ಬಿಜೆಪಿ ನಾಯಕರಿಗೂ ತಿಳಿಯುತ್ತಿಲ್ಲ ಆಪರೇಷನ್‌ ರಹಸ್ಯ!

By Web DeskFirst Published Jan 15, 2019, 7:52 AM IST
Highlights

ಬಿಜೆಪಿ ನಾಯಕರಿಗೂ ತಿಳಿಯುತ್ತಿಲ್ಲ ಆಪರೇಷನ್‌ ರಹಸ್ಯ!

ಬೆಂಗಳೂರು[ಜ.15]: ಪರ್ಯಾಯ ಸರ್ಕಾರ ರಚನೆ ಸಂಬಂಧ ನಡೆಯುತ್ತಿರುವ ರಹಸ್ಯ ಕಾರ್ಯಾಚರಣೆ ಪ್ರಕ್ರಿಯೆಯಲ್ಲಿ ಬೆರಳೆಣಿಕೆಯಷ್ಟುಸಂಖ್ಯೆಯ ಮುಖಂಡರನ್ನು ಹೊರತುಪಡಿಸಿ ಅನೇಕ ಹಿರಿಯ ನಾಯಕರನ್ನೇ ಹೊರಗಿಡಲಾಗಿದೆ.

ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌, ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ್‌ ಲಿಂಬಾವಳಿ, ಶೋಭಾ ಕರಂದ್ಲಾಜೆ, ಎನ್‌.ರವಿಕುಮಾರ್‌, ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರನ್ನು ಹೊರತುಪಡಿಸಿದರೆ ಏನೇನಾಗುತ್ತಿದೆ ಎಂಬುದರ ನಿಖರ ಮಾಹಿತಿ ಇನ್ನುಳಿದ ಹಿರಿಯ ನಾಯಕರಿಗೂ ಗೊತ್ತಿಲ್ಲ. ಅಲ್ಲೊಂದು ಇಲ್ಲೊಂದು ಮಾಹಿತಿ ಮಾತ್ರ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಕಳೆದ ಮೇ ತಿಂಗಳಲ್ಲಿ ಫಲಿತಾಂಶ ಹೊರಬಿದ್ದ ನಂತರ ಮೊದಲ ಬಾರಿಗೆ ಸರ್ಕಾರ ರಚನೆ ವೇಳೆ ನಡೆದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಬಾರಿ ಒಟ್ಟಾರೆ ಪ್ರಕ್ರಿಯೆಯಲ್ಲಿ ರಹಸ್ಯ ಕಾಪಾಡಲು ತೀರ್ಮಾನಿಸಲಾಗಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರಿಗೆ ಮಾಹಿತಿ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂಬ ಸೂಚನೆ ಪಕ್ಷದ ವರಿಷ್ಠರಿಂದ ಹೊರಬಿದ್ದಿತ್ತು.

ಹೀಗಾಗಿ, ಈಗಾಗಲೇ ಬಳಕೆಯಲ್ಲಿರುವ ಮೊಬೈಲ್‌ ನಂಬರ್‌ಗಳನ್ನು ಬಿಟ್ಟು ಹೊಸ ಮೊಬೈಲ್‌ ನಂಬರ್‌ಗಳನ್ನು ಇಟ್ಟುಕೊಂಡು ಸೀಮಿತ ಸಂಖ್ಯೆಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್‌ನಲ್ಲಿಯ ಅತೃಪ್ತ ಶಾಸಕರನ್ನು ಸಂಪರ್ಕಿಸಿ ಮನವೊಲಿಸುವ ಪ್ರಯತ್ನ ಮಾಡಲಾಗಿದೆ. ಇದರಲ್ಲಿ ಪಕ್ಷದ ಮಹಾರಾಷ್ಟ್ರ ಹಾಗೂ ರಾಷ್ಟ್ರೀಯ ನಾಯಕರೂ ಭಾಗಿಯಾಗಿದ್ದಾರೆ ಎನ್ನಲಾಗಿದೆ.

click me!