
ರಂಗಸ್ವಾಮಿ
ತಿಪಟೂರು : ತುಮಕೂರು ಜಿಲ್ಲೆ ತಿಪಟೂರು ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯಲ್ಲಿ ಸೋಮವಾರ ಒಣ ಕೊಬ್ಬರಿ ಬೆಲೆ ಕ್ವಿಂಟಲ್‌ಗೆ 20,900 ರು.ತಲುಪಿದ್ದು, ರೈತರ ಸಂತಸಕ್ಕೆ ಕಾರಣವಾಗಿದೆ.ಇತ್ತೀಚಿನ ವರ್ಷಗಳಲ್ಲಿ ಒಣ ಕೊಬ್ಬರಿಯ ದರ ಕುಸಿದು ತೆಂಗು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿತ್ತು.
2024ರ ಮದ್ಯಭಾಗದಿಂದ ನಿಧಾನವಾಗಿ ಬೆಲೆಯಲ್ಲಿ ಚೇತರಿಕೆ ಕಂಡು ಬರಲಾರಂಭಿಸಿತ್ತು. ಕಳೆದ ಗುರುವಾರ ಇಲ್ಲಿನ ಎಪಿಎಂಸಿ ಕೊಬ್ಬರಿ ಮಾರುಕಟ್ಟೆಯಲ್ಲಿ ನಡೆದ ಹರಾಜಿನಲ್ಲಿ ಕ್ವಿಂಟಲ್‌ಗೆ 19,566 ರು. ತಲುಪಿತ್ತು. ಸೋಮವಾರ 20,900 ರು. ತಲುಪಿದ್ದು, ತೆಂಗು ಬೆಳೆಗಾರರಲ್ಲಿ ಸಂತಸ ಮೂಡಿಸಿದೆ.
ಆ ಮೂಲಕ ಇಲ್ಲಿನ ಮಾರುಕಟ್ಟೆಯಲ್ಲಿ ಈವರೆಗಿನ ಕೊಬ್ಬರಿ ಬೆಲೆಯಲ್ಲಿ ಇತಿಹಾಸ ದಾಖಲಿಸಿದೆ.ಇಲ್ಲಿನ ಸಿಹಿ ಕೊಬ್ಬರಿ, ತನ್ನದೇ ಆದ ವಿಶೇಷ ಗುಣಗಳಿಂದ ದೇಶ-ವಿದೇಶಗಳಲ್ಲಿ ಪ್ರಸಿದ್ದಿ ಪಡೆದಿದೆ. ಕೊಬ್ಬರಿ ವಹಿವಾಟಿನ ಇತಿಹಾಸದಲ್ಲಿ ಯಾವತ್ತೂ ಕ್ವಿಂಟಲ್ ಕೊಬ್ಬರಿ ಬೆಲೆ 20 ಸಾವಿರ ರು.ದಾಟಿರಲಿಲ್ಲ ಎಂದು ಇಲ್ಲಿನ ರೈತರು ಚರ್ಚಿಸುತ್ತಿದ್ದಾರೆ. 7-8 ವರ್ಷಗಳ ಹಿಂದೆ ಕ್ವಿಂಟಲ್‌ಗೆ 18 ಸಾವಿರ ರು.ಗಳ ಸನಿಹಕ್ಕೆ ದರ ಬಂದಿತ್ತಾದರೂ, ನಂತರ ಹಠಾತ್ ಕುಸಿದು, 8 ಸಾವಿರ ರು.ಗಳ ಆಜುಬಾಜಿನಲ್ಲೇ ಗಿರಕಿ ಹೊಡೆಯುತ್ತಿತ್ತು ಎನ್ನುತ್ತಾರೆ ರೈತರು.
ರೈತರು ಇತರ ಲಾಭದಾಯಕ ಬೆಳೆಗಳತ್ತ ವಾಲುತ್ತಿರುವುದು, ತೆಂಗು ಬೆಳೆಗೆ ತಗಲುವ ರೋಗ ಇತ್ಯಾದಿಗಳಿಂದ ಇತ್ತೀಚಿನ ತಿಂಗಳುಗಳಲ್ಲಿ ಮಾರುಕಟ್ಟೆಗೆ ಬರುವ ಕೊಬ್ಬರಿಯ ಆವಕ ಕಡಿಮೆಯಾಗಿದೆ. ತಮಿಳುನಾಡು, ಆಂಧ್ರ, ಕೇರಳ ಮತ್ತಿತರ ತೆಂಗು ಬೆಳೆಯುವ ಪ್ರದೇಶಗಳಲ್ಲೂ ತೆಂಗಿನ ಕಾಯಿಗಳ ಇಳುವರಿ ಕುಸಿತ ಕಂಡಿದೆ. ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚೆಚ್ಚು ರೈತರು ಉತ್ತಮ ಬೆಲೆ ಬಂದ ಕಾರಣ ಎಳನೀರು ಮತ್ತು ತೆಂಗಿನಕಾಯಿಗಳನ್ನೇ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ.
ಇವುಗಳ ಜೊತೆಗೆ, ಕಳೆದ ಆರೇಳು ವರ್ಷಗಳಿಂದ ಅಂರ್ತಜಲದ ಕುಸಿತ ರೈತರನ್ನು ಬಾಧಿಸುತ್ತಿದೆ. ಇವೆಲ್ಲಾ ಕಾರಣಗಳು ಕೊಬ್ಬರಿ ದರ ಏರಲು ಕಾರಣ ಎಂದು ರೈತರು ಚರ್ಚಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ