ರಾಜ್ಯದ ಜನರಿಗೆ ಬಿಗ್ ಶಾಕ್; ಇದ್ದಕ್ಕಿದ್ದಂತೆ ನಂದಿನಿ ಹಾಲಿನ ದರ ಭಾರೀ ಏರಿಕೆ ಮಾಡಿದ ಸರ್ಕಾರ!

Published : Oct 29, 2026, 04:36 PM ISTUpdated : Oct 29, 2026, 06:57 PM IST
KMF Nandini Milk Safety Legal Action Warned Against Spreading Fake News

ಸಾರಾಂಶ

ರಾಜ್ಯದಲ್ಲಿ ನವೆಂಬರ್ 1ರಿಂದ ಅನ್ವಯವಾಗುವಂತೆ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂ. ಹೆಚ್ಚಳ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಹೆಚ್ಚಳದಲ್ಲಿ 7 ರೂ. ನೇರವಾಗಿ ರೈತರಿಗೆ ಪಾವತಿಯಾಗಲಿದ್ದು, ಹೈನುಗಾರರಿಗೆ ಆರ್ಥಿಕ ನೆರವು ಸಿಗಲಿದೆ.

ಬೆಂಗಳೂರು (ಅ.29): ರಾಜ್ಯದ ಜನಸಾಮಾನ್ಯರಿಗೆ ಮತ್ತು ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ಹಾಲಿನ ದರವನ್ನು ಪ್ರತಿ ಲೀಟರ್‌ಗೆ ಬರೋಬ್ಬರಿ ₹8 ಹೆಚ್ಚಳ ಮಾಡಲು ರಾಜ್ಯ ಸಚಿವ ಸಂಪುಟ ಅಧಿಕೃತ ಅನುಮೋದನೆ ನೀಡಿದೆ. ಈ ನೂತನ ಪರಿಷ್ಕೃತ ಹಾಲಿನ ದರವು ಮುಂಬರುವ ನವೆಂಬರ್ 1ರಿಂದಲೇ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಘೋಷಿಸಿದ್ದಾರೆ.

ಹಿಂದೆ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ನಿಗದಿಪಡಿಸುವ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ನೀಡಲಾಗಿತ್ತು. ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಮಹತ್ವದ ಸಮಾಲೋಚನೆಯ ನಂತರ ಈ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ. ಹಾಲಿನ ದರ ಹೆಚ್ಚಳದ ಬಹುಪಾಲು ಲಾಭವನ್ನು ನೇರವಾಗಿ ಅನ್ನದಾತನ ಜೇಬಿಗೆ ಸೇರಿಸಲು ಸರ್ಕಾರ ತೀರ್ಮಾನಿಸಿದೆ.

ದರ ಹೆಚ್ಚಳಕ್ಕೆ ಕಾರಣವೇನು? ಸಚಿವರು ಹೇಳಿದ್ದಿಷ್ಟು:

ರಾಜ್ಯದಲ್ಲಿ ಭೀಕರ ಬರಗಾಲ ಮತ್ತು ಹಸಿರು ಮೇವಿನ ಕೊರತೆಯಿಂದಾಗಿ ನಮ್ಮ ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ದೈನಂದಿನ ಹಾಲು ಸಂಗ್ರಹವು ಬರೋಬ್ಬರಿ 10 ಲಕ್ಷ ಲೀಟರ್‌ಗಳಷ್ಟು ಭಾರಿ ಕುಸಿತ ಕಂಡಿದೆ. ರೈತರು ಹಸುಗಳನ್ನು ಸಾಕಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ನೆರವಿಗೆ ಧಾವಿಸುವುದು ಸರ್ಕಾರದ ಆದ್ಯತೆಯಾಗಿದೆ. 'ಗ್ರಾಮೀಣ ಭಾಗದಲ್ಲಿ ಲಕ್ಷಾಂತರ ಕುಟುಂಬಗಳು ಕೇವಲ ಹೈನುಗಾರಿಕೆಯನ್ನೇ ನಂಬಿ ಬದುಕು ಸಾಗಿಸುತ್ತಿವೆ. ದಿನನಿತ್ಯದ ಮನೆ ಖರ್ಚು ನಿಭಾಯಿಸಲು ಹಾಲಿನ ಆದಾಯವೇ ಮುಖ್ಯ ಆಧಾರ. ರೈತರು ಪಕ್ಷಾತೀತವಾಗಿ ಬೀದಿಗಿಳಿದು ದರ ಹೆಚ್ಚಳಕ್ಕಾಗಿ ಸರ್ಕಾರದ ಮೇಲೆ ನಿರಂತರ ಒತ್ತಡ ತಂದಿದ್ದರು.

ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಡಿಮೆ ಇತ್ತು:

ದೇಶದ ಇತರೆ ರಾಜ್ಯಗಳ ಹಾಲಿನ ಸರಾಸರಿ ದರ ನೋಡಿದರೆ ಲೀಟರ್‌ಗೆ ₹56 ಇದೆ. ಆದರೆ ನಮ್ಮ ರಾಜ್ಯದಲ್ಲಿ ಕೇವಲ ₹46 ಇತ್ತು. ಇತರ ರಾಜ್ಯಗಳ ದರವನ್ನು ಉಲ್ಲೇಖಿಸಿಯೇ ರೈತರು ತಮ್ಮ ನ್ಯಾಯಯುತ ವಾದ ಮಂಡಿಸಿದ್ದರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ರೈತರ ಹಿತದೃಷ್ಟಿಯಿಂದ ಸಂಪುಟದಲ್ಲಿ ₹8 ಹೆಚ್ಚಳಕ್ಕೆ ನಿರ್ಧರಿಸಲಾಗಿದೆ," ಎಂದು ಸಚಿವರು ಸ್ಪಷ್ಟಪಡಿಸಿದರು.

ಗ್ರಾಹಕರಿಗೆ ಹೊರೆ, ಹೈನುಗಾರರಲ್ಲಿ ಹರ್ಷ:

ನವೆಂಬರ್ 1 ರಿಂದ ನಂದಿನಿ ಹಾಲು ಖರೀದಿಸುವ ಪ್ರತಿಯೊಬ್ಬ ಗ್ರಾಹಕನ ಜೇಬಿಗೆ ಕತ್ತರಿ ಬೀಳಲಿದ್ದು, ಹೋಟೆಲ್ ಹಾಗೂ ಚಹಾ-ಕಾಫಿ ದರಗಳೂ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ, ಸಂಕಷ್ಟದಲ್ಲಿದ್ದ ಲಕ್ಷಾಂತರ ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್‌ಗೆ ಹೆಚ್ಚುವರಿಯಾಗಿ ₹7 ಸಿಗುತ್ತಿರುವುದು ಮತ್ತು ಒಟ್ಟು ₹47 ಕೈ ಸೇರುತ್ತಿರುವುದು ಗ್ರಾಮೀಣ ಆರ್ಥಿಕತೆಗೆ ದೊಡ್ಡ ಬೂಸ್ಟರ್ ಡೋಸ್ ನೀಡಿದಂತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

KMF ನಂದಿನಿ ಹಾಲಿನ ದರ ಹೆಚ್ಚಳ: ಯಾವ ಪ್ಯಾಕೆಟ್‌ ಹಾಲಿಗೆ ಎಷ್ಟು? ಹಾಲು, ಮೊಸರಿನ ಪರಿಷ್ಕೃತ ದರ ಪಟ್ಟಿ ವಿವರ ಇಲ್ಲಿದೆ!
ರಾಜ್ಯದ ರೈತರಿಗೆ ದೀಪಾವಳಿ ಗಿಫ್ಟ್: ನಂದಿನಿ ಹಾಲಿನ ದರ ₹8 ಏರಿಕೆಯಲ್ಲಿ ಹೈನುಗಾರರಿಗೆ ಸಿಗೋದೆಷ್ಟು?