Karnataka New Law: ಕರ್ನಾಟಕದಲ್ಲಿ ಸಿವಿಲ್ ಪ್ರಕರಣಗಳಿಗೆ ಶೀಘ್ರ ನ್ಯಾಯ: ಹೊಸ ಕಾನೂನು ಜಾರಿ

Kannadaprabha News   | Kannada Prabha
Published : May 27, 2025, 10:59 AM ISTUpdated : May 27, 2025, 12:05 PM IST
Karnataka news

ಸಾರಾಂಶ

ಬಡ ಕಕ್ಷಿದಾರರಿಗೆ ಶೀಘ್ರ ನ್ಯಾಯ ದೊರಕಿಸಲು ಸಿವಿಲ್ ಪ್ರಕ್ರಿಯಾ ಸಂಹಿತೆ (ಸಿಪಿಸಿ) ಕಾನೂನು ಜಾರಿಗೊಳಿಸಲಾಗುತ್ತಿದೆ. ರಾಜ್ಯದಲ್ಲಿ ನಿರ್ದಿಷ್ಟ ಸಮಯ ಪಾಲನೆಯೊಂದಿಗೆ ಸಿವಿಲ್ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು (ಮೇ.27) : ನ್ಯಾಯದಾನ ಪದ್ಧತಿಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ದೇಶದಲ್ಲಿಯೇ ಮೊದಲ ಬಾರಿ ರಾಜ್ಯವು ದಿಟ್ಟ ಹೆಜ್ಜೆ ಇಟ್ಟಿದ್ದು, ಬಡ ಕಕ್ಷಿದಾರರಿಗೆ ಶೀಘ್ರ ನ್ಯಾಯ ದೊರಕಿಸಲು ಸಿವಿಲ್‌ ಪ್ರಕ್ರಿಯಾ ಸಂಹಿತೆ (ಸಿಪಿಸಿ) ಕಾನೂನು ಜಾರಿಗೊಳಿಸಲಾಗುತ್ತಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ನಿರ್ದಿಷ್ಟ ಸಮಯ ಪಾಲನೆಯೊಂದಿಗೆ ಸಿವಿಲ್ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಜಾರಿಗೊಳಿಸಿರುವ ‘ಸಿಪಿಸಿ’ಗೆ ರಾಜ್ಯಕ್ಕೆ ಹೊಂದಿಕೆಯಾಗುವಂತೆ ಕೆಲವೊಂದು ತಿದ್ದುಪಡಿಗಳನ್ನು ಮಾಡಿದ್ದು, ರಾಷ್ಟ್ರಪತಿಗಳ ಅಂಕಿತ ದೊರಕಿದೆ. ಈ ಐತಿಹಾಸಿಕ ತಿದ್ದುಪಡಿಯನ್ನು ರಾಷ್ಟ್ರದಲ್ಲಿಯೇ ಮೊದಲು ಅನುಷ್ಠಾನಗೊಳಿಸಲಾಗುತ್ತಿದೆ. ಈ ಮೂಲಕ ಸಿವಿಲ್ ನ್ಯಾಯಾಲಯಗಳಲ್ಲಿ ದಾಖಲಾಗುವ ಪ್ರಕರಣಗಳ ವಿಳಂಬಕ್ಕೆ ಮುಕ್ತಿ ನೀಡುವ ತಿದ್ದುಪಡಿ ಕಾನೂನನ್ನು ತಕ್ಷಣ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.

ದಶಕಗಟ್ಟಲೇ ಬಾಕಿ ಇರುವ ಪ್ರಕರಣಗಳಿಗೆ ಮುಕ್ತಿ ನೀಡಲು ಯಶಸ್ವಿಯಾದ, ದಿಟ್ಟ ಹೆಜ್ಜೆಯನ್ನಿಡಲಾಗಿದೆ. ಸಿವಿಲ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲು ಕಡ್ಡಾಯವಾಗಿ ಪ್ರಯತ್ನ ಮಾಡಬೇಕು. ಎರಡು ತಿಂಗಳೊಳಗಾಗಿ ರಾಜಿ ಸಂಧಾನದ ಪ್ರಯತ್ನ ತಾರ್ಕಿಕ ಅಂತ್ಯ ಕಾಣಬೇಕು. ಸಾಧ್ಯವಾಗದಿದ್ದರೆ ನ್ಯಾಯಾಲಯ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು. ನ್ಯಾಯಾಲಯಗಳ ವಿಚಾರಣೆಯಲ್ಲಿ ವಿಳಂಬವಾಗದಿರಲು ಇಂತಹದೊಂದು ಕಾನೂನು ಜಾರಿಗೊಳಿಸಲಾಗುತ್ತಿದೆ. ಪ್ರಕರಣ ದಾಖಲಾದ ದಿನಾಂಕದಿಂದ 24 ತಿಂಗಳಲ್ಲಿ ಯಾವುದೇ ಸಿವಿಲ್ ಪ್ರಕರಣ ಇತ್ಯರ್ಥವಾಗಿ, ತಾರ್ಕಿಕ ಅಂತ್ಯ ಕಾಣಲು ಇದು ಸಹಕಾರಿಯಾಗಲಿದೆ ಎಂದು ವಿವರಿಸಿದರು.

ಕಳೆದ ಬೆಳಗಾವಿ ಅಧಿವೇಶನದಲ್ಲಿ ಸಿವಿಲ್‌ ಪ್ರಕ್ರಿಯಾ ಸಂಹಿತೆ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸಲಾಗಿತ್ತು. ರಾಜ್ಯಪಾಲರು ಈ ವಿಧೇಯಕವನ್ನು ರಾಷ್ಟ್ರಪತಿಯವರ ಅಂಕಿತಕ್ಕೆ ಕಾಯ್ದಿರಿಸಿದ್ದರು. ಕಾಯ್ದೆಗೆ ರಾಷ್ಟ್ರಪತಿಯವರು ಮೇ 19ರಂದು ಅಂಕಿತ ಹಾಕಿದ್ದಾರೆ. ಲಿಖಿತ ಹೇಳಿಕೆ, ಸಾಕ್ಷ್ಯ ಸಂಗ್ರಹ ಎಲ್ಲದಕ್ಕೂ ಕಾಲಮಿತಿ ನಿಗದಿಪಡಿಸಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ಹಂತದಲ್ಲಿ ಒಂದು ತಿಂಗಳೊಳಗಾಗಿ ಕೇವಲ 3 ಮುಂದೂಡಿಕೆ ಅಥವಾ 3 ದಿನಾಂಕಗಳ ಅವಕಾಶ ಮಾತ್ರ ಕಲ್ಪಿಸಲಾಗುವುದು ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!