ಬೆಂಗಳೂರು: ಸೈಬರ್ ವಂಚನೆ ತಡೆಗೆ ಎಐ ಅಸ್ತ್ರ ಪ್ರಯೋಗ

Kannadaprabha News   | Kannada Prabha
Published : Dec 06, 2025, 06:43 AM IST
karnataka Police to trial AI weapon to prevent cyber fraud

ಸಾರಾಂಶ

ಹೆಚ್ಚುತ್ತಿರುವ 'ಡಿಜಿಟಲ್ ಅರೆಸ್ಟ್' ನಂತಹ ಸೈಬರ್ ಅಪರಾಧಗಳನ್ನು ನಿಯಂತ್ರಿಸಲು ರಾಜ್ಯ ಪೊಲೀಸ್ ಇಲಾಖೆಯು ಕೃತಕ ಬುದ್ಧಿಮತ್ತೆ (ಎಐ) ಬಳಸಲು ಮುಂದಾಗಿದೆ. 1930 ಸಹಾಯವಾಣಿಯಲ್ಲಿ ದೂರುಗಳ ತ್ವರಿತ ಸ್ವೀಕಾರಕ್ಕೆ ಎಐ ಪಾಡ್ ಮತ್ತು ಹಣ ವರ್ಗಾವಣೆಗೆ ಬಳಸುವ ನಕಲಿ ಬ್ಯಾಂಕ್ ಖಾತೆ ಪತ್ತೆಹಚ್ಚಲು ಎಐ ತಂತ್ರಜ್ಞಾನ.

ಗಿರೀಶ್ ಮಾದೇನಹಳ್ಳಿ

ಬೆಂಗಳೂರು (ಡಿ.6): ಪ್ರಸುತ್ತ ಜನರಿಗೆ ಕಾಡುತ್ತಿರುವ ‘ಡಿಜಿಟಲ್ ಅರೆಸ್ಟ್’ ಸೇರಿ ಸೈಬರ್ ಅಪರಾಧ ಕೃತ್ಯಗಳಲ್ಲಿ ಹಣ ವರ್ಗಾವಣೆ ನಿಯಂತ್ರಣಕ್ಕೆ ಕೃತಕ ಬುದ್ಧಿಮತ್ತೆ (ಎಐ) ಅಸ್ತ್ರ ಪ್ರಯೋಗಿಸಲು ರಾಜ್ಯ ಪೊಲೀಸ್ ಇಲಾಖೆ ಮುಂದಾಗಿದೆ.

ಸೈಬರ್ ಅಪರಾಧ ಕೃತ್ಯದ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿ (1930)ಯಲ್ಲಿ ದೂರನ್ನು ಕ್ಷಿಪ್ರವಾಗಿ ಸ್ವೀಕರಿಸಲು ಎಐ ಪಾಡ್‌ ಹಾಗೂ ಹಣ ವರ್ಗಾವಣೆಗೆ ಬಳಕೆಯಾಗುವ ನಕಲಿ ಬ್ಯಾಂಕ್ ಖಾತೆಗಳ (ಮ್ಯೂಲ್‌ ಅಕೌಂಟ್‌) ಪತ್ತೆಗೆ ಎಐ ಬಳಸಲು ಎಲ್‌ ಆ್ಯಂಡ್ ಎಂ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಸ್‌.ಮುರುಗನ್ ಯೋಜಿಸಿದ್ದಾರೆ.

ಒಂದೆಡೆ ಸೈಬರ್ ಅಪರಾಧ ಪ್ರಕರಣಗಳಲ್ಲಿ ಹಣ ಜಪ್ತಿ ಪ್ರಮಾಣ ಗಣನೀಯವಾಗಿ ಪ್ರಗತಿ ಕಂಡಿಲ್ಲ. ಮತ್ತೊಂದೆಡೆ ಸೈಬರ್ ವಂಚನೆ ಕೃತ್ಯಗಳು ಭಾರಿ ಪ್ರಮಾಣದಲ್ಲಿ ಏರುಮುಖವಾಗಿದೆ. ಈ ಬೆಳವಣಿಗೆಯಿಂದ ಮುಂಜಾಗ್ರತೆ ವಹಿಸಿರುವ ಆಧುನೀಕರಣ ವಿಭಾಗದ ಅಧಿಕಾರಿಗಳು, ಈಗ ವಂಚಕರ ಜೇಬಿಗೆ ಜನರ ಹಣ ಹರಿವಿಕೆಗೆ ತಡೆಯಲು ಸಜ್ಜಾಗಿದ್ದಾರೆ.

ಪ್ರತಿ ದಿನ 15 ಸಾವಿರ ಕರೆ ಸ್ವೀಕಾರ ಗುರಿ:

ಡಿಜಿಟಲ್ ಅರೆಸ್ಟ್‌, ಹ್ಯಾಕಿಂಗ್‌, ಗಿಫ್ಟ್ ಹೆಸರಿನಲ್ಲಿ ದೋಖಾ ಹೀಗೆ ವಿವಿಧ ರೀತಿಯಲ್ಲಿ ಸೈಬರ್ ವಂಚನೆ ಸಂಬಂಧ ಪೊಲೀಸ್ ನಿಯಂತ್ರಣ ಕೊಠಡಿ (1930) ಗೆ ಕರೆ ಮಾಡಿ ಜನ ವರದಿ ಮಾಡಬಹುದು. ಪ್ರತಿದಿನ ಸೈಬರ್ ಅಪರಾಧ ಸಂಬಂಧ 7 ಸಾವಿರ ಕರೆಗಳು ಬರುತ್ತಿವೆ. ಕೆಲ ಬಾರಿ ಕರೆ ಸ್ವೀಕರಿಸಲು ವಿಳಂಬವಾದರೆ ನಿಯಂತ್ರಣ ಕೊಠಡಿಯಿಂದ ವೆಬ್ ಪಾಡ್ ಸಂದೇಶ ರವಾನೆಯಾಗುತ್ತದೆ ಎಂದು ವೈರ್‌ಲೆಸ್ ವಿಭಾಗದ ಎಸ್ಪಿ ರಿಷ್ಯಂತ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಆ ಲಿಂಕ್ ತೆರೆದು ವೆಬ್ ಪಾಡ್‌ ಆಡಿಯೋ ಸಂದೇಶದಲ್ಲಿ ಸೂಚಿಸಿದಂತೆ ಮಾಹಿತಿಯನ್ನು ಜನ ನೀಡಬೇಕು. ಹಾಗೆ ಜನರಿಂದ ನೇರವಾಗಿ ನಿಯಂತ್ರಣ ಕೊಠಡಿ ಸಿಬ್ಬಂದಿ ಮಾಹಿತಿ ಪಡೆಯುತ್ತಾರೆ. ಈ ಸಂವಹನ ಪ್ರಕ್ರಿಯೆಗೆ 15 ರಿಂದ 20 ನಿಮಿಷವಾಗುತ್ತಿದೆ. ಕೆಲ ಬಾರಿ ಸಮಯ ಹೆಚ್ಚಾಗಬಹುದು. ಇದರಿಂದ ಒಬ್ಬ ಸಿಬ್ಬಂದಿ 5 ಜನರಿಂದ ಮಾತ್ರ ಕರೆ ಸ್ವೀಕರಿಸಲು ಸಾಧ್ಯವಾಗುತ್ತಿದೆ. ಆದರೆ ಎಐ ಪಾಡ್‌ ಬಳಸಿದರೆ ದೂರು ಸ್ವೀಕಾರ ಪ್ರಕ್ರಿಯೆ ತ್ವರಿಗತಿಯಲ್ಲಿ ನಡೆಯಲಿದೆ. ಸಮಯವೂ ಉಳಿಯುತ್ತದೆ. ಆಗ ಒಬ್ಬ ಸಿಬ್ಬಂದಿ ಮೂರು ಪಟ್ಟು ಅಂದರೆ 15 ಕರೆಗಳನ್ನು ಸ್ವೀಕರಿಸಬಹುದು. ಹೀಗಾಗಿ ಎಐ ಪಾಡ್‌ ರೂಪಿಸಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದಕ್ಕೆ ಶೀಘ್ರ ಅನುಮೋದನೆ ಸಿಗಲಿದೆ ಎಂದು ಹೇಳಿದರು.

ನಕಲಿ ಖಾತೆಗಳ ಅವಲೋಕನ:

ಸೈಬರ್ ವಂಚನೆ ಕೃತ್ಯಗಳಲ್ಲಿ ಹಣ ವರ್ಗಾವಣೆಗೆ ನಕಲಿ ಬ್ಯಾಂಕ್ ಖಾತೆಗಳ ಕಡಿವಾಣ ಪ್ರಮುಖವಾಗಿದೆ. ಬ್ಯಾಂಕ್‌ಗಳಿಗೆ ಅಸಂಖ್ಯಾತ ಖಾತೆಗಳಲ್ಲಿ ಅಸಲಿ-ನಕಲಿ ಪತ್ತೆ ಹಚ್ಚುವುದು ತ್ರಾಸದಾಯಕ. ಇದಕ್ಕಾಗಿ ಎಐ ಬಳಸಿ ನಕಲಿ ಖಾತೆಗಳನ್ನು ಶೋಧಿಸುವಂತೆ ಬ್ಯಾಂಕ್‌ಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ರಿಷ್ಯಂತ್ ಮಾಹಿತಿ ನೀಡಿದರು.

ಹಣ ವರ್ಗಾವಣೆಗೆ ರೈತರು ಹಾಗೂ ಬಡ ಜನರಿಗೆ ಸರ್ಕಾರದ ಸೌಲಭ್ಯ ಕಲ್ಪಿಸುವ ಆಮಿಷವೊಡ್ಡಿ ಬ್ಯಾಂಕ್‌ಗಳಲ್ಲಿ ಸೈಬರ್ ವಂಚಕರು ಖಾತೆ ತೆರೆಯುತ್ತಾರೆ. ಆ ಖಾತೆಗಳ ಎಟಿಎಂ ಕಾರ್ಡ್‌ ಪಡೆಯುತ್ತಾರೆ. ವಂಚನೆ ಕೃತ್ಯ ಎಸಗಿ ದೋಚಿದ ಹಣ ಕೂಡಲೇ ಆ ಖಾತೆಗಳಿಗೆ ವರ್ಗಾಯಿಸಿ ಸೈಬರ್ ವಂಚಕರು ಪಡೆಯುತ್ತಾರೆ. ಇದಕ್ಕಾಗಿ ಈ ಬ್ಯಾಂಕ್ ಖಾತೆಗಳಿಗೆ ಕಡಿವಾಣ ಹಾಕಲು ಮೂರು ಸೂಚನೆ ನೀಡಲಾಗಿದೆ. (1) ಕೇವಲ ಹಣ ಜಮೆ (2), ಹೊರ ಜಿಲ್ಲೆ ಅಥವಾ ಹೊರ ರಾಜ್ಯಗಳಲ್ಲಿ ಆ ಖಾತೆಯಿಂದ ಹಣ ಡ್ರಾ (3) ಆ ಬ್ಯಾಂಕ್‌ ಪ್ರದೇಶದ ಹೊರಗಿನವರು. ಈ ಎಲ್ಲ ಅಂಶಗಳನ್ನು ಆಧರಿಸಿ ನಕಲಿ ಖಾತೆಗಳ ಪತ್ತೆ ಹಚ್ಚಲಾಗುತ್ತದೆ.

-ಕೋಟ್‌-ನಷ್ಟ ತಡೆ ಸಾಧ್ಯ

ಸೈಬರ್‌ ಅಪರಾಧಗಳ ನಿಯಂತ್ರಣಕ್ಕೆ 1930 ಸಹಾಯವಾಣಿಯಲ್ಲಿ ದೂರು ಸ್ವೀಕಾರ ವ್ಯವಸ್ಥೆಯನ್ನು ಮತ್ತಷ್ಟು ಸರಳ ಗೊಳಿಸಲು ಪ್ರಯತ್ನಿಸಿದ್ದೇವೆ. ಇದರಿಂದ ವಂಚನೆ ಕೃತ್ಯಗಳಿಗೆ ಕಡಿವಾಣ ಮಾತ್ರವಲ್ಲ ಜನರಿಗೆ ಆರ್ಥಿಕ ನಷ್ಟ ಕೂಡ ತಪ್ಪಲಿದೆ.

-ಎಸ್‌.ಮುರುಗನ್‌, ಎಡಿಜಿಪಿ, ಎಲ್‌ ಅಂಡ್ ಎಂ ವಿಭಾಗ

ರಿಕವರಿ ಹೆಚ್ಚಳ ಗುರಿ

ಪ್ರಸುತ್ತ ಸೈಬರ್ ವಂಚನೆ ಪ್ರಕರಣಗಳಲ್ಲಿ ಶೇ.25 ರಷ್ಟು ಮಾತ್ರ ಹಣ ರಿಕವರಿ ಪ್ರಮಾಣವಿದೆ. ಈಗ ಎಐ ಬಳಸಿಕೊಂಡು ರಿಕವರಿ ಪ್ರಮಾಣವನ್ನು ಶೇ.50 ರಷ್ಟು ಹೆಚ್ಚಾಗಿಸುವ ಗುರಿ ಹೊಂದಿದ್ದೇವೆ.

-ಸಿ.ಬಿ.ರಿಷ್ಯಂತ್, ಎಸ್ಪಿ, ವೈರ್‌ಲೆಸ್ ವಿಭಾಗ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೇವೆಯಲ್ಲಿಯೇ ಸಾರ್ಥಕತೆ ಪಡೆಯುವ ಗೃಹ ರಕ್ಷಕರು
ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯ ಮೊದಲ ಸ್ಥಾನ: ಗೃಹಸಚಿವ ಪರಮೇಶ್ವರ್