
ಹೊಸಪೇಟೆ (ಜ.31): ಜಿಲ್ಲಾ ಉಸ್ತುವಾರಿ ಮಂತ್ರಿ ಜಮೀರ್ ಅಹ್ಮದ್ ಖಾನ್ ಪುತ್ರ ಜೈದ್ ಖಾನ್ ನಟನೆಯ ಕಲ್ಟ್ ಚಿತ್ರದ ಶೂಟಿಂಗ್ ವೇಳೆ ಬುಧವಾರ ತುಂಗಭದ್ರಾ ನದಿ ತೀರದಲ್ಲಿ ಬೆಂಕಿ ಹಾಕಿ ಚಿತ್ರೀಕರಣ ಮಾಡಲಾಗಿದೆ.
ಹಂಪಿಯ ಸ್ನಾನಘಟ್ಟದ ಎದುರು ಬದಿಯ ವಿರುಪಾಪುರ ಗಡ್ಡಿ ಸಮೀಪದಲ್ಲಿ ನದಿ ತೀರದಲ್ಲಿ ಬೆಂಕಿ ಹಾಕಿ ಶೂಟಿಂಗ್ ನಡೆಸಲಾಗಿದೆ. ತುಂಗಭದ್ರಾ ನದಿ ತೀರದಲ್ಲಿ ಅಪರೂಪದ ನೀರುನಾಯಿಗಳು ಇರುತ್ತವೆ. ಹಾಗಾಗಿ ಇದನ್ನು ನೀರುನಾಯಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಗಿದೆ. ಈಗ ಈ ಪ್ರದೇಶದಲ್ಲೇ ಚಿತ್ರ ತಂಡ ಬೆಂಕಿ ಹಾಕಿ ಶೂಟಿಂಗ್ ನಡೆಸಿದ್ದು, ಅರಣ್ಯ ಇಲಾಖೆ, ಹಂಪಿ ಅಭಿವೃದ್ಧಿ ಪ್ರಾಧಿಕಾರ, ಕೇಂದ್ರ ಹಾಗೂ ರಾಜ್ಯ ಪುರಾತತ್ವ ಇಲಾಖೆಗಳು ಸುಮ್ಮನಾಗಿರುವ ಬಗ್ಗೆ ಈಗ ವನ್ಯಜೀವಿ ಪ್ರೇಮಿಗಳು ಹಾಗೂ ಪರಿಸರ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಚಿತ್ರ ತಂಡ ಬೆಂಕಿ ಹಾಕಿ ಶೂಟಿಂಗ್ ನಡೆಸಿದೆ. ಇದಕ್ಕೆ ಸಂಬಂಧಿಸಿದ ಇಲಾಖೆ ಆಕ್ಷೇಪ ವ್ಯಕ್ತಪಡಿಸದೇ ಇರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಂಪಿಯಲ್ಲಿ ಬುಧವಾರ ಶೂಟಿಂಗ್‌ನಲ್ಲಿ ನಟಿ ರಚಿತಾರಾಮ್ ಭಾಗವಹಿಸಿದ್ದರು. ಆದರೆ ಸಚಿವರ ಪುತ್ರ, ನಟ ಜೈದ್ ಖಾನ್ ಶೂಟಿಂಗ್‌ಗೆ ಬಂದಿರಲಿಲ್ಲ.
ಇದನ್ನೂ ಓದಿ: ಕಾಲ್ತುಳಿತ ದುರಂತ ಬೆನ್ನಲ್ಲೇ ಮಹಾಕುಂಭಮೇಳದಲ್ಲಿ ಮತ್ತೆ ಭಾರೀ ಅಗ್ನಿ ಅವಘಡ! ಪೆಂಡಾಲ್ ಸುಟ್ಟು ಭಸ್ಮ!
ಫೈರ್ ಕ್ಯಾಂಪ್ ಆತಂ ಕ:
ಈ ಹಿಂದೆ ನದಿಪಾತ್ರದಲ್ಲಿ ಜೀವ ವೈವಿಧ್ಯ ಒಣಗುತ್ತಿದೆ ಎಂಬುದನ್ನು ಮನಗಂಡು ಆಂಧ್ರಪ್ರದೇಶ, ಕರ್ನಾಟಕ ಸರ್ಕಾರಗಳು ತುಂಗಭದ್ರಾ ಮಂಡಳಿಯಿಂದ ನೀರು ಬಿಡಿಸಿ, ಜೀವವೈವಿಧ್ಯ ಉಳಿಸುವ ಕಾರ್ಯ ಮಾಡಿತ್ತು. ಈಗ ನೋಡಿದರೆ ಬೆಂಕಿ ಹಾಕಿ ಶೂಟಿಂಗ್ ನಡೆಸಲಾಗಿದೆ. ಇದೇ ರೀತಿಯಾದರೆ ದೇಶ, ವಿದೇಶಿ ಪ್ರವಾಸಿಗರು ನದಿಪಾತ್ರದಲ್ಲಿ ಬೆಂಕಿ ಹಾಕುವ ಮೂಲಕ ಫೈರ್ ಕ್ಯಾಂಪ್ ಹಾಕುವ ಅಪಾಯವೂ ಇದೆ ಎಂದು ವನ್ಯಜೀವಿ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಹಂಪಿಯ ನದಿಪಾತ್ರದಲ್ಲಿ ಬೆಂಕಿ ಹಾಕಿ ಕಲ್ಟ್ ಚಿತ್ರ ತಂಡ ಶೂಟಿಂಗ್ ಮಾಡಿರುವುದು ಸರಿಯಲ್ಲ. ಈ ಬಗ್ಗೆ ಸಂಬಂಧಿಸಿದ ಇಲಾಖೆ ನಿಗಾ ವಹಿಸಬೇಕು. ಅಪರೂಪದ ಜೀವಿಗಳು ಇರುವ ಪ್ರದೇಶದಲ್ಲಿ ಈ ರೀತಿ ನಡೆಯಬಾರದು ಎಂದು ವನ್ಯಜೀವಿ ಪ್ರೇಮಿ ಸಮದ್ ಕೊಟ್ಟೂರು ಕನ್ನಡಪ್ರಭ ಬಳಿ ಅಳಲು ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ