ಉಡುಪಿ ಬ್ಯಾಂಕ್ ಹಗರಣ: ತಮ್ಮದೇ ಸರ್ಕಾರದ ಕಿವಿ ಹಿಂಡಿದ ಸ್ವಪಕ್ಷೀಯ ಶಾಸಕ ಬಿ.ಕೆ. ಹರಿಪ್ರಸಾದ್!

By Sathish Kumar KH  |  First Published Nov 8, 2024, 1:16 PM IST

ಉಡುಪಿ ಜಿಲ್ಲೆಯ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಕೋಟ್ಯಂತರ ರೂಪಾಯಿ ಹಣ ಅವ್ಯವಹಾರ ನಡೆದಿದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಗ್ರಾಹಕರನ್ನು ವಂಚಿಸಲಾಗಿದೆ. ಸರ್ಕಾರ ಮಧ್ಯಪ್ರವೇಶಿಸಿ ತನಿಖೆ ನಡೆಸಿ ನ್ಯಾಯ ಒದಗಿಸಬೇಕೆಂದು ಬಿ.ಕೆ. ಹರಿಪ್ರಸಾದ್ ಆಗ್ರಹಿಸಿದ್ದಾರೆ.


ಬೆಂಗಳೂರು (ನ.08): ಉಡುಪಿ ಜಿಲ್ಲೆಯ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಭಾರಿ ಅವ್ಯವಹಾರ- ಗ್ರಾಹಕರಿಗೆ ನ್ಯಾಯಕ್ಕಾಗಿ ಸರ್ಕಾರ ಮಧ್ಯಪ್ರವೇಶಿಸಲು ಆಗ್ರಹಿಸುತ್ತೇನೆ ಎಂದು ತಮ್ಮದೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಿರಿಯ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಕಿವಿ ಹಿಂಡಿದ್ದಾರೆ.

ಉಡುಪಿ ಮೂಲದ ಮಲ್ಪೆಯ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಕೋಟ್ಯಾಂತರ ರೂಪಾಯಿ ಹಣ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಬ್ಯಾಂಕಿನ ಅಮಾಯಕ ಗ್ರಾಹಕರು ಅನ್ಯಾಯಕ್ಕೆ ಒಳಗಾಗಿದ್ದಾರೆ. ಬ್ಯಾಂಕಿನ ಸುಮಾರು 1,413 ಗ್ರಾಹಕರು ತಲಾ 20 ಸಾವಿರದಂತೆ ಸಾಲ ಪಡೆದಿದ್ದಾರೆ. ಆದರೆ ನಕಲಿ ದಾಖಲೆಗಳನ್ನು ಸೃಷ್ಟಿಸಿ 2 ಲಕ್ಷ ಸಾಲ ಪಡೆದಿರುವುದಾಗಿ ದಾಖಲೆಗಳನ್ನು ಸೃಷ್ಟಿಸಿ ಬರೋಬ್ಬರಿ 20 ಕೋಟಿಗೂ ಹೆಚ್ಚು ಹಣ ಅವ್ಯವಹಾರ ನಡೆದಿರುವ ಆರೋಪಗಳು ಕೇಳಿ ಬರುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tap to resize

Latest Videos

undefined

ನೂರಾರು ಗ್ರಾಹಕರು ತಾವು ಪಡೆದುಕೊಂಡ ಸಾಲದ ಹಣಕ್ಕಿಂತಲೂ ಹೆಚ್ಚಿನ ಹಣವನ್ನು ಈಗಾಗಲೇ ಪಾವತಿ ಮಾಡಿದ್ದಾರೆ. ಆದರೂ ಬ್ಯಾಂಕಿನ ಸಿಬ್ಬಂದಿಗಳು ದಬ್ಬಾಳಿಕೆ ದೌರ್ಜನ್ಯ ನಡೆಸಿ ಗ್ರಾಹಕರಿಂದ ಮತ್ತಷ್ಟು ಹಣ ಕೀಳುತ್ತಿದ್ದಾರೆಂದು ಗ್ರಾಹಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೋಸ ಮಾಡಿದ್ದಲ್ಲದೆ ಗ್ರಾಹಕರ ಮೇಲೆಯೇ ದಬ್ಬಾಳಿಕೆ ನಡೆಸುತ್ತಿರುವುದು ಅಕ್ಷಮ್ಯವಾಗಿದೆ.

ಇದನ್ನೂ ಓದಿ: ಕರ್ನಾಟಕದ ಖ್ಯಾತ ಲಿಂಗಾಯತ ಸ್ವಾಮೀಜಿ ಲಿಂಗೈಕ್ಯ!

ಇನ್ನು ಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಈ ಹಿಂದೆಯೂ ಹಲವು ಆರೋಪಗಳು ಕೇಳಿ ಬಂದಿವೆ. ಕಳೆದ ವರ್ಷ ಬ್ಯಾಂಕಿನ ಮ್ಯಾನೇಜರ್ ಕೂಡ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಹಲವು ಪ್ರಭಾವಿಗಳ ಕೈವಾಡ ಇರುವುದು ಸ್ಪಷ್ಟವಾಗಿದೆ. ಪ್ರಕರಣವೂ ಗಂಭೀರವಾಗಿದ್ದು ಕೂಡಲೇ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿ, ಅನ್ಯಾಯಕ್ಕೊಳಗಾದ ಗ್ರಾಹಕರಿಗೆ ನ್ಯಾಯವದಗಿಸಿಕೊಡಬೇಕಾಗಿದೆ.‌ಆದ್ದರಿಂದ ವಿಶೇಷ ಪ್ರಕರಣವೆಂದು ಪರಿಗಣಿಸಿ ಕೂಡಲೇ ಕ್ರಮ ವಹಿಸಬೇಕೆಂದು ಸಂಬಂಧಪಟ್ಟವರಿಗೆ ಆಗ್ರಹಿಸುತ್ತೇನೆ ಎಂದು ಕಾಂಗ್ರೆಸ್ ಕೇಂದ್ರ ಕಾರ್ಯಕಾರಿ ಸಮಿತಿ ಖಾಯಂ ಆಹ್ವಾನಿತ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

click me!