂದ್ರ ಅವರು ತಮ್ಮ ಕ್ಷೇತ್ರವಾದ ಶಿರಾ ಸಮೀಪ ಏರ್ಪೋರ್ಟ್ ನಿರ್ಮಾಣ ಮಾಡಬೇಕು ಎಂದು ತಮ್ಮ ಪ್ರಯತ್ನವನ್ನು ಶುರು ಮಾಡಿದ್ದಾರೆ. ಅಲ್ಲಿ ಜಿಲ್ಲಾ ಮಟ್ಟದ ಏರ್ಪೋರ್ಟ್ ಮಾಡಬಹುದೇ ವಿನಃ, ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಆಗುವುದಿಲ್ಲ. ಬಿಜೆಪಿಯ ಅರವಿಂದ ಬೆಲ್ಲದ್ ಕೂಡ ಉತ್ತರ ಕರ್ನಾಟಕಕ್ಕೆ ಅನುಕೂಲವಾಗುವ ಜಾಗದಲ್ಲಿ ಹೊಸ ಏರ್ಪೋರ್ಟ್ ಬರಲಿ ಎನ್ನುತ್ತಿದ್ದಾರೆ. ಕೇವಲ ಜಾಗವನ್ನು ಕೊಟ್ಟ ಮಾತ್ರಕ್ಕೆ  ಎಲ್ಲವೂ ಆಗುವುದಿಲ್ಲ ಎಂದು ಸಚಿವ ಎಂ.ಬಿ. ಪಾಟೀಲ ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರು 2ನೇ ವಿಮಾನ ನಿಲ್ದಾಣ: ನೆಲಮಂಗಲ ಬಳಿಯ 5000 ಎಕರೆ ಭೂಮಿ ಪರಿಶೀಲನೆ, ಇಲ್ಲಿದೆ ಬ್ಲೂ ಪ್ರಿಂಟ್!

ಇನ್ನು ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜಾಗಿದೆ. ಸುಪ್ರೀಂಕೋರ್ಟಿನಲ್ಲಿ ಪರಿಸರ ಇಲಾಖೆಯ ಅನುಮತಿ ಸಂಬಂಧ ಒಂದು ಪ್ರಕರಣವಿದೆ. ಅದು ಸದ್ಯದಲ್ಲೇ ಇತ್ಯರ್ಥಗೊಳ್ಳುವ ಲಕ್ಷಣಗಳಿವೆ. ಇದಾದರೆ, ಇನ್ನು 6 ತಿಂಗಳಲ್ಲಿ ಉದ್ಘಾಟನೆ ಆಗಲಿದೆ ಎಂದು ತಿಳಿಸಿದರು.

ರಾಯರಡ್ಡಿ ಮಾತನ್ನು ಪಕ್ಷ ಗಮನಿಸಲಿದೆ: ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಕರ್ನಾಟಕವು ಭ್ರಷ್ಟಾಚಾರದಲ್ಲಿ ನಂಬರ್ 1 ಆಗಿದೆ ಎಂದು ಹೇಳಿದ್ದಾರೆ. ಭ್ರಷ್ಟಾಚಾರದಲ್ಲಿ ಯಾರಾರು ಭಾಗಿಯಾಗಿದ್ದಾರೆ ಎನ್ನುವುದನ್ನೂ ಅವರು ಹೇಳಬೇಕಿತ್ತು. ಅವರ ಮಾತುಗಳನ್ನು ಪಕ್ಷವು ಗಮನಿಸಿದೆ. ಯಾರೂ ಪಕ್ಷಕ್ಕಿಂತ ದೊಡ್ಡವರಿಲ್ಲ. ಇನ್ನು ಅಹಮದಾಬಾದ್ ಎಐಸಿಸಿ ಅಧಿವೇಶನದಲ್ಲಿ ಪಕ್ಷವು ಬಡವರು, ದಲಿತರು, ಮಹಿಳೆಯರು ಮತ್ತು ಅಲ್ಪಸಂಖ್ಯಾತರನ್ನು ಗಮನದಲ್ಲಿಟ್ಟುಕೊಂಡು ನಿರ್ಣಯಗಳನ್ನು ತೆಗೆದುಕೊಂಡಿದೆ. ಒಬ್ಬರಿಗೆ ಒಂದೇ ಹುದ್ದೆ ಎನ್ನುವ ನಿಯಮಕ್ಕೆ ಪಕ್ಷದಲ್ಲಿ ಕೆಲವು ಅಪವಾದಗಳೂ ಇವೆ. ಅನುಭವ ಮತ್ತು ಹಿರಿತನಗಳ ಮೇಲೆ ಇಂತಹ ವಿನಾಯಿತಿ ಕೊಡಬೇಕಾಗುತ್ತದೆ ಎಂದು ಸಚಿವ ಪಾಟೀಲ ತಿಳಿಸಿದರು.

ಇದನ್ನೂ ಓದಿ: ಏಪ್ರಿಲ್‌ನಲ್ಲಿ ಅಂತಿಮವಾಗಲಿದೆ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಳ 

ರಾಜ್ಯ ಸರ್ಕಾರದಿಂದ ಬೆಂಗಳೂರು ಬಳಿ 2ನೇ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡುವುದಕ್ಕೆ ಈಗಾಗಲೇ ಕೆಲವು ಪ್ರಾಥಮಿಕ ಅಂಶಗಳ ಆಧಾರದಲ್ಲಿ 9 ಸ್ಥಳಗಳನ್ನು ಗುರುತಿಸಿತ್ತು. ಆವುಗಳಲ್ಲಿ ರಾಮನಗರ ಜಿಲ್ಲೆಯ ಕನಕಪುರ ಭಾಗದಲ್ಲಿ 2 ಸ್ಥಳಗಳು ಹಾಗೂ ನೆಲಮಂಗಲದ ಬಳಿಯ 1 ಸ್ಥಳವನ್ನು ಅಂತಿಮಗೊಳಿಸಲಾಗಿತ್ತು. ಈ ಎಲ್ಲ ಜಾಗಗಳಲ್ಲಿಯೂ ಕನಿಷ್ಠ 5,000 ಎಕರೆ ಭೂಮಿಯನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟುಕೊಡಬೇಕಾಗುತ್ತದೆ. ಮೂರು ಸ್ಥಳಗಳನ್ನು ಕೇಂದ್ರ ಸರ್ಕಾರ ಪರಿಶೀಲನೆ ಮಾಡಿದ್ದು, ಒಂದು ತಿಂಗಳಲ್ಲಿ ಈ 3 ಸ್ಥಳದಲ್ಲಿ ಒಂದನ್ನು ಅಂತಿಮ ಮಾಡಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!