ಬೆಂಗಳೂರು: ನಗರದಲ್ಲಿ 1000ಕ್ಕೂ ಅಧಿಕ ಅಪಾಯಕಾರಿ ಮರ ಪತ್ತೆ!

Kannadaprabha News   | Kannada Prabha
Published : Dec 06, 2025, 05:43 AM IST
Over a thousand dangerous trees found in bengaluru city rav

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ಮರ ಬಿದ್ದು ಆಗುತ್ತಿರುವ ಅನಾಹುತಗಳನ್ನು ತಡೆಯಲು, ಗ್ರೇಟರ್‌ ಬೆಂಗಳೂರು ಪ್ರಾಧಿಕಾರವು ಅಪಾಯಕಾರಿ ಮರಗಳ ಸಮೀಕ್ಷೆ ನಡೆಸುತ್ತಿದೆ. ಕೇವಲ 15 ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಅಪಾಯಕಾರಿ ಮರಗಳನ್ನು ಗುರುತಿಸಲಾಗಿದ್ದು, ಜನವರಿ ಅಂತ್ಯದೊಳಗೆ ಪೂರ್ಣ ವರದಿ ಸಿದ್ಧವಾಗಲಿದೆ. 

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು (ಡಿ.6): ರಾಜಧಾನಿ ಬೆಂಗಳೂರಿನಲ್ಲಿ ಅಪಾಯಕಾರಿ, ಒಣಗಿದ ಮರ ಹಾಗೂ ರೆಂಬೆ, ಕೊಂಬೆ ಬಿದ್ದು ಸಾವು ಇಲ್ಲವೇ ಅವಘಡದ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಪಾಯಕಾರಿ ಮರಗಳ ಸಮೀಕ್ಷೆಯನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಮಾಡುತ್ತಿದ್ದು, ಕಳೆದ 15 ದಿನದಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಅಪಾಯಕಾರಿ ಮರಗಳನ್ನು ಪತ್ತೆ ಮಾಡಿದೆ..

ಕಾಂಕ್ರೀಟ್‌ ರಸ್ತೆ, ಕಾಲುವೆ, ಕಟ್ಟಡ ನಿರ್ಮಾಣ ಸೇರಿದಂತೆ ನಗರೀಕರಣದಿಂದ ಮರ ಕಡಿಯುವ, ಮರಗಳ ರೆಂಬೆ ಕೊಂಬೆ ಕತ್ತರಿಸಲಾಗುತ್ತಿದೆ. ಇದರಿಂದ ಮರದ ಬೇರುಗಳು ದುರ್ಬಲಗೊಂಡು ಮರಗಳು ಧರೆಗುರುಳುತ್ತಿವೆ. ಈ ವೇಳೆ ಪ್ರಾಣ ಹಾನಿ ಸಂಭವವಾಗುತ್ತಿದೆ. ಹೀಗಾಗಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ನ.20 ರಿಂದ ನಗರದ ಅಪಾಯಕಾರಿ ಮರಗಳ ಗಣತಿ ನಡೆಸುತ್ತಿದೆ. ಜನವರಿ ಅಂತ್ಯಕ್ಕೆ ನಗರದಲ್ಲಿ ಒಟ್ಟು ಎಷ್ಟು ಅಪಾಯಕಾರಿ ಮರಗಳು ಇವೆ ಎಂಬ ಪೂರ್ಣ ಚಿತ್ರಣ ದೊರೆಯಲಿದೆ.

ಅರಣ್ಯ ವಿಷಯ ಪದವೀಧರರ ನೇಮಕ: ಅಪಾಯಕಾರಿ, ಒಣಗಿದ ಮರಗಳ ಗಣತಿಗೆ ಪ್ರಾಧಿಕಾರವು ಅರಣ್ಯ ವಿಷಯದಲ್ಲಿ ಪದವಿ ಪಡೆದ ಮತ್ತು ಸಸ್ಯಶಾಸ್ತ್ರ ವಿಷಯದಲ್ಲಿ ಪದವಿ ಪಡೆದ ಎಂಟು ಮಂದಿಯನ್ನು ಎರಡು ತಿಂಗಳಿಗೆ ಸೀಮಿತವಾಗಿ ನೇಮಕ ಮಾಡಿಕೊಂಡಿದ್ದು, ಮಾಸಿಕ 30 ಸಾವಿರ ರು. ಗೌರವ ಧನ ನೀಡಲಿದೆ. ಸಮೀಕ್ಷೆ ನಡೆಸುವ ಸಿಬ್ಬಂದಿಗೆ ಮರ ತಂತ್ರಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ (ಐಡಬ್ಲ್ಯೂಎಸ್‌ಟಿ) ತಜ್ಞರಿಂದ ಎರಡು ದಿನಗಳ ತರಬೇತಿ ಸಹ ಕೊಡಿಸಲಾಗಿದೆ.

ವಿಸ್ತೃತ ಮಾಹಿತಿ ಸಂಗ್ರಹ: ಅಪಾಯಕಾರಿ ಮರಗಳ ಬಗ್ಗೆ ಏಳು ಪುಟದ ವಿಸ್ತೃತವಾದ ಮಾಹಿತಿ ಸಂಗ್ರಹಿಸಲು ನಮೂನೆ ಸಿದ್ಧಪಡಿಸಲಾಗಿದೆ. ನಮೂನೆಯಲ್ಲಿ ಸಮೀಕ್ಷೆ ನಡೆಸಿದ ದಿನಾಂಕ, ಮರದ ಹೆಸರು, ಯಾವ ರೀತಿ ಅಪಾಯ ಉಂಟು ಮಾಡಲಿದೆ. ಅಪಾಯಕಾರಿ ಮರ ಬಸ್‌ ನಿಲ್ದಾಣ, ಪಾದಚಾರಿ ಮಾರ್ಗ, ಪಾರ್ಕ್ ಸೇರಿದಂತೆ ಯಾವ ಸ್ಥಳದಲ್ಲಿದೆ. ಯಾವ ರಸ್ತೆ, ವಾರ್ಡ್‌, ಫೋಟೋ, ಜಿಯೋ ಲೊಕೇಷನ್‌ ಸೇರಿದಂತೆ ಮೊದಲಾದ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಅಪಾಯಕ್ಕೆ ಕಾರಣಗಳ ಪತ್ತೆ: ಮರ ಅಪಾಯಕಾರಿ ಆಗಿರುವುದಕ್ಕೆ ಕಾರಣ ಏನು ಎಂಬುದನ್ನು ದಾಖಲಿಸುವ ಕಾರ್ಯ ಮಾಡಲಾಗುತ್ತಿದೆ. ಮರದ ಕಾಂಡಕ್ಕೆ ಗೆದ್ದಲು ಹುಳು ತಿಂದಿದೆಯಾ?, ಮರ ಬುಡಕ್ಕೆ ಬೆಂಕಿ ಹಾಕಿರುವುದರಿಂದ ಹಾನಿ ಆಗಿದೆಯಾ?, ಮರ ಒಣಗಿದೆಯಾ?, ಬೇರು ಹಾನಿಗೊಂಡಿರುವುದರಿಂದ ಅಪಾಯವಾಗಿದೆಯೇ ಎಂಬುದನ್ನು ಪರಿಶೀಲಿಸಿ ದಾಖಲಿಸಲಾಗುವುದು.

ನಗರ ಪಾಲಿಕೆವಾರು ಅಪಾಯಕಾರಿ ಮರ ವಿವರ

ನಗರ ಪಾಲಿಕೆ ಅಪಾಯಕಾರಿ ಮರ ಸಂಖ್ಯೆ

  • ಬೆಂ.ಕೇಂದ್ರ 240
  • ಬೆಂ.ಪೂರ್ವ 120
  • ಬೆಂ.ಉತ್ತರ 220
  • ಬೆಂ.ದಕ್ಷಿಣ 316
  • ಬೆಂ.ಪಶ್ಚಿಮ 250
  • ಒಟ್ಟು 1,146 (ಡಿ.5ಕ್ಕೆ)

2 ವರ್ಷದಲ್ಲಿ ಮರ ಬಿದ್ದು 8 ಮಂದಿ ಸಾವು

ನಗರದಲ್ಲಿ 2024-25 ಹಾಗೂ 2025-26ನೇ ಸಾಲಿನ ಈವರೆಗೆ ಒಟ್ಟು ಎಂಟು ಮಂದಿ ಮರ ಹಾಗೂ ಮರದ ರೆಂಬೆ, ಕೊಂಬೆ ಬಿದ್ದು ಮೃತಪಟ್ಟ ಪ್ರಕರಣ ದಾಖಲಾಗಿವೆ. ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರು. ಪರಿಹಾರವನ್ನು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದಿಂದ ನೀಡಲಾಗಿದೆ. ಗಾಯಗೊಂಡ 27 ಮಂದಿಗಳ ಚಿಕಿತ್ಸಾ ವೆಚ್ಚವನ್ನು ಜಿಬಿಎ ಭರಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಮರ ಬಿದ್ದು ಪ್ರಾಣ ಹಾನಿ ಪ್ರಕರಣ ಉಂಟಾಗದಂತೆ ಕ್ರಮ ಕೈಗೊಳ್ಳಲು ಅಪಾಯಕಾರಿ ಮರಗಳ ಪತ್ತೆ ಮಾಡಲಾಗುತ್ತಿದ್ದು, ಜನವರಿ ಅಂತ್ಯಕ್ಕೆ ಅಪಾಯಕಾರಿ ಮರಗಳ ಸಂಖ್ಯೆ, ಕಾರಣ ಎಲ್ಲವೂ ಲಭ್ಯವಾಗಲಿದೆ. ಸಮೀಕ್ಷೆ ಸೂಕ್ತ ಕ್ರಮ ವಹಿಸಲು ಸಹಕಾರಿ ಆಗಲಿದೆ.

- ಸುದರ್ಶನ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ, ಜಿಬಿಎ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!