
ಬೆಂಗಳೂರು (ಜೂ.16):ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಕಡಿಮೆ ಮಾಡುವ ಮೂಲಕ ರಾಜ್ಯಕ್ಕೆ ಆದಾಯ ಕುಂಠಿತಗೊಳಿಸಿತ್ತು. ಅಕ್ಕಪಕ್ಕದ ರಾಜ್ಯದಲ್ಲಿ ನಮ್ಮ ರಾಜ್ಯಕ್ಕಿಂತ ಹೆಚ್ಚಿನ ದರವಿದೆ. ಈ ಹಿನ್ನೆಲೆಯಲ್ಲಿ ತೈಲದ ಮೇಲಿನ ವ್ಯಾಟ್ ಹೆಚ್ಚಳ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡಿದ್ದಾರೆ.
ದೇಶದಲ್ಲಿ ಡಬಲ್ ಇಂಜಿನ್ ಹೊಂದಿದ್ದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ವ್ಯಾಟ್ ಕಡಿಮೆ ಮಾಡಿತ್ತು. ಆದರೆ, ಕೇಂದ್ರ ಬಿಜೆಪಿ ಸರ್ಕಾರ ಪದೇ ಪದೇ ವ್ಯಾಟ್ ಹೆಚ್ಚಳ ಮಾಡಿತ್ತು. ಇದರಿಂದ ಕರ್ನಾಟಕದ ಆದಾಯ ಕುಂಠಿತವಾಗಿತ್ತು. ರಾಜ್ಯದ ವ್ಯಾಟ್ ಹೆಚ್ಚಳದಿಂದ ಜನರ ಸೇವೆಗಳಿಗೆ ಮತ್ತು ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಹಣ ನೀಡಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೈಲ ಬೆಲೆ ಹೆಚ್ಚಳವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಇನ್ನು ಬಿಜೆಪಿಯಿಂದ ನಾಳೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವ ಮುನ್ನವೇ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡೊಲ್ಲ ಎಂಬ ಮುನ್ಸೂಚನೆಯನ್ನೂ ಸಿಎಂ ಸಿದ್ದರಾಮಯ್ಯ ಕೊಟ್ಟಿದ್ದಾರೆ.
ಇಂಧನದ ಮೇಲೆ ಸೇಲ್ಸ್ ಟಾಕ್ಸ್ ಹಾಕಿದ ರಾಜ್ಯ ಸರ್ಕಾರ: ಪೆಟ್ರೋಲ್ ಡಿಸೇಲ್ ದರದಲ್ಲಿ 3 ರೂ. ಏರಿಕೆ
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಪೆಟ್ರೋಲ್, ಡೀಸೆಲ್ ವ್ಯಾಟ್ ಹೆಚ್ಚಳದ ನಂತರ ದಕ್ಷಿಣ ಭಾರತದ ರಾಜ್ಯಗಳಿಗಿಂತ ಕರ್ನಾಟಕದಲ್ಲೇ ಪೆಟ್ರೋಲ್ ಡಿಸೇಲ್ ಬೆಲೆ ಕಡಿಮೆಯಿದೆ. ದೇಶದಲ್ಲಿ ಆರ್ಥಿಕವಾಗಿ ಬಲಿಷ್ಠವಾಗಿರುವ ಮಹಾರಾಷ್ಟ್ರ ರಾಜ್ಯಕ್ಕಿಂತಲೂ ನಮ್ಮ ರಾಜ್ಯದಲ್ಲಿ ಕಡಿಮೆ ದರವಿದೆ. ಗುಜರಾತ್ ಮತ್ತು ಮಧ್ಯಪ್ರವೇಶ ರಾಜ್ಯಕ್ಕಿಂತಲೂ ನಮ್ಮ ರಾಜ್ಯದಲ್ಲಿ ಡಿಸೇಲ್ ದರ ಕಡಿಮೆಯಿದೆ. ಹೀಗಾಗಿ, ತೈಲಗಳ ಮೇಲಿನ ರಾಜ್ಯದ ವ್ಯಾಟ್ ಪ್ರಮಾಣವನ್ನು ಹೆಚ್ಚಳ ಮಾಡಿದ್ದೇವೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ಈ ಹಿಂದಿನ ಡಬಲ್ ಇಂಜಿನ್ ಬಿಜೆಪಿ ಸರ್ಕಾರ ನಮ್ಮ ರಾಜ್ಯದ ಸಂಪನ್ಮೂಲಗಳನ್ನ ಬೇರೆ ರಾಜ್ಯಕ್ಕೆ ನೀಡಿತ್ತು. ರಾಜ್ಯ ಬಿಜೆಪಿ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ವ್ಯಾಟ್ ಕಡಿಮೆ ಮಾಡಿತ್ತು. ಆದರೆ, ಕೇಂದ್ರ ಬಿಜೆಪಿ ಸರ್ಕಾರದ ಪದೇ ಪದೇ ವ್ಯಾಟ್ ಹೆಚ್ಚಳ ಮಾಡಿತ್ತು. ಇದರಿಂದ ಕರ್ನಾಟಕದ ಆದಾಯ ಕುಂಠಿತವಾಗಿತ್ತು. ಆದರೆ, ಕೇಂದ್ರ ಸರ್ಕಾರದ ಕನ್ನಡಿಗರನ್ನ ವಂಚಿಸಿ ಹೆಚ್ಚು ತೆರಿಗೆ ಸಂಗ್ರಹ ಮಾಡಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರೇ ದಂಗೆ ಏಳಬೇಕು, ಕೇಂದ್ರ ಸಚಿವ ಎಚ್‌ಡಿಕೆ
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದಕ್ಕೂ ಮುಂಚೆ ಪೆಟ್ರೋಲ್ ಮತ್ತು ಡಿಸೇಲ್‌ಗೆ ತಲಾ 9.48 ರೂಪಾಯಿ ಮತ್ತು 3.56 ರೂಪಾಯಿ ತೆರಿಗೆ ಇತ್ತು. ಬಿಜೆಪಿ ಅವಧಿಯಲ್ಲಿ ದಾಖಲೆಯ ತೆರಿಗೆ ಹೆಚ್ಚಳವಾಗಿ ಪೆಟ್ರೋಲ್ ಗೆ 32.98 ಡಿಸೇಲ್ ಗೆ 31.83 ಹೆಚ್ಚಳವಾಗಿತ್ತು. 2021 - 22 ರಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ತೆರಿಗೆಯನ್ನ ಪೆಟ್ರೋಲ್‌ಗೆ 13 ರೂಪಾಯಿ ಮತ್ತು ಡೀಸೆಲ್‌ಗೆ 16 ರೂ. ಕಡಿಮೆ ಮಾಡಿತ್ತು. ಸದ್ಯ ಪೆಟ್ರೋಲ್ ಮೇಲಿನ ಕೇಂದ್ರ ತೆರಿಗೆ ಪೆಟ್ರೋಲ್ 19.9 ರೂ. ಡೀಸೆಲ್ ಮೇಲೆ 18.8 ರೂಪಾಯಿ ಇದೆ. ಇದನ್ನ ಕೇಂದ್ರ ಸರ್ಕಾರ ಜನರ ಒಳಿತಗೊಸ್ಕರ ಕಡಿಮೆ ಮಾಡಬೇಕು ಎಂದು ಆಗ್ರಹಿಸುತ್ತೇವೆ ಎಂದು ಕೇಂದ್ರ ಕಡೆಗೆ ಬೊಟ್ಟು ಮಾಡಿ ತೋರಿಸಿದ್ದಾರೆ.
ನಾವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ರಾಜ್ಯದ ವ್ಯಾಟ್ ಹೆಚ್ಚಳದಿಂದ ಜನರ ನೀಡುವ ಸೇವೆಗಳಿಗೆ ಮತ್ತು ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಹಣ ನೀಡಲಿದ್ದೇವೆ. ನಾವು ಸಮತೋಲಿತ ಮತ್ತು ಜವಾಬ್ದಾರಿಯುತ ಆಡಳಿತ ನೀಡಲು ಬದ್ದರಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ