ಕೊಲ್ಲಾಪುರದಲ್ಲಿ ಮಹಾರಾಷ್ಟ್ರ, ಕರ್ನಾಟಕ ರಾಜ್ಯಪಾಲರ ಸಭೆ

By Kannadaprabha News  |  First Published Nov 5, 2022, 2:00 AM IST

ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದ ರೆಸಿಡೆನ್ಸಿ ಕ್ಲಬ್‌ನಲ್ಲಿ ಶುಕ್ರವಾರ ಮೊದಲ ಬಾರಿಗೆ ಉಭಯ ರಾಜ್ಯಗಳ ಸಮನ್ವಯ ಸಭೆ ಜರುಗಿತು.


ಬೆಳಗಾವಿ (ನ.05): ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದ ರೆಸಿಡೆನ್ಸಿ ಕ್ಲಬ್‌ನಲ್ಲಿ ಶುಕ್ರವಾರ ಮೊದಲ ಬಾರಿಗೆ ಉಭಯ ರಾಜ್ಯಗಳ ಸಮನ್ವಯ ಸಭೆ ಜರುಗಿತು. ಬಹುನಿರೀಕ್ಷಿತ ಗಡಿ ವಿಷಯ ಹೊರತುಪಡಿಸಿ, ನೀರಾವರಿ, ಭದ್ರತೆ, ಅಕ್ರಮ ಚಟುವಟಿಕೆ ನಿಯಂತ್ರಣ ಸೇರಿದಂತೆ ಎರಡೂ ರಾಜ್ಯಗಳ ಸೌಹಾರ್ದತೆಗೆ ಅಗತ್ಯವಿರುವ ಇನ್ನಿತರ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.

ಎರಡೂ ರಾಜ್ಯಗಳ ಗಡಿ ಭಾಗಗಳಲ್ಲಿ ಎರಡೂ ಭಾಷೆಗಳಲ್ಲಿ (ಮರಾಠಿ ಮತ್ತು ಕನ್ನಡ) ನಿರ್ದೇಶನ ಫಲಕಗಳನ್ನು ಅಳವಡಿಸುವ ಕುರಿತು ಸಮನ್ವಯ ಸಭೆಯಲ್ಲಿ ಒಮ್ಮತಕ್ಕೆ ಬರಲಾಯಿತು. ಅತಿವೃಷ್ಟಿ ವೇಳೆ ಕೊಯ್ನಾ ಸೇರಿದಂತೆ ಮಹಾರಾಷ್ಟ್ರದಿಂದ ಕೃಷ್ಣಾ ನದಿ ಪಾತ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಡುವುದರಿಂದ ಆಲಮಟ್ಟಿ ಜಲಾಶಯದ ಮೇಲೆ ನೀರಿನ ಒತ್ತಡ ಹೆಚ್ಚಲಿದೆ. ಅಲ್ಲದೆ, ಪ್ರವಾಹದಿಂದ ಜೀವ ಹಾನಿ, ಆಸ್ತಿಪಾಸ್ತಿ ಹಾನಿಯಾಗಲಿದೆ. ಹೀಗಾಗಿ, ಎರಡೂ ರಾಜ್ಯಗಳ ಅಧಿಕಾರಿಗಳು ಸಮನ್ವಯತೆ ಸಾಧಿಸಿ, ಅನಾಹುತ, ನಷ್ಟಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳುವ ಬಗ್ಗೆ, ಜೊತೆಗೆ, ಗಡಿಭಾಗದಲ್ಲಿ ಹೆಚ್ಚುತ್ತಿರುವ ಭ್ರೂಣಲಿಂಗ ಪತ್ತೆ, ಗಾಂಜಾ ಸೇರಿದಂತೆ ಇನ್ನಿತರ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಯಿತು.

Tap to resize

Latest Videos

ಹಾವೇರಿ ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ 924 ಮಕ್ಕಳು

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯಪಾಲ ಥಾವರಚಂದ ಗೆಹ್ಲೋಟ್‌ ಹಾಗೂ ಮಹಾರಾಷ್ಟ್ರ ರಾಜ್ಯಪಾಲ ಭಗತ್‌ಸಿಂಗ್‌ ಕೋಶ್ಯಾರಿಯವರು ಉಭಯ ರಾಜ್ಯಗಳ ಗಡಿಭಾಗದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಹಾನಿಂಗ ನಂದಗಾಂವಿ ಸೇರಿದಂತೆ ಕರ್ನಾಟಕದ ನಾಲ್ಕು ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಮಹಾರಾಷ್ಟ್ರದ ಐದು ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗಳು, ಐಜಿಪಿ, ನೀರಾವರಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆ ಸ್ವಾಗತಿಸಿದ ಚಂದರಗಿ: ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿಭಾಗದಲ್ಲಿನ ಸಮಸ್ಯೆಗಳನ್ನು ಚರ್ಚಿಸಿ, ಅವುಗಳಿಗೆ ಪರಿಹಾರ ಹುಡುಕುವ ಸಲುವಾಗಿ ಶುಕ್ರವಾರ ಕೊಲ್ಹಾಪುರದಲ್ಲಿ ಎರಡೂ ರಾಜ್ಯಗಳ ರಾಜ್ಯಪಾಲರ ಸಭೆ ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಜಿಲ್ಲಾಧ್ಯಕ್ಷ ಅಶೋಕ ಚಂದರಗಿ ಸ್ವಾಗತಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 50-60 ವರ್ಷಗಳಿಂದ ಕರ್ನಾಟಕ-ಮಹಾರಾಷ್ಟ್ರ ರಾಜ್ಯಗಳ ನಡುವೆ ಗಡಿ ಸಮಸ್ಯೆ ಹಿನ್ನೆಲೆ ಎರಡೂ ರಾಜ್ಯಗಳಲ್ಲಿ ಗಡಿ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಗಡಿ ಸಮಸ್ಯೆಯಿಂದಲೇ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. 

ಆದರೆ ಜನಸಾಮಾನ್ಯರು ಈ ಗಡಿ ಸಮಸ್ಯೆಯಿಂದ ಅಭಿವೃದ್ಧಿ ವಂಚಿತರಾಗಬಾರದು. ಈ ಹಿನ್ನೆಲೆಯಲ್ಲಿ ಕೊಲ್ಹಾಪುರದಲ್ಲಿ ರಾಜ್ಯಪಾಲರು ಸಭೆ ಸೇರಿ ಚರ್ಚೆ ಮಾಡುತ್ತಾರೆ. ಇದು ಒಳ್ಳೆಯ ಬೆಳವಣಿಗೆ. ಇದೊಂದು ಆರೋಗ್ಯಕರ ಹೆಜ್ಜೆಯಾಗಿದೆ ಎಂದರು. ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಮೂಲಭೂತ ಸೌಕರ್ಯಗಳು, ನೀರಾವರಿ, ನೀರು ಪೂರೈಕೆ, ಸಂಚಾರ, ಅಪರಾಧಗಳ ಬಗ್ಗೆ ಮಾಹಿತಿ ವಿನಿಮಯ ವಿಷಯಗಳು ಈ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ. ಇದಾದರೆ ಗಡಿ ಸಮಸ್ಯೆಯಿಂದ ಜೀವಂತವಾಗಿರುವ ಸಮಸ್ಯೆಗಳು ಬಗೆಹರಿಯುವ ವಿಶ್ವಾಸವಿದೆ. ಪ್ರಧಾನಿ ಮೋದಿ ಅವರ ಸೂಚನೆ ಮೇರೆಗೆ ಈ ಸಭೆ ನಡೆಯುತ್ತಿದೆ. 

Davanagere: ಸೋಷಿಯಲ್‌ ಮೀಡಿಯಾ ಕೀಚಕರಿಗೆ ಎಚ್ಚರಿಕೆಯ ಗಂಟೆ

ಇದರಿಂದ ಒಳ್ಳೆಯ ಫಲಿತಾಂಶ ಬರಬೇಕು ಎಂದರು. ಎರಡ್ಮೂರು ತಿಂಗಳ ಹಿಂದೆ ಗೋವಾದಲ್ಲಿ ಕರ್ನಾಟಕ ಮತ್ತು ಗೋವಾ ರಾಜ್ಯಪಾಲರು ಸಭೆ ಸೇರಿದ್ದರು. ಈ ವೇಳೆ ಎರಡೂ ರಾಜ್ಯಗಳ ನಡುವಿನ ಶೈಕ್ಷಣಿಕ, ಸಾಮಾಜಿಕ, ಸಂಚಾರ, ರಸ್ತೆ ಸೇರಿ ಇನ್ನಿತರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗಿತ್ತು. ಅದೇ ರೀತಿ ಈಗ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ರಾಜ್ಯಪಾಲರ ಸಭೆ ನಡೆಯುತ್ತಿದೆ. ಈ ವೇಳೆ ಎರಡೂ ರಾಜ್ಯಗಳ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿನ ಕೊನೆಯ ಹಳ್ಳಿಯ ಜನರ ಸಮಸ್ಯೆಗಳಿಗೆ ಒಂದು ಪರಿಹಾರ ಸಿಗಬೇಕು. ಈ ಸಭೆಯಿಂದ ಪರಿಹಾರ ಸಿಗುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು.

click me!