ಸಚಿವ ಸ್ಥಾನಕ್ಕೆ ಸಿ.ಟಿ.ರವಿ ರಾಜೀನಾಮೆ| ಮುಂದಿನ ನಿರ್ಧಾರ ವರಿಷ್ಠರಿಗೆ ಬಿಟ್ಟಿದ್ದು: ರವಿ| ಪಕ್ಷ ಸಂಘಟನೆಗೆ ಹೆಚ್ಚು ಸಮಯ ಬೇಕು
ಬೆಂಗಳೂರು(ಅ.05): ‘ಪೂರ್ವ ನಿಶ್ಚಯದಂತೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ಮುಖ್ಯಮಂತ್ರಿಗಳಿಗೆ ಕೊಟ್ಟಿದ್ದೇನೆ. ಮುಂದಿನ ನಿರ್ಧಾರ ವರಿಷ್ಠರ ಅವಗಾಹನೆಗೆ ಬಿಟ್ಟದ್ದು’ ಎಂದು ಬಿಜೆಪಿ ರಾಷ್ಟ್ರೀಯ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.
ಬಿಜೆಪಿಯಲ್ಲಿ ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಎಂಬ ಅಲಿಖಿತ ನಿಯಮದ ಹಿನ್ನೆಲೆಯಲ್ಲಿ ರವಿ ಅವರು ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇನ್ನೂ ಅಂಗೀಕರಿಸಿಲ್ಲ. ಪಕ್ಷದ ವರಿಷ್ಠರಿಂದ ಸೂಚನೆ ಬಂದ ಬಳಿಕ ಅಂಗೀಕರಿಸುವ ಸಾಧ್ಯತೆಯಿದೆ.
undefined
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರವಿ, ‘ರಾಷ್ಟ್ರೀಯ ಪದಾಧಿಕಾರಿಯಾಗಿ ನಾನು ಸಂಘಟನೆಗೆ ಹೆಚ್ಚು ಸಮಯ ಕೊಡಬೇಕಾಗುತ್ತದೆ. ಹೀಗಾಗಿ ರಾಜೀನಾಮೆ ನೀಡಿದ್ದೇನೆ’ ಎಂದು ಸಮರ್ಥಿಸಿಕೊಂಡರು.
‘ರಾಷ್ಟ್ರೀಯ ಪದಾಕಾರಿಗಳ ಸಭೆ ದೆಹಲಿಯಲ್ಲಿ ಸೋಮವಾರ ನಡೆಯಲಿದ್ದು ನಂತರ ಎಲ್ಲ ಪದಾಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆಯಾಗಬಹುದು. ಎಲ್ಲವೂ ನಮ್ಮ ಮೇಲೆ ನಿಂತಿಲ್ಲ. ಕೆಲವೊಂದು ವ್ಯವಸ್ಥೆ ಮೇಲೆ ನಿಂತಿದೆ. ವ್ಯವಸ್ಥೆ ಪ್ರಕಾರ ನಡೆದುಕೊಳ್ಳಬೇಕು’ ಎಂದು ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ರವಿ, ‘ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಶಿರಾ ಕ್ಷೇತ್ರಕ್ಕೂ ಇನ್ನು ಅಭ್ಯರ್ಥಿ ಯಾರು ಎಂಬುದು ನಿರ್ಧಾರವಾಗಿಲ್ಲ. ಮುಂದೆ ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣೆಯೂ ಬರಬಹುದು. ಮುಖ್ಯಮಂತ್ರಿಯಾಗಲಿ, ರಾಜ್ಯಾಧ್ಯಕ್ಷರಾಗಲಿ ಅಥವಾ ವರಿಷ್ಠರಾಗಲಿ ಇವರೇ ನಮ್ಮ ಅಭ್ಯರ್ಥಿ ಎಂದು ಈ ತನಕ ಹೇಳಿಲ್ಲ. ರಾಜಕೀಯ ಪಕ್ಷ ಎಂದ ಮೇಲೆ ಆಕಾಂಕ್ಷಿಗಳಿರುವುದು ಸಹಜ. ಹೀಗಾಗಿ ಯಾವುದೇ ಗೊಂದಲವಿಲ್ಲ’ ಎಂದರು.