ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಕೃಷಿ ಹೊಂಡದಲ್ಲಿ ಸೋಡಿಯಂ ಬಳಸಿ ಸ್ಫೋಟ ನಡೆಸಿದ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿಯಿಂದ ಡ್ರೋಣ್ ಪ್ರತಾಪ್ ಮತ್ತು ಕೃಷಿಹೊಂಡದ ಮಾಲೀಕ ಜಿತೇಂದ್ರ ಜೈನ್‌ಗೆ ನೋಟಿಸ್ ಜಾರಿಯಾಗಿದೆ.
ತುಮಕೂರು(ಡಿ.29) ಬಿಗ್ ಬಾಸ್ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದ ಡ್ರೋನ್ ಪ್ರತಾಪ್ ಕೃಷಿ ಹೊಂಡದಲ್ಲಿ ಸೋಡಿಯಂ ಬಳಸಿ ಸ್ಫೋಟ ನಡೆಸಿದ ಪ್ರಕರಣದಲ್ಲಿ ಜೈಲು ಸೇರಿದ್ದಾನೆ. ಇದೀಗ ಡ್ರೋಣ್ ಪ್ರತಾಪ್ ಮತ್ತು ಸ್ನೇಹಿತನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಸ್ಫೋಟ ಪ್ರಕರಣ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ, ಜಲಮಾಲಿನ್ಯ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕಾಯ್ದೆ 1974 ಅಡಿ ನೋಟಿಸ್ ನೀಡಲಾಗಿದ್ದು, ಡ್ರೋಣ್ ಪ್ರತಾಪ್ ಹಾಗೂ ಕೃಷಿಹೊಂಡದ ಮಾಲೀಕ ಜಿತೇಂದ್ರ ಜೈನ್ ಗೆ ನೋಟಿಸ್ ಕಳುಹಿಸಲಾಗಿದೆ. ಗೆಳೆನಯನ ಸಂಗ ಮಾಡಿ ಪ್ರಕರಣದಲ್ಲಿ ಸಿಕ್ಕಿಬಿದ್ದ ಜೀತೇಂದ್ರ ಜೈನ್ ಗೆ ಆತಂಕ ಶುರುವಾಗಿದೆ.
undefined
ಬಿಗ್ ಬಾಸ್ ಡ್ರೋನ್ ಪ್ರತಾಪ್‌ಗೆ 10 ದಿನಗಳ ನ್ಯಾಯಾಂಗ ಬಂಧನ
ಸ್ಥಳದ ಕುರಿತು ಅಧಿಕಾರಿಗಳು ನೀಡಿರುವ ಅಂಶಗಳೇನು?
ರಾಸಾಯನಿಕ ಸ್ಪೋಟ ಮಾಡಿರುವ ಕೃಷಿಹೊಂಡ ಐಡಿಹಳ್ಳಿಯ ಜಿತೇಂದ್ರ ಜೈನ್ ಮಾಲೀಕತ್ವದ್ದಾಗಿದೆ. ಕೃಷಿಹೊಂಡ 80×60 ವಿಸ್ತೀರ್ಣ ಹೊಂದಿದ್ದು ಐದರಿಂದ ಆರು ಅಡಿ ಆಳವಿದೆ. ಕೃಷಿಹೊಂಡದ ತಳಭಾಗಕ್ಕೆ ಪ್ಲಾಸ್ಟಿಕ್ ಹೊದಿಕೆ ಇದ್ದು, ಮಳೆ ನೀರು ಶೇಖರಣೆಯಾಗಿರುತ್ತದೆ. ಆದರೆ ಕೃಷಿ ಹೊಂಡದಲ್ಲಿ ಯಾವುದೇ ಮೀನು ಸಾಕಾಣಿಕೆ ಆಗಿರುವುದಿಲ್ಲ. ಕೃಷಿಹೊಂಡ ಐಡಿಹಳ್ಳಿಯಿಂದ ಜನಕಲೋಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಹೊಂದಿಕೊಂಡಿದೆ. ಸ್ಫೋಟ ಪ್ರಕರಣದಲ್ಲಿ ಪ್ರತಾಪ್ ರನ್ನು ಮಿಡಿಗೇಶಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಎಕ್ಸ್ ಪ್ಲೋಸಿವ್ ಆಕ್ಟ್ 1908 ಹಾಗೂ ಬಿ.ಎನ್.ಎಸ್ 288 ಅಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಮಿಡಿಗೇಶಿ ಠಾಣೆ ಪೊಲೀಸರಿಂದ ಪರಿಸರ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಮಾಹಿತಿಯಂತೆ ಡ್ರೋಣ್ ಪ್ರತಾಪ್ ಸೋಡಿಯಂ ಮೆಟಲ್ ರಾಸಾಯನಿಕ ಬಳಸಿ ಸ್ಪೋಟವನ್ನು ಡಿಸೆಂಬರ್ 01 2024 ರಂದು ಸ್ಫೋಟಿಸಲಾಗಿದೆ. ಸ್ಥಳದಲ್ಲಿ ದೊರೆತ ಸ್ಪೋಟಕ ಹಾಗೂ ಇನ್ನಿತರ ವಸ್ತುಗಳನ್ನು ಎಫ್.ಎಸ್.ಎಲ್ ಗೆ ರವಾನಿಸಲಾಗಿದೆ. ಈ ಪ್ರಕರಣ ಸಂಬಂಧ ಸ್ಫೋಟದ ವೇಳೆ ಸ್ಥಳದಲ್ಲಿದ್ದ ಕಾರ್ಮಿಕರ ಹೇಳಿಕೆಯನ್ನು ಪರಿಸರ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.
ಕಾರ್ಮಿಕರು ಹೇಳುವಂತೆ, ಕೃಷಿ ಕಾರ್ಮಿಕರು ಕೃಷಿಹೊಂಡದ ನೀರನ್ನು ಯಾವುದೇ ಕಾರ್ಯಕ್ಕೂ ಬಳಸುತ್ತಿರಲಿಲ್ಲ ಎಂದು ಹೇಳಿದ್ದಾರೆ. ಬಳಿಕ ಕೃಷಿಹೊಂಡದ ಬೋರ್ ವೆಲ್ ನೀರಿನ ಮಾದರಿಯನ್ನ ಪಡೆದು ಪರಿಶೀಲನೆಗೆ ರವಾನಿಸಿರೋ ಅಧಿಕಾರಿಗಳು. ಕೃಷಿ ಹೊಂಡದ ಸುತ್ತಮುತ್ತಲಿನ 500 ಮೀಟರ್ ಅಂತರದಲ್ಲಿ ಯಾವುದೇ ಕೆರೆಕಟ್ಟೆ ಹಾಗೂ ವಾಸದ ಮನೆಗಳಿಲ್ಲ. ಸದ್ಯ ಆರೋಪಿ ಡ್ರೋಣ್ ಪ್ರತಾಪ್‌ರನ್ನ ಮಧುಗಿರಿ ಕಾರಾಗೃಹದಲ್ಲಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆಂದು ಪರಿಸರ ಅಧಿಕಾರಿಗಳು ವರದಿ ನೀಡಿದ್ದಾರೆ.
ಡ್ರೋಣ್ ಪ್ರತಾಪ್ ಸಂಗ ಮಾಡಿ ಕೆಟ್ಟ ಗೆಳೆಯ:
ಡ್ರೋನ್ ಪ್ರತಾಪ್, ಜಿತೇಂದ್ರ ಜೈನ್ ಸ್ನೇಹಿತರಾಗಿದ್ರು. ಆಗಾಗ ಸ್ನೇಹಿತನಿಗೆ ಮನೆಗೆ ಬರುತ್ತಿದ್ದ ಡ್ರೋನ್ ಪ್ರತಾಪ್. ಆದರೆ ಇವನು ಮುಂದೆ ಕಾನೂನು ಸಂಕಷ್ಟಕ್ಕೆ ತಳ್ಳುತ್ತಾನೆ ಎಂಬ ಸಣ್ಣ ಸುಳಿವು ಸಿಗಲಿಲ್ಲವೇನೋ, ಕೃಷಿ ಹೊಂಡದಲ್ಲಿ ಸ್ಫೋಟಿಸುವ ಕುರಿತು ಯೋಚಿಸಿದಾಗಲೂ ಮುಂದಾಗಬಹುದಾದ ಅನಾಹುತಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ಡ್ರೋಣ್ ಪ್ರತಾಪ್ ಮಾಡಿದ ಹುಚ್ಚಾಟಕ್ಕೆ ಕೃಷಿ ಹೊಂಡದ ಮಾಲೀಕನಾಗಿರುವ ಗೆಳೆಯನಿಗೆ ಸಂಕಷ್ಟ ಎದುರಾಗಿದೆ. ಮಧುಗಿರಿಯ ಐಡಿಹಳ್ಳಿಯಲ್ಲಿರುವ ಜಿತೇಂದ್ರ ಜೈನ್ ರ ಕೃಷಿಹೊಂಡದಲ್ಲಿ ಸೋಡಿಯಂ ಮೆಟಲ್ ಬಾಂಬ್ ಸ್ಪೋಟಿಸಿದ್ದ ಡ್ರೋನ್ ಪ್ರತಾಪ್. ಸ್ಫೋಟದ ವಿಡಿಯೋ ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದ. ಸೋಷಿಯಲ್ ಮೀಡಿಯಾದಲ್ಲೇ ನೆಟ್ಟಿಗರು ಪ್ರತಾಪ್‌ನ ಹುಚ್ಚಾಟವನ್ನು ತರಾಟೆ ತೆಗೆದುಕೊಂಡಿದ್ದರು. ಅಲ್ಲದೇ ಸುಮ್ಮನೆ ಇರಲಾರದ ಇರುವೆ ಬಿಟ್ಟುಕೊಂಡಿರುವ ಡ್ರೋನ್ ಪ್ರತಾಪ್ ನಿನಗೆ ಜೈಲೂಟ ಫಿಕ್ಸ್ ಎಂದು ಎಚ್ಚರಿಸಿದ್ದರು. ಆಗಲೂ ವಿಡಿಯೋ ಡಿಲಿಟ್ ಮಾಡದೆ ಬಿಟ್ಟಿದ್ದ ಪ್ರತಾಪ್. ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಬಾಂಬ್ ಹೆಸರಲ್ಲಿ ರಾಸಾಯನಿಕ ಸ್ಫೋಟಿಸಿ ವಿಡಿಯೋ ಹರಿಬಿಟ್ಟಿದ್ದ ಡ್ರೋಣ್ ಪ್ರತಾಪ್ ಕೈಕೋಳ ತೊಡಿಸಿ ಜೈಲಿಗೆ ದಬ್ಬಿದ್ದಾರೆ.