
ಹಾಸನ (ಫೆ.28): ಈ ಸರ್ಕಾರದಲ್ಲಿ ಮೊದಲ ಬಾರಿಗೆ ಗೆದ್ದ ಶಾಸಕರು ಅನುದಾನ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಕ್ಷೇತ್ರದಲ್ಲಿ ಓಡಾಡಲು ಆಗದ ಪರಿಸ್ಥತಿಯಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಇಂದು ಹಾಸನಕ್ಕೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕರುಗಳಿಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸೂಕ್ತ ಅನುದಾನ ನೀಡುವಂತೆ ಸಿಎಂ ಸಿದ್ದರಾಮಯ್ಯಗೆ ಒತ್ತಾಯಿಸಿದ್ದೇವೆ ಎಂದರು.
ತುಮಕೂರಲ್ಲಿ ಲಿಂಗಾಯತ ಸಮುದಾಯದ ಸಭೆ:
ಇತ್ತೀಚೆಗೆ ಕೆಲವರು ನಮ್ಮ ಹಾಗೂ ಯಡಿಯೂರಪ್ಪ ವಿರುದ್ಧ ಸಭೆ ನಡೆಸುತ್ತಿದ್ದಾರೆ. ಅದರಲ್ಲಿ ಕೆಲವರು ರಾಜ್ಯಕ್ಕೆ ಅಲ್ಲ, ಅವರ ಕೇರಿಗೂ ಗೊತ್ತಿಲ್ಲದವರು. ಇಂಥವರು ಸಭೆ ಮಾಡ್ತಾರೆ ಅಂತಾ ನಾವೂ ಮಾಡೋದು ಸರಿಯಲ್ಲ. ಈ ರೀತಿ ಮಾಡ್ತಾ ಹೋದ್ರೆ ಅದಕ್ಕೆ ಕೊನೇ ಇರೋದಿಲ್ಲ. ರಾಜ್ಯಾಧ್ಯಕ್ಷನಾಗಿ ಇದನ್ನ ನಾನೂ ಒಪ್ಪಲ್ಲ. ಇದಕ್ಕೆ ನೇರವಾಗಿಯಾಗಲಿ, ಪರೋಕ್ಷವಾಗಿ ಕೂಡ ಬೆಂಬಲ ಇಲ್ಲ. ಇದರಿಂದ ಪಕ್ಷಕ್ಕೆ ಯಾವುದೇ ಅನುಕೂಲ ಕೂಡ ಆಗಲ್ಲ. ಈ ಬಗ್ಗೆ ನಾನು ರೇಣುಕಾಚಾರ್ಯ ಅವರ ಜೊತೆ ಮಾತನಾಡುತ್ತೇನೆ. ಈಗಲೇ ಪಕ್ಷದಲ್ಲಿ ಕೆಲ ಗೊಂದಲ ಇರುವಾಗ, ಈ ಗೊಂದಲದ ಮದ್ಯೆ ಹೊಸ ಗೊಂದಲಕ್ಕೆ ನಾಂದಿ ಹಾಡಬಾರದು. ಇಂತಹ ಸಭೆಯ ಒಳ್ಳೆಯ ಬೆಳವಣಿಗೆ ಅಲ್ಲ. ಯಾವ ಮುಖಂಡರು ಸಭೆ ಮಾಡುತ್ತಿದ್ದಾರೆ ಅವರ ಜೊತೆ ಮಾತನಾಡುತ್ತೇನೆ. ಪರಿಸ್ಥಿತಿ ತಿಳಿಯಾಗುತ್ತಿರುವಾಗ ಇದು ಶೋಭೆ ತರಲ್ಲ ಎಂದರು.
ರಾಜ್ಯಾಧ್ಯಕ್ಷರ ಚುನಾವಣೆ ವಿಚಾರ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ಎಲ್ಲ ತೀರ್ಮಾನ ಆಗಿದೆ. ಉಳಿದ ಜಿಲ್ಲಾ ಅಧ್ಯಕ್ಷ ರ ಪಟ್ಟಿಯನ್ನು ಕಳಿಸಿದ್ದೇವೆ. ಶೀಘ್ರವಾಗಿ ಈ ಬಗ್ಗೆ ಯಾವಾಗ ತೀರ್ಮಾನ ಆಗುತ್ತೆ ಆಗ ಘೋಷಣೆ ಆಗುತ್ತೆ ಎಂದರು.
ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಪಟ್ಟಕ್ಕೆ ಪೈಪೋಟಿ:
ರಾಜ್ಯದಲ್ಲಿ ಆಡಳಿತ ಪಕ್ಷದಲ್ಲಿ ಸಿಎಂ ಪಟ್ಟಕ್ಕೆ ಪೈಫೋಟಿ ಹೆಚ್ಚಾಗುತ್ತಿದೆ. ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ನಾನು ಸಿಎಂ ಆಗಬೇಕು ಎಂದು ಅನೇಕರು ಕಾಯುತ್ತಿದ್ದಾರೆ. ರಾಜ್ಯದಲ್ಲಿ ಕ್ಷೀಪ್ರ ರಾಜಕೀಯ ಬೆಳವಣಿಗೆ ಆಗೋದಿದೆ. ಅದರ ಮುನ್ಸೂಚನೆ ನೀವು ನೋಡ್ತಾ ಇದೀರಿ ಎಂದರು.
ರಾಜ್ಯದಲ್ಲಿರೋದು ತಾಲಿಬಾನ್ ಸರ್ಕಾರ
ಕಾಂಗ್ರೆಸ್ ಸರ್ಕಾರದಲ್ಲಿ ಹಿಂದುತ್ವ, ಹಿಂದೂಗಳಿಗೆ ಬೆಲೆ ಇಲ್ಲದಂತಾಗಿದೆ. ಇಲ್ಲಿರೋದು ತಾಲಿಬಾನ್ ಸರ್ಕಾರ. ಈ ಕಾಂಗ್ರೆಸ್ ನಾಯಕರು ಎಷ್ಟರಮಟ್ಟಿಗೆ ಹಿಂದೂ ವಿರೋಧಿಯಾಗಿದ್ದಾರೆ ಎಂದರೆ ಕುಂಭಮೇಳದ ಬಗ್ಗೆ ಕೂಡ ಕೆಲ ಕಾಂಗ್ರೆಸ್ ನಾಯಕರು ಟೀಕೆ ಮಾಡಿದ್ದಾರೆ. ಇದರ ನಡುವೆ ಡಿಕೆ ಶಿವಕುಮಾರ್ ಅವರು ಕುಟುಂಬ ಸಮೇತ ಪ್ರಯಾಗ್ ರಾಜ್ ಗೆ ಹೋಗಿ ಬಂದಿದಾರೆ ಎನ್ನುವ ಮೂಲಕ ಪರೋಕ್ಷವಾಗಿ ಡಿಕೆ ಶಿವಕುಮಾರ ಬೆನ್ನಿಗೆ ನಿಂತ ವಿಜಯೇಂದ್ರ.
ಬಿಜೆಪಿಗೂ ಡಿಕೆ ಶಿವಕುಮಾರ ಬೆಳವಣಿಗೆ ಸಂಬಂಧ ಇಲ್ಲ:
ಇತ್ತೀಚೆಗೆ ಕುಂಭಮೇಳ ಹಾಗೂ ಮಹಾಶಿವರಾತ್ರಿಯಂದು ಅಮಿತ್ ಶಾ ಜೊತೆಗೆ ವೇದಿಕೆ ಹಂಚಿಕೊಂಡ ಬಳಿಕ ಕಾಂಗ್ರೆಸ್ ಕೆಲ ನಾಯಕರೇ ಡಿಕೆ ಶಿವಕುಮಾರ ವಿರುದ್ಧ ಮಾತನಾಡುತ್ತಿದ್ದಾರೆ. ಅದ್ಯಾಗೂ ಈ ವಿಚಾರದಲ್ಲಿ ಬಿಜೆಪಿಗೂ ಡಿಕೆ ಶಿವಕುಮಾರಗೂ ಯಾವುದೇ ಸಂಬಂಧವಿಲ್ಲ. ಗೃಹ ಸಚಿವರ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾದರೆ ಅವರು ಬಿಜೆಪಿಗೆ ಬಂದೆ ಬಿಡ್ತಾರೆ ಎನ್ನೋ ಚರ್ಚೆಗೆ ಅರ್ಥ ಇಲ್ಲ ಎಂದರು.
ಮುಖ್ಯಮಂತ್ರಿಗೆ ಬಹಿರಂಗ ಪತ್ರ:
ನಾಡಿನ ಜನರ ಅಪೇಕ್ಷೆಗೆ ತಕ್ಕಂತೆ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಬೇಕು ಈ ಬಗ್ಗೆ ನಾನು ಮುಖ್ಯಮಂತ್ರಿಗಳಿಗೆ ಬಹಿರಂಗವಾಗಿ ಪತ್ರ ಬರೆದಿದ್ದೇನೆ. ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿರುವ ಕೀರ್ತಿ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಹಾಗಾಗಿ ಜನರ ಅಪೇಕ್ಷನು ಕೂಡ ಸಾಕಾಷ್ಟಿದೆ. ಗ್ಯಾರೆಂಟಿಗಳೇ ಅಭಿವೃದ್ಧಿ ಆಗಿಬಿಟ್ಟರೆ ಶಾಸಕರುಗಳು ತಲೆ ಎತ್ತಿಕೊಂಡು ಓಡಾಡಲು ಸಾಧ್ಯವಿಲ್ಲ. ಜನರು ಕೂಡ ನಮ್ಮನ್ನು ಕ್ಷಮಿಸುವುದಿಲ್ಲ. ಇದನ್ನು ಅರ್ಥ ಮಾಡಿಕೊಂಡು ಮುಖ್ಯಮಂತ್ರಿಗಳು ಕ್ಷೇತ್ರಗಳಿಗೆ ಅನುದಾನ ನೀಡಬೇಕು. ಮೊದಲ ಬಾರಿ ಗೆದ್ದ ಶಾಸಕರಿಗೆ ಅನುದಾನವೇ ನೀಡಿಲ್ಲ. ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಬಜೆಟ್ ಮಂಡನೆ ಮಾಡ್ತಾರೆ ಎಂಬ ಆಶಾಭಾವನೆಯಲ್ಲಿ ನಾವು ಕೂಡ ಇದ್ದೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ